Mann ki Baat: 21 ದಿನಗಳ ಲಾಕ್​ಡೌನ್ ಘೋಷಿಸಿದ್ದಕ್ಕೆ ಜನರಲ್ಲಿ ಕ್ಷಮೆ ಕೇಳಿದ ಪ್ರಧಾನಿ ಮೋದಿ

ಸಮಸ್ಯೆಗಳು ಅಥವಾ ರೋಗಗಳು ಉಲ್ಬಣಿಸುವ ಮೊದಲೆ ನಾವು ಕ್ರಮ ಕೈಗೊಳ್ಳಬೇಕು. ಈ ವೈರಸ್​ ವಿರುದ್ಧ ಎಲ್ಲರೂ ಹೋರಾಡಬೇಕಿದೆ ಎಂದು ಮೋದಿ ಕರೆ ನೀಡಿದರು. 

news18-kannada
Updated:March 29, 2020, 11:41 AM IST
Mann ki Baat: 21 ದಿನಗಳ ಲಾಕ್​ಡೌನ್ ಘೋಷಿಸಿದ್ದಕ್ಕೆ ಜನರಲ್ಲಿ ಕ್ಷಮೆ ಕೇಳಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ.
  • Share this:
ನವದೆಹಲಿ (ಮಾ.29): ಕೊರೋನಾ ವೈರಸ್​ ಹರಡದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ 21 ದಿನಗಳ ಲಾಕ್​ಡೌನ್​ ಘೋಷಣೆ ಮಾಡಿದ್ದರು. ಇದರಿಂದ ಮಧ್ಯಮ ವರ್ಗದವರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ 'ಮನ್ ​ಕಿ ಬಾತ್​'ನಲ್ಲಿ ಕ್ಷಮೆ ಕೋರಿದ್ದಾರೆ.

“ನಾನು ಈ ರೀತಿಯ ಕಠಿಣ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಬಡವರಿಗೆ ನನ್ನ ಮೇಲೆ ಕೋಪ ಬಂದಿದೆ. ಏಕೆ ಈ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಕೊರೋನಾ ವೈರಸ್​ ವಿರುದ್ಧ ಹೋರಾಡಲು ನನಗೆ ಬೇರೆ ದಾರಿಯೇ ಇರಲಿಲ್ಲ. ಈ ರೀತಿಯ ನಿರ್ಧಾರಗಳನ್ನು ಯಾರೂ ತೆಗೆದುಕೊಳ್ಳಲು ಇಚ್ಛಿಸುವುದಿಲ್ಲ. ಆದರೆ, ಬೇರೆ ದೇಶಗಳ ಸ್ಥಿತಿ ನೋಡಿದಾಗ ಈ ರೀತಿಯ ಕ್ರಮ ಸರಿ ಎನ್ನಿಸುತ್ತದೆ,” ಎಂದರು.

ಸಮಸ್ಯೆ ಉಲ್ಬಣಿಸುವ ಮೊದಲೇ ಕ್ರಮ ಕೈಗೊಳ್ಳುವುದು ಉತ್ತಮ ಎಂದಿರುವ ಅವರು, “ಸಮಸ್ಯೆಗಳು ಅಥವಾ ರೋಗಗಳು ಹೆಚ್ಚುವ ಮೊದಲೆ ನಾವು ಕ್ರಮ ಕೈಗೊಳ್ಳಬೇಕು. ಕೊರೋನಾ ವೈರಸ್​ ಎಲ್ಲರಿಗೂ ಹಾನಿ ಉಂಟು ಮಾಡುತ್ತಿದೆ. ಈ ವೈರಸ್​ ವಿರುದ್ಧ ಎಲ್ಲರೂ ಹೋರಾಡಬೇಕಿದೆ,” ಎಂದು ಕರೆ ನೀಡಿದರು.

ದೇಶದಲ್ಲಿ ಅನೇಕರು ಲಾಕ್​ಡೌನ್​ ನಿಯಮವನ್ನು ಮೀರಿದ್ದರು. ಈ ವಿಚಾರವಾಗಿ ಮಾತನಾಡಿರುವ ಮೋದಿ, “ಎಲ್ಲರೂ ಬಂದ್​ ಆದೇಶವನ್ನು ಪಾಲಿಸಬೇಕು. ನಿಮಗೆ ನೀವೇ ಲಕ್ಷ್ಮಣ ರೇಖೆ ಹಾಕಿಕೊಳ್ಳಬೇಕು ಈ ಮೂಲಕ ಲಾಕ್​ಡೌನ್​ ಯಶಸ್ವಿಗೊಳಿಸಬೇಕು,” ಎಂದು ಕೋರಿದರು.

ಇದನ್ನೂ ಓದಿ: ಹಾಸನದಲ್ಲೊಂದು ದುರಂತ ಘಟನೆ; ಹೋಂ ಕ್ವಾರಂಟೈನ್​ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ

ನರೇಂದ್ರ ಮೋದಿ ಮನ್​ ಕಿ ಬಾತ್​ನಲ್ಲಿ ವೈದ್ಯರಿಗೆ ಧನ್ಯವಾದ ಅರ್ಪಿಸಿದ್ದಾರೆ. “ಸಾಕಷ್ಟು ಜನರು ಕೊರೋನಾ ವೈರಸ್​ ವಿರುದ್ಧ ಹೋರಾಡುತ್ತಿದ್ದಾರೆ. ವೈದ್ಯರು, ನರ್ಸ್​ಗಳು ಮತ್ತು ಔಷಧಾಲಯದವರು ಕೊರೋನಾ ತಡೆಯಲು ಪ್ರಯತ್ನಿಸುತ್ತಿದ್ದಾರೆ. ಇವರು ಮೊದಲ ಸಾಲಿನ ಸೈನಿಕರು,” ಎಂದು ಶ್ಲಾಘಿಸಿದರು.
First published:March 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading