news18 Updated:November 20, 2020, 10:43 AM IST
ಸಾಂದರ್ಭಿಕ ಚಿತ್ರ
- News18
- Last Updated:
November 20, 2020, 10:43 AM IST
ನವದೆಹಲಿ(ನ. 20): ಲಂಡನ್ನ ಆಕ್ಸ್ಫರ್ಡ್ ಇನ್ಸ್ಟಿಟ್ಯೂಟ್ ಸಂಶೋಧಿಸಿರುವ ಕೋವಿಶೀಲ್ಡ್ ಕೋವಿಡ್ ವ್ಯಾಕ್ಸಿನ್ ಇನ್ನು ನಾಲ್ಕೈದು ತಿಂಗಳಷ್ಟರಲ್ಲಿ ಮಾರುಕಟ್ಟೆಗೆ ಲಭ್ಯವಿರಲಿದೆ ಎಂದು ಸೆರಮ್ ಇನ್ಸ್ಟಿಟ್ಯೂಟ್ ಆಪ್ ಇಂಡಿಯಾದ ಸಿಇಒ ಆಡಾರ್ ಪೂನಾವಾಲ ತಿಳಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಲೀಡರ್ಶಿಪ್ ಸಮಿಟ್ 2020 ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಎಲ್ಲ ಪರೀಕ್ಷೆಗಳು ಸುಗಮವಾಗಿ ಮುಕ್ತಾಯಗೊಂಡಲ್ಲಿ ಏಪ್ರಿಲ್ ತಿಂಗಳೊಳಗೆ ಸಾರ್ವಜನಿಕರಿಗೆ ಲಸಿಕೆ ಲಭ್ಯವಾಗುತ್ತದೆ ಎಂದಿದ್ದಾರೆ. ಲಸಿಕೆಯ ಎರಡು ಡೋಸ್ಗಳಿಗೆ ಅಂದಾಜು ಗರಿಷ್ಠ 1 ಸಾವಿರ ರೂ ದರ ನಿಗದಿಯಾಗಬಹುದು ಎಂದೂ ಅವರು ತಿಳಿಸಿದ್ದಾರೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನೆಕಾ ಫಾರ್ಮಾ ಸಂಸ್ಥೆ ಜಂಟಿಯಾಗಿ ತಯಾರಿಸುತ್ತಿರುವ ಈ ಲಸಿಕೆಯನ್ನು ಸೆರಮ್ ಇನ್ಸ್ಟಿಟ್ಯೂಟ್ ಭಾರತದಲ್ಲಿ ತಯಾರಿಸುತ್ತಿದೆ. ಈ ಸಲಿಕೆಯ ಅಂತಿ ಹಂತದ ಪ್ರಯೋಗಗಳು ನಡೆಯುತ್ತಿವೆ.
ಸೆರಮ್ ಇನ್ಸ್ಟಿಟ್ಯೂಟ್ನ ಸಿಇಒ ಪ್ರಕಾರ ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ಹಾಕಲು ಎರಡ್ಮೂರು ವರ್ಷ ಆಗಬಹುದಂತೆ. ಅದಕ್ಕೆ ಅವರು ನೀಡುವ ಕಾರಣ ಇದು: “ಪ್ರತಿಯೊಬ್ಬ ಭಾರತೀಯರಿಗೂ ವ್ಯಾಕ್ಸಿನ್ ಹಾಕಲು ಎರಡು ಅಥವಾ ಮೂರು ವರ್ಷ ಆಗಬಹುದು. ಸರಬರಾಜು ವ್ಯವಸ್ಥೆಯ ದೌರ್ಬಲ್ಯ ಇದಕ್ಕೆ ಕಾರಣ ಅಲ್ಲ. ಆದರೆ, ಇದಕ್ಕೆ ಹಣ ಹೊಂದಿಸಬೇಕು. ಲಸಿಕೆ ಲಭ್ಯವಾಗಬೇಕು. ಅಗತ್ಯ ಸೌಕರ್ಯದ ವ್ಯವಸ್ಥೆಯಾಗಬೇಕು. ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಒಪ್ಪಿಕೊಳ್ಳಬೇಕು. ಹೀಗಾದಲ್ಲಿ 2-3 ವರ್ಷದಲ್ಲಿ ಶೇ. 80-90ರಷ್ಟು ಜನಸಂಖ್ಯೆಗೆ ಲಸಿಕೆ ಹಾಕಬಹುದು. ಎರಡು ಡೋಸ್ಗಳ ಲಸಿಕೆ ಪೂರ್ಣಗೊಳ್ಳಲು 2024ರಷ್ಟಲ್ಲಿ ಸಾಧ್ಯವಾಗಬಹುದು” ಎಂದು ಪೂನಾವಾಲ ಹೇಳಿದ್ದಾರೆ.
ಇದನ್ನೂ ಓದಿ: Pfizer: ಕೊರೋನಾಗೆ ಫಿಜರ್ ಶೇ 95ರಷ್ಟು ಪರಿಣಾಮಕಾರಿ ಲಸಿಕೆ; ತುರ್ತು ಅನುಮೋದನೆ ಪಡೆಯಲು ಸಿದ್ಧತೆ
ಇನ್ನು, ಈ ಲಸಿಕೆಯ ಬೆಲೆ ಬಗ್ಗೆ ಸುಳಿವು ನೀಡಿದ ಅವರು, ಒಂದು ಡೋಸ್ಗೆ 5-6 ಡಾಲರ್ ದರ ಇರಲಿದೆ ಎಂದರು. ಅದರಂತೆ, ಎರಡು ಡೋಸ್ಗಳಿಗೆ 1 ಸಾವಿರ ರೂಪಾಯಿಗಿಂತ ಕಡಿಮೆ ಇರಲಿದೆ. ಭಾರತ ಸರ್ಕಾರ ಅಧಿಕ ಪ್ರಮಾಣದಲ್ಲಿ ಲಸಿಕೆ ಕೊಳ್ಳುವುದರಿಂದ ಅದು ಒಂದು ಡೋಸ್ಗೆ 3-4 ಡಾಲರ್ ಬೆಲೆಗೆ ಪಡೆಯಬಹುದು. ನಮ್ಮ ಕೋವಿಶೀಲ್ಡ್ ಲಸಿಕೆಯು ಬೇರೆ ವ್ಯಾಕ್ಸಿನ್ಗಿಂತ ಅಗ್ಗವಾಗಿರಲಿದೆ ಎಂದು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಭರವಸೆ ನೀಡಿದ್ದಾರೆ.
ಮಕ್ಕಳಿಗಿಂತ ಹಿರಿಯರಿಗೆ ಕೋವಿಡ್ ಅಪಾಯ ಇರುವುದರಿಂದ ಮೊದಲಿಗೆ ಹಿರಿಯ ನಾಗರಿಕರಿಗೆ ಲಸಿಕೆಯನ್ನ ಒದಗಿಸಲಾಗುವುದು. ಮಕ್ಕಳ ಮೇಲೆ ಇನ್ನೂ ಪ್ರಯೋಗಗಳಾಗಬೇಕಿರುವುದರಿಂದ ಹಾಗೂ ಕೋವಿಡ್ನಿಂದ ಅವರಿಗೆ ಹೆಚ್ಚಿನ ಅನಾಹುತ ಆಗುವ ಸಾಧ್ಯತೆ ಇಲ್ಲದಿರುವುದರಿಂದ ಮಕ್ಕಳಿಗೆ ಲಸಿಕೆಯನ್ನು ತುಸು ತಡವಾಗಿ ನೀಡಿದರೂ ಅಡ್ಡಿ ಇಲ್ಲ ಎಂಬುದು ಈ ಸಂಸ್ಥೆಯ ಅಭಿಪ್ರಾಯ.
Published by:
Vijayasarthy SN
First published:
November 20, 2020, 10:43 AM IST