ಕೊರೋನಾ ಎಫೆಕ್ಟ್​: ಮೂರು ತಿಂಗಳಾದರೂ ಬಾದಾಮಿಗೆ ಭೇಟಿ ನೀಡದ ಸಿದ್ದರಾಮಯ್ಯಗೆ ಕಾದು ಕುಳಿತ ಜನ

ಮಾರ್ಚ್ ತಿಂಗಳಲ್ಲಿ ಸ್ವಕ್ಷೇತ್ರ ಬಾದಾಮಿ ಪ್ರವಾಸ ನಿಗದಿಯಾಗಿತ್ತು. ಆದರೆ ಕೊರೊನಾ ವೈರಸ್ ಹಿನ್ನೆಲೆ ಲಾಕ್​​ಡೌನ್​​ದಿಂದಾಗಿ ಪ್ರವಾಸ ರದ್ದುಪಡಿಸಿದರು.‌ ಬಳಿಕ ಲಾಕ್​​ಡೌನ್ ಮುಂದುವರೆಯುತ್ತಾ ಬಂದಿದೆ. ಇದೀಗ ಲಾಕ್​​ಡೌನ್ ಸಡಿಲಿಕೆಯಾಗಿದೆ. ಹೀಗಾಗಿ ಸ್ವಕ್ಷೇತ್ರದತ್ತ ಸಿದ್ದರಾಮಯ್ಯ ಬರುತ್ತಾರಾ? ನಮ್ಮ ಕಷ್ಟ ಆಲಿಸುತ್ತಾರಾ? ಎಂದು ಜನತೆ ಕಾಯುತ್ತಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • Share this:
ಬಾಗಲಕೋಟೆ(ಮೇ.30): ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಬಾದಾಮಿ ರಾಜಕೀಯವಾಗಿ ಪುನರ್ಜನ್ಮ ನೀಡಿದ ಕ್ಷೇತ್ರ. ಇಲ್ಲಿಂದ ಚುನಾಯಿತರಾದ ಮೇಲೆ ಸಿದ್ದರಾಮಯ್ಯ ಬಿರುಸಿನ ರಾಜ್ಯ ರಾಜಕೀಯದ ಮಧ್ಯೆಯೂ ತಿಂಗಳಿಗೊಮ್ಮೆ ಬಾದಾಮಿ ಪ್ರವಾಸವನ್ನು ಕೈಗೊಳ್ಳುತ್ತಿದ್ದರು. ಆದರೀಗ, ಕೊರೋನಾ ವೈರಸ್​ ಎಫೆಕ್ಟ್​ನಿಂದಾಗಿ ಬರೋಬ್ಬರಿ 117  ದಿನಗಳಿಂದ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರಕ್ಕೆ  ಬಂದಿಲ್ಲ. ಹೀಗಾಗಿ ಬಾದಾಮಿ ಕ್ಷೇತ್ರದ ಜನತೆ ಸಮಸ್ಯೆ ಮೂಟೆ ಹೊತ್ತು ನಮ್ಮ ಶಾಸಕರು ಯಾವಾಗ  ಬರುತ್ತಾರೆ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇನ್ನೊಂದೆಡೆ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರಕ್ಕೆ ಬರಬೇಕು. ಜನತೆ ಸಮಸ್ಯೆ ಆಲಿಸಲಿ ಎಂಬ ಚರ್ಚೆಯೂ ವಾಟ್ಸ್​ಆ್ಯಪ್​​ ಗ್ರೂಪ್​​ಗಳ ಶುರುವಾಗಿದೆ. 

ಸಿದ್ದರಾಮಯ್ಯ ಬಾದಾಮಿ ಕ್ಷೇತ್ರಕ್ಕೆ ಕೊನೆಯ ಬಾರಿ ಭೇಟಿ ನೀಡಿದ್ದು ಈ ವರ್ಷದ ಎರಡನೇ ತಿಂಗಳು ಫೆಬ್ರವರಿ 3ನೇ ತಾರೀಕಿನಂದು. ಬಾದಾಮಿ, ಕೆರೂರು, ಗುಳೇದಗುಡ್ಡ ಪಟ್ಟಣಕ್ಕೆ ಆಲಮಟ್ಟಿ ಅಣೆಕಟ್ಟೆ ಹಿನ್ನೀರಿನಿಂದ ನದಿಮೂಲ  ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಚಾಲನೆ ನೀಡಲು ಬಂದಿದ್ದರು. ಆ ಬಳಿಕ ಸ್ವಕ್ಷೇತ್ರ ಬಾದಾಮಿ ಪ್ರವಾಸ ಕೈಗೊಂಡಿಲ್ಲ.

ಮಾರ್ಚ್ ತಿಂಗಳಲ್ಲಿ ಸ್ವಕ್ಷೇತ್ರ ಬಾದಾಮಿ ಪ್ರವಾಸ ನಿಗದಿಯಾಗಿತ್ತು. ಆದರೆ ಕೊರೊನಾ ವೈರಸ್  ಹಿನ್ನೆಲೆ ಲಾಕ್​​ಡೌನ್​​ದಿಂದಾಗಿ ಪ್ರವಾಸ ರದ್ದುಪಡಿಸಿದರು.‌ ಬಳಿಕ ಲಾಕ್​​ಡೌನ್ ಮುಂದುವರೆಯುತ್ತಾ ಬಂದಿದೆ. ಇದೀಗ ಲಾಕ್​​ಡೌನ್ ಸಡಿಲಿಕೆಯಾಗಿದೆ. ಹೀಗಾಗಿ ಸ್ವಕ್ಷೇತ್ರದತ್ತ ಸಿದ್ದರಾಮಯ್ಯ ಬರುತ್ತಾರಾ? ನಮ್ಮ ಕಷ್ಟ ಆಲಿಸುತ್ತಾರಾ? ಎಂದು ಜನತೆ ಕಾಯುತ್ತಿದ್ದಾರೆ.

ಲಾಕ್​​ಡೌನ್ ಸಂದರ್ಭದಲ್ಲಿ ಸಿದ್ದರಾಮಯ್ಯ ಸ್ವಕ್ಷೇತ್ರದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಮಾಡುವ ಮೂಲಕ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಬಾದಾಮಿ ತಾಲೂಕಿನಲ್ಲಿ 24 ಸೋಂಕಿತ ಪ್ರಕರಣ ಕಂಡು ಬಂದಿವೆ. ಢಾಣಕ ಶಿರೂರು ಗ್ರಾಮದಲ್ಲಿ ಗರ್ಭಿಣಿ ಮಹಿಳೆಯಿಂದ 20ಮಂದಿಗೆ ಸೋಂಕು ಹರಡಿದೆ. ಇದರಿಂದ ಇಡೀ ಗ್ರಾಮವೇ ಆತಂಕದಲ್ಲಿದೆ. ಆಗಾಗ ಸಿದ್ದರಾಮಯ್ಯ ಅಧಿಕಾರಿಗಳೊಂದಿಗೆ ಸಂಪರ್ಕವಿದ್ದು,ಅಗತ್ಯ ಕ್ರಮಕ್ಕೆ ಸೂಚಿಸಿದ್ದಾರೆ.

ಇನ್ನು, ಬೇಸಿಗೆ ಹಿನ್ನೆಲೆ ಮಲಪ್ರಭಾ ನದಿಗೆ  ನೀರು ಹರಿಸಲು ಕ್ರಮ ಕೈಗೊಂಡಿದ್ದರು. ಅದೇ ರೀತಿ ಕೊರೋನಾ ಲಾಕ್​​ಡೌನ್ ಸಮಯದಲ್ಲಿ  ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಕ್ಷೇತ್ರದ ಜನರಿಗೆ ಮಾಸ್ಕ್, ಆಹಾರ ಕಿಟ್ ವಿತರಣೆಯಾಗಿದೆ. ಸಿದ್ದರಾಮಯ್ಯ ಸ್ವಕ್ಷೇತ್ರದಿಂದ ದೂರವಿದ್ದರೂ ಅಭಿಮಾನಿಗಳು, ಮುಖಂಡರ ಮೂಲಕ ಕ್ಷೇತ್ರದಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: 13 ನಗರಗಳಿಗೆ ಮಾತ್ರ ಕಟ್ಟುನಿಟ್ಟಿನ ಲಾಕ್​​ಡೌನ್​​; ಹೊಟೆಲ್, ರೆಸ್ಟೋರೆಂಟ್, ಮಾಲ್ ಓಪನ್ ಆಗುವ ಸಾಧ್ಯತೆ

ಕ್ಷೇತ್ರದಲ್ಲಿ ಸಮಸ್ಯೆಗಳು ಬಿಗಡಾಯಿಸುತ್ತಿವೆ. ಒಂದೆಡೆ ನೆರೆ ಸಂತ್ರಸ್ತರ ಸಮಸ್ಯೆ. ಮತ್ತೊಂದೆಡೆ ಲಾಕ್​​ಡೌನ್​​ದಿಂದಾಗಿ ಕೂಲಿ ಕಾರ್ಮಿಕರು, ರೈತರು, ಮಧ್ಯಮ ವರ್ಗದ ಜನತೆ, ವಲಸೆ ಕಾರ್ಮಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಹೊರ ಜಿಲ್ಲೆ, ಹೊರ ರಾಜ್ಯಕ್ಕೆ ಬಾಗಲಕೋಟೆ ಜಿಲ್ಲೆಯಲ್ಲಿ ಬಾದಾಮಿ ತಾಲೂಕಿನಿಂದಲೇ ವಲಸೆ ಹೋಗುವುದು ಹೆಚ್ಚು. ಈ ವಲಸೆ ಹೋಗಿದ್ದ ಕಾರ್ಮಿಕರು ವಾಪಸ್ ಬಂದಿದ್ದಾರೆ. ಜೀವನೋಪಾಯಕ್ಕೆ ಉದ್ಯೋಗ ಖಾತ್ರಿ ಇಲ್ಲಂದತಾಗಿದೆ.

ಲಾಕ್​​ಡೌನ್​​ದಿಂದ ಸಂಕಷ್ಟಕ್ಕೆ ಸಿಲುಕಿದ ಕುಟುಂಬಸ್ಥರಿಗೆ ಸರ್ಕಾರದ ಪರಿಹಾರ ಸೂಕ್ತವಾಗಿ ಸಿಗುತ್ತಿಲ್ಲ. ಇನ್ನು ಮಲಪ್ರಭಾ ನದಿ ನೆರೆ ಹಾವಳಿಗೆ ಬಾದಾಮಿ ಕ್ಷೇತ್ರದ ಜನತೆ ತತ್ತರಿಸಿ ಹೋಗಿದ್ದರು. 42 ಗ್ರಾಮಗಳು ಮಲಪ್ರಭಾ ನದಿ ರುದ್ರ ನರ್ತನಕ್ಕೆ ಬದುಕು ಬೀದಿ ಪಾಲಾಗಿದೆ. ಪ್ರವಾಹಕ್ಕೆ ತುತ್ತಾದ ಸೂರು ಮತ್ತೆ ಕಟ್ಟಿಕೊಂಡು ಹೊಸ ಬದುಕಿಗೆ ಅಣಿಯಾಗಬೇಕಿದ್ದ ಸಂತ್ರಸ್ತರಿಗೆ ಕೊರೊನಾ ಕಂಟಕವಾಗಿದೆ. ಈಗ ಮತ್ತೆ ಮಳೆ ಆರಂಭ, ಮುಂದಿನ ಬದುಕಿನ ಚಿಂತೆ ಸಂತ್ರಸ್ತರಿಗೆ ಕಾಡತೊಡಗಿದೆ.

ಇಂತಹ ಸಂದರ್ಭದಲ್ಲಿ ಸಂತ್ರಸ್ತರಿಗೆ ಮನೆ ಪರಿಹಾರ ಬಂದಿಲ್ಲ. ಹೀಗಾಗಿ ಕ್ಷೇತ್ರದ ಸಂತ್ರಸ್ತರು ಇನ್ನೂ ಸಂಕಷ್ಟದಲ್ಲಿದ್ದಾರೆ. ಐತಿಹಾಸಿಕ ಪಟ್ಟದಕಲ್ಲು ಗ್ರಾಮ ಸ್ಥಳಾಂತರದ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಐತಿಹಾಸಿಕ ಬಾದಾಮಿ, ಪಟ್ಟದಕಲ್ಲು, ಐಹೊಳೆ ಪ್ರವಾಸಿ ತಾಣಗಳಿಗೂ ಕೊರೋನಾ ಹೊಡೆತ ಬಿದ್ದಿದೆ. ಪ್ರವಾಸೋದ್ಯಮ ಅವಲಂಬಿಸಿ ಬದುಕುತ್ತಿದ್ದ ಪ್ರವಾಸಿ ಮಾರ್ಗದರ್ಶಿ, ಹೊಟೇಲ್ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ.

ಸಂತ್ರಸ್ತರ ಕಷ್ಟಕ್ಕೆ ಕ್ಷೇತ್ರದ ಶಾಸಕ ಸಿದ್ಧರಾಮಯ್ಯ ಸ್ಪಂದಿಸಬೇಕಿದೆ. ಜೊತೆಗೆ ಕ್ಷೇತ್ರದಲ್ಲಿ ಅಕ್ರಮ ಮರಳು ಮಾಫಿಯಾ ತಲೆ ನಿಂತಿದೆ. ಅಕ್ರಮ ಮಾಫಿಯಾದ ಲಾಬಿಗೆ ಅಧಿಕಾರಿಗಳು ದಂಗಾಗಿದ್ದಾರೆ. ನ್ಯೂಸ್ 18ವರದಿ ಬಳಿಕ ಇಬ್ಬರು ಅಕ್ರಮ ದಂಧೆಕೋರರ ಮೇಲೆ ಕೇಸ್ ದಾಖಲಾಗಿದೆ. ಆ ಬಳಿಕ ಅಧಿಕಾರಿಗಳು ಅಕ್ರಮ  ಮರಳು ಗಣಿಗಾರಿಕೆಗೆ ಕಡಿವಾಣ ಮುಂದಾಗಿದ್ದಾರೆ.

ಸ್ವಕ್ಷೇತ್ರದ ಅಕ್ರಮ ಮರಳು ಗಣಿಗಾರಿಕೆಗೆ ಸಿದ್ದರಾಮಯ್ಯ ಇನ್ನೂ ಕಠಿಣ ನಿಲುವು ಕೈಗೊಳ್ಳುವ ಅಗತ್ಯವಿದೆ.ಇನ್ನು  ಕ್ಷೇತ್ರದ ಜನತೆ ಸಮಸ್ಯೆ ಮೂಟೆ ಹೊತ್ತುಕೊಂಡು ನಿಂತಿದ್ದಾರೆ. ಸಿದ್ದರಾಮಯ್ಯ ಕ್ಷೇತ್ರ ಪ್ರವಾಸ ಕೈಗೊಂಡು ಜನತೆಯ ಸಮಸ್ಯೆ ಮೂಟೆಗೆ ಪರಿಹಾರ ನೀಡಬೇಕಿದೆ. ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ಮುಟ್ಟಿಸಬೇಕಿದೆ.

ಈಗಾಗಲೇ ಆಲಮಟ್ಟಿ ಅಣೆಕಟ್ಟೆ ಹಿನ್ನೀರಿನಿಂದ ಕ್ಷೇತ್ರದ ಬಾದಾಮಿ ,ಕೆರೂರು ಗುಳೇದಗುಡ್ಡ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ನಡೀತಿದೆ. ಕ್ಷೇತ್ರದ ಕೆಲವೆಡೆ ರಸ್ತೆ ಕಾಮಗಾರಿ ವೇಗ ಪಡೆದುಕೊಂಡಿವೆ. ಕ್ಷೇತ್ರದಲ್ಲಿ ಮುಖಂಡರೇ ಕಾಮಗಾರಿ ಪರಿಶೀಲನೆ ಮಾಡುತ್ತಿದ್ದಾರೆ. ಇನ್ನು ಕೊರೊನಾ ಹಿನ್ನೆಲೆ ಸಿದ್ದರಾಮಯ್ಯ ಬಾದಾಮಿ ಸ್ವಕ್ಷೇತ್ರಕ್ಕೆ ಭೇಟಿ ನೀಡಿದರೆ ಜನತೆ ಮುಗಿಬೀಳುತ್ತಾರೆ. ಸಾಮಾಜಿಕ ಅಂತರ ಸಮಸ್ಯೆಯಾಗುತ್ತದೆ ಅಂತಿದ್ದಾರೆ ಸ್ಥಳೀಯ ಮುಖಂಡರು.

ಈಗಾಗಲೇ ಸಿದ್ದರಾಮಯ್ಯ ಬೆಂಗಳೂರು, ಮೈಸೂರು ಭಾಗದಲ್ಲಿ ಪ್ರವಾಸ ಕೈಗೊಂಡು ಜನತೆಗೆ ಮಾಸ್ಕ್, ಸ್ಯಾನಿಟಜರ್ ವಿತರಿಸಿದ್ದಾರೆ. ಅಲ್ಲಿ ಹೋಗಿದ್ದಾರೆ, ಸ್ವಕ್ಷೇತ್ರದತ್ತ ಬಂದರೆ ಏನು ತೊಂದ್ರೆ ಅನ್ನುವಂತಾಗಿದೆ. ಇನ್ನು ಶಾಸಕರ ಕಚೇರಿಯಿದೆ ಆದರೆ ನೇರವಾಗಿ ಸಿದ್ದರಾಮಯ್ಯರಿಗೆ ಅಹವಾಲು ಸಲ್ಲಿಸುತ್ತೇವೆ ಅಂತಿದ್ದಾರೆ ಜನತೆ. ಇನ್ಮೇಲಾದರೂ  ಶಾಸಕ ಸಿದ್ಧರಾಮಯ್ಯ ಸ್ವಕ್ಷೇತ್ರ ಪ್ರವಾಸ  ಕೈಗೊಂಡು ಕ್ಷೇತ್ರದ ಜನತೆಗೆ ಅಭಯ ನೀಡುತ್ತಾರಾ ಎಂದು ಕಾದುನೋಡಬೇಕಿದೆ.
First published: