Mann Ki Baat: ಮೇ 31ರಂದು ಪ್ರಧಾನಿ ಮೋದಿ ಮನ್ ಕಿ ಬಾತ್ ಮೂಲಕ ಲಾಕ್​ಡೌನ್ ವಿಸ್ತರಣೆಯನ್ನು ಘೋಷಿಸುವ ಸಾಧ್ಯತೆ

ಐದನೇ ಹಂತದ ಲಾಕ್​ಡೌನ್​​ ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ಅಹಮದಾಬಾದ್, ಇಂದೂರ್, ದೆಹಲಿ, ಪುಣೆ, ಥಾಣೆ, ಜೈಪುರ್ ಮತ್ತು ಸೂರತ್ ನಗರಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿರಲಿದೆ.

news18-kannada
Updated:May 28, 2020, 8:25 AM IST
Mann Ki Baat: ಮೇ 31ರಂದು ಪ್ರಧಾನಿ ಮೋದಿ ಮನ್ ಕಿ ಬಾತ್ ಮೂಲಕ ಲಾಕ್​ಡೌನ್ ವಿಸ್ತರಣೆಯನ್ನು ಘೋಷಿಸುವ ಸಾಧ್ಯತೆ
ನರೇಂದ್ರ ಮೋದಿ
  • Share this:
ನವದೆಹಲಿ(ಮೇ.28): ನಾಲ್ಕನೇ ಹಂತದ ಲಾಕ್​ಡೌನ್ ಮೇ 31ಕ್ಕೆ ಮುಕ್ತಾಯವಾಗಲಿದೆ. ಮೇ 31ರಂದೇ ಪಧಾನಿ ನರೇಂದ್ರ ಮೋದಿ ತಮ್ಮ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಭಾಷಣದಲ್ಲೇ ಐದನೇ ಹಂತದ ಲಾಕ್​ಡೌನ್​​ ವಿಸ್ತರಣೆಯನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.

ಐದನೇ ಹಂತದಲ್ಲಿ ಜೂನ್ 15 ರವರೆಗೂ ಲಾಕ್​ಡೌನ್​​ ವಿಸ್ತರಣೆ ಆಗುವ ಸಾಧ್ಯತೆ ಇದೆ. ಜೊತೆಗೆ ಐದನೇ ಹಂತದ ಲಾಕ್​​ ಡೌನ್​​ ಬಹಳ ಭಿನ್ನವಾಗಿರಲಿದೆ. ಆ ಲಾಕ್​ಡೌನ್​​ ಸ್ವರೂಪ ಬದಲಾವಣೆಯ ಸುಳಿವನ್ನು ಮೋದಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ಮೇ 30ರಂದು ಎರಡನೇ ಅವಧಿಗೆ ಕೇಂದ್ರದಲ್ಲಿ ಬಿಜೆಪಿ ಮತ್ತು ಮೋದಿ ಅಧಿಕಾರಕ್ಕೆ ಬಂದು ಒಂದು ವರ್ಷ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಮೋದಿ ತಮ್ಮ ಈ ಸಲದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ವರ್ಷಾಚರಣೆ ಬಗ್ಗೆಯೂ ಭಾಷಣ ಮಾಡುತ್ತಾರೆ. ಒಂದು ವರ್ಷದಲ್ಲಿ ತಮ್ಮ ಸರ್ಕಾರ ಏನೇನು ಸಾಧನೆ ಮಾಡಿದೆ ಎಂದು ಹೇಳಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಮೊದಲ ಬಾರಿ ಲಾಕ್​ಡೌನ್​​ ಘೋಷಣೆ ಮಾಡುವಾಗ ಪ್ರಧಾನಿ ಮೋದಿ ಯಾರನ್ನು ಕೇಳಿರಲಿಲ್ಲ.‌ ಏಕಾಏಕಿ ನಾಲ್ಕೇ ನಾಲ್ಕು ಗಂಟೆ ಮೊದಲು 'ಇಂದು ಮಧ್ಯರಾತ್ರಿಯಿಂದ ದೇಶಾದ್ಯಂತ ಲಾಕ್​ಡೌನ್​ ಜಾರಿಗೆ ಬರಲಿದೆ' ಎಂದು ಘೋಷಿಸಿಬಿಟ್ಟಿದ್ದರು‌. ಅದಾದ ಬಳಿಕ ಪ್ರತಿ ಸಲವೂ ಲಾಕ್​ಡೌನ್​​ ಅನ್ನು ಮುಂದುವರೆಸಬೇಕೋ ಮೊಟಕುಗೊಳಿಸಬೇಕೋ ಎಂಬ ಗೊಂದಲ ಉಂಟಾದಾಗ ರಾಜ್ಯಗಳ ಅಭಿಪ್ರಾಯ ಪಡೆದಿದ್ದರು. ಈಗಲೂ ಮತ್ತೆ ಸಂದರ್ಭ ಸೃಷ್ಟಿಯಾಗಿದೆ. ಆದರೀಗ ದೇಶದಲ್ಲಿ ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿರುವುದರಿಂದ ಲಾಕ್​ಡೌನ್​​ ತೆರವುಗೊಳಿಸುವುದು ಸೂಕ್ತವಾದ ಕ್ರಮವಲ್ಲ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿರುವುದರಿಂದ ಲಾಕ್​ಡೌನ್​​ ವಿಸ್ತರಣೆ ಮಾಡಲಾಗುತ್ತಿದೆ.

ಜೂನ್ 15ರವರೆಗೂ ಲಾಕ್​​ಡೌನ್​ ವಿಸ್ತರಣೆ ಮಾಡಲು  ಮುಂದಾಗಿದ್ದರೂ ಲಾಕ್​ಡೌನ್​​ 5.0 ನಲ್ಲಿ ಭಾರೀ ಬದಲಾವಣೆ ಇರಲಿದೆ ಎಂದು ಕೇಂದ್ರ ಗೃಹ ಇಲಾಖೆಯ ಮೂಲಗಳು ನ್ಯೂಸ್ 18 ಜಾಲಕ್ಕೆ ತಿಳಿಸಿವೆ.

ಐದನೇ ಹಂತದ ಲಾಕ್​ಡೌನ್​​ ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ಅಹಮದಾಬಾದ್, ಇಂದೂರ್, ದೆಹಲಿ, ಪುಣೆ, ಥಾಣೆ, ಜೈಪುರ್ ಮತ್ತು ಸೂರತ್ ನಗರಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿರಲಿದೆ. ಇಡೀ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಈ‌ 11 ನಗರಗಳ ಕೊಡುಗೆ ಶೇಕಡಾ 70ರಷ್ಟು ಇರುವುದರಿಂದ ಈ‌ ನಗರಗಳತ್ತ ವಿಶೇಷ ಗಮನ ಹರಿಸಲಾಗಿದೆ.

ಉಳಿದೆಡೆಗೆ ಹಲವಾರ ವಿನಾಯಿತಿ ನೀಡುವ ಸಾಧ್ಯತೆ ಇದೆ. ಅಂಥ ಪ್ರಮುಖ‌ ವಿನಾಯಿತಿ ಎಂದರೆ ಬೆಳಿಗ್ಗೆ 7 ರಿಂದ‌ ಸಂಜೆ 7ರವರೆಗೆ ಎಲ್ಲಾ ವ್ಯವಹಾರಗಳನ್ನು ನಡೆಸಬಹುದು. ಆದರೆ, ರಾತ್ರಿ 7ರಿಂದ ಬೆಳಿಗ್ಗೆ 7ರವರೆಗೆ ಕಟ್ಟುನಿಟ್ಟಿನ ಕ್ರಮ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.‌ ಲಾಕ್​ಡೌನ್​​ 5.O ಸಂದರ್ಭದಲ್ಲಿ ಆಟೋ, ಟ್ಯಾಕ್ಸಿ ಓಡಾಟಕ್ಕೆ ಅವಕಾಶ ನೀಡುವ ಸಾಧ್ಯತೆಗಳು ಇವೆ.

ದೇವಸ್ಥಾನಗಳನ್ನು ತೆರೆಯುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ನಿರ್ಧಾರ ಕೈಗೊಳ್ಳಬಹುದು. ಆದರೆ, ಬೃಹತ್ ಧಾರ್ಮಿಕ ಕಾರ್ಯಕ್ರಮ ನಡೆಸುವಂತಿಲ್ಲ ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸುವ ಸಾಧ್ಯತೆ ಇದೆ. ಅದೇ ರೀತಿ ಜಿಮ್ ಮತ್ತು ಉದ್ಯಾನವನಗಳನ್ನು,  ತೆರೆಯುವ ನಿರ್ಧಾರವನ್ನು ಕೂಡ ರಾಜ್ಯ ಸರ್ಕಾರಕ್ಕೆ ಬಿಡುವ ಸಾಧ್ಯತೆಗಳು ದಟ್ಟವಾಗಿವೆ.ಇದನ್ನೂ ಓದಿ : ಇಂದಿನಿಂದ ಬಡ ಕುಟುಂಬಗಳಿಗೆ ತಲಾ 10 ಸಾವಿರ ಕೊಡುವ ಕಾಂಗ್ರೆಸ್ ಅಭಿಯಾನ

ಜೂನ್ 1 ಕ್ಕೆ ಶೈಕ್ಷಣಿಕ ವರ್ಷ ಆರಂಭ ಆಗಬೇಕಿತ್ತು. ಈ ಹಿನ್ನೆಲೆಯಲ್ಲಿ ಕೆಲ ರಾಜ್ಯಗಳು ತಯಾರಿ ನಡೆಸಿದ್ದವು. ಆದರೆ ಲಾಕ್​ಡೌನ್​​ ಜಾರಿಯಲ್ಲಿರುವಾಗ ಶಾಲಾ ಕಾಲೇಜುಗಳು, ಟುಟೋರಿಯಲ್ ಗಳನ್ನು ಸದ್ಯಕ್ಕೆ ತೆರೆಯುವಂತಿಲ್ಲ ಎಂದು ಆದೇಶಿಸುವ ಸಾಧ್ಯತೆ ಇದೆ. ಅದೇ ರೀತಿ ಜನಸಂದಣಿಗೆ ಅವಕಾಶ ನೀಡುವ ಶಾಪಿಂಗ್ ಮಾಲ್ ಮತ್ತು‌ ಚಿತ್ರಮಂದಿರಗಳನ್ನು ತೆರೆಯುವುದಕ್ಕೂ ನಿಷೇಧ ಏರುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
First published: May 28, 2020, 8:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading