HOME » NEWS » Coronavirus-latest-news » PADDY GROWERS IN RAICHUR FACING CRISIS BECAUSE OF LOW RATES FOR THEIR CROPS HK

ಕೊರೋನಾ ಎಫೆಕ್ಟ್​​: ಭತ್ತದ ದರ ಇಳಿಕೆ, ಆತಂಕದಲ್ಲಿ ರಾಯಚೂರು ರೈತ

ಕೊರೋನಾ ಹೆಮ್ಮಾರಿಯಿಂದಾಗಿ ಲಾಕ್ ಡೌನ್ ಮಾಡಲಾಗಿದೆ. ಆದರೆ ರೈತರ ಉತ್ಪನ್ನಗಳ ಸಾಗಾಟಕ್ಕೆ ಅವಕಾಶ ನೀಡಲಾಗಿದೆ. ಆದರೂ ಸರಿಯಾದ ಸಮಯಕ್ಕೆ ರೈತರು ಭತ್ತವನ್ನು ಮಾರಾಟ ಮಾಡಲು ಆಗುತ್ತಿಲ್ಲ

news18-kannada
Updated:April 16, 2020, 7:43 PM IST
ಕೊರೋನಾ ಎಫೆಕ್ಟ್​​: ಭತ್ತದ ದರ ಇಳಿಕೆ, ಆತಂಕದಲ್ಲಿ ರಾಯಚೂರು ರೈತ
ಸಾಂದರ್ಭಿಕ ಚಿತ್ರ
  • Share this:
ರಾಯಚೂರು(ಏ.16): ಕೃಷ್ಣಾ ಹಾಗೂ ತುಂಗಭದ್ರಾ ನದಿಗಳ ಮಧ್ಯೆ ಇರುವ ರಾಯಚೂರು ಜಿಲ್ಲೆಯನ್ನು ಭತ್ತದ ಕಣಜ ಎಂದು ಸಹ ಕರೆಯುತ್ತಾರೆ, ನಾರಾಯಣಪುರ ಬಲದಂಡೆ‌ ಹಾಗು ತುಂಗಭದ್ರಾ ಎಡದಂಡೆ ನಾಲೆಯ ವ್ಯಾಪ್ತಿಯಲ್ಲಿ ಬೆಳೆದ ಭತ್ತ ಮಾರಾಟವಾಗದೆ ರೈತ ಚಿಂತೆಗೀಡಾಗಿದ್ದಾನೆ.

ಬೇಸಿಗೆಯ ಹಂಗಾಮಿನಲ್ಲಿ ಒಟ್ಟು 65 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದರು. ಈಗ ಭತ್ತದ ಕೋಯ್ಲು ಆರಂಭವಾಗಿದೆ. ನೀರಾವರಿ ಸೌಲಭ್ಯ ಹೊಂದಿರುವುದರಿಂದ ಪ್ರತಿ ಹೆಕ್ಟರ್ ಪ್ರದೇಶಕ್ಕೆ ಸರಾಸರಿ 60 ಕ್ವಿಂಟಾಲ್ ಭತ್ತ ಇಳುವರಿ ಬರುತ್ತಿದೆ. ಅಂದಾಜಿನ ಪ್ರಕಾರ ಬೇಸಿಗೆಯಲ್ಲಿ ರಾಯಚೂರು 4 ಲಕ್ಷ ಕ್ವಿಂಟಾಲ್ ಭತ್ತ ಬೆಳೆಯಲಾಗುತ್ತಿದೆ. ಸೋನಾ ಮಸೂರಿ ಎಂಬ ಉತ್ಕೃಷ್ಟ ಭತ್ತ ಬೆಳೆಯುವ ರೈತರಿಗೆ ಈಗ ಆತಂಕ ಶುರುವಾಗಿದೆ.

ಕೊರೋನಾ ಹೆಮ್ಮಾರಿಯಿಂದಾಗಿ ಲಾಕ್ ಡೌನ್ ಮಾಡಲಾಗಿದೆ. ಆದರೆ ರೈತರ ಉತ್ಪನ್ನಗಳ ಸಾಗಾಟಕ್ಕೆ ಅವಕಾಶ ನೀಡಲಾಗಿದೆ. ಆದರೂ ಸರಿಯಾದ ಸಮಯಕ್ಕೆ ರೈತರು ಭತ್ತವನ್ನು ಮಾರಾಟ ಮಾಡಲು ಆಗುತ್ತಿಲ್ಲ. ಜಿಲ್ಲೆಯಲ್ಲಿ ಎಪಿಎಂಸಿಗೆ ಅಕ್ಕಿ ತರದೆ ನೇರವಾಗಿ ಮಿಲ್​ಗಳಿಗೆ ಭತ್ತವನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಆದರೆ ಈಗ ಭತ್ತದ ದರ ಇಳಿಕೆಯಾಗಿದೆ,

ಪ್ರತಿ ದಿನ 40 - 70 ಸಾವಿರ ಚೀಲ ಭತ್ತವು ಮಾರುಕಟ್ಟೆಯ ಮುಖಾಂತರ ಮಿಲ್ ಗಳಿಗೆ ಸಾಗಾಟವಾಗುತ್ತಿದೆ. ಆದರೆ ದರ 1124-2415 ರೂಪಾಯಿಯವರೆಗೂ ಇದೆ. ಅಂದರೆ, ಸರಾಸರಿ 1715 ರೂಪಾಯಿ ದರವಿದೆ. ಆದರೆ ರೈಸ್ ಮಿಲ್ ಮಾಲೀಕರು ಈಗ ಭತ್ತವನ್ನು 1,250 ರೂಪಾಯಿಗೆ ಖರೀದಿಸುತ್ತಿದ್ದಾರೆ. ಪ್ರತಿ ಎಕರೆಗೆ 35-40 ಸಾವಿರ ರೂಪಾಯಿ ಖರ್ಚು ಮಾಡಿ, ಲಾಕ್ ಡೌನ್ ಮಧ್ಯೆ ಕೂಲಿಕಾರರು ಸಿಗದೆ, ದುಬಾರಿ ವಾಹನ ಬಾಡಿಗೆ ನೀಡಿ ಮಾರುಕಟ್ಟೆಗೆ ಬಂದರೆ ದರ ಇಳಿಕೆಯಾಗಿ ರೈತರು ಮಾರಾಟ ಮಾಡಬೇಕೊ ಬೇಡವೊ ಎಂಬ ಗೊಂದಲದಲ್ಲಿದ್ದಾರೆ.

ಇದನ್ನೂ ಓದಿ : ತಾಯಿ ಸತ್ತಿರುವಳೆಂದು ಸುಳ್ಳು ಹೇಳಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಭೂಪ ಪೊಲೀಸರ ವಶಕ್ಕೆ

ಸರಕಾರವು ಬೆಂಬಲ ಬೆಲೆಯಲ್ಲಿ 1810 ರೂಪಾಯಿಗೆ ಮೇ ಅಂತ್ಯದವರೆಗೂ ಮಾರಾಟ ಅವಕಾಶ ನೀಡಿದೆ. ಆದರೆ, ರೈತರು ಮಿಲ್​ಗಳಲ್ಲಿ ತೀರಾ ಕಡಿಮೆ ಬೆಲೆಗೆ ಮಾರಬೇಕಾದ ಪರಿಸ್ಥಿತಿ ಇದೆ. ಲೇವಾದೇವಿಯಲ್ಲಿ ಬಡ್ಡಿಗೆ ಹಣ ಪಡೆದು ಭತ್ತ ಬೆಳೆಗೆ ಹಾಕಿರುವ ರೈತರಿಗೆ ಈಗ ಮಾರಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಇದರಿಂದಾಗಿ, ಅನ್ನದಾತರಿಗೆ ನಿಜವಾಗಿಯೂ ಸಂಕಷ್ಟ ಅಡಿ ಇಟ್ಟಿದೆ.
First published: April 16, 2020, 7:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading