• ಹೋಂ
 • »
 • ನ್ಯೂಸ್
 • »
 • Corona
 • »
 • Covid Vaccine Shortage: ಮಹಾರಾಷ್ಟ್ರದಲ್ಲಿ ಕೋವಿಡ್ ಲಸಿಕೆಗಳ ಕೊರತೆ; 45 ವರ್ಷಕ್ಕೆ ಮೇಲ್ಪಟ್ಟವರಿಗೆ ಮಾತ್ರ ವಾಕ್ಸಿನೇಷನ್!

Covid Vaccine Shortage: ಮಹಾರಾಷ್ಟ್ರದಲ್ಲಿ ಕೋವಿಡ್ ಲಸಿಕೆಗಳ ಕೊರತೆ; 45 ವರ್ಷಕ್ಕೆ ಮೇಲ್ಪಟ್ಟವರಿಗೆ ಮಾತ್ರ ವಾಕ್ಸಿನೇಷನ್!

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಮಹಾರಾಷ್ಟ್ರದಲ್ಲಿ ಸೋಮವಾರ 37,236 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. 6 ಲಕ್ಷಕ್ಕೂ ಹೆಚ್ಚು ಸಕ್ರೀಯ ಪ್ರಕರಣಗಳು ಇದ್ದು, ಒಟ್ಟಾರೆ ಕೋವಿಡ್ ರೋಗಿಗಳ ಸಂಖ್ಯೆ 51.4 ಲಕ್ಷಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆಯೂ 76,398ಕ್ಕೆ ಏರಿಕೆಯಾಗಿದೆ.

 • Share this:

  ಮುಂಬೈ (ಮೇ 11); ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೊರೋನಾದಿಂದ ಮೃತಪಟ್ಟವರ ಸಂಖ್ಯೆಯೂ ಆಘಾತಕ್ಕೆ ಕಾರಣವಾಗಿದೆ. ಅದರಲ್ಲೂ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕೋವಿಡ್​ ಸಾವಿನ ಸಂಖ್ಯೆ ಮಿತಿಮೀರುತ್ತಲೇ ಇದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಮೇ 01 ರಿಂದ ರಾಷ್ಟ್ರಾದ್ಯಂತ ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡುವುದಾಗಿ ಘೋಷಿಸಿತ್ತು. ಅಲ್ಲದೆ, 18 ರಿಂದ 44 ವಯೋಮಾನದವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದಿತ್ತು. ಆದರೆ, ಈವರೆಗೆ ಯಾವ ರಾಜ್ಯಗಳಿಗೂ ಸಾಕಾಗುವಷ್ಟು ಲಸಿಕೆಯನ್ನು ಕೇಂದ್ರ ನೀಡಿಲ್ಲ. ಹೀಗಾಗಿ ಮಾಹಾರಾಷ್ಟ್ರದಲ್ಲೂ ಸಹ ಲಸಿಕೆಗಳ ಕೊರತೆ ತಲೆದೋರಿದೆ. ಹೀಗಾಗಿ 18 ರಿಂದ 44 ವಯೋಮಾನದವರ ಲಸಿಕೆ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಮಹಾರಾಷ್ಟ್ರ ಸರ್ಕಾರ 45 ವರ್ಷಕ್ಕೆ ಮೇಲ್ಪಟ್ಟವರಿಗೆ ಲಸಿಕೆ ನೀಡುವುದಾಗಿ ತಿಳಿಸಿದೆ.


  ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿರುವ ಮಹಾರಾಷ್ಟ್ರ ರಾಜ್ಯದ ಆರೋಗ್ಯ ಸಚಿವ ರಾಜೇಶ್​ ಟೋಪೆ, "ಮಹಾರಾಷ್ಟ್ರದಲ್ಲಿ ಲಸಿಕೆಗಳ ಡೋಸೇಜ್ ಕಡಿಮೆ ಇದೆ. ಹೀಗಾಗಿ 18-44 ವಯಸ್ಸಿನವರಿಗೆ ಲಸಿಕೆ ನೀಡಲು ಸಾಧ್ಯವಾಗದೆ, ಈ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಿದ್ದೇವೆ. ಆದಾಗ್ಯೂ ನಾವು ಲಸಿಕೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸುತ್ತಿಲ್ಲ, ಬದಲಾಗಿ 45 ವರ್ಷಕ್ಕೆ ಮೇಲ್ಪಟ್ಟವರಿಗೆ ಕೋವಿಡ್​ ಲಸಿಕೆಯನ್ನು ನೀಡುತ್ತಿದ್ದೇವೆ, ಅಲ್ಲದೆ, ಹೆಚ್ಚಿನ ಲಸಿಕೆಗಳನ್ನು ಪಡೆಯುವ ಬಗ್ಗೆಯೂ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸುತ್ತೇನೆ" ಎಂದು ತಿಳಿಸಿದ್ದಾರೆ.


  ಮುಂಬೈ ಮಹಾನಗರದ ನಾಗರೀಕರ ಬಳಕೆಗಾಗಿ ನೇರವಾಗಿ ಲಸಿಕೆಗಳನ್ನು ಆಮದು ಮಾಡಿಕೊಳ್ಳುವ ಸಾಧ್ಯತೆಗಳನ್ನು ಪರಿಗಣಿಸುತ್ತಿರುವುದಾಗಿ ಈ ಹಿಂದೆಯೇ ಮಹಾರಾಷ್ಟ್ರ ಸರ್ಕಾರ ಹೇಳಿತ್ತು. ಆದರೆ, ಈವರೆಗೆ ಇದು ಸಾಧ್ಯವಾಗಿಲ್ಲ.


  ಲಸಿಕೆಗಳ ಆಮದಿನ ಕುರಿತಾಗಿ ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಿಎಂ ಉದ್ಧವ್ ಠಾಕ್ರೆ, "ಮುಂಬೈಗೆ ಜಾಗತಿಕವಾಗಿ ಲಸಿಕೆಗಳನ್ನು ಸಂಗ್ರಹಿಸುವ ಸಾಧ್ಯತೆಯನ್ನು ನಾವು ಪರಿಶೀಲಿಸುತ್ತಿದ್ದೇವೆ. ನಾವು ಅದನ್ನು ಮಾಡಲು ಸಾಧ್ಯವಾದರೆ, ಮೂರು ವಾರಗಳಲ್ಲಿ ಮುಂಬೈ ಜನರಿಗೆ ಲಸಿಕೆ ಹಾಕಲು ನಮ್ಮಲ್ಲಿ ಮಾರ್ಗಸೂಚಿ ಸಿದ್ದವಾಗಲಿದೆ" ಎಂದು ತಿಳಿಸಿದ್ದರು.


  ಭಾರತದಲ್ಲೇ ಮಹಾರಾಷ್ಟ್ರ ರಾಜ್ಯದಲ್ಲಿ ಕೊರೋನಾ ಹೆಚ್ಚು ಹಾನಿಯನ್ನು ಉಂಟು ಮಾಡಿದೆ. ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ದಾಖಲೆಯಂತೆ, ಮಹಾರಾಷ್ಟ್ರದಲ್ಲಿ ಸೋಮವಾರ 37,236 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. 6 ಲಕ್ಷಕ್ಕೂ ಹೆಚ್ಚು ಸಕ್ರೀಯ ಪ್ರಕರಣಗಳು ಇದ್ದು, ಒಟ್ಟಾರೆ ಕೋವಿಡ್ ರೋಗಿಗಳ ಸಂಖ್ಯೆ 51.4 ಲಕ್ಷಕ್ಕೆ ಏರಿಕೆಯಾಗಿದೆ. ಇನ್ನೂ ನಿನ್ನೆ ಒಂದೇ ದಿನ 549 ಜನ ಕೋವಿಡ್​ನಿಂದಾಗಿ ಮೃತಪಟ್ಟಿದ್ದು, ಸಾವಿನ ಸಂಖ್ಯೆಯೂ 76,398ಕ್ಕೆ ಏರಿಕೆಯಾಗಿದೆ.

  ಭಾರತದಲ್ಲಿ ಕೊರೋನಾ ಆರ್ಭಟ:


  ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌ ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ‌ಹೆಚ್ಚು‌, ಏಪ್ರಿಲ್ 21ರಿಂದ ದಿನ‌ ಒಂದರಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಹಾಗೂ ಏಪ್ರಿಲ್ 30ರಿಂದ ದಿನ‌ ಒಂದರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ತುಸು ಕಡಿಮೆಯಾಗಿ ಮೂರು ಲಕ್ಷಕ್ಕೂ ಹೆಚ್ಚು ಜನ ಸೋಂಕು ಪೀಡಿತರಾಗುತ್ತಿದ್ದಾರೆ.


  ಇದನ್ನೂ ಓದಿ: River Ganga: ಗಂಗೆಯಲ್ಲಿ ಇನ್ನೂ ನಿಂತಿಲ್ಲ ಹೆಣಗಳ ಹರಿವು: ಕೇಂದ್ರ ಜಲಶಕ್ತಿ ಸಚಿವರಿಂದ ತನಿಖೆಗೆ ಒತ್ತಾಯ


  ಸೋಮವಾರ 3,29,942 ಪ್ರಕರಣಗಳು ಪತ್ತೆಯಾಗಿವೆ ಮತ್ತು ಡಿಸ್ಚಾರ್ಜ್ ಆದವರು 3,56,082 ಜನ. ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,29,92,517ಕ್ಕೆ ಏರಿಕೆ ಆಗಿದೆ.‌ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದೆ. ಸೋಮವಾರ 3,876 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 2,49,992ಕ್ಕೆ ಏರಿಕೆ ಆಗಿದೆ.


  ದೇಶದಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಅದಾದ ಬಳಿಕ ಅದು ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಅತಿಹೆಚ್ಚಾಗಿತ್ತು.

  Published by:MAshok Kumar
  First published: