ನವ ದೆಹಲಿ (ಆಗಸ್ಟ್ 25); ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಕಂಡುಹಿಡಿಯುವ ಪ್ರಯತ್ನಕ್ಕೆ ಮುಂದಾಗಿರುವ ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಆಕ್ಸ್‌ಫರ್ಡ್ ಕೋವಿಡ್ -19 ಲಸಿಕೆ ಸಂಶೋಧನೆ ಎರಡನೇ ಹಂತಕ್ಕೆ ತಲುಪಿದ್ದು, ಮಾನವನ ಮೇಲಿನ ಕ್ಲಿನಿಕಲ್ ಪ್ರಯೋಗ ಇಂದು ಪ್ರಾರಂಭವಾಗಲಿದೆ ಎಂದು ತಿಳಿದುಬಂದಿದೆ.
ಆರೋಗ್ಯವಂತ ಭಾರತೀಯ ವಯಸ್ಕರಲ್ಲಿ "ಕೋವಿಶೀಲ್ಡ್"ನ ಸುರಕ್ಷತೆ ಮತ್ತು ರೋಗನಿರೋಧಕತೆಯನ್ನು ನಿರ್ಧರಿಸುವ ಯಾಧೃಚ್ಛಿಕ ನಿಯಂತ್ರಿತ ಅಧ್ಯಯನವು ಪುಣೆಯ ಭಾರತಿ ವಿದ್ಯಾಪೀಠ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇಂದಿನಿಂದ ಪ್ರಾರಂಭವಾಗಲಿರುವುದು ಖಚಿತವಾಗಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಲು ಮುಂದಾಗಿರುವ COVID-19 ಲಸಿಕೆಯನ್ನು ತಯಾರಿಸಲು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಬ್ರಿಟಿಷ್-ಸ್ವೀಡಿಷ್ ಫಾರ್ಮಾ ಕಂಪನಿ ಅಸ್ಟ್ರಾಜೆನೆಕಾ ಜೊತೆ ಪಾಲುದಾರಿಕೆ ಹೊಂದಿದೆ.
"ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಕೊ) ಯಿಂದ ನಮಗೆ ಎಲ್ಲಾ ಅನುಮೋದನೆಗಳು ದೊರೆತಿವೆ. ಆಗಸ್ಟ್ 25 ರಿಂದ ಭಾರತಿ ವಿದ್ಯಾಪೀಠ (ವಿಶ್ವವಿದ್ಯಾಲಯವೆಂದು ಪರಿಗಣಿಸಲಾಗಿದೆ) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಾನವ ಕ್ಲಿನಿಕಲ್ ಪ್ರಯೋಗ ಪ್ರಕ್ರಿಯೆಯನ್ನು ಪ್ರಾರಂಭಿಸಲಿದ್ದೇವೆ.
ನಮ್ಮ ಗುಂಪಿನ ತತ್ತ್ವಶಾಸ್ತ್ರಕ್ಕೆ ಅನುಗುಣವಾಗಿ, ನಾವು ನಮ್ಮ ದೇಶದ ಜನರಿಗೆ ವಿಶ್ವ ದರ್ಜೆಯ COVID-19 ಲಸಿಕೆ ಲಭ್ಯವಾಗುವಂತೆ ಮಾಡಲಿದ್ದೇವೆ ಮತ್ತು ನಮ್ಮ ದೇಶವನ್ನು ’ಆತ್ಮಾನಿರ್ಭರ್' ಮಾಡಲು ಹೊರಟಿದ್ದೇವೆ" ಎಂದು ಸರ್ಕಾರದ ನಿಯಂತ್ರಣ ವ್ಯವಹಾರಗಳ ಹೆಚ್ಚುವರಿ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಹಾಗೂ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಸ್ಪಷ್ಟಪಡಿಸಿದೆ.
ತ್ವರಿತ ನಿಯಂತ್ರಕ ಪ್ರತಿಕ್ರಿಯೆಯಾಗಿ, ಆಗಸ್ಟ್ 3 ರಂದು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಪುಣೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಗೆ ಆಕ್ಸ್‌ಫರ್ಡ್ ಕೋವಿಡ್-19 ಲಸಿಕೆ ಸಂಶೋಧನಾ ಹಂತ 2 ಮತ್ತು 3 ಮಾನವ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಅನುಮತಿ ನೀಡಿತ್ತು.
ಏಮ್ಸ್ ದೆಹಲಿ, ಪುಣೆಯ ಬಿಜೆ ಮೆಡಿಕಲ್ ಕಾಲೇಜು, ಪಾಟ್ನಾದ ರಾಜೇಂದ್ರ ಮೆಮೋರಿಯಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಚಂಡೀಗಡದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಏಮ್ಸ್-ಜೋಧ್ಪುರ್, ಗೋರಖ್‌ಪುರದ ಆಸ್ಪತ್ರೆ, ವಿಶಾಖಪಟ್ಟಣಂನ ಆಂಧ್ರ ವೈದ್ಯಕೀಯ ಕಾಲೇಜು ಮತ್ತು ಮೈಸೂರಿನ ಜೆಎಸ್ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ಸೇರಿದಂತೆ ಆಯ್ದ 17 ತಾಣಗಳಲ್ಲಿ ಪ್ರಯೋಗಗಳನ್ನು ನಡೆಸಲಾಗುವುದು ಎಂದು ಎಸ್ಐಐ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ’ಗುಜರಾತ್‌ನಲ್ಲಿ COVID-19 ಪರಿಸ್ಥಿತಿ ಭಯಾನಕವಾಗಿದೆ’; ಅಹಮದಾಬಾದ್ ಹೈಕೋರ್ಟ್ ಕಳವಳ
ಪ್ರಯೋಗಗಳಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ 1,600 ಜನರು ಭಾಗವಹಿಸುವ ಸಾಧ್ಯತೆಯಿದೆ. ಜೆನ್ನರ್ ಇನ್ಸ್ಟಿಟ್ಯೂಟ್ (ಆಕ್ಸ್‌ಫರ್ಡ್ ಯೂನಿವರ್ಸಿಟಿ) ಅಭಿವೃದ್ಧಿಪಡಿಸಿದ ಸಂಭಾವ್ಯ ಲಸಿಕೆಯನ್ನು ಬ್ರಿಟಿಷ್-ಸ್ವೀಡಿಷ್ ಫಾರ್ಮಾ ಕಂಪನಿ ಅಸ್ಟ್ರಾಜೆನೆಕಾ ಸಹಯೋಗದೊಂದಿಗೆ ತಯಾರಿಸlu ಮತ್ತು ಮಾರಾಟ ಮಾಡಲು ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಎಸ್ಐಐ ಒಪ್ಪಂದಕ್ಕೆ ಸಹಿ ಹಾಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ