ನವ ದೆಹಲಿ (ಜೂನ್ 07); ಭಾರತದಲ್ಲಿ ಕೊರೋನಾ ಎರಡನೇ ಅಲೆ ಅನೇಕ ಮಕ್ಕಳ ತಂದೆ-ತಾಯಿಯರನ್ನು ಕಸಿದುಕೊಂಡಿದೆ. ಈ ಬಗ್ಗೆ ಇತ್ತೀಚೆಗೆ ಹಲವು ರಾಷ್ಟ್ರೀಯ ಸುದ್ದಿ ವಾಹಿನಿಗಳು ವರದಿ ಮಾಡಿದ್ದವು. ವರದಿ ಬೆನ್ನಿಗೆ ಹಲವು ಸತ್ಯಾಂಶಗಳು ಸಹ ಬೆಳಕಿಗೆ ಬಂದಿತ್ತು. ಕೂಡಲೇ ಕೇಂದ್ರ ಸರ್ಕಾರ ಅನಾಥ ಮಕ್ಕಳಿಗೆ ಹೊಸ ಪ್ಯಾಕೇಜ್ ಘೋಷಿಸಿತ್ತು. ದೆಹಲಿ ಸರ್ಕಾರ ಸಹ ಕೊರೋನಾದಿಂದಾಗಿ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆಯನ್ನು ಘೋಷಿಸಿತ್ತು. ಆದರೆ, ಇದೀಗ ಆಘಾತ ಕಾರಿ ಮಾಹಿತಿಯೊಂದನ್ನು ರಾಷ್ಟ್ರೀಯ ಮಕ್ಕಳ ಆಯೋಗ ಬಿಡುಗಡೆ ಮಾಡಿದ. ಇಂದು ಸುಪ್ರೀಂ ಕೋರ್ಟ್‌ಗೆ ಈ ಬಗ್ಗೆ ಮಾಹಿತಿ ನೀಡಿರುವ ಆಯೋಗ, "ಕೊರೋನಾ ಸಾಂಕ್ರಾಮಿಕದಿಂದಾಗಿ ದೇಶದಲ್ಲಿ ಸುಮಾರು 30,000 ಮಕ್ಕಳು ಅನಾಥರಾಗಿದ್ದಾರೆ, ಪೋಷಕರನ್ನು ಕಳೆದುಕೊಂಡಿದ್ದಾರೆ. ವಿವಿಧ ರಾಜ್ಯಗಳು ಸಲ್ಲಿಸಿದ ಮಾಹಿತಿಯ ಪ್ರಕಾರ 30,071 ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ" ಎಂದು ತಿಳಿಸಿದೆ.
ಕೊರೋನಾದಿಂದಾಗಿ ಒಟ್ಟು, 26,176 ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ, 3,621 ಮಕ್ಕಳು ಅನಾಥರಾಗಿದ್ದಾರೆ ಮತ್ತು 274 ಮಕ್ಕಳನ್ನು ಮನೆಯಿಂದ ಹೊರದಬ್ಬ ಲಾಗಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
2020 ರ ಏಪ್ರಿಲ್ 1 ರಿಂದ 2021 ರ ಜೂನ್ 5 ರವರೆಗೆ ತಾಯಿ ಅಥವಾ ತಂದೆಯನ್ನು ಕಳೆದುಕೊಂಡಿರುವುದು, ಮತ್ತು ಇಬ್ಬರೂ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಬಗ್ಗೆ ರಾಜ್ಯವಾರು ಮಾಹಿತಿ ದೊರೆತಿದೆ ಎಂದು ಆಯೋಗವು ತಿಳಿಸಿದೆ. ಈ ಪೋಷಕರ ಸಾವಿನ ಕೊರೋನಾ ಮಾತ್ರವಲ್ಲ ಬೇರೆ ಕಾರಣಗಳು ಇವೆ ಎಂದು ಮಾಹಿತಿ ನೀಡಿದೆ.
ಮಹಾರಾಷ್ಟ್ರ ಕೊರೊನಾದಿಂದ ಹೆಚ್ಚು ತೊಂದರೆಗೆ ಒಳಗಾಗಿದ್ದು, ಕಳೆದ ವರ್ಷ ಏಪ್ರಿಲ್ 1 ರಿಂದ 7,084 ಮಕ್ಕಳು ಕೊರೊನಾ ಮಾರಕ ವೈರಸ್‌ಗೆ ಪೋಷಕರನ್ನು ಕಳೆದುಕೊಂಡಿದ್ದಾರೆ. ಉತ್ತರ ಪ್ರದೇಶ (3,172), ರಾಜಸ್ಥಾನ (2,482), ಹರಿಯಾಣ (2,438), ಮಧ್ಯಪ್ರದೇಶ (2,243), ಆಂಧ್ರ ಪ್ರದೇಶ (2,089), ಕೇರಳ (2,002), ಬಿಹಾರ (1,634) ಮತ್ತು ಒಡಿಶಾ (1,073) ರಾಜ್ಯಗಳಲ್ಲಿ ಇಷ್ಟು ಮಕ್ಕಳು ಅನಾಥರಾಗಿದ್ದಾರೆ ಎಂದು ಎನ್‌ಸಿಪಿಸಿಆರ್ ಹೇಳಿದೆ.
ಮಹಾರಾಷ್ಟ್ರದಲ್ಲಿ ಒಟ್ಟು 7,084 ಮಕ್ಕಳಲ್ಲಿ 6,865 ಮಕ್ಕಳು ಒಬ್ಬ ಪೋಷಕರನ್ನು (ತಂದೆ ಅಥವಾ ತಾಯಿ) ಕಳೆದುಕೊಂಡಿದ್ದಾರೆ. 217 ಮಂದಿ ಅನಾಥರಾಗಿದ್ದಾರೆ ಮತ್ತು ಇಬ್ಬರು ಮಕ್ಕಳನ್ನು ಮನೆಯಿಂದ ತ್ಯಜಿಸಲಾಗಿದೆ. ಇತ್ತ ಮಧ್ಯಪ್ರದೇಶದಲ್ಲಿ 226 ಮಕ್ಕಳನ್ನು ಮನೆಯಿಂದ ಹೊರದಬ್ಬಲಾಗಿದ್ದು, ದೇಶದಲ್ಲಿ ಅಗ್ರಸ್ಥಾನದಲ್ಲಿದೆ.
ಅನಾಥರಾಗಿರುವವರಲ್ಲಿ 15,620 ಮಂದಿ ಬಾಲಕರು, 14,447 ಮಂದಿ ಬಾಲಕಿಯರು ಮತ್ತು 4 ಮಂದಿ ಲೈಂಗಿಕ ಅಲ್ಪ ಸಂಖ್ಯಾತರು ಇದ್ದಾರೆ ಎಂದು ಎನ್‌ಸಿಪಿಸಿಆರ್ ತಿಳಿಸಿದೆ. ಇದರಲ್ಲಿ 11,815 ಮಂದಿ 8 ರಿಂದ 13 ವರ್ಷ ವಯಸ್ಸಿನವರಾಗಿದ್ದಾರೆ.
2,902 ಮಂದಿ 3 ವರ್ಷದೊಳಗಿನ ಮಕ್ಕಳು, 4-7 ವರ್ಷ ವಯಸ್ಸಿನವರು 5,107 ಮತ್ತು 14 ರಿಂದ 15 ವರ್ಷ ವಯಸ್ಸಿನವರು 4,908 ಮಂದಿ ಇದ್ದರೆ, 16 ರಿಂದ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರು 5,339 ಮಂದಿಯಿದ್ದಾರೆ ಎಂದು ಮಾಹಿತಿ ನೀಡಿದೆ.
ಅನಾಥ ಮಕ್ಕಳಿಗೆ ಮತ್ತು ಕುಟುಂಬಗಳಿಗೆ ನೆರವು ನೀಡಲು ಬಯಸುತ್ತೇವೆ ಎಂದು ಕೊರೊನಾದಿಂದ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಡೇಟಾ ಸಂಗ್ರಹಣೆಯಲ್ಲಿ ಹಲವು ಜನರು ಮತ್ತು ಸಂಸ್ಥೆಗಳು ಭಾಗಿಯಾಗಿವೆ. ಜುವೆನೈಲ್ ಜಸ್ಟೀಸ್ ಆಕ್ಟ್, 2015 ರ ಅಡಿಯಲ್ಲಿ ನೀಡಲಾದ ಮಾನದಂಡಗನ್ನು ಅನುಸರಿಸದೆ ಈ ಸಂಸ್ಥೆಗಳು ಅನಾಥ ಮಕ್ಕಳನ್ನು ಹಲವು ಕುಟುಂಬಗಳಿಗೆ ದತ್ತು ನೀಡುತ್ತಿದ್ದಾರೆ ಎಂದು ಎನ್‌ಸಿಪಿಸಿಆರ್ ಆರೋಪಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ