ಆನೇಕಲ್(ಏ.16): ಹೆರಿಗೆ ನೋವಿನಿಂದ ಪರದಾಡುತ್ತಿದ್ದ ಮಹಿಳೆಗೆ ಪೊಲೀಸರು ನೆರವಾಗಿರುವ ಘಟನೆ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ. ಒಡಿಶಾ ಮೂಲದ ಭವಾನಿ ಗರ್ಭಿಣಿ ಮಹಿಳೆಯಾಗಿದ್ದು. ಭವಾನಿ ತಮ್ಮ ಗಂಡನೊಂದಿಗೆ ಎರಡು ವರ್ಷಗಳ ಹಿಂದೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ನಂತರ ಕೊಲೆ ಪ್ರಕರಣದಲ್ಲಿ ಆಕೆಯ ಗಂಡ ಜೈಲು ಪಾಲಾಗಿದ್ದನು.
ಇದೇ ತಿಂಗಳ 13ನೇ ತಾರೀಖಿನಂದು ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಲಾಕ್ ಡೌನ್ ನಿಂದಾಗಿ ಸೂಕ್ತ ವೈದ್ಯಕೀಯ ಸೇವೆ ಇಲ್ಲದೆ ಪರದಾಡುತ್ತಿದ್ದಳು. ಮಹಿಳೆಯೇ ಪರಪ್ಪನ ಅಗ್ರಹಾರ ಠಾಣೆಗೆ ಹೋಗಿ, "ನನ್ನ ಗಂಡನನ್ನು ನೀವೇ ಜೈಲಿಗೆ ಕಳುಹಿಸಿದ್ದಿರಿ. ಈಗ ನೀವೇ ನನ್ನನ್ನು ಆಸ್ಪತ್ರೆಗೆ ಸೇರಿಸಿಬೇಕು" ಎಂದಿದ್ದಳು.
ಪರಪ್ಪನ ಅಗ್ರಹಾರ ಠಾಣೆಯ ಇನ್ಸ್ಪೇಕ್ಟರ್ ನಂದೀಶ್ ರವರ ಮಾರ್ಗದರ್ಶನದಲ್ಲಿ ನಿಮಾನ್ಸ್ ಆಸ್ಪತ್ರೆ ಬಳಿ ಇರುವ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ನಂತರ ಕೋವಿಡ್ 19 ಇರುವುದರಿಂದ ಇರಿಸಿಕೊಳ್ಳಲು ಆಗಲ್ಲ ಎಂದು ಸಾಂತ್ವನ ಕೇಂದ್ರದವರು ಹೇಳಿದ್ದರು. ಅಲ್ಲಿಂದ ಸಿಂಗಸಂದ್ರ ಬಳಿಯ ಸರ್ಕಾರಿ ಆಸ್ಪತ್ರೆಗೆ ಮಹಿಳೆಯನ್ನು ಸೇರಿಸಿದ್ದರು.
ನಿನ್ನೆ ಹೊಟ್ಟೆ ನೋವು ಜಾಸ್ತಿಯಾಗಿತ್ತು. ಇಂದು ಬೆಳಗ್ಗಿನ ಜಾವ 3:30ರ ಸುಮಾರಿಗೆ ಗಂಡು ಮಗುವಿಗೆ ಮಹಿಳೆ ಜನ್ಮ ನೀಡಿದ್ದಾಳೆ. ಸದ್ಯ ಮಹಿಳೆಯ ಖರ್ಚು ವೆಚ್ಚವನ್ನು ಪೊಲೀಸರೆ ನೋಡಿಕೊಳ್ಳುತಿದ್ದಾರೆ. ಮಹಿಳೆ ಮತ್ತು ಮಗು ಸದ್ಯ ಸುರಕ್ಷಿತವಾಗಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಪೊಲೀಸರೇ ಖರ್ಚು ವೆಚ್ಚ ಬರಿಸುವ ಜೊತೆಗೆ ಮಹಿಳೆ ಮತ್ತು ಮಗುವನ್ನು ಪಿ.ಜಿಯಲ್ಲಿ ಇರಿಸಿ ಬಾಡಿಗೆ ಕೂಡ ಪೊಲೀಸರೆ ಬರಿಸಲು ನಿರ್ಧಾರ ಮಾಡಿದ್ದಾರೆ.
ಇದನ್ನೂ ಓದಿ :
ಕಲಬುರ್ಗಿಯಲ್ಲಿ ಯುವತಿಗೆ ಕೊರೋನಾ - ವಾರ್ಡ್ ನಲ್ಲಿ ಕೆಲಸ ಮಾಡಲ್ಲವೆಂದು ಆರೋಗ್ಯ ಸಿಬ್ಬಂದಿ ಪ್ರತಿಭಟನೆ
ಸದ್ಯ ಮಗು ಮತ್ತು ಮಹಿಳೆಗೆ ಬೇಕಾದ ಅಗತ್ಯ ವಸ್ತುಗಳು ಮತ್ತು ರೇಷನ್ ಅನ್ನು ಪೊಲೀಸರು ನೀಡಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ