ಕೋವಿಡ್ -19 ಲಸಿಕೆ ತೆಗೆದುಕೊಳ್ಳಲು ನಿರಾಕರಿಸುವ ಫಿಲಿಫನ್ ನಾಗರಿಕರನ್ನು ಬಂಧಿಸುವಂತೆ ಆದೇಶಿಸುವುದಾಗಿ ಫಿಲಿಪೈನ್ ಅಧ್ಯಕ್ಷರು ಬೆದರಿಕೆ ಹಾಕಿದ್ದಾರೆ ಮತ್ತು ಸಾರ್ವಜನಿಕ ತುರ್ತು ಆರೋಗ್ಯ ಪರಿಸ್ಥಿತಿಯನ್ನು ಕೊನೆಗೊಳಿಸಲು ಸಹಕರಿಸದಿದ್ದರೆ ಅಂಥವರು ದೇಶವನ್ನು ಬಿಟ್ಟ ಹೋಗಬಹುದು ಎಂದು ಹೇಳಿದ್ದಾರೆ. ಸಾರ್ವಜನಿಕ ಆಕ್ರೋಶ ಮತ್ತು ಕಟು ವಾಕ್ಚಾತುರ್ಯಕ್ಕೆ ಹೆಸರುವಾಸಿ ಆಗಿರುವ ಅಧ್ಯಕ್ಷ ರೊಡ್ರಿಗೋ ಡುಟೆರ್ಟೆ , ಸೋಮವಾರ ರಾತ್ರಿ ಮಾಧ್ಯಮಕ್ಕೆ ನೀಡಿದ ಹೇಳಿಕೆಗಳಲ್ಲಿ, ಕೋವಿಡ್ ಲಸಿಕೆಯನ್ನು ತೆಗೆದುಕೊಳ್ಳಲು ನಿರಾಕರಿಸಿ, ಕೊರೋನಾ ಹರಡುವಂತೆ ಮಾಡುವ ಜನರ ಮೇಲೆ ಅವರು ಕೆರಳಿದ್ದಾರೆ ಎಂದು ತಿಳಿಸಿದರು.
“ನನ್ನನ್ನು ತಪ್ಪಾಗಿ ತಿಳಿಯಬೇಡಿ. ದೇಶವು ಗಂಡಾಂತರವನ್ನು ಎದುರಿಸುತ್ತಿದೆ. ಇಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಇದೆ. ನೀವು ಲಸಿಕೆ ತೆಗೆದುಕೊಳ್ಳದಿದ್ದರೆ, ನಾನು ನಿಮ್ಮನ್ನು ಬಂಧಿಸಲು ಹೇಳುತ್ತೇನೆ ಮತ್ತು ನಾನೇ ನಿಮ್ಮ ಅಂಡಿಗೆ ಲಸಿಕೆ ಚುಚ್ಚುತ್ತೇನೆ” ಎಂದು ಅವರು ಹೇಳಿದ್ದಾರೆ.
“ಲಸಿಕೆ ಹಾಕಿಸಿಕೊಳ್ಳಲು ನೀವು ಒಪ್ಪದಿದ್ದರೆ, ಫಿಲಿಪೈನ್ಸ್ ಅನ್ನು ಬಿಟ್ಟು ಹೋಗಿ. ಬೇಕಿದ್ದರೆ ಭಾರತಕ್ಕೆ ಹೋಗಿ ಅಥವಾ ಅಮೆರಿಕ, ಇನ್ನೆಲ್ಲಾದರು ಹೋಗಿ” ಎಂದಿರುವ ಅವರು, ಲಸಿಕೆ ಹಾಕಿಸಿಕೊಳ್ಳಲು ಕೇಳದವರ ಪಟ್ಟಿಯನ್ನು ತಯಾರಿಸುವಂತೆ, ಗ್ರಾಮದ ನಾಯಕರಿಗೆ ಆದೇಶ ನೀಡುವೆ ಎಂದು ಹೇಳಿದ್ದಾರೆ.
ಕೊರೋನಾ ವೈರಸ್ ವಿರುದ್ಧದ ಲಸಿಕೆಯನ್ನು ಸ್ವೀಕರಿಸದಿದ್ದರೆ, ಅದನ್ನು ಅಪರಾಧವೆಂದು ಪರಿಗಣಿಸುವ ಯಾವುದೇ ಕಾನೂನು ಫಿಲಿಪೈನ್ಸ್ನಲ್ಲಿ ಇಲ್ಲ ಎಂದು ನ್ಯಾಯ ಕಾರ್ಯದರ್ಶಿ ಮೆನಾರ್ಡೊ ಗುವೆರಾ ದೃಢಪಡಿಸಿದ್ದಾರೆ.
“ಲಸಿಕೆ ಹಾಕುವ ಯೋಜನೆಯು ಆದಷ್ಟು ಬೇಗ ಯಶಸ್ವಿಯಾಗಿ ಪೂರ್ಣಗೊಳ್ಳಲಿ ಎಂಬ ಕಾರಣಕ್ಕಾಗಿ ಅಧ್ಯಕ್ಷರು ಅಂತಹ ಕಟು ಮಾತುಗಳನ್ನು ಆಡಿರಬಹುದು ಎಂದು ನಾನು ಭಾವಿಸುತ್ತೇನೆ” ಎಂದು ಗುವೇರಾ ಹೇಳಿದ್ದಾರೆ.
ಡುಟೆರ್ಟೆ ಅವರ ಬೆದರಿಕೆಗೆ ಕಳವಳ ವ್ಯಕ್ತಪಡಿಸಿರುವ, ಮಾನವ ಹಕ್ಕುಗಳ ವಕೀಲ ಇಡ್ರೆ ಒಲಾಲಿಯಾ, ಯಾವುದೇ ಅಪರಾಧ ಮಾಡದ ವ್ಯಕ್ತಿಗಳನ್ನು ಅಧ್ಯಕ್ಷರು ಬಂಧಿಸಲು ಆದೇಶ ನೀಡುವಂತಿಲ್ಲ ಎಂದಿದ್ದಾರೆ.
ಡುಟೆರ್ಟೆ ಮತ್ತು ಅವರ ಸರಕಾರ, ಲಸಿಕಾ ಸರಬರಾಜು ಹಾಗೂ ಸಾರ್ವನಿಕ ಹಿಂಜರಿಕೆಯ ಕುರಿತಂತೆ, ಲಸಿಕಾ ಯೋಜನೆಯ ವಿಚಾರದಲ್ಲಿ ವ್ಯಾಪಕ ಟೀಕೆಯನ್ನು ಎದುರಿಸಿತ್ತು. ಹಲವಾರು ಬಾರಿ ವಿಳಂಬವಾದ ಬಳಿಕ, ಲಸಿಕೆ ನೀಡುವ ಕಾರ್ಯಕ್ರಮ ಮಾರ್ಚ್ನಲ್ಲಿ ಆರಂಭವಾಯಿತು. ಆದರೆ ಇನ್ನೂ ಕೆಲವರು ಪಾಶ್ಚಿಮಾತ್ಯ ಲಸಿಕೆಗಳಿಗಾಗಿ ಕಾಯಲು ನಿರ್ಧರಿಸಿದರು. ಅಲ್ಲಿನ ಕೆಲವು ನಗರಗಳಲ್ಲಿ, ಯಾವುದೇ ಕೋವಿಡ್ ಲಸಿಕೆ ಪಡೆದವರಿಗೆ ಅಂಗಡಿಗಳಲ್ಲಿ ರಿಯಾಯಿತಿ ನೀಡುವ ಮೂಲಕ, ಲಸಿಕೆ ಪಡೆಯಲು ಪ್ರೋತ್ಸಾಹ ನೀಡಲಾಗುತ್ತಿದೆ.
ಸಾರ್ವಜನಿಕ ಹಿಂಜರಿಯುವಿಕೆಗಿಂತ, ಲಸಿಕೆಗಳ ಪೂರೈಕೆ ಅಸಮರ್ಪಕವಾಗಿರುವುದೇ ಅತ್ಯಂತ ದೊಡ್ಡ ಸಮಸ್ಯೆ ಎಂದು ಕೆಲವು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೊದಲು ಡುಟೆರ್ಟೆ , ಆಸ್ಪತ್ರೆಗಳಲ್ಲಿ ಮಾತ್ರ ಪ್ಲಾಸ್ಟಿಕ್ ಫೇಸ್ ಶೀಲ್ಡ್ ಧರಿಸಿದರೆ ಸಾಕು ಎಂದಿದ್ದರು. ಬಳಿಕ ತಜ್ಷರು ಅವರಿಗೆ ಹೆಚ್ಚು ಕೊರೋನಾ ವೈರಸ್ ರೂಪಾಂತರಿಗಳ ಬೆದರಿಕೆ ಬಗ್ಗೆ ವಿವರಿಸಿದ ಬಳಿಕ, ಜನರು ಹೊರಾಂಗಣ ಮತ್ತು ಒಳಾಂಗಣ ಎರಡೂ ಕಡೆಯಲ್ಲೂ ಪ್ಲಾಸ್ಟಿಕ್ ಫೇಸ್ ಶೀಲ್ಡ್ ಧರಿಸುವುದು ಕಡ್ಡಾಯ ಎಂದು ಅವರು ಘೋಷಿಸಿದರು.
ಸುಮಾರು 1.0 ಮಿಲಿಯನ್ ಕೋವಿಡ್ ಪ್ರಕರಣಗಳು ಮತ್ತು ಕೊರೋನಾದಿಂದ ಕನಿಷ್ಟ 23,749 ಸಾವುಗಳು ಉಂಟಾಗಿರುವ ಫಿಲಿಪೈನ್ಸ್ , ಏಷ್ಯಾದಲ್ಲಿ ಕೋವಿಡ್ -19 ಹಾಟ್ಸ್ಪಾಟ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ