ಕೊರೋನಾ ಬಂದರೂ ಪಕ್ಕದಲ್ಲಿ ಕೂರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ; ಶಿಕ್ಷಣ ಇಲಾಖೆಯ ಪ್ರಶ್ನೆಗೆ ಆರೋಗ್ಯ ಇಲಾಖೆ ಸ್ಪಷ್ಟನೆ

ರಾಜ್ಯಾದ್ಯಂತ ಕೋವಿಡ್ ಸೋಂಕು ಹೊಂದಿದ 25 ವಿದ್ಯಾರ್ಥಿಗಳನ್ನು ಆರೋಗ್ಯ ಇಲಾಖೆ ಗುರುತಿಸಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಬರೆಯಲು ಇವರೆಲ್ಲರಿಗೆ ವಿನಾಯಿತಿ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಜೂ. 28): ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗೆ ಕೊರೋನಾ ಬಂದ್ರೆ ಅವರ ಸಂಪರ್ಕಕ್ಕೆ ಬರುವ ಆ ಕೊಠಡಿಯಲ್ಲಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದಾ? ಬರೆಯಬಾರದಾ? ಎಂಬ ಪ್ರಶ್ನೆಗೆ ಉತ್ತರ ದೊರೆತಿದೆ. ಈ ಕುರಿತು ಶಿಕ್ಷಣ ಇಲಾಖೆ ಆರೋಗ್ಯ ಇಲಾಖೆಗೆ ಕೇಳಿದ ಪ್ರಶ್ನೆಗೆ ಸ್ಪಷ್ಟೀಕರಣ ನೀಡಿದೆ.

ಕೊರೋನಾ‌ ಪಾಸಿಟಿವ್ ಪ್ರಕರಣ ದಿನೆ‌ ದಿನೇ 500 ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದರೂ ಶಿಕ್ಷಣ ಇಲಾಖೆ ಮೊದಲೇ ನಿರ್ಧರಿಸಿದಂತೆ ಎಸ್ ಎಸ್ ಎಲ್‌ಸಿ ಪರೀಕ್ಷೆ ನಡೆಸುತ್ತಿದೆ. ಈಗಾಗಲೇ ಮೂರು ಪರೀಕ್ಷೆಗಳು ಮುಗಿದಿವೆ. ಇನ್ನುಳಿದ ಪರೀಕ್ಷೆಗಳು ಬಾಕಿಯಿದೆ. ಇಂಥ ಸಂದರ್ಭದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಎಸ್ ಎಸ್ ಎಲ್ ಸಿ ಪರೀಕ್ಷೆ‌ ಬರೆಯುವ ಮಕ್ಕಳನ್ನು ಬಿಟ್ಟಿಲ್ಲ. ಸದ್ಯ ರಾಜ್ಯಾದ್ಯಂತ ಕೋವಿಡ್ ಸೋಂಕು ಹೊಂದಿದ 25 ವಿದ್ಯಾರ್ಥಿಗಳನ್ನು ಆರೋಗ್ಯ ಇಲಾಖೆ ಗುರುತಿಸಿದ್ದು, ಪ್ರಸ್ತುತ ನಡೆಯುತ್ತಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಬರೆಯಲು ಇವರೆಲ್ಲರಿಗೆ ವಿನಾಯಿತಿ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ಯಾವುದೇ ರೋಗ ಲಕ್ಷಣಗಳಲ್ಲಿದ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆ ನಡೆಸುವ ರಾಂಡಮ್ ಟೆಸ್ಟ್ ನಲ್ಲಿ ಕೋವಿಡ್ ಸೋಂಕು ಹರಡಿರುವುದು ದೃಢಪಟ್ಟಲ್ಲಿ ಅಂತಹ ವಿದ್ಯಾರ್ಥಿಯ ಸುತ್ತಮುತ್ತ ಕುಳಿತು ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಬಾಕಿ ಉಳಿದ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಬಹುದೇ ಎಂಬ ಬಗ್ಗೆ ಆರೋಗ್ಯ ಇಲಾಖೆಯ ಸ್ಪಷ್ಟೀಕರಣ ಕೋರಲಾಗಿತ್ತು. ಇದಕ್ಕೆ ಆರೋಗ್ಯ ಇಲಾಖೆ ಸ್ಪಷ್ಟೀಕರಣ ನೀಡಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಪರೀಕ್ಷಾ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಥಿಗೂ ಕೋವಿಡ್ 19 ಸೋಂಕು ದೃಢಪಟ್ಟಿದ್ದಲ್ಲಿ ಆರೋಗ್ಯ ಇಲಾಖೆಯ ಸಲಹೆಯ ಮೇರೆಗೆ ಆತ/ಆಕೆಯ ಜೊತೆ ಪರೀಕ್ಷೆ ಬರೆದಿದ್ದ ಇತರೆ ವಿದ್ಯಾರ್ಥಿಗಳಿಗೆ ಎಂದಿನಂತೆ ಸುರಕ್ಷಿತವಾಗಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಪ್ರತಿ ಡೆಸ್ಕ್ ನಲ್ಲಿ ಒಬ್ಬ ವಿದ್ಯಾರ್ಥಿ ಹಾಗೂ ಡೆಸ್ಕ್ ಗಳ ನಡುವೆ ಆರು ಅಡಿ ಅಂತರವಿರುವಂತೆ ಕ್ರಮ ವಹಿಸಿ ಅಂತಹ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲು ಅಧಿಕಾರಿಗಳಿಗೆ ತಾವು ನಿರ್ದೇಶನ ನೀಡಿರುವುದಾಗಿ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಶಿಕ್ಷಣ ಇಲಾಖೆ ಆದೇಶ ಪ್ರತಿ


ಪರೀಕ್ಷಾ ಕೇಂದ್ರದಲ್ಲಿ ಥರ್ಮಲ್ ಸ್ಕ್ರೀನಿಂಗ್, ಸಾಮಾಜಿಕ ಅಂತರ, ಫೇಸ್ ಮಾಸ್ಕ್, ಸಾನಿಟೈಸರ್ ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಹಾಲ್ ನಲ್ಲಿರುವ ಇತರ ವಿದ್ಯಾರ್ಥಿಗಳನ್ನು ಸಂಪರ್ಕಗಳೆಂದು ಪರಿಗಣಿಸಲಾಗುವುದಿಲ್ಲ.

1. ಕೊಠಡಿಯನ್ನು ಮುಚ್ಚಿ ಸೋಂಕು ನಿವಾರಣೆ ಮಾಡಬೇಕು (ಶೇ.1 ಸೋಡಿಯಂ ಹೈಪೊಕ್ಲೋರೈಟ್ ದ್ರಾವಣವನ್ನು ಬಳಸಬೇಕು ಮತ್ತು ಮರುದಿನ ಮರುಬಳಕೆ ಮಾಡುವುದು).

2. ಆ ಕೊಠಡಿಯಲ್ಲಿರುವ ಇತರ ವಿದ್ಯಾರ್ಥಿಗಳಿಗೆ ಬೇರೆ ಕೊಠಡಿಯಲ್ಲಿ ಉಳಿದ ಅವಧಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬಹುದು.

2. ಆ ಕೊಠಡಿಯಲ್ಲಿ ಉಳಿದ ವಿದ್ಯಾರ್ಥಿಗಳಿಗೆ ಬೇರೆ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬಹುದು ಅಥವಾ ಪೂರಕ ಪರೀಕ್ಷೆ ಬರೆಯಲು ಅನುಮತಿ ನೀಡಬಹುದು.

3. ಈ ಹಿಂದೆ ಕೊವಿಡ್ ಬಂದಾಗ ಆ ಮನೆಯಲ್ಲಿದ್ದ ಪಿ.ಯು.ಸಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಲಾಯಿತು ಮತ್ತು ಆ ನಂತರವೂ ಅವರು ಆರೋಗ್ಯವಾಗಿದ್ದರು.

4. ಇದರ ಆಧಾರದ ಮೇಲೆ ನಿಮ್ಮ ಕೊನೆಯಲ್ಲಿ ಅಗತ್ಯವಾದ ಕ್ರಮವನ್ನು ಕೈಗೊಳ್ಳಬಹುದು ಎಂದು ಅಭಿಪ್ರಾಯ ನೀಡಿದೆ.

ಶಿಕ್ಷಣ ಇಲಾಖೆ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆಯನ್ನು ಬರೆಯುವ ವಾತಾವರಣವನ್ನು ಕಲ್ಪಿಸಿದ್ದು ಯಾವುದೇ ವಿದ್ಯಾರ್ಥಿಗಳು ವಿಚಲಿತಗೊಳ್ಳದೇ ಇಂತಹ ಸಂದರ್ಭದಲ್ಲಿ ಕೇವಲ ತಮ್ಮ ಓದಿನ ಬಗ್ಗೆ ಮನಸ್ಸನ್ನು ಕೇಂದ್ರೀಕರಿಸಬೇಕೆಂದು, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕೆಂದು ವಿದ್ಯಾರ್ಥಿಗಳಿಗೆ ಸಚಿವ ಸುರೇಶ್ ಕುಮಾರ್ ಕರೆ ನೀಡಿದ್ದಾರೆ.

ಯಾವುದೇ ಪೋಷಕರು ಆತಂಕಕ್ಕೊಳಗಾಗದೇ, ತಮ್ಮ ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ತೆಗೆದುಕೊಂಡಿರುವ ಈ ಕ್ರಮದ ಕುರಿತು ಭರವಸೆಯೊಂದಿಗೆ ತಮ್ಮ ಮಕ್ಕಳನ್ನು ಪರೀಕ್ಷೆ ಬರೆಯಲು ಅನುವು ಮಾಡಿಕೊಡಲು ಅವರು ಕೋರಿದ್ದಾರೆ.

ಇದನ್ನೂ ಓದಿ : ಗುಟ್ಕಾ ನಿಷೇಧದ ಗುಮ್ಮದಿಂದಾಗಿ ಅಡಿಕೆ ಬೆಳೆಗಾರನಿಗೆ ನಷ್ಟದ ಭೀತಿ ; ಅಡಿಕೆಯಿಂದ ಸ್ಯಾನಿಟೈಸರ್ ಸಿದ್ಧಪಡಿಸಿದ ತೀರ್ಥಹಳ್ಳಿಯ ಯುವಕ

ಹಾಸನ ಎಸ್ ಎಸ್ ಎಲ್‌ ಸಿ ಕೊರೋನಾ ಪ್ರಕರಣಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನೆನ್ನೆಯ ದಿನ ಗಣಿತ ಭಾಷಾ ಪರೀಕ್ಷೆಗೆ ಹಾಜರಾದ ಕೊವಿಡ್ ಸೋಂಕಿತ ವಿದ್ಯಾರ್ಥಿಯೊಬ್ಬನ ಜೊತೆ ಪರೀಕ್ಷೆ ಬರೆದ 18 ವಿದ್ಯಾರ್ಥಿಗಳು ಹಾಗೂ ಒಬ್ಬ ಪರೀಕ್ಷಾ ಮೇಲ್ವಿಚಾರಕರಿಗೆ ಯಾವುದೇ ಕೋವಿಡ್ ಸೋಂಕು ತಗುಲಿಲ್ಲವೆಂದು ವೈದ್ಯಕೀಯ ತಪಾಸಣೆ ವರದಿಯಿಂದ ದೃಢಪಟ್ಟಿದೆ, ಯಾವುದೇ ಪೋಷಕರು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ‌.

ಕೋವಿಡ್ ಸೋಂಕಿತ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾದ ಕೊಠಡಿಯನ್ನು ಮುಚ್ಚಲಾಗಿದ್ದು, ಸೋಂಕು ನಿವಾರಕ ಕ್ರಮಗಳನ್ನು ಈಗಾಗಲೇ ಕಟ್ಟುನಿಟ್ಟಾಗಿ ತೆಗೆದುಕೊಳ್ಳಲಾಗಿದೆ, ಸೋಂಕಿತ ವಿದ್ಯಾರ್ಥಿಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ಶುಶ್ರೂಶೆ ಮುಂದುವರೆದಿದ್ದು, ಆತನೂ ಸಹ ಸ್ವಲ್ಪ ಜರದ ಹೊರತುಪಡಿಸಿ ಬೇರಾವ ಗುಣಲಕ್ಷಣಗಳನ್ನೂ ತೋರದೇ ಸುರಕ್ಷಿತವಾಗಿದ್ದಾನೆ. ಹಾಗಾಗಿ, ಈ ಕೇಂದ್ರದಲ್ಲಿ ಕೋವಿಡ್ ಸೋಂಕಿತ ವಿದ್ಯಾರ್ಥಿಯನ್ನು ಹೊರತುಪಡಿಸಿ ಆ ಕೊಠಡಿಯಲ್ಲಿ ನೆನ್ನೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳೆಲ್ಲರೂ ನಾಳೆಯಿಂದ ಎಂದಿನಂತೆ ಪರೀಕ್ಷೆ ಬರೆಯಲಿದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
First published: