ಕೊರೋನಾ ಕಾಲದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ‌ ಬೇಡ, ಎಲ್ಲರನ್ನು ಉತ್ತೀರ್ಣಗೊಳಿಸಿ; ಹೈಕೋರ್ಟ್​ಗೆ ಪಿಐಎಲ್ ಅರ್ಜಿ

ಎಸ್​ಎಸ್​ಎಲ್​ಸಿ ಪರೀಕ್ಷೆ ರದ್ದುಗೊಳಿಸಬೇಕು. ರಾಜ್ಯಾದ್ಯಾಂತ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತಿರ್ಣಗೊಳಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದೇವೆ. ಮೇ 27 ಕ್ಕೆ ಅರ್ಜಿ ವಿಚಾರಣೆ ಹೈಕೋರ್ಟ್ ಕೈಗೆತ್ತಿಕೊಳ್ಳಲಿದೆ ಎಂದು ಅರ್ಜಿದಾರ ಲೋಕೇಶ್ ತಿಳಿಸಿದ್ದಾರೆ.

ಕರ್ನಾಟಕ ಹೈಕೋರ್ಟ್

ಕರ್ನಾಟಕ ಹೈಕೋರ್ಟ್

  • Share this:
ಬೆಂಗಳೂರು: ಕೊರೋನಾ ಸೋಂಕು ಹರಡುವ ಭೀತಿ ಹಿನ್ನೆಲೆ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ರಾಜ್ಯ ಸರ್ಕಾರ ನಡೆಸಿರಲಿಲ್ಲ. ಇದೀಗ ಕೊರೋನಾ ವೈರಸ್ ಹರಡುತ್ತಿರುವ ಮಧ್ಯೆ ಜೂನ್ 25ರಿಂದ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ ಕೊರೋನಾ ಭೀತಿಯಲ್ಲಿ ಪರೀಕ್ಷೆ ನಡೆಸದೇ ಮಕ್ಕಳನ್ನು ಉತ್ತೀರ್ಣಗೊಳಿಸಿ ಎಂದು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ವಿಶ್ವಾದ್ಯಂತ ಕೊರೋನಾ ವೈರಸ್ ಸೋಂಕು ಹೆಚ್ಚಾಗಿ ಹಬ್ಬುತ್ತಿದೆ. ದೇಶದಲ್ಲಿ ಒಂದು ಲಕ್ಷ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿ ಸೋಂಕು ಹೊಂದಿದವರ ಸಂಖ್ಯೆ ಸಾವಿರ ಗಡಿ ದಾಟಿದೆ. ಕೇಂದ್ರ ಸರ್ಕಾರ ಆರಂಭದ ಲಾಕ್‌ಡೌನ್ ನಿಂದಲೇ ಶಾಲಾ-ಕಾಲೇಜಿಗೆ ರಜೆ ಘೋಷಿಸಿತ್ತು. ಮುಂದಿನ ಆದೇಶದವರೆಗೆ ತೆಗೆಯುವಂತಿಲ್ಲ ಎಂದು ಕೇಂದ್ರ ಸರ್ಕಾರ ಲಾಕ್ ಡೌನ್ 4.0 ಸೂಚಿಸಿದೆ. ಇಂಥ ಸಂದರ್ಭದಲ್ಲಿ ಎಸ್​ಎಸ್​ಎಲ್​‌ಸಿ ಪರೀಕ್ಷೆ ಜೂನ್ 25ರಿಂದ ಜುಲೈ 4ರವರೆಗೆ ರಾಜ್ಯದಲ್ಲಿ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ.

ವಿದ್ಯಾರ್ಥಿಗಳಿಗೆ ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸಾಮಾಜಿಕ ಅಂತರದಲ್ಲಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ವಿದ್ಯಾರ್ಥಿಗಳು ಯಾವ ಊರಿನಲ್ಲಿ ಇರುತ್ತಾರೋ ಅವರಿಗೆ ಅಲ್ಲಿಯೇ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದೆ. ರೆಡ್ ಜೋನ್ ಮತ್ತು ಸೋಂಕು ಹೆಚ್ಚಿರುವ ಸೀಲ್ ಡೌನ್ ಏರಿಯಾ ಹೊರತುಪಡಿಸಿ ಉಳಿದೆಡೆ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಅವಕಾಶ ನೀಡಿದೆ.

ಈ‌ ಬಾರಿ 8.48 ಲಕ್ಷ ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲಿದ್ದಾರೆ. ಆದರೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸದಂತೆ ವಕೀಲರಾದ ಲೋಕೇಶ್, ಪ್ರಶಾಂತ್ ಮತ್ತು ಪೃಥ್ವೀಶ್ ಹೈಕೋರ್ಟ್ ಗೆ ಪಿಐಎಲ್ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ದೇಶದ ಮಹಾರಾಷ್ಟ್ರ ಪಂಜಾಬ್ ಹಾಗೂ ಮಧ್ಯಪ್ರದೇಶದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ರದ್ದುಗೊಳಿಸಿದೆ. ಕೊರೋನಾ ಬರುವ ಮುಂಚಿತವಾಗಿ ಜರುಗಿದ್ದ ಪರೀಕ್ಷೆಗಳಿಗೆ ಫಲಿತಾಂಶವಷ್ಟೆ ನೀಡಲು ನಿರ್ಧರಿಸಿದೆ‌. ಇದರಂತೆ ರಾಜ್ಯ ಸರ್ಕಾರವೂ 10ನೇ ತರಗತಿ ಪರೀಕ್ಷೆ ನಡೆಸದೇ ಎಲ್ಲರೂ ಉತ್ತೀರ್ಣರೆಂದು ಫಲಿತಾಂಶ ನೀಡಲಿ. ಈಗಾಗಲೇ ರಾಜ್ಯ ಸರ್ಕಾರ 7ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ ಪರೀಕ್ಷೆ ನಡೆಸಿಲ್ಲ. ಅವರೆಲ್ಲ ಉತ್ತೀರ್ಣರೆಂದು, ಮುಂದಿನ ತರಗತಿಗೆ ಕೂರಲು ಅರ್ಹರೆಂದು ಹೇಳಿದೆ. ಅದೇ ರೀತಿ ಎಸ್​ಎಸ್​ಎಲ್​ಸಿಗೂ ಇದೇ ರೀತಿ ಘೋಷಿಸಲಿ ಎಂದು ಪಿಐಎಲ್ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮುಂದುವರೆದು, ರಾಜ್ಯದಾದ್ಯಂತ‌ ಜರುಗುವ ಪರೀಕ್ಷೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಬೇಕಾಗಿರುವ ವಿದ್ಯಾರ್ಥಿಗಳು ಬೇರೆ ಬೇರೆ ರಾಜ್ಯಗಳಿಗೆ ತೆರಳಿದ್ದಾರೆ. ಇವರು ಮರಳಿ ರಾಜ್ಯಕ್ಕೆ ಬಂದು ಪರೀಕ್ಷೆ ಬರೆಯುವುದು ಕಷ್ಟವಾಗುತ್ತದೆ. ಇನ್ನು ರಾಜ್ಯದ ತಮ್ಮೂರ ಹಳ್ಳಿಗಳಿಗೆ ಕುಟುಂಬ ಸಮೇತ ಲಾಕ್ ಡೌನ್‌ ಘೋಷಣೆಯಾಗುತ್ತಿದ್ದಂತೆ ಹೋಗಿದ್ದಾರೆ. ಇದರ ಜೊತೆಗೆ ಸಾವಿರಾರು ವಲಸೆ ಕಾರ್ಮಿಕರು ಸಹ ತಮ್ಮೂರಿಗೆ ಹೋಗಿದ್ದು, ಇವರ ಮಕ್ಕಳು ಪರೀಕ್ಷೆ ಬರೆಯಲು ಕಷ್ಟವಾಗುತ್ತದೆ ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನು ಓದಿ: ರೈತ ಮಹಿಳೆಯರನ್ನು ಸಾರ್ವಜನಿಕವಾಗಿ ನಿಂದಿಸಿದ ಸಚಿವ ಮಾಧುಸ್ವಾಮಿ; ಕ್ಷಮೆ-ತಲೆದಂಡಕ್ಕೆ ಸಿದ್ದರಾಮಯ್ಯ ಆಗ್ರಹ

ರಾಜ್ಯದಲ್ಲಿ ದಿನದಿನಕ್ಕೂ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಈ ಸಂದರ್ಭದಲ್ಲಿ ಪರೀಕ್ಷೆ ನಡೆಸೋದು ಸೂಕ್ತ ಅಲ್ಲ. ವೈರಸ್ ಸೋಂಕು ಮಕ್ಕಳಿಗೂ ಹರಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ರದ್ದುಗೊಳಿಸಬೇಕು. ರಾಜ್ಯಾದ್ಯಾಂತ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತಿರ್ಣಗೊಳಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದೇವೆ. ಮೇ 27 ಕ್ಕೆ ಅರ್ಜಿ ವಿಚಾರಣೆ ಹೈಕೋರ್ಟ್ ಕೈಗೆತ್ತಿಕೊಳ್ಳಲಿದೆ ಎಂದು ಅರ್ಜಿದಾರ ಲೋಕೇಶ್ ತಿಳಿಸಿದ್ದಾರೆ.
First published: