Vaccination: ಲಸಿಕೆ ಪಡೆದ ಶೇ.99.96ರಷ್ಟು ಜನರಿಗೆ ಕೊರೋನಾ ಬಂದಿಲ್ಲ, ಇನ್ನಾದ್ರೂ ವ್ಯಾಕ್ಸಿನ್​ಗೆ ಮುಂದಾಗಿ-ಸುಧಾಕರ್​​

ಅಲ್ಪ-ಸ್ವಲ್ಪ ರೋಗ ಲಕ್ಷಣಗಳು ಇರೋರು ದಯವಿಟ್ಟು ಆಸ್ಪತ್ರೆಗೆ ಹೋಗಬೇಡಿ. ಅನಗತ್ಯವಾಗಿ ಆಸ್ಪತ್ರೆಯಲ್ಲಿ ದಾಖಲಾಗುವ ಮೂಲಕ ಅರ್ಹ ವ್ಯಕ್ತಿಯ ಬೆಡ್ ಕಸಿದುಕೊಂಡಂತಾಗುತ್ತದೆ.

ಡಾ. ಕೆ ಸುಧಾಕರ್

ಡಾ. ಕೆ ಸುಧಾಕರ್

  • Share this:
    ಬೆಂಗಳೂರು (ಏ.21) : ಕೊರೋನಾ 2ನೇ ಅಲೆ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನ್​ ಕೊರತೆ, ರೆಮ್​ಡಿಸಿವರ್​​ ಲಭ್ಯವಾಗುತ್ತಿಲ್ಲ, ಲಸಿಕೆ ಹಾಕಿಸಿಕೊಂಡರೆ ಹೇಗೋ ಏನೋ ಎಂದು ಆತಂಕಗೊಂಡಿರುವ ಜನತೆಗೆ ಆರೋಗ್ಯ ಸಚಿವ ಕೆ.ಸುಧಾಕರ್​​ ಆತ್ಮಸ್ಥೈರ್ಯ ತುಂಬುವ ಕೆಲಸಕ್ಕೆ ಮುಂದಾಗಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು ದೇಶದಲ್ಲಿ ಈವರೆಗೆ 12.70 ಕೋಟಿ ಜನ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದರಲ್ಲಿ 99.96% ಜನರಿಗೆ ಸೋಂಕು ಬಂದಿಲ್ಲ. ಈ ಮೂಲಕ ಲಸಿಕೆಯ ಮಹತ್ವ ಅರಿತುಕೊಳ್ಳಬೇಕು. ಒಂದು ವೇಳೆ ಲಸಿಕೆ ಪಡೆದವರಿಗೆ ಪಾಸಿಟಿವ್ ಬಂದ ಮಾತ್ರಕ್ಕೆ ಸಾವು ಸಂಭವಿಸೋದಿಲ್ಲ ಎಂದು ಸಚಿವ ಡಾ.ಸುಧಾಕರ್ ಭರವಸೆ ನೀಡಿದರು.

    ‘ಶೇ. 95ರಷ್ಟು ರೋಗಿಗಳು ಮನೆಯಲ್ಲೇ ಚಿಕಿತ್ಸೆ’

    ಸೋಂಕು ತಗುಲಿದರೆ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಬೆಡ್​​ ಸಿಗೋದಿಲ್ಲ ಎಂಬ ಭಯ ಜನರಲ್ಲಿ ಮನೆ ಮಾಡಿದೆ. ಶೇ. 95ರಷ್ಟು ರೋಗಿಗಳು ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ಟೆಲಿ ಮೆಡಿಸಿನ್ ಸೌಲಭ್ಯವಿದೆ, ಆರೋಗ್ಯ ಸಿಬ್ಬಂದಿ ಮನೆಗೆ ಬಂದು ಸಲಹೆಗಳನ್ನು ಕೊಡುತ್ತಾರೆ. ಮನೆಯಲ್ಲಿರೋರು ಹೇಗಿರಬೇಕು, ಯಾವ ಔಷಧಿ ತೆಗೆದುಕೊಳ್ಳಬೇಕು ಅನ್ನೋದನ್ನ ತಿಳಿಸಿಕೊಡುವ ಕೆಲಸ ಮಾಡ್ತಾರೆ ಎಂದು ಸಚಿವರು ತಿಳಿಸಿದರು.

    ‘ಅರ್ಹ ವ್ಯಕ್ತಿಯ ಬೆಡ್​ ಕಸಿದುಕೊಳ್ಳಬೇಡಿ..’

    ಅಲ್ಪ-ಸ್ವಲ್ಪ ರೋಗ ಲಕ್ಷಣಗಳು ಇರೋರು ದಯವಿಟ್ಟು ಆಸ್ಪತ್ರೆಗೆ ಹೋಗಬೇಡಿ. ಅನಗತ್ಯವಾಗಿ ಆಸ್ಪತ್ರೆಯಲ್ಲಿ ದಾಖಲಾಗುವ ಮೂಲಕ ಅರ್ಹ ವ್ಯಕ್ತಿಯ ಬೆಡ್ ಕಸಿದುಕೊಂಡಂತಾಗುತ್ತದೆ. ತುರ್ತು ಆರೋಗ್ಯ ಪರಿಸ್ಥಿತಿಯಲ್ಲಿ ನಾವೆಲ್ಲ ಬದುಕಬೇಕಿದೆ. ಪ್ರತಿಯೊಂದು ಜೀವಕ್ಕೆ ಬೆಲೆ ಇದೆ. ಇತರರಿಗೆ ಮಾರ್ಗದರ್ಶನ ಮಾಡುವ ರೀತಿಯಲ್ಲಿ ಬದುಕಬೇಕಿದೆ ಎಂದು ಸಾರ್ವಜನಿಕರಲ್ಲಿ ಸಚಿವರು ಮನವಿ ಮಾಡಿಕೊಂಡರು.

     ‘ಬೆಂಗಳೂರಿಗರಿಗೆ ಆಕ್ಸಿಜನ್​ ಆತಂಕ ಬೇಡ’

    ರೆಮ್​​ಡಿಸಿವರ್, ಆಕ್ಸಿಜನ್ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. 5 ಸಾವಿರಕ್ಕೂ ಅಧಿಕ ಆಕ್ಸಿಜನ್ ಸಿಲಿಂಡರ್ ರೆಡಿ ಇದೆ. ಪ್ರಮುಖವಾಗಿ ಬೆಂಗಳೂರಿನ ಆಕ್ಸಿಜನ್ ಬಗ್ಗೆ ಯಾರಿಗೂ ಆತಂಕ ಬೇಡ. ಆಕ್ಸಿಜನ್ , ರೆಮಿಡಿಸಿವರ್ ಸರಬರಾಜು ಮಾಡಲು ರಾಜ್ಯ ಸರ್ಕಾರ ಕಾಲ್ ಸೆಂಟರ್ ತೆರೆದಿದೆ. 8951755722 ಕಾಲ್ ಸೆಂಟರ್ ನಂಬರ್​ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಡ್ರಗ್ ಕಂಟ್ರೋಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಕಾಲ್ ಸೆಂಟರ್ 24/7 ಕಾರ್ಯ ನಿರ್ವಹಿಸಲಿದೆ ಎಂದು ಸಚಿವರು ತಿಳಿಸಿದರು.



    ‘ಕೇಂದ್ರ ನೀಡುವ ಆಕ್ಸಿಜನ್​ ಸಾಕಾಗಲ್ಲ..’

    ಆಕ್ಸಿಜನ್​​ ಸರಬರಾಜು ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು  ಕೇಂದ್ರ ಆರೋಗ್ಯ ಸಚಿವರು, ಕೈಗಾರಿಕಾ ಸಚಿವರ ಜೊತೆ ಚರ್ಚೆ ಮಾತಾಡಿದ್ದಾರೆ. ನಾನು ಕೂಡ ಕೇಂದ್ರ ಸಚಿವರು, ಡಿ.ವಿ.ಸದಾನಂದಗೌಡ, ಪ್ರಹ್ಲಾದ್​ ಜೋಷಿ ಅವರ ಜೊತೆ ಮಾತನಾಡಿ, ಪತ್ರ ಬರೆದಿದ್ದೇನೆ. 300 ಟನ್ ಆಕ್ಸಿಜನ್ ಫಿಕ್ಸ್ ಮಾಡಿದ್ದು, ಇದು‌ ಸಾಕಾಗಲ್ಲ. ಈ ತಿಂಗಳ ಕೊನೆಯಲ್ಲಿ 500-600 ಮೆಟ್ರಿಕ್ ಟನ್ ಬೇಕಾಗುತ್ತೆ. ಇದೇ ಪರಿಸ್ಥಿತಿ ಮುಂದುವರಿದರೇ ಮುಂದಿನ‌ ತಿಂಗಳ ಕೊನೆಗೆ 1500 ಮೆಟ್ರಿಕ್ ಟನ್ ಆ್ಯಕ್ಸಿಜನ್ ಬೇಕಾಗುತ್ತೆ. ಕೇಂದ್ರ ಸರ್ಕಾರದಿಂದ ಹೆಚ್ಚಿನ ಆ್ಯಕ್ಸಿಜನ್ ಸಿಗುತ್ತೆ ಅನ್ನೋ ವಿಶ್ವಾಸ ಇದೆ ಎಂದು ತಿಳಿಸಿದರು.

    ಕೊರೋನಾ ಮೊದಲನೇ ಅಲೆಗೂ ಎರಡನೇ ಅಲೆಗೂ ವೈರಾಣುವಿನಲ್ಲಿ ವ್ಯತ್ಯಾಸ ಇದೆ. ಇದರ ಸಂಪೂರ್ಣವಾದ ಅಧ್ಯಯನ ವಿಶ್ವದಲ್ಲಿ ನಡೆಯುತ್ತಿದ್ದು, ಇದನ್ನ ಅರಿಯೋದು  ಸವಾಲಾಗಿದೆ. ಈ ಬಗ್ಗೆ ಜನ ಅನಗತ್ಯವಾಗಿ ಭಯ ಬೀಳುತ್ತಿದ್ದಾರೆ. ಆದರೆ ಆತಂಕಗೊಳ್ಳುವ ಅಗತ್ಯವಿಲ್ಲ ಎಂದರು.
    Published by:Kavya V
    First published: