ಆಕ್ಸಿಜನ್ ಬಿಕ್ಕಟ್ಟು ಸಂಬಂಧ ಪ್ರಧಾನಿ ಮೋದಿ ಸಭೆ; ಬೇಡಿಕೆಗೆ ತಕ್ಕಷ್ಟು ಆಮ್ಲಜನಕ ಪೂರೈಕೆಗೆ ಸೂಚನೆ

ಮಂಜೂರಾದ ಪಿಎಸ್‌ಎ ಆಮ್ಲಜನಕ ಸ್ಥಾವರಗಳನ್ನು ಆದಷ್ಟು ಬೇಗ ಕಾರ್ಯಗತಗೊಳಿಸಲು ರಾಜ್ಯಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಪ್ರಧಾನಿ ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ.

ಪ್ರಧಾನಿ ನರೇಂದ್ರ ಮೋದಿ.

 • Share this:
  ನವದೆಹಲಿ: ದೇಶಾದ್ಯಂತ ಆಮ್ಲಜನಕದ ಪೂರೈಕೆಯನ್ನು ಪರಿಶೀಲಿಸಲು ಮತ್ತು ಅದರ ಲಭ್ಯತೆಯನ್ನು ಹೆಚ್ಚಿಸುವ ಮಾರ್ಗಗಳು ಮತ್ತು ವಿಧಾನಗಳನ್ನು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಉನ್ನತ ಮಟ್ಟದ ಸಭೆ ನಡೆಸಿದರು. ಆಮ್ಲಜನಕದ ಪೂರೈಕೆಯನ್ನು ಸುಧಾರಿಸಲು ಕಳೆದ ಕೆಲವು ವಾರಗಳಲ್ಲಿ ಕೈಗೊಂಡ ಪ್ರಯತ್ನಗಳ ಬಗ್ಗೆ ಅಧಿಕಾರಿಗಳು ಪ್ರಧಾನಿ ಮೋದಿ ಅವರಿಗೆ ವಿವರಿಸಿದರು.  ದೆಹಲಿ ಸೇರಿದಂತೆ ಕಳೆದ ಕೆಲವು ದಿನಗಳಿಂದ ದೇಶವ್ಯಾಪಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ದ್ರವ ವೈದ್ಯಕೀಯ ಆಮ್ಲಜನಕ (ಎಲ್ಎಂಒ) ಸಮಸ್ಯೆಯಾಗಿ ತೀವ್ರವಾಗಿ ಕಾಡಲಾರಂಭಿಸಿದೆ. ಹೀಗಾಗಿ ಇಂದು ಈ ಸಭೆ ನಡೆಸಲಾಗಿದೆ.

  ವಿವಿಧ ರಾಜ್ಯಗಳಿಗೆ ಆಮ್ಲಜನಕದ ಪೂರೈಕೆ ಸುಗಮವಾಗಿ, ಅಡೆತಡೆಯಿಲ್ಲದೆ ನಡೆಯುವಂತೆ ನೋಡಿಕೊಳ್ಳುವಂತೆ ಪ್ರಧಾನಿ ಮೋದಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಡಚಣೆಯ ಸಂದರ್ಭದಲ್ಲಿ ಸ್ಥಳೀಯ ಆಡಳಿತದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಮಸ್ಯೆ ಸರಿಪಡಿಸುವ ಅಗತ್ಯತೆಯ ಕುರಿತು ಅವರು ಮಾತನಾಡಿದರು. ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸಲು ಇತರ ನವೀನ ಮಾರ್ಗಗಳನ್ನು ಅನ್ವೇಷಿಸಲು ಅವರು ಸಚಿವಾಲಯಗಳಿಗೆ ಸೂಚಿಸಿದರು.

  ಮೋದಿಯವರು ಅನೇಕ ಅಂಶಗಳ ಬಗ್ಗೆ ವೇಗವಾಗಿ ಕೆಲಸ ಮಾಡುವ ಅಗತ್ಯತೆಯ ಬಗ್ಗೆ ಮಾತನಾಡಿದ್ದಾರೆ. ಆಮ್ಲಜನಕದ ಉತ್ಪಾದನೆ ವೇಗವನ್ನು ಹೆಚ್ಚಿಸುವುದು ಮತ್ತು ಆರೋಗ್ಯ ಸೌಲಭ್ಯಗಳಿಗೆ ಬೆಂಬಲವನ್ನು ಒದಗಿಸಲು ನವೀನ ಮಾರ್ಗಗಳನ್ನು ಬಳಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಚೇರಿಯ (ಪಿಎಂಒ) ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.

  ರಾಜ್ಯಗಳ ಆಮ್ಲಜನಕ ಬೇಡಿಕೆ ಮತ್ತು ಅದಕ್ಕೆ ತಕ್ಕಂತೆ ಸಮರ್ಪಕ ಪೂರೈಕೆ ಮಾಡಲು ರಾಜ್ಯಗಳೊಂದಿಗೆ ಸಮನ್ವಯತೆ ಸಾಧಿಸುತ್ತಿರುವ ಪ್ರಕ್ರಿಯೆ ಬಗ್ಗೆ ಅಧಿಕಾರಿಗಳು ಪ್ರಧಾನಮಂತ್ರಿಗೆ ತಿಳಿಸಿದರು. ರಾಜ್ಯಗಳಿಗೆ ಆಮ್ಲಜನಕದ ಪೂರೈಕೆಯನ್ನು ಹೇಗೆ ಸ್ಥಿರವಾಗಿ ಹೆಚ್ಚಿಸಲಾಗುತ್ತಿದೆ ಎಂಬುದರ ಬಗ್ಗೆಯೂ ಅವರಿಗೆ ತಿಳಿಸಲಾಯಿತು. 20 ರಾಜ್ಯಗಳಿಂದ ದಿನಕ್ಕೆ ಎಲ್‌ಎಂಒನ 6,785 ಮೆಟ್ರಿಕ್ ಟನ್ ಪ್ರಸ್ತುತ ಬೇಡಿಕೆ ಇದೆ. ಕೇಂದ್ರ ಸರ್ಕಾರವು ಬುಧವಾರದಿಂದ 6,822 ಮೆಟ್ರಿಕ್ ಟನ್ ಆಮ್ಲಜನಕ ಹಂಚಿಕೆ ಮಾಡಲು ಪ್ರಾರಂಭಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

  ಇದನ್ನು ಓದಿ: COVID Guideline | ಕೊರೋನಾ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ; ಯಾವುದಕ್ಕೆ ನಿರ್ಬಂಧ, ಯಾವುದಕ್ಕೆ ನಿಷೇಧ?

  ಕಳೆದ ಕೆಲವು ದಿನಗಳಿಂದ ಖಾಸಗಿ ಹಾಗೂ ಸಾರ್ವಜನಿಕ ಸ್ಟೀಲ್ ಪ್ಲಾಂಟ್​ ಕೈಗಾರಿಕೆಗಳು, ಆಮ್ಲಜನಕ ಉತ್ಪಾದಕರ ಕೊಡುಗೆಯಿಂದ ದಿನಕ್ಕೆ 3,300 ಮೆಟ್ರಿಕ್ ಟನ್​ ಎಲ್​ಎಂಒ ಉತ್ಪಾದಿಸಲಾಗುತ್ತಿದೆ ಎಂದು ಹೇಳಲಾಗಿದೆ.

  ಮಂಜೂರಾದ ಪಿಎಸ್‌ಎ ಆಮ್ಲಜನಕ ಸ್ಥಾವರಗಳನ್ನು ಆದಷ್ಟು ಬೇಗ ಕಾರ್ಯಗತಗೊಳಿಸಲು ರಾಜ್ಯಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಪ್ರಧಾನಿ ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ.
  Published by:HR Ramesh
  First published: