ಬೆಂಗಳೂರು(ಮಾ. 24): ಕೊರೋನಾ ವೈರಸ್ ಸೋಂಕು ಮೂರನೇ ಹಂತಕ್ಕೇರುವುದನ್ನು ತಡೆಯಲು ವಿವಿಧ ಸರ್ಕಾರಗಳು ಹರಸಾಹಸ ಮಾಡುತ್ತಿವೆ. ಕರ್ನಾಟಕ ಸೇರಿದಂತೆ 15 ರಾಜ್ಯಗಳು ಲಾಕ್ ಡೌನ್ ಆಗಿವೆ. ಆದರೂ ಕೂಡ ಕೆಲ ಜನರು ರಸ್ತೆಯಲ್ಲಿ ಓಡಾಡುವುದನ್ನು ತಪ್ಪಿಸಿಲ್ಲ. ಶಾಲೆ, ಕಾಲೇಜು, ಕಚೇರಿ, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರೂ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಬ್ರೇಕ್ ಬಿದ್ದಿಲ್ಲ. ಆಡಳಿತಕ್ಕೆ ಇದು ತಲೆನೋವಾಗಿದೆ. ಅಖಿಲ ಕರ್ನಾಟಕ ಪೆಟ್ರೋಲಿಯಂ ಟ್ರೇಡರ್ಸ್ ಒಕ್ಕೂಟದ ಅಧ್ಯಕ್ಷರು ಈ ಸಮಸ್ಯೆಗೆ ಒಂದು ಪರಿಹಾರ ಸೂಚಿಸಿದ್ಧಾರೆ. ಪೆಟ್ರೋಲ್ ಬಂಕ್ಗಳನ್ನೇ ಮುಚ್ಚುವಂತೆ ಕೆ.ಎಂ. ಬಸವೇಗೌಡ ಸಲಹೆ ನೀಡಿದ್ಧಾರೆ.
ಜನರು ಹೊರಗೆ ಬರಬೇಡಿ ಎಂದರೂ ಸುಮ್ಮನೆ ಬರುತ್ತಿದ್ದಾರೆ. ಅನಗತ್ಯವಾಗಿ ವಾಹನಗಳಲ್ಲಿ ಸಂಚರಿಸುವವರೇ ಹೆಚ್ಚು. ರಾಜ್ಯಾದ್ಯಂತ 4 ಸಾವಿರ ಪೆಟ್ರೋಲ್ ಬಂಕ್ಗಳಿವೆ. ಪೆಟ್ರೋಲ್ ಬಂಕ್ಗಳು ಅಗತ್ಯ ವಸ್ತುಗಳ ಅಡಿಯಲ್ಲಿ ಬರುವುದರಿಂದ ಲಾಕ್ ಡೌನ್ ಮಧ್ಯೆಯೂ ಇವು ಕಾರ್ಯನಿರ್ವಹಿಸುತ್ತಿವೆ. ಇವುಗಳನ್ನು ಬಂದ್ ಮಾಡಿದರೆ ಶೇ. 90ರಷ್ಟು ಜನರ ಓಡಾಟವನ್ನು ತಡೆಯಬಹುದು. ಪೊಲೀಸ್ ವಾಹನ, ಆ್ಯಂಬುಲೆನ್ಸ್ ಇತ್ಯಾದಿ ಅಗತ್ಯ ಇರುವ ವಾಹನಗಳಿಗೆಂದು ಕೆಲ ಪೆಟ್ರೋಲ್ ಬಂಕ್ಗಳನ್ನ ತೆರೆದಿಡಿ ಎಂದು ಪೆಟ್ರೋಲಿಯಂ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷರಾದ ಬಸವೇಗೌಡ ಸೆಲ್ಫೀ ವಿಡಿಯೋ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ದುಬೈ ಮೂಲಕ ಬಂದ ಜನರಿಂದಲೇ ಹೆಚ್ಚು ಕೊರೋನಾ ಸೋಂಕು: ಹಿರಿಯ ಆರೋಗ್ಯಾಧಿಕಾರಿ
ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಇವತ್ತಿನಿಂದ ಕರ್ನಾಟಕದಲ್ಲಿ ಲಾಕ್ ಡೌನ್ ಇದೆ. ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲಾ ವಾಣಿಜ್ಯ ಅಂಗಡಿ ಇತ್ಯಾದಿಗಳು ಮುಚ್ಚಿರಬೇಕು. ಹೋಟೆಲ್ಗಳಲ್ಲಿ ಪಾರ್ಸಲ್ ಮಾತ್ರ ನೀಡಬೇಕು. ಹೊರಗೆ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ ಎಂಬಿತ್ಯಾದಿ ಕಠಿಣ ನಿಯಮಗಳಿವೆ. ಆದರೂ ಯುಗಾದಿ ಹಬ್ಬಕ್ಕೆ ಪೂರ್ವತಯಾರಿಯಾಗಿ ನಿನ್ನೆ ಜನರು ಅಲ್ಲಲ್ಲಿ ವಿರಳವಾಗಿ ತೆರೆದಿದ್ದ ಅಂಗಡಿಗಳಿಗೆ ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದರಿಂದ ಕ್ರುದ್ಧಗೊಂಡ ಯಡಿಯೂರಪ್ಪ ಅವರು ಲಾಕ್ ಡೌನ್ ನಿಯಮಗಳನ್ನ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಪೊಲೀಸ್ ಇಲಾಖೆಗೆ ಆದೇಶಿಸಿದ್ಧಾರೆ. ಜನರು ಹೊರಗೆ ಬಂದರೆ ಪೊಲೀಸರು ಮುಲಾಜಿಲ್ಲದೇ ಲಾಠಿ ಬೀಸಿದ ಘಟನೆ ಅನೇಕ ಕಡೆ ವರದಿಯಾಗಿದೆ. ಸರ್ಕಾರದ್ದು ನಿರ್ದಯ ಕ್ರಮ ಎಂದು ಸಿದ್ದರಾಮಯ್ಯ ಟೀಕಿಸಿದ್ಧಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ