Coronavirus | ನಾಳೆ ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ಮೋದಿ; 2ನೇ ಬಾರಿಗೆ ದೇಶವನ್ನುದ್ದೇಶಿ ಭಾಷಣ ಸಾಧ್ಯತೆ

ಪ್ರಧಾನಿ ಮೋದಿ ಅವರು ನಾಳೆ ಉನ್ನತ ಮಟ್ಟದ ಸಭೆಯ ಬಳಿಕ ಎರಡನೇ ಬಾರಿಗೆ ದೇಶವನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ. ಕಳೆದ ಬಾರಿ ಮಾತಿನಲ್ಲಿ ಲಾಕ್​ಡೌನ್​ ಕಡೆಯ ಅಸ್ತ್ರ ಎಂದು ಪ್ರಧಾನಿ ಮೋದಿ ಹೇಳಿದ್ದರು. ಇದೀಗ ಸೋಂಕಿನ ಪ್ರಮಾಣ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕಡೆಯ ಅಸ್ತ್ರ ಪ್ರಯೋಗಕ್ಕೆ ಮುಂದಾಗಲಿದ್ದಾರಾ ಎಂದು ಕಾದುನೋಡಬೇಕಿದೆ.

ನರೇಂದ್ರ ಮೋದಿ.

ನರೇಂದ್ರ ಮೋದಿ.

 • Share this:
  ನವದೆಹಲಿ: ದೇಶದಲ್ಲಿ ಕೊರೋನಾ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ನಾಳೆ ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಉನ್ನತ ಮಟ್ಟದ ಸಭೆ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳ ಪ್ರವಾಸ ರದ್ದು ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಏ. 30ರಂದು ಕೊನೆಯ ಹಂತದ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ನಾಳೆ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ಮೋದಿ ಅವರು ತೆರಳಬೇಕಿತ್ತು. ಆದರೆ, ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನಕ್ಕೆ ಮೂರು ಲಕ್ಷ ದಾಟುತ್ತಿರುವ ಹಿನ್ನೆಲೆಯಲ್ಲಿ ನಾಳೆ ದಿಢೀರ್ ಆಗಿ ಉನ್ನತ ಮಟ್ಟದ ಸಭೆಯನ್ನು ಕರೆದಿದ್ದಾರೆ.

  ಈ ಸಭೆಯಲ್ಲಿ ಕೋವಿಡ್ ಪರಿಸ್ಥಿತಿಯ ಪರಾಮರ್ಶೆ ನಡೆಸಲಾಗುತ್ತದೆ. ಕೊರೋನಾ ಲಸಿಕೆ, ಆಕ್ಸಿಜನ್, ರೆಮಿಡೆಸಿವಿರ್ ಉತ್ಪಾದನೆ ಮತ್ತು ವಿತರಣೆಯ ಬಗ್ಗೆ ಪರಾಮರ್ಶೆ ಹಾಗೂ ಸೋಂಕು ಹರಡುವಿಕೆ ತಡೆಯುವ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ. ಮಾರಕ ಸೋಂಕು ನಿಯಂತ್ರಣಕ್ಕೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಸಭೆಯ ಬಳಿಕ ಪ್ರಧಾನಿ ಮೋದಿ ಅವರು ಮತ್ತೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಹಿರಿಯ ಅಧಿಕಾರಿಗಳು ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ.

  ದೇಶಾದ್ಯಂತ ಆಮ್ಲಜನಕದ ಪೂರೈಕೆಯನ್ನು ಪರಿಶೀಲಿಸಲು ಮತ್ತು ಅದರ ಲಭ್ಯತೆಯನ್ನು ಹೆಚ್ಚಿಸುವ ಮಾರ್ಗಗಳು ಮತ್ತು ವಿಧಾನಗಳನ್ನು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಸಹ ಉನ್ನತ ಮಟ್ಟದ ಸಭೆ ನಡೆಸಿದ್ದರು. ಆಮ್ಲಜನಕದ ಪೂರೈಕೆಯನ್ನು ಸುಧಾರಿಸಲು ಕಳೆದ ಕೆಲವು ವಾರಗಳಲ್ಲಿ ಕೈಗೊಂಡ ಪ್ರಯತ್ನಗಳ ಬಗ್ಗೆ ಅಧಿಕಾರಿಗಳು ಪ್ರಧಾನಿ ಮೋದಿ ಅವರಿಗೆ ವಿವರಿಸಿದರು. ದೆಹಲಿ ಸೇರಿದಂತೆ ಕಳೆದ ಕೆಲವು ದಿನಗಳಿಂದ ದೇಶವ್ಯಾಪಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ದ್ರವ ವೈದ್ಯಕೀಯ ಆಮ್ಲಜನಕ (ಎಲ್ಎಂಒ) ಸಮಸ್ಯೆಯಾಗಿ ತೀವ್ರವಾಗಿ ಕಾಡಲಾರಂಭಿಸಿದೆ. ಹೀಗಾಗಿ ಇಂದು ಈ ಸಭೆ ನಡೆಸಲಾಗಿದೆ.

  ವಿವಿಧ ರಾಜ್ಯಗಳಿಗೆ ಆಮ್ಲಜನಕದ ಪೂರೈಕೆ ಸುಗಮವಾಗಿ, ಅಡೆತಡೆಯಿಲ್ಲದೆ ನಡೆಯುವಂತೆ ನೋಡಿಕೊಳ್ಳುವಂತೆ ಪ್ರಧಾನಿ ಮೋದಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಡಚಣೆಯ ಸಂದರ್ಭದಲ್ಲಿ ಸ್ಥಳೀಯ ಆಡಳಿತದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಮಸ್ಯೆ ಸರಿಪಡಿಸುವ ಅಗತ್ಯತೆಯ ಕುರಿತು ಅವರು ಮಾತನಾಡಿದರು. ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸಲು ಇತರ ನವೀನ ಮಾರ್ಗಗಳನ್ನು ಅನ್ವೇಷಿಸಲು ಅವರು ಸಚಿವಾಲಯಗಳಿಗೆ ಸೂಚಿಸಿದ್ದಾರೆ.

  ಇದನ್ನು ಓದಿ: ಆಕ್ಸಿಜನ್ ಬಿಕ್ಕಟ್ಟು ಸಂಬಂಧ ಪ್ರಧಾನಿ ಮೋದಿ ಸಭೆ; ಬೇಡಿಕೆಗೆ ತಕ್ಕಷ್ಟು ಆಮ್ಲಜನಕ ಪೂರೈಕೆಗೆ ಸೂಚನೆ

  ದೇಶದಲ್ಲಿ ಕೊರೋನಾ ವೈರಸ್ ಸೋಂಕಿತ ಪ್ರಕರಣಗಳು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಬುಧವಾರ ಮೊದಲ ಬಾರಿಗೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಕೊರೋನಾ ಎರಡನೇ ಅಲೆ ಸುನಾಮಿ ತರ ದೇಶವನ್ನು ಆವರಿಸಿದೆ. ದೇಶದಲ್ಲಿ ಮತ್ತೆ ಕೊರೋನಾ ಯುದ್ಧಭೀತಿ ತಲೆದೋರಿದೆ. ನಿಮ್ಮೆಲ್ಲರ ಸಂಕಷ್ಟಗಳೂ ನನಗೆ ಅರ್ಥವಾಗಿದೆ. ಜನವರಿ, ಫೆಬ್ರವರಿಯಲ್ಲಿ ಲಸಿಕೆ ಉತ್ಪಾದನೆ ಹೆಚ್ಚಳ ಮಾಡಲಾಗಿದೆ. ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಲ್ಪಾವಧಿಯಲ್ಲಿ ವಿಜ್ಞಾನಿಗಳು ಲಸಿಕೆ ಕಂಡು ಹಿಡಿದಿದ್ದಾರೆ. ಆಕ್ಸಿಜನ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ನಾನು ಎಲ್ಲಾ ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಸ್ವಚ್ಛತಾ ಕಾರ್ಮಿಕರು, ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. COVID-19 ವಿರುದ್ಧ ಹೋರಾಡಲು ನೀವು ನಿಮ್ಮ ಜೀವನವನ್ನು ಮುಡುಪಾಗಿ ಇಟ್ಟಿದ್ದಿರಿ. ನೀವು ನಮ್ಮ ಸುರಕ್ಷತೆಗಾಗಿ ನಿಮ್ಮ ಕುಟುಂಬಗಳನ್ನು ತ್ಯಾಗ ಮಾಡಿದ್ದೀರಿ. ದೇಶವನ್ನು ಲಾಕ್​ಡೌನ್​ನಿಂದ ಬಚಾವ್​ ಮಾಡಬೇಕು. ಲಾಕ್​ಡೌನ್​ ಕಡೆಯ ಅಸ್ತ್ರ. ಈ ಅಸ್ತ್ರ ಪ್ರಯೋಗಕ್ಕೆ ಅವಕಾಶ ಮಾಡಿಕೊಡಬೇಡಿ. ಜನರಲ್ಲಿ ಕೊರೋನಾ ಬಗ್ಗೆ ಜಾಗೃತಿ ಮುಖ್ಯ. ಮೈಕ್ರೋ ಕಂಟೋನ್ಮೆಂಟ್ ವಲಯದ ಮೇಲೆ ನಿಗಾ ವಹಿಸಬೇಕಿದೆ ಎಂದು ಹೇಳಿದ್ದರು.

  ಪ್ರಧಾನಿ ಮೋದಿ ಅವರು ನಾಳೆ ಉನ್ನತ ಮಟ್ಟದ ಸಭೆಯ ಬಳಿಕ ಎರಡನೇ ಬಾರಿಗೆ ದೇಶವನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ. ಕಳೆದ ಬಾರಿ ಮಾತಿನಲ್ಲಿ ಲಾಕ್​ಡೌನ್​ ಕಡೆಯ ಅಸ್ತ್ರ ಎಂದು ಪ್ರಧಾನಿ ಮೋದಿ ಹೇಳಿದ್ದರು. ಇದೀಗ ಸೋಂಕಿನ ಪ್ರಮಾಣ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕಡೆಯ ಅಸ್ತ್ರ ಪ್ರಯೋಗಕ್ಕೆ ಮುಂದಾಗಲಿದ್ದಾರಾ ಎಂದು ಕಾದುನೋಡಬೇಕಿದೆ.

  Published by:HR Ramesh
  First published: