ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಚಿಕಿತ್ಸೆಗೆ ಮಾತ್ರ ಮುಕ್ತಗೊಳಿಸಿ; ಸಿದ್ದರಾಮಯ್ಯ ಮನವಿ

ಗಡಿ ದಾಟಿ ಕರ್ನಾಟಕದ ಒಳಗೆ ಬರಲು ಯಾವುದೇ ವಾಹನಗಳಿಗೆ ಅವಕಾಶ ನೀಡಲಾಗುತ್ತಿಲ್ಲ. ಪರಿಣಾಮ ಕಳೆದ ಒಂದು ವಾರದಲ್ಲಿ 4ಜನ ರೋಗಿಗಳು ಕಾಸರಗೋಡಿನಿಂದ ಗಡಿ ದಾಟಿ ಚಿಕಿತ್ಸೆ ಪಡೆಯಲಾಗದೆ ಮೃತಪಟ್ಟಿದ್ದಾರೆ.

MAshok Kumar | news18-kannada
Updated:April 2, 2020, 8:02 AM IST
ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಚಿಕಿತ್ಸೆಗೆ ಮಾತ್ರ ಮುಕ್ತಗೊಳಿಸಿ; ಸಿದ್ದರಾಮಯ್ಯ ಮನವಿ
ಸಿದ್ದರಾಮಯ್ಯ.
  • Share this:
ಬೆಂಗಳೂರು (ಏಪ್ರಿಲ್‌ 02); ಕಾಸರಗೋಡಿನಿಂದ ಮಂಗಳೂರಿಗೆ ಚಿಕಿತ್ಸೆಗಾಗಿ ಬರುವವರನ್ನು ಮಾನವೀಯ ದೃಷ್ಟಿಯಿಂದ ನೋಡಬೇಕಾಗಿದೆ. ಗಡಿಯನ್ನು ಮುಕ್ತಗೊಳಿಸಿ ಕರ್ನಾಟಕದಲ್ಲಿ ಚಿಕಿತ್ಸೆ ಪಡೆಯಲು ಇವರಿಗೆ ಅವಕಾಶ ಮಾಡಿಕೊಡಬೇಕಿದೆ ಎಂದು ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ನಿನ್ನೆ ಕಾಸರಗೋಡಿನಿಂದ ಕೊರೋನಾ ಪೀಡಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಸಲುವಾಗಿ ಆಂಬ್ಯಲೆನ್ಸ್‌ ಮೂಲಕ ಕರ್ನಾಟಕಕ್ಕೆ ಸಾಗಿಸಲಾಗುತ್ತಿತ್ತು. ಆದರೆ, ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಲ್ಪಾಡಿಯಲ್ಲಿ ಗಡಿ ದಾಟಲು ಕರ್ನಾಟಕ ಪೊಲೀಸರು ಅನುಮತಿ ನಿರಾಕರಿಸಿದ ಕಾರಣ 49 ವರ್ಷದ ರೋಗಿ ಆಂಬ್ಯಲೆನ್ಸ್‌ನಲ್ಲೇ ಕೊನೆಯುಸಿರೆಳೆದಿದ್ದ. ಇದು ಘಟನೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು.

ಕಾಸರಗೋಡು ಕರ್ನಾಟಕಕ್ಕೆ ತುಂಬಾ ಹತ್ತಿರವಾದ ಕೇರಳದ ಜಿಲ್ಲೆ. ಕಾಸೆರಗೋಡಿಗಿಂತ ನೆರೆಯ ಮಂಗಳೂರಿನಲ್ಲಿ ಅತ್ಯುತ್ತಮ ಹೈಟೆಕ್ ಆಸ್ಪತ್ರೆಗಳು ಹಾಗೂ ಉತ್ತಮ ಚಿಕಿತ್ಸೆ ಸಿಗುವ ಭರವಸೆಯಲ್ಲಿ ದಶಕಗಳಿಂದ ಕಾಸರಗೋಡಿನ ಜನ ವೈದ್ಯಕೀಯ ಚಿಕಿತ್ಸೆಗೆ ಇಲ್ಲಿಗೆ ಆಗಮಿಸುತ್ತಿದ್ದಾರೆ. ಆದರೆ, ಕೊರೋನಾ ವೈರಸ್‌ ಭೀತಿಯಿಂದಾಗಿ ಅಂತಾರಾಜ್ಯ ಗಡಿಯನ್ನು ಮುಚ್ಚಲಾಗಿದೆ.

ಹೀಗಾಗಿ ಗಡಿ ದಾಟಿ ಕರ್ನಾಟಕದ ಒಳಗೆ ಬರಲು ಯಾವುದೇ ವಾಹನಗಳಿಗೆ ಅವಕಾಶ ನೀಡಲಾಗುತ್ತಿಲ್ಲ. ಪರಿಣಾಮ ಕಳೆದ ಒಂದು ವಾರದಲ್ಲಿ 4ಜನ ರೋಗಿಗಳು ಕಾಸರಗೋಡಿನಿಂದ ಗಡಿ ದಾಟಿ ಚಿಕಿತ್ಸೆ ಪಡೆಯಲಾಗದೆ ಮೃತಪಟ್ಟಿದ್ದಾರೆ.

ಕಳೆದ ವಾರ ಗಡಿದಾಟುವ ಅವಕಾಶ ಸಿಗದ ಕಾರಣ ಓರ್ವ ಮಹಿಳೆ ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಲ್ಪಾಡಿಯಲ್ಲಿ ಆಂಬ್ಯುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ್ದರು. ಈ ವಿಚಾರ ಸಹ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೂ, ಚಿಕಿತ್ಸೆಗೆಂದು ಬರುವ ರೋಗಿಗಳಿಗೂ ಗಡಿ ದಾಟಲು ಅವಕಾಶ ನೀಡಿರಲಿಲ್ಲ.

ಹೀಗಾಗಿ ಕೇರಳ ಸರ್ಕಾರ ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತವಾಗಿರಬೇಕು. ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚುವ ಹಕ್ಕು ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಸುಪ್ರೀಂ ಕೋರ್ಟ್‌‌ಗೆ ಮನವಿ ಸಲ್ಲಿಸಿದೆ.ಈ ಹಿನ್ನೆಲೆಯಲ್ಲಿ ಇಂದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, "ಕಾಸರಗೋಡಿನಿಂದ ಮಂಗಳೂರಿಗೆ ಚಿಕಿತ್ಸೆಗಾಗಿ ಬರುವವರನ್ನು ಮಾನವೀಯ ದೃಷ್ಟಿಯಿಂದ ನೋಡಬೇಕಾಗಿದೆ. ಸಾಮಾನ್ಯ ಸಂಚಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿ ಚಿಕಿತ್ಸೆಗೆ ಬರುವವರಿಗೆ ಮಾತ್ರ ಎರಡು ರಾಜ್ಯಗಳ ನಡುವಿನ ಹೆದ್ದಾರಿಯನ್ನು ಮುಕ್ತಗೊಳಿಸಬೇಕು. ಕೊರೊನಾ ವಿರುದ್ಧದ ಹೋರಾಟ ಜಾತಿ, ಧರ್ಮ ಮತ್ತು ಗಡಿಯನ್ನು ಮೀರಿದ್ದು" ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಕಾಸರಗೋಡಿನಿಂದ ಕರ್ನಾಟಕಕ್ಕೆ ಪ್ರವೇಶಿಸಲು ಮುಂದಾದ ಆಂಬ್ಯುಲೆನ್ಸ್‌ಗೆ ಪೊಲೀಸ್ ತಡೆ; ಕೊರೋನಾ ಸೋಂಕಿತ ವ್ಯಕ್ತಿ ಸಾವು!

 
First published:April 2, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading