• ಹೋಂ
  • »
  • ನ್ಯೂಸ್
  • »
  • Corona
  • »
  • ‘ಮಕ್ಕಳ ಆನ್​ಲೈನ್​ ಶಿಕ್ಷಣ ರದ್ದು, ಆಗಸ್ಟ್​ವರೆಗೂ ಸ್ಕೂಲ್​​ ಓಪನ್​​ ಇಲ್ಲ‘ - ಸಚಿವ ಸುರೇಶ್​ ಕುಮಾರ್​

‘ಮಕ್ಕಳ ಆನ್​ಲೈನ್​ ಶಿಕ್ಷಣ ರದ್ದು, ಆಗಸ್ಟ್​ವರೆಗೂ ಸ್ಕೂಲ್​​ ಓಪನ್​​ ಇಲ್ಲ‘ - ಸಚಿವ ಸುರೇಶ್​ ಕುಮಾರ್​

ಸಚಿವ ಸುರೇಶ್​ ಕುಮಾರ್

ಸಚಿವ ಸುರೇಶ್​ ಕುಮಾರ್

ಈಗಾಗಲೇ ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳಿಗೆ ಹೆಚ್ಚಿನ ಶುಲ್ಕ ವಿಧಿಸುವಂತಿಲ್ಲ ಎಂದು ಸುತ್ತೋಲೆ‌ ಹೊರಡಿಸಲಾಗಿದೆ. ಕೋವಿಡ್​​-19 ವೈರಸ್​​ನಿಂದ ಸಾಕಷ್ಟು ಜನ ಕೆಲಸ‌ ಕಳೆದುಕೊಂಡಿದ್ದಾರೆ. ಈ ಬಾರಿ ಶಾಲೆಯವರು ಯಾರು ಫೀಸು ಹೆಚ್ಚಳ ಮಾಡಬಾರದು. ಖಾಸಗಿ ಶಾಲೆಗಳು ಶುಲ್ಕ‌ ಹೆಚ್ಚಳ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಒಂದು ಸಾವಿರ ದೂರುಗಳು ಬಂದಿದೆ. 350 ಪ್ರಕರಣ ಪರಿಹಾರವಾಗಿವೆ ಎಂದು ತಿಳಿಸಿದರು.

ಮುಂದೆ ಓದಿ ...
  • Share this:

ಬೆಂಗಳೂರು(ಜೂ.10): ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದ ಶಾಲಾ ಮಕ್ಕಳಿಗೆ ಆನ್‌ಲೈನ್ ಶಿಕ್ಷಣವನ್ನು ಸರ್ಕಾರ‌ ರದ್ದುಗೊಳಿಸಿ ಆದೇಶಿಸಿದೆ. ಎಲ್​​ಕೆ‌ಜಿ, ಯುಕೆಜಿ, 1-5ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ನೀಡಬಾರದು ಎಂದು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಈ ಬಗ್ಗೆ ಖುದ್ದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಅವರೇ ಸ್ಪಷ್ಟನೆ ನೀಡಿದ್ದಾರೆ. 


ಆನ್​​ಲೈನ್ ಶಿಕ್ಷಣ ಕುರಿತಂತೆ ಇಂದು ಬೆಂಗಳೂರಿನ ಸಮಗ್ರ ಶಿಕ್ಷಣ ಕಚೇರಿಯಲ್ಲಿ ಸಚಿವ ಸುರೇಶ್​ ಕುಮಾರ್​ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಶಿಕ್ಷಣ ತಜ್ಞರು, ನಿಮ್ಹಾನ್ದ್ ಮಕ್ಕಳ ವೈದ್ಯರು, ಕ್ಯಾಮ್ಸ್ ಅಧಿಕಾರಿಗಳು ಭಾಗಿಯಾಗಿದ್ದರು. ಇಲ್ಲಿ ಆನ್​​ಲೈನ್ ಶಿಕ್ಷಣದ ಬಗ್ಗೆ ಸುದೀರ್ಘ ಚರ್ಚೆಯಾಯಿತು. ಸಭೆಯ ಅಭಿಪ್ರಾಯದ ಹಿನ್ನೆಲೆಯಲ್ಲಿ ಆನ್‌ಲೈನ್ ಶಿಕ್ಷಣ ಕುರಿತು ಸರ್ಕಾರ ಎರಡು ನಿರ್ಧಾರ ತೆಗೆದುಕೊಂಡಿದೆ.


ರಾಜ್ಯದಲ್ಲಿ ಎಲ್‌ಕೆ‌ಜಿ, ಯುಕೆಜಿ ಹಾಗೂ 1-5ನೇ ತರಗತಿವರೆಗೆ ಪ್ರಾಥಮಿಕ‌ ಹಂತದ ಆನ್‌ಲೈನ್ ಶಿಕ್ಷಣ ಈ ಕೂಡಲೇ ರದ್ದುಗೊಳಿಸಲಾಗಿದೆ. ಮಕ್ಕಳಿಗೆ ಆನ್​​ಲೈನ್ ಶಿಕ್ಷಣದ ಹೆಸರಿನಲ್ಲಿ ಫೀಸು ತೆಗೆದುಕೊಳ್ಳುವುದು ನಿಲ್ಲಿಸಬೇಕು ಎಂದು ತೀರ್ಮಾನ ಮಾಡಲಾಗಿದೆ ಎಂದು ಸಚಿವ ಸುರೇಶ್​ ಕುಮಾರ್​ ಹೇಳಿದ್ದಾರೆ.


ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಸುರೇಶ್​ ಕುಮಾರ್​,  ಎಲ್​​ಕೆ‌ಜಿ, ಯುಕೆಜಿ ಮಕ್ಕಳಿಗೆ ಆನ್​ಲೈನ್​​ ಶಿಕ್ಷಣ ಎನ್ನುವುದು ಕೇಳಿ ನನಗೆ ಅಚ್ಚರಿಯಾಗಿತ್ತು. ಹೊರಗಡೆಯಿಂದ ನೋಡುವವರಿಗೆ ಇದು ಹಿಂಸೆ ಎಂದನಿಸುತ್ತದೆ. ಆನ್​ಲೈನ್​​ ಎಜುಕೇಷನ್ ಕುರಿತು ಭಾರೀ ಚರ್ಚೆಯಾಗುತ್ತಿದೆ. ಜತೆಗೆ ಸಾಕಷ್ಟು ದೂರು ಬಂದಿದ್ದವು. ಮಕ್ಕಳಿಗೆ ವಿವೇಚನಾರಹಿತವಾಗಿ ಪಾಠ ಮಾಡಲಾಗುತ್ತಿದೆ ಎಂಬ ದೂರು ಇತ್ತು. ಈ ಕುರಿತು ಜೂ 2ರಂದು ಸಭೆ ನಡೆಸಿದ್ದೆವು ಎಂದರು.


ಆನ್​ಲೈನ್​​ ಎಜುಕೇಷನ್​​ ಬಗ್ಗೆ ಮಕ್ಕಳ ಶಿಕ್ಷಣ ತಜ್ಞರು, ನಿಮ್ಹಾನ್ಸ್ ವೈದ್ಯರ ಜೊತೆಗೆ ಚರ್ಚೆ ಮಾಡಲಾಗಿತ್ತು. ಇಂದು ಮತ್ತೊಂದು ವಿಸ್ತ್ತತ ಸಭೆ ನಡೆಸಿದ ಬಳಿಕ ಆನ್​​ಲೈನ್‌ ಶಿಕ್ಷಣ ಬೇಡ ಎಂದು ತೀರ್ಮಾನ ಮಾಡಲಾಗಿದೆ ಎಂದು ಸುರೇಶ್​ ಕುಮಾರ್​.


ಇನ್ನು, ಪ್ರೊ. ಎನ್ ಕೆ ಶ್ರೀಧರ್, ಗುರುರಾಜ್‌ ಕರ್ಜಗಿ, ಡಾ ನಿರಂಜಾನಾರಾಧ್ಯ ಅಜೀಂ ಪ್ರೇಮ್‌ ಜೀ ವಿವಿಯ ವೃಷಿ ಕೇಷ್, ಡಾ ವಿಜಯ್ ಸಾಗರ್, ಕ್ಯಾನ್ಸ್ ಒಕ್ಕೂಟ ಹಾಗೂ ಸರ್ವ ಶಿಕ್ಷಣ ಇಲಾಖೆ ಪ್ರತಿನಿಧಿ ಸೇರಿದಂತೆ 11 ಜನರು ಸಮಿತಿ ರಚನೆ‌ ಮಾಡಲಾಗಿದೆ. ಈ ಸಮಿತಿಯು ಆನ್‌ಲೈನ್‌ ಎಜುಕೇಷನ್‌ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಿದೆ ಎಂದು ಹೇಳಿದರು.


ಇದನ್ನೂ ಓದಿ: ಅಕ್ರಮ ಪಡಿತರ ಸಾಗಿಸುವ ಮಾಲೀಕರ ವಿರುದ್ಧ ಮೇಲೆ ಎಫ್​​ಐಆರ್​ ದಾಖಲಿಸಿ - ಸಚಿವ ಗೋಪಾಲಯ್ಯ


ಆನ್‌ಲೈನ್‌ ಕಲಿಕೆ ತರಗತಿಯಲ್ಲಿ ಜರುಗುವುದಕ್ಕೆ ಪರ್ಯಾಯವಲ್ಲ. ಶಾಲೆಗಳ ರಜೆ ಎಷ್ಟು ದಿನ ಇರುತ್ತೆ ಎಂಬುದು ಗೊತ್ತಿಲ್ಲ. ಇಂಥ‌ ಸಂದರ್ಭದಲ್ಲಿ‌‌ ಮಕ್ಕಳ ಕಲಿಕೆಗೆ  ತರಗತಿಗಳು ಇಲ್ಲದೇ‌ ಇರುವಾಗ ಕಲಿಕೆ‌ ನಿರಂತರವಾಗಿರುವುದು ಹೇಗೆ? ಇದನ್ನು ಚರ್ಚೆ‌ಮಾಡಿ ಮಾರ್ಗಸೂಚಿ‌ ತಯಾರಿಸಲಿಕ್ಕೆ ಸಮಿತಿ ರಚಿಸಲಾಗಿದೆ. ರೆಕಾರ್ಡೆಡ್ ಕ್ಲಾಸ್ ಎಷ್ಟು ತರಗತಿ ತೆಗೆದುಕೊಳ್ಳಬಹುದು. ರಜೆಯಲ್ಲಿ ಮಕ್ಕಳನ್ನು ಎಂಗೇಜ್ ಮಾಡುವುದು ಹೇಗೆ? ಎಂಬ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.


ವಿದ್ಯಾರ್ಥಿಗಳ ಪಠ್ಯವನ್ನು ಮಾತ್ರ ಹೇಳದೆ ಜ್ಞಾನ ತುಂಬಿಸುವ ಕೆಲಸ ಆಗುವ ನಿಟ್ಟಿನಲ್ಲಿ ಸಮಿತಿ ವರದಿ ನೀಡಲಿದೆ. ರಾಜ್ಯದಲ್ಲಿ ಶೇ.75ರಷ್ಟು ಜನ ಗ್ರಾಮೀಣ, ತಾಲೂಕು ಪ್ರದೇಶದವರಿದ್ದು, ಆನ್‌ಲೈನ್‌ ಶಿಕ್ಷಣದಿಂದ ವಂಚಿತರಾಗಬಾರದು. ಇರುವವರು, ಇಲ್ಲದವರು ಎಂಬ ಭಿನ್ನಾಭಿಪ್ರಾಯ ಬರಬಾರದು. ಈ ಕಾರಣಕ್ಕೆ ಸಮಿತಿ ಆದಷ್ಟು ಮಾರ್ಗಸೂಚಿ‌ ತಯಾರಿ‌ ಮಾಡಿ ಕೊಡಲಿದೆ ಎಂದರು.


ಆಗಸ್ಟ್​ವರೆಗೆ ಶಾಲೆ ತೆರೆಯಲ್ಲ


ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿ ಶಾಲೆ‌ ತೆರೆಯುವ ಕುರಿತು ಚರ್ಚೆಯಾಗುತ್ತಿದೆ.‌ ಶಾಲೆ‌ ತೆರೆಯುವ ಕುರಿತು ಪೋಷಕರ ಅಭಿಪ್ರಾಯ ಸಂಗ್ರಹವಾಗುತ್ತಿದೆ. ಈ ತಿಂಗಳ 10ರಿಂದ 20ರ ಜೂನ್‌ವರೆಗೆ ಪೋಷಕರ ಅಭಿಪ್ರಾಯ ಪಡೆಯಲಾಗುತ್ತದೆ. ಜುಲೈನಲ್ಲಿ ಶಾಲೆ ತೆರೆಯುವ ಮಾತೇ ಇಲ್ಲ. ಆಗಸ್ಟ್ 15ರ ನಂತರ ಶಾಲೆ ತೆರೆಯಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಆಗಿನ ಪರಿಸ್ಥಿತಿ ನೋಡಿಕೊಂಡು ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು ಸುರೇಶ್​ ಕುಮಾರ್.


ಎಸ್​ಎಸ್​ಎಲ್​​ಸಿ ಪರೀಕ್ಷೆಗೆ ರೆಡಿ


ಜೂನ್​ 25ರಿಂದ ಎಸ್​ಎಸ್​ಎಲ್‌ಸಿ ಪರೀಕ್ಷೆ ಜರುಗಲಿದೆ. ವಿಶೇಷ ಸಂದರ್ಭದಲ್ಲಿ ಪರೀಕ್ಷೆ‌ ನಡೆಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ನಿರ್ಣಯ ತೆಗೆದುಕೊಳ್ಳುವ ಮುನ್ನ ತಜ್ಞರು, ಪ್ರಮುಖರ ಜೊತೆ ಚರ್ಚಿಸಿದ್ದೇನೆ. ಮಕ್ಕಳ ಸುರಕ್ಷತೆ ಹೆಚ್ಚಿನ ಆದ್ಯತೆ, ಮಹತ್ವ ನೀಡಲಾಗುವುದು.‌ 34 ಶೈಕ್ಷಣಿಕ ಜಿಲ್ಲೆಗಳ ಶಿಕ್ಷಣ ತಂಡಗಳ ಜೊತೆ ಸಭೆ ನಡೆಸಿದ್ದೇನೆ. ಕಳೆದ 15 ದಿನಗಳಲ್ಲಿ 4 ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ಓಡಾಡಿದ್ದೇನೆ. ಮೈಕ್ರೋ ಲೆವೆಲ್ ಪ್ಲಾನಿಂಗ್ ಮಾಡಲಾಗಿದೆ ಎಂದರು.


ಇನ್ನು, ಪರೀಕ್ಷೆಗೆ ಆರೋಗ್ಯ, ಸಾರಿಗೆ ಹಾಗೂ ಗೃಹ ಇಲಾಖೆ ಕೈಜೋಡಿಸಲಾಗುತ್ತದೆ. ಶಾಸಕರು, ಜಿಪಂ ಸದಸ್ಯರು ಸಹಕಾರ ನೀಡಲಿದ್ದಾರೆ. 8.5 ಲಕ್ಷ ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಟ್ ಗೈಡ್ ಹಾಗೂ ಮತ್ತಿತರ ಸಂಸ್ಥೆಗಳು ಮಾಸ್ಕ್ ನೀಡಲಾಗುತ್ತದೆ. ವಿದ್ಯಾರ್ಥಿಗೆ ಕನಿಷ್ಟ ಎರಡು ಮಾಸ್ಕ್ ನೀಡಲಾಗವುದು. ಪ್ರತಿ ವಿದ್ಯಾರ್ಥಿಗೂ ಆರೋಗ್ಯ ತಪಾಸಣೆ, ಸ್ಯಾನಿಟೈಸರ್​​ ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗೆ ಅನಾರೋಗ್ಯವಿದ್ದರೆ ಪ್ರತ್ಯೇಕ‌ ಕೊಠಡಿಯಲ್ಲಿ ಪರೀಕ್ಷೆ ಬರೆಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.


ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಗೇ ಹೇಗೆ ಬರುತ್ತಾರೆ ಎಂಬ ಬಗ್ಗೆ ಶಾಲಾವಾರು ಮಾಹಿತಿ ಪಡೆದಿದ್ದೇವೆ. ರಾಜ್ಯದಲ್ಲಿ ಒಂದೇ ಒಂದು ಮಗುವಿಗೂ ಸಾರಿಗೆ ಕಾರಣಕ್ಕೆ ಪರೀಕ್ಷೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.


ಶುಲ್ಕ‌ ಹೆಚ್ಚಳ ಮಾಡುವಂತಿಲ್ಲ


ಈಗಾಗಲೇ ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳಿಗೆ ಹೆಚ್ಚಿನ ಶುಲ್ಕ ವಿಧಿಸುವಂತಿಲ್ಲ ಎಂದು ಸುತ್ತೋಲೆ‌ ಹೊರಡಿಸಲಾಗಿದೆ. ಕೋವಿಡ್​​-19 ವೈರಸ್​​ನಿಂದ ಸಾಕಷ್ಟು ಜನ ಕೆಲಸ‌ ಕಳೆದುಕೊಂಡಿದ್ದಾರೆ. ಈ ಬಾರಿ ಶಾಲೆಯವರು ಯಾರು ಫೀಸು ಹೆಚ್ಚಳ ಮಾಡಬಾರದು. ಖಾಸಗಿ ಶಾಲೆಗಳು ಶುಲ್ಕ‌ ಹೆಚ್ಚಳ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಒಂದು ಸಾವಿರ ದೂರುಗಳು ಬಂದಿದೆ. 350 ಪ್ರಕರಣ ಪರಿಹಾರವಾಗಿವೆ ಎಂದು ತಿಳಿಸಿದರು.

Published by:Ganesh Nachikethu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು