ದೆಹಲಿ (ಮೇ 07); ಕೊರೋನಾದಿಂದಾಗಿ ದೆಹಲಿ ಅಕ್ಷರಶಃ ನಲುಗಿದೆ. ಆಕ್ಸಿಜನ್ ಕೊರತೆಯಿಂದಾಗಿ ಸಾವಿನ ಸಂಖ್ಯೆಯೂ ಅಧಿಕವಾಗುತ್ತಲೇ ಇದೆ. ಈ ನಡುವೆ ದೆಹಲಿಗೆ ಅಗತ್ಯವಿರುವಷ್ಟು ಆಕ್ಸಿಜನ್ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು ಮಾತನಾಡಿರುವ ಅರವಿಂದ ಕೇಜ್ರಿವಾಲ್, "ರಾಜಧಾನಿಯ ಆಮ್ಲಜನಕದ ಕೊರತೆಯನ್ನು ಪರಿಹರಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ಸಾವಿರಾರು ಸಾವುಗಳಿಗೆ ಕಾರಣವಾಗಿರುವ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ತಮ್ಮ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದೇನೆ. ಈ ಸಭೆಯ ನಂತರ ಮೂರು ತಿಂಗಳೊಳಗೆ ಇಡೀ ದೆಹಲಿಯ ಎಲ್ಲಾ ನಿವಾಸಿಗಳಿಗೂ ಲಸಿಕೆ ಹಾಕುವ ಯೋಜನೆಯನ್ನು ಪ್ರಕಟಿಸಲಾಗುವುದು" ಎಂದು ತಿಳಿಸಿದ್ದಾರೆ.
"ಈಗ ದೆಹಲಿಯಲ್ಲಿ ಆಮ್ಲಜನಕದ ಕೊರತೆಯಿಲ್ಲ. ಯಾವುದೇ ರೋಗಿಯು ಆಮ್ಲಜನಕದಿಂದ ವಂಚಿತರಾಗದಂತೆ ನಾವು ಸಾಕಷ್ಟು ಆಮ್ಲಜನಕ ಹಾಸಿಗೆಗಳನ್ನು ಹೊಂದಿರುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ" ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಆರೋಗ್ಯ ಸಚಿವರು, ಆರೋಗ್ಯ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಗಳು ಭಾಗವಹಿಸಿದ್ದರು.
ಈ ಸಭೆಯ ನಂತರ ಮುಂದಿನ ಮೂರು ತಿಂಗಳಲ್ಲಿ ನಗರದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಮುಗಿಸಲು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅರವಿಂದ್ ಕೇಜ್ರಿವಾಲ್ ಸೂಚನೆ ನೀಡಿದ್ದಾರೆ. ಅಲ್ಲದೆ, ಪ್ರತಿದಿನ 2-4 ವ್ಯಾಕ್ಸಿನೇಷನ್ ಕೇಂದ್ರಗಳಿಗೆ ಭೇಟಿ ನೀಡುವಂತೆಯೂ ನಿರ್ದೇಶಿಸಿದ್ದಾರೆ.
ಭಾರತದ ಮಟ್ಟಿಗೆ ದೆಹಲಿ ಕೋವಿಡ್ನಿಂದ ಹೆಚ್ಚು ಹಾನಿಗೊಳಗಾದ ರಾಜ್ಯವಾಗಿದೆ. ಆಸ್ಪತ್ರೆಯಲ್ಲಿ ಹಾಸಿಗೆಗಳು ಮತ್ತು ವೈದ್ಯಕೀಯ ಆಮ್ಲಜನಕಕ್ಕಾಗಿ ಇಲ್ಲಿನ ಆಸ್ಪತ್ರೆಗಳು ಸಾಕಷ್ಟು ಹೆಣಗಾಡಿವೆ ಎಂದು ವರದಿಗಳಾಗಿವೆ. ಅಲ್ಲದೆ, ಸುಮಾರು 15 ಲಕ್ಷ ಸೋಂಕು ಪ್ರಕರಣಗಳು ದೆಹಲಿಯಲ್ಲಿ ಮಾತ್ರ ವರದಿಯಾಗಿದೆ. ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದೆ.
ದೆಹಲಿ ಆರೋಗ್ಯ ಇಲಾಖೆ ಗುರುವಾರ ಬಿಡುಗಡೆ ಮಾಡಿದ ಕೊನೆಯ ಬುಲೆಟಿನ್ ಪ್ರಕಾರ, ರಾಜಧಾನಿಯಲ್ಲಿ ಏಪ್ರಿಲ್ 18 ರಿಂದ ಮೊದಲ ಬಾರಿಗೆ ಸಕಾರಾತ್ಮಕ ಪ್ರಮಾಣವು ಶೇಕಡಾ 25 ಕ್ಕಿಂತ ಕಡಿಮೆಯಾಗಿದೆ. 335 ಕೋವಿಡ್-19 ಸಾವುಗಳು ಮತ್ತು 19,133 ಹೊಸ ಪ್ರಕರಣಗಳು ದಾಖಲಾಗಿವೆ.
ಭಾರತದಲ್ಲಿ ಕೊರೋನಾ ಆಘಾತ:
ಈ ನಡುವೆ ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ. ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ.
ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರು ಹಾಗೂ ಏಪ್ರಿಲ್ 17ರಿಂದ ದಿನ ಒಂದರಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ದೇಶದ ಕೊರೊನಾ ಪೀಡಿತರ ಸಂಖ್ಯೆ ಎರಡು ಕೋಟಿಯನ್ನೂ ದಾಟಿದೆ. ಅಲ್ಲದೆ ಇದೇ ಮೊದಲ ಬಾರಿಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಗೋಚರಿಸಲು ಆರಂಭಿಸಿವೆ.
ಇದನ್ನೂ ಓದಿ: ಮೋದಿ ಮನ್ ಕಿ ಬಾತ್ ಭಾಷಣ ಮಾಡುವ ಬದಲು ತುಸು ನಮ್ಮ ಮಾತನ್ನೂ ಆಲಿಸಲಿ: ಜಾರ್ಖಂಡ್ ಸಿಎಂ ಆಕ್ರೋಶ
ಗುರುವಾರ ಭಾರತದಲ್ಲಿ 4,14,188 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 3,31,507 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ ಎರಡು ಕೋಟಿ ದಾಟಿದ್ದು 2,14,91,598ಕ್ಕೆ ಏರಿಕೆ ಆಗಿದೆ. ಇದಲ್ಲದೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದ್ದು ದೇಶದಲ್ಲಿ ಇದೀಗ ದಿನ ಒಂದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪುತ್ತಿದ್ದಾರೆ. ಗುರುವಾರ 3,915 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 2,34,083ಕ್ಕೆ ಏರಿಕೆ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ