ಲಾಕ್ ಡೌನ್ ನಿಂದ ಅನಾನಸ್ ಬೆಳೆಗಾರರ ಸಂಕಷ್ಟ - ರೈತರ ಹಿತ ಕಾಪಾಡಲು ಮುಂದಾದ ಜಿಲ್ಲಾಡಳಿತ

ಜಿಲ್ಲೆಯಲ್ಲಿ ಬೆಳೆಯಲಾಗುವ ರಾಜಾ ತಳಿಯ ಅನಾನಸ್​ಗೆ ದೆಹಲಿಯ ಜ್ಯೂಸ್ ಕಂಪೆನಿಗಳು ಪ್ರಮುಖ ಮಾರುಕಟ್ಟೆಯಾಗಿತ್ತು. ಅದರೆ, ಲಾಕ್​ ಡೌನ್​​ ನಿಂದ ಸಾಗಾಟ ತೊಂದರೆಯಾಗಿದೆ

 ಅನಾನಸ್​​ ಬೆಳೆಗಾರ

ಅನಾನಸ್​​ ಬೆಳೆಗಾರ

  • Share this:
ಶಿವಮೊಗ್ಗ(ಏ.24): ಲಾಕ್​ ಡೌನ್​​ನಿಂದಾಗಿ ಸಮಸ್ಯೆಗೆ ಸಿಲುಕಿರುವ ಜಿಲ್ಲೆಯ ಅನಾನಸ್ ಬೆಳೆಗಾರರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಿದೆ. ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.

ಜಿಲ್ಲೆಯಲ್ಲಿ ಅಂದಾಜು 65 ಸಾವಿರ ಟನ್ ಅನಾನಸ್​ ಬೆಳೆಯಲಾಗಿದೆ. ಕಳೆದ 20 ದಿನಗಳಲ್ಲಿ ವಿವಿಧ ಮೂಲಗಳನ್ನು ಬಳಸಿಕೊಂಡು ಅನಾನಸ್ ಮಾರುಕಟ್ಟೆಗೆ ವಿಲೇವಾರಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಬೆಳೆಯಲಾಗುವ ರಾಜಾ ತಳಿಯ ಅನಾನಸ್​ಗೆ ದೆಹಲಿಯ ಜ್ಯೂಸ್ ಕಂಪೆನಿಗಳು ಪ್ರಮುಖ ಮಾರುಕಟ್ಟೆಯಾಗಿತ್ತು. ಅದರೆ, ಲಾಕ್​ ಡೌನ್​​ ನಿಂದ ಸಾಗಾಟ ತೊಂದರೆಯಾಗಿದೆ. ಪ್ರಸ್ತುತ ದಿನ ನಿತ್ಯ 125 ರಿಂದ 150 ಟನ್ ಮಾತ್ರ ಮಾರುಕಟ್ಟೆಗೆ ಸರಬರಾಜು ಮಾಡಲು ಸಾಧ್ಯವಾಗುತ್ತಿದೆ.

ಪ್ರತಿನಿತ್ಯ 250 ರಿಂದ 300 ಟನ್ ಇಳುವರಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಸ್ವಸಹಾಯ ಸಂಘಗಳನ್ನು ಬಳಸಿಕೊಂಡು ಮಾರುಕಟ್ಟೆ ಕಲ್ಪಿಸಲು, ವಿವಿಧ ಆಹಾರ ಸಂಸ್ಕರಣಾ ತಂತ್ರಗಳನ್ನು ಬಳಸಿಕೊಂಡು ಅನಾನಸ್​​ ಉತ್ಪನ್ನಗಳನ್ನು ದಾಸ್ತಾನು ಇರಿಸುವುದು ಸೇರಿದಂತೆ ಬೆಳೆಗಾರರಿಗೆ ಹೊಸ ಮಾರುಕಟ್ಟೆ ಅವಕಾಶಗಳ ಬಗ್ಗೆ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ (ಸಿಎಫ್​ಟಿಆರ್​​ಐ) ತಜ್ಞರಿಂದ ಮಾರ್ಗದರ್ಶನ  ಪಡೆಯಲಾಗುತ್ತಿದೆ. ಕೋಲ್ಡ್ ಸ್ಟೋರೇಜ್ ಬಳಸಿಕೊಂಡು ಅನಾನಸ್​ ಗರಿಷ್ಟ ಒಂದು ವಾರಗಳ ಕಾಲ ಮಾತ್ರ ದಾಸ್ತಾನು ಇರಿಸಲು ಸಾಧ್ಯವಿದೆ. ಅದನ್ನು ಪಲ್ಪ್ ಆಗಿ ಪರಿವರ್ತಿಸಿದರೆ ಗರಿಷ್ಟ ಎರಡು ವರ್ಷಗಳ ಕಾಲ ಕಾಪಾಡಬಹುದಾಗಿದೆ.

ಹುಬ್ಬಳ್ಳಿ ಮತ್ತು ಚಿತ್ತೂರುಗಳಲ್ಲಿ ಅಂತಹ ಸಂಸ್ಕರಣಾ ಉದ್ಯಮಗಳಿದ್ದು, ಅನಾನಸ್​​ನ್ನು ಪಲ್ಪ್ ಆಗಿ ಪರಿವರ್ತಿಸಿದ ಬಳಿಕ ಹಾಪ್​ ಕಾಮ್ಸ್ ಮೂಲಕ ಮಾರುಕಟ್ಟೆ ವ್ಯವಸ್ಥೆ ಮಾಡಬಹುದಾಗಿದೆ ಎಂಬ ಸಲಹೆಗಳನ್ನು ಸಿಎಫ್​ಟಿಆರ್​ಐ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ನೀಡಿದೆ. ಅತ್ಯಂತ ಕಡಿಮೆ ತಂತ್ರಜ್ಞಾನವನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಅನಾನಸು ಸಂಸ್ಕರಣೆಯನ್ನು ಸ್ಥಳೀಯವಾಗಿ ಮಾಡಲು ಸಾಧ್ಯವಿದೆ. ಸ್ವಸಹಾಯ ಗುಂಪುಗಳ ಸಹಯೋಗದಲ್ಲಿ ಅಂತಹ ಚಟುವಟಿಕೆ ನಡೆಸಲು, ರೈತರಿಗೆ, ಸ್ವಸಹಾಯ ಸಂಘಗಳ ಸದಸ್ಯರಿಗೆ ಸೂಕ್ತ ತರಬೇತಿಯನ್ನು ನೀಡಲು ಸಂಸ್ಥೆ ಸಿದ್ಧವಿದೆ.

ಇದನ್ನೂ ಓದಿ : ಬೀದಿ ನಾಯಿ, ಬಿಡಾಡಿ ದನಗಳ ಸಂಕಷ್ಟಕ್ಕೆ ಮಿಡಿದ ಮಾಜಿ ಸಚಿವ ಎಂ.ಬಿ.ಪಾಟೀಲ ಮಗ; ನಿತ್ಯ ಆಹಾರ ಪೂರೈಕೆ

ಲಾಕ್​ ಡೌನ್​​ ಮುಗಿದ ಬಳಿಕ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬಹುದಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಸ್ಥಳೀಯವಾಗಿ ಮಾರುಕಟ್ಟೆಯನ್ನು ವಿಸ್ತರಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಎಲ್ಲಾ ತಾಂತ್ರಿಕ ನೆರವು ನೀಡಲು ಸಿದ್ಧವಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ರಾಘವರಾವ್ ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ.

ಈ ಎಲ್ಲಾ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಿಲ್ಲೆಯ ಅನಾನಸ್ ಬೆಳೆಗಾರರಿಗೆ ಆಶಾಕಿರಣವಾಗಿದೆ. ಜೊತೆಗೆ ಸ್ಥಳೀಯವಾಗಿ ಉತ್ತಮ ಮಾರುಕಟ್ಟೆ ಸಿಕ್ಕರೆ ರೈತರಿಗೆ ಇನ್ನು ಹೆಚ್ಚಿನ ಅನುಕೂಲ ಆಗುವುದರಲ್ಲಿ ಎರಡು ಮಾತಿಲ್ಲ.
First published: