• ಹೋಂ
 • »
 • ನ್ಯೂಸ್
 • »
 • Corona
 • »
 • ಕೋವಿಡ್ ವಕ್ಕರಿಸಿದ ಆರಂಭದಲ್ಲಿ ಭಾರತ ಮಾಡಿದ ತಪ್ಪೇನು? ಜ್ವರಲಕ್ಷಣದ ಹಿಂದೆ ಬಿದ್ದದ್ದು ಯಡವಟ್ಟಾಯಿತಾ?

ಕೋವಿಡ್ ವಕ್ಕರಿಸಿದ ಆರಂಭದಲ್ಲಿ ಭಾರತ ಮಾಡಿದ ತಪ್ಪೇನು? ಜ್ವರಲಕ್ಷಣದ ಹಿಂದೆ ಬಿದ್ದದ್ದು ಯಡವಟ್ಟಾಯಿತಾ?

ಕೊರೋನಾ ವೈರಸ್ ಸಾಂದರ್ಭಿಕ ಚಿತ್ರ

ಕೊರೋನಾ ವೈರಸ್ ಸಾಂದರ್ಭಿಕ ಚಿತ್ರ

ಜ್ವರ ಲಕ್ಷಣವಿರುವ ಜನರನ್ನು ಗುರುತಿಸಿ ಕೋವಿಡ್ ಪರೀಕ್ಷೆಗೆ ಒಳಪಡಿಸುವ ಕಾರ್ಯತಂತ್ರ ನಿರೀಕ್ಷಿತ ಫಲಕೊಟ್ಟಿಲ್ಲ. ಕೋವಿಡ್ ರೋಗಿಗಳಲ್ಲಿ ತೀರಾ ಕಡಿಮೆ ಮಂದಿಗೆ ಮಾತ್ರ ಜ್ವರ ಲಕ್ಷಣವಿರುವುದು AIIMS ತಂಡದವರು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

 • Share this:

  ನವದೆಹಲಿ(ಜುಲೈ 25): ಭಾರತದಲ್ಲಿ ಕೊರೋನಾ ಸೋಂಕು ವ್ಯಾಪಿಸುವ ಮುನ್ನ ಬೇರೆ ದೇಶಗಳಲ್ಲಿ ದೊಡ್ಡ ಮಟ್ಟದಲ್ಲೇ ಅಟ್ಟಹಾಸ ನಡೆಸಿತ್ತು. ಹೀಗಾಗಿ, ಭಾರತಕ್ಕೆ ಕೋವಿಡ್ ಅಪಾಯದ ಬಗ್ಗೆ ಮೊದಲೇ ಗ್ರಹಿಕೆಯಂತೂ ಇತ್ತು. ಆದರೂ ಕೂಡ ಇಲ್ಲಿ ಈಗ ಅನೇಕ ಕಡೆ ಸಾಮುದಾಯಿಕವಾಗಿ ಹಬ್ಬಿ ಪರಿಸ್ಥಿತಿ ಕೈಮೀರಿದೆ. ಈ ಸ್ಥಿತಿ ತಲುಪಲು ಕಾರಣ ಏನು? ಏಮ್ಸ್ ವಿಜ್ಞಾನಿಗಳು ನಡೆಸಿರುವ ಅಧ್ಯಯನದ ಪ್ರಕಾರ ಭಾರತಕ್ಕೆ ಕೋವಿಡ್ ಕಾಲಿಟ್ಟ ಆರಂಭಿಕ ಹಂತದಲ್ಲಿ ಅನೇಕ ರೋಗಿಗಳನ್ನ ಗುರುತಿಸಲು ಸಾಧ್ಯವಾಗದೇ ಹೋದದ್ದು ಇಷ್ಟು ವ್ಯಾಪಕವಾಗಿ ಕೊರೋನಾ ಹಬ್ಬಲು ಕಾರಣವಾಗಿದೆಯಂತೆ. ಜಾಗತಿಕ ಟ್ರೆಂಡ್ ಆಧರಿಸಿ ಇಲ್ಲಿ ಕಾರ್ಯತಂತ್ರ ರೂಪಿಸಿದ್ದು ಯಡವಟ್ಟಾಗಿರುವುದು ವೇದ್ಯವಾಗಿದೆ.


  ಐಸಿಎಂಆರ್​ನ ಜರ್ನಲ್​ನಲ್ಲಿ ಪ್ರಕಟವಾದ ಈ ಅಧ್ಯಯನ ಪ್ರಕಟವಾಗಿದೆ. ಮಾರ್ಚ್ 23ರಿಂದ ಏಪ್ರಿಲ್ 15ರವರೆಗಿನ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾದ 144 ಕೋವಿಡ್ ರೋಗಿಗಳ ಪರಿಸ್ಥಿತಿಯನ್ನು ಅಧ್ಯಯನ ಮಾಡಲಾಗಿದೆ. ಆ ಸಂದರ್ಭದಲ್ಲಿ ಕೊರೋನಾ ರೋಗಿಗಳನ್ನ ಗುರುತಿಸಲು ಜ್ವರ ಲಕ್ಷಣವೇ ಮಾನದಂಡವಾಗಿತ್ತು. ಈಗಲೂ ಕೂಡ ಅದೇ ಮಾನದಂಡವಾಗಿ ಮುಂದುವರಿಯುತ್ತಿರುವುದು ಬೇರೆಯ ವಿಚಾರ. ಆದರೆ, ಮಾರ್ಚ್ ಮತ್ತು ಏಪ್ರಿಲ್ ತಿಂಗಳು ಭಾರತದಲ್ಲಿ ಸೋಂಕು ವ್ಯಾಪಿಸಲು ಪ್ರಾರಂಭವಾದ ಕಾಲಘಟ್ಟವಾಗಿದೆ. ಆಗ ಜ್ವರ ಲಕ್ಷಣವನ್ನೇ ಪ್ರಮುಖ ಮಾನದಂಡವನ್ನಾಗಿ ಮಾಡಿಕೊಳ್ಳಲಾಗಿತ್ತು. ವಿಶ್ವದ ಹಲವು ರಾಷ್ಟ್ರಗಳ ರೋಗಿಗಳಲ್ಲಿ ಜ್ವರ ಲಕ್ಷಣವೇ ಪ್ರಮುಖವಾಗಿದ್ದು ಕಂಡುಬಂದಿತ್ತು. ಹೀಗಾಗಿ, ಭಾರತದಲ್ಲಿ ಜ್ವರ ಲಕ್ಷಣ ಇರುವವರನ್ನು ಗುರುತಿಸಲಷ್ಟೇ ಕಾರ್ಯತಂತ್ರ ರೂಪಿಸಲಾಗಿತ್ತು.. ಆದರೆ, ವಾಸ್ತವದಲ್ಲಿ ಈ ಅಧ್ಯಯನದ ಪ್ರಕಾರ, ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ಶೇ. 17ರಷ್ಟು ರೋಗಿಗಳಲ್ಲಿ ಮಾತ್ರ ಜ್ವರ ಲಕ್ಷಣವಿತ್ತು. ಆಸ್ಪತ್ರೆಗೆ ದಾಖಲಾದ ಬಳಿಕವಷ್ಟೇ ಶೇ. 88 ಮಂದಿಗೆ ಜ್ವರ ಲಕ್ಷಣ ತೋರಿತ್ತು ಎಂದು ಈ ಅಧ್ಯಯನ ಹೇಳುತ್ತದೆ.


  ಜ್ವರ ಲಕ್ಷಣಗಳಿರುವ ರೋಗಿಗಳನ್ನ ಮಾತ್ರ ಗುರುತಿಸಿ ಪರೀಕ್ಷೆಗೆ ಸ್ಯಾಂಪಲ್ ಪಡೆಯಲಾಗುತ್ತಿತ್ತು. ಅದಕ್ಕಾಗಿ ದೇಶಾದ್ಯಂತ ಸರ್ಕಾರಿ ಕಚೇರಿಗಳಲ್ಲಿ, ಮಾರುಕಟ್ಟೆಗಳಲ್ಲಿ, ಖಾಸಗಿ ಸಂಘ ಸಂಸ್ಥೆಗಳ ಕಚೇರಿಗಳಲ್ಲಿ, ಆಸ್ಪತ್ರೆಗಳಲ್ಲಿ ಥರ್ಮಲ್ ಸ್ಕ್ಯಾನರ್ ಅಳವಡಿಸುವಂತೆ ಸೂಚಿಸಲಾಗಿತ್ತು. 38 ಡಿಗ್ರಿ ಸೆಲ್ಷಿಯಸ್ ಮೈಬಿಸಿ ಇರುವಂಥವರು ಪತ್ತೆಯಾದರೆ ಮಾತ್ರ ಗುರುತಿಸಲಾಗುತ್ತಿತ್ತು. ಆದರೆ, ಸೋಂಕು ಇದ್ದು ಜ್ವರ ಲಕ್ಷಣ ಇಲ್ಲದವರನ್ನು ಗುರುತಿಸುವ ಪ್ರಯತ್ನವೇ ಆಗಲಿಲ್ಲ. ಹೀಗಾಗಿ, ಹಲವು ಸಂಭಾವ್ಯ ಸೋಂಕಿತರು ಸಮಾಜದೊಳಗೆ ಸೇರಿಕೊಂಡು ರೋಗ ಹರಡಲು ಪ್ರಮುಖ ಕಾರಣರಾಗಿರಬಹುದು ಎಂದು ಈ ಅಧ್ಯಯನದಲ್ಲಿ ಅಂದಾಜಿಸಲಾಗಿದೆ.


  ಇದನ್ನೂ ಓದಿ: ರಾವಣ ವಿಶ್ವದ ಮೊದಲ ವಿಮಾನಯಾನಿ?; ಶ್ರೀಲಂಕಾ ಸಂಶೋಧನೆಗೆ ಸಲ್ಲಿಕೆಯಾಯ್ತು 100ಕ್ಕೂ ಹೆಚ್ಚು ದಾಖಲೆಗಳು


  ಜ್ವರ ಅಲ್ಲವಾದರೆ, ಹೆಚ್ಚು ರೋಗಲಕ್ಷಣಗಳು ಯಾವುವು?


  ಈ ಅಧ್ಯಯನದಲ್ಲಿ ಅವಲೋಕಿಸಲಾದ 144 ರೋಗಿಗಳಲ್ಲಿ ಶೇ. 44 ಮಂದಿ ಅಸಿಂಪ್ಟಮ್ಯಾಟಿಕ್ ಆಗಿದ್ದರು. ಅಂದರೆ ಅವರಲ್ಲಿ ಯಾವುದೇ ರೋಗ ಲಕ್ಷಣವಿಲ್ಲದೆ ಆರೋಗ್ಯಯುತವಾಗಿ ತೋರ್ಪಟ್ಟಿದ್ದರು. ಇನ್ನು, ರೋಗ ಲಕ್ಷಣಗಳಿರುವ ರೋಗಿಗಳಲ್ಲಿ ಬಹುತೇಕರಿಗೆ ಇದ್ದ ಸಾಮಾನ್ಯ ರೋಗ ಲಕ್ಷಣವೆಂದರೆ ಕೆಮ್ಮು. ಇವರಲ್ಲಿ ಜ್ವರ ಲಕ್ಷಣ ಇದ್ದವರ ಸಂಖ್ಯೆ ತೀರಾ ಕಡಿಮೆ. ನೆಗಡಿ ಲಕ್ಷಣ ಕೇವಲ ಶೇ. 2ರಷ್ಟು ಮಂದಿಗೆ ಮಾತ್ರ ಇತ್ತೆನ್ನಲಾಗಿದೆ.


  “ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಬಹುತೇಕರಿಗೆ ಪೂರ್ವಬಾವಿಯಾಗಿ ಬೇರೆ ಬೇರೆ ಕಾಯಿಲೆಗಳು ಇದ್ದವು. ಚಿಕ್ಕ ವಯಸ್ಸಿನ ಜನರಿಗೆ ಸ್ಟೋಕ್ ಇತ್ತು. ಹೃದಯ ಸಮಸ್ಯೆ ಇದ್ದವರು ಇದ್ದರು. ಒಬ್ಬ ರೋಗಿಗೆ ಉಸಿರಾಟದ ತೊಂದರೆ ಇಲ್ಲದಿದ್ದರೂ ಬೇಧಿ ಇತ್ತು… ಕೆಲವರಿಗೆ ಕಣ್ಣಿನ ಸೋಂಕು ಇತ್ತು. ನಾವು ಹೆಚ್ಚೆಚ್ಚು ಸಂಭಾವ್ಯ ರೋಗಿಗಳನ್ನ ಗುರುತಿಸಬೇಕು. ಪರೀಕ್ಷೆಗೆ ಬೇಕಾದ ಮಾನದಂಡಗಳನ್ನ ಹೆಚ್ಚಿಸುವುದು ಅಗತ್ಯ ಇದೆ“ ಎಂದು ಈ ಅಧ್ಯಯನದಲ್ಲಿ ಭಾಗಿಯಾದ ಏಮ್ಸ್ ಸಂಸ್ಥೆಯ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳುತ್ತಾರೆ.

  Published by:Vijayasarthy SN
  First published: