ಜಪಾನಿನ ಡೈಮಂಡ್ ಪ್ರಿನ್ಸೆಸ್ ಕ್ರೂಸ್ ಹಡಗಿನಲ್ಲಿರುವ ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಈ ಐಷಾರಾಮಿ ಹಡಗಿನಲ್ಲಿ ಒಟ್ಟು 3700 ಪ್ರಯಾಣಿಕರಿದ್ದು, 200ಕ್ಕೂ ಹೆಚ್ಚು ಭಾರತೀಯರು ಇದ್ದಾರೆ. ಹಡಗಿನಲ್ಲಿರುವ 64 ಮಂದಿಯಲ್ಲಿ ಮಾರಣಾಂತಿಕ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕೊರೊನಾ ಭೀತಿ ಹಿನ್ನೆಲೆ, ಸದ್ಯ ಹಡಗನ್ನು ಯೋಕೋಹಾಮಾ ಬಳಿ ತಡೆಹಿಡಿದು ನಿಲ್ಲಿಸಲಾಗಿದೆ. ಪ್ರಯಾಣಿಕರು, ಸಿಬ್ಬಂದಿ ಎಲ್ಲರೂ ಸಮುದ್ರದ ಮಧ್ಯೆಯೇ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹಡಗಿನಲ್ಲಿರುವ 200ಕ್ಕೂ ಹೆಚ್ಚು ಭಾರತೀಯರಲ್ಲಿ ಕೊರೊನಾ ವೈರಸ್ ಇಲ್ಲ ಎಂಬುದು ಪರೀಕ್ಷೆಗೊಳಪಡಿಸಿದಾಗ ದೃಢಪಟ್ಟಿದೆ. ಆದರೆ ದಿನದಿಂದ ದಿನಕ್ಕೆ ಸೋಂಕು ಹರಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮೊದಲ ಬಾರಿಗೆ ಹಡಗಿನಲ್ಲಿದ್ದ 10 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ದಿನೇ ದಿನೇ ಈ ಸಂಖ್ಯೆ ಹೆಚ್ಚಾಗುತ್ತಿದ್ದು, ಈಗ 64 ಮಂದಿಯಲ್ಲಿ ಕೊರೊನಾ ಇರುವುದು ಖಚಿತವಾಗಿದೆ.
ಕೊರೊನಾ ವೈರಸ್ಗೆ ಹೆದರಿದ ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬ, ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಮತ್ತು ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಳಿ ತುರ್ತು ಸಹಾಯ ಕೋರಿದ್ದಾನೆ. ಹಡಗಿನಲ್ಲಿ ಕೊರೊನಾ ವೈರಸ್ ಪತ್ತೆಯಾಗಿರುವ ಜನರನ್ನು ಪ್ರತ್ಯೇಕವಾಗಿ ಸಾಗಿಸುವಂತೆ ಜಪಾನ್ ಸರ್ಕಾರಕ್ಕೆ ತಿಳಿಸಿ ಎಂದು ಆ ವ್ಯಕ್ತಿ ಮೋದಿಗೆ ಮನವಿ ಮಾಡಿದ್ದಾನೆ. ಜೊತೆಗೆ, ಜಪಾನ್ ಮತ್ತು ಚೀನಾದ ವುಹಾನ್ನಲ್ಲಿರುವ ಭಾರತೀಯರನ್ನು ರಕ್ಷಿಸಿ ಎಂದು ಆತ ಕೋರಿದ್ದಾನೆ.
Corona Virus: ಸಾರ್ಸ್ಗಿಂತಲೂ ಭೀಕರವಾಗಿದೆ ಕೊರೊನಾ; 700ರ ಗಡಿ ದಾಟಿದ ಸಾವಿನ ಸಂಖ್ಯೆ
"ಜಪಾನಿನ ಡೈಮಂಡ್ ಪ್ರಿನ್ಸೆಸ್ ಕ್ರೂಸ್ ಹಡಗಿನಲ್ಲಿ 200ಕ್ಕೂ ಹೆಚ್ಚು ಭಾರತೀಯರಿದ್ದಾರೆ. ಸದ್ಯ ಯಾರಲ್ಲೂ
ಕೊರೊನಾ ವೈರಸ್ ಪತ್ತೆಯಾಗಿಲ್ಲ. ಆದರೆ ಕೊರೊನಾ ಭೀತಿಯಲ್ಲೇ ಬದುಕುತ್ತಿದ್ದೇವೆ," ಎಂದು ಪಶ್ಚಿಮ ಬಂಗಾಳದ ವ್ಯಕ್ತಿ ಹೇಳಿದ್ದಾನೆ ಎಂಬುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ನೇರವಾಗಿ ಹಿಂದಿಯಲ್ಲಿ ಮಾತನಾಡಿರುವ ಆತ, ಕೊರೊನಾಗೆ ತುಂಬಾ ಹೆದರಿದ್ದಾನೆ ಎನ್ನಲಾಗಿದೆ. "ಈಗ ನಾನು ಮಾತನಾಡದಿದ್ದರೆ, ನಾಳೆ ನಾನು ಬದುಕುತ್ತೇನೋ ಸಾಯುತ್ತೇನೋ ಗೊತ್ತಿಲ್ಲ," ಎಂದು ಆತ ಆತಂಕಗೊಂಡಿದ್ದಾನೆ.
ವಿದೇಶಾಂಗ ಸಚಿವ ಎಸ್. ಜಯಶಂಕರ್ ಶುಕ್ರವಾರ ಟ್ವೀಟ್ ಮಾಡಿದ್ದು, "ಕೊರೊನಾ ವೈರಸ್ ಭೀತಿ ಹಿನ್ನೆಲೆ ಸದ್ಯ ಜಪಾನಿನ ಡೈಮಂಡ್ ಪ್ರಿನ್ಸೆಸ್ ಕ್ರೂಸ್ ಹಡಗನ್ನು ನಿಲ್ಲಿಸಲಾಗಿದೆ. ಹಲವು ಭಾರತೀಯ ಸಿಬ್ಬಂದಿ ಮತ್ತು ಪ್ರಯಾಣಿಕರು ಆ ಹಡಗಿನಲ್ಲಿ ಇದ್ದಾರೆ. ನಮ್ಮ ರಾಯಭಾರ ಕಚೇರಿಗೆ ಬಂದಿರುವ ಮಾಹಿತಿ ಪ್ರಕಾರ, ಯಾರಲ್ಲೂ ಕೊರೊನಾ ವೈರಸ್ ಪತ್ತೆಯಾಗಿಲ್ಲ," ಎಂದು ಹೇಳಿದ್ದಾರೆ.
ಹಡಗಿನಲ್ಲಿರುವ 280 ಜನರನ್ನು ಜಪಾನಿನ ಅಧಿಕಾರಿಗಳು ಪರೀಕ್ಷೆಗೆ ಒಳಪಡಿಸಿದ್ದರು. ಆಗ ಮೂರು ಮಂದಿಯಲ್ಲಿ ಕೊರೊನಾ ಇರುವುದು ಪತ್ತೆಯಾಗಿತ್ತು. ಸದ್ಯ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಕಳೆದ ಸೋಮವಾರ ಸಂಜೆ ಚೀನಾದ ಹಾಂಗ್ಕಾಂಗ್ನಿಂದ ಜಪಾನಿನ ಟೋಕಿಯೋಗೆ ಹಡಗು ತೆರಳಿತ್ತು. ಹಡಗಿನಲ್ಲಿ 3700 ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿಗಳಿದ್ದಾರೆ. ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆ, ಗುರುವಾರ ಯಾಕೋಹಾಮಾ ಬಳಿ ಹಡಗನ್ನು ತಡೆ ಹಿಡಿಯಲಾಗಿದೆ. ಫೆ.19ರವರೆಗೆ ನಿರ್ಬಂಧ ಹಾಕಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ