ಹಳೆ ಶೈಲಿ ರಾಜಕಾರಣ, ಹೊಂದಾಣಿಕೆ ಮತ್ತು ಘನತೆ; ಕೊರೋನಾ ಬಿಕ್ಕಟ್ಟಿನ ನಡುವೆ ಬಿಎಸ್​ವೈ ಸಿಎಂ ಸ್ಥಾನ ಭದ್ರಪಡಿಸಿಕೊಂಡ ಬಗೆ

BS Yediyurappa: ಲಾಕ್​ಡೌನ್​ ಮುಂಚಿನ ದಿನಗಳಲ್ಲಿ ಬಿಎಸ್​ವೈ ಅವರನ್ನು ಕೆಳಗಿಳಿಸಲು ಪಕ್ಷದೊಳಗಿನ ಶತ್ರುಗಳ ಅವರ ವಿರುದ್ಧ ಅಪಪ್ರಚಾರ ಆರಂಭಿಸಿದ್ದರು. ಆದರೆ, ಬಿಎಸ್​ವೈ ಅವರು ತಮ್ಮ ಹಳೆ ಶೈಲಿಯ ರಾಜಕಾರಣ ಮತ್ತು ಘನತೆಯಿಂದ ಹೋರಾಡುವ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಸಿಎಂ ಬಿ.ಎಸ್.ಯಡಿಯೂರಪ್ಪ

ಸಿಎಂ ಬಿ.ಎಸ್.ಯಡಿಯೂರಪ್ಪ

 • Share this:

  • ಡಿ.ಪಿ. ಸತೀಶ್

   ಬೆಂಗಳೂರು: ಕೊರೋನಾ ವೈರಸ್ ಸಂದಿಗ್ಧ ಪರಿಸ್ಥಿತಿಯ ಕಾಲದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿರುವಂತೆ ತೋರುತ್ತದೆ. ತಮ್ಮ ಸ್ಥಾನದಿಂದ ನಿರ್ಗಮಿಸಿ ವಿಶ್ರಾಂತಿಗೆ ತೆರಳಲಿದ್ದಾರೆ ಎಂದು ಎದ್ದಿದ್ದ ಎಲ್ಲ ಊಹಾಪೋಹಗಳಿಗೆ 78 ವರ್ಷದ ಬಿಜೆಪಿಯ ಹಿರಿಯ ಕಟ್ಟಾಳು ಕಳೆದ 50 ದಿನಗಳಲ್ಲಿ ಸಾಧಿಸಿದ ವಿಜಯಗಳಿಂದ ತೆರೆ ಎಳೆದಿದ್ದಾರೆ. ದೇಶದಲ್ಲಿ ಕೊರೋನಾ ವೈರಸ್ ಹೆಮ್ಮಾರಿಯಾಗಿ ಕಾಡುವ ಮುನ್ನ ಯಡಿಯೂರಪ್ಪ ಅವರ ಸ್ಥಾನ ಅಲುಗಾಡುತ್ತಿತ್ತು. ಅವರ ವಯಸ್ಸು ಮತ್ತು ಇತರೆ ಆಂತರಿಕ ವಿಚಾರವಾಗಿ ಬಿಎಸ್​ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಲಾಗುತ್ತದೆ ಎಂಬ ಗಾಳಿಸುದ್ದಿಗಳು ಹರಿದಾಡುತ್ತಿದ್ದವು. ಈ ಬಗ್ಗೆ ಸ್ವತಃ ಬಿಎಸ್​ವೈ ಕೂಡ ಚಿಂತಿತರಾಗಿದ್ದು ಎದ್ದು ಕಾಣುತ್ತಿತ್ತು.


  ಚತುರ ರಾಜಕಾರಣಿ ಹಾಗೂ ಅನುಭವಿ ಆಡಳಿತಗಾರರಾದ ಯಡಿಯೂರಪ್ಪ ಅವರು ಗಂಭೀರ ಬಿಕ್ಕಟ್ಟಿನ ಸಂದರ್ಭದಲ್ಲಿ ಸಿಕ್ಕ ಅವಕಾಶವನ್ನು ಅದ್ಬುತವಾಗಿಯೇ ಬಳಸಿಕೊಂಡಿದ್ದಾರೆ. ಆರಂಭಿಕ ಅಡೆತಡೆಗಳನ್ನು ಹೊರತುಪಡಿಸಿ, ನಂತರದಲ್ಲಿ ಇಡೀ ಪರಿಸ್ಥಿತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಅಂದಿನಿಂದ ಕೊರೋನಾ ಯುದ್ಧದಲ್ಲಿ ಮುಂದಾಳತ್ವ ವಹಿಸಿಕೊಂಡು ಮುನ್ನಡೆಯುತ್ತಿದ್ದಾರೆ.

  ಸಂಕಷ್ಟ ಸಮಯದಲ್ಲಿ ಎಲ್ಲರೂ ಒಂದಾಗಿ ಸಾಗುವಂತೆ ಬಿಎಸ್​ವೈ ಅವರು ಮೊದಲಿಗೆ ಎಲ್ಲ ಪಕ್ಷಗಳ ಪ್ರಮುಖ ಮುಖಂಡರೊಂದಿಗೆ ಸಭೆ ನಡೆಸಿದರು. ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ರಾಜಕೀಯ ಬೇಡ. ಈ ಬಿಕ್ಕಟ್ಟಿನಲ್ಲಿ ಏಕ ವ್ಯಕ್ತಿಗೆ ಸ್ಥಾನವಿಲ್ಲ ಎಂದು ಘೋಷಿಸಿದರು. ಅವರ ಬುದ್ಧಿವಂತ ನಡೆ ಉದ್ವಿಗ್ನತೆಯನ್ನು ತಗ್ಗಿಸಿತು ಮತ್ತು ಕಾಂಗ್ರೆಸ್ ಹಾಗೂ ಜೆಡಿಎಸ್ ಅವರಿಗೆ ಸಂಪೂರ್ಣ ಬೆಂಬಲ ನೀಡುವಂತೆ ಮಾಡಿತು.

  ತಬ್ಲಿಘಿ ಜಮಾತ್​ ಸಭೆ ಒಂದು ಕೋಮಿನ ವಿಚಾರವಾಗಿ ತಿರುಗಿದಾಗ ಸಿಎಂ ಬಿಎಸ್​ವೈ ಅವರು ದೃಢವಾದ ಹೆಜ್ಜೆ ಇಟ್ಟರು. ಮತ್ತು ಮಾರಕ ಕೊರೋನಾ ವೈರಸ್​ ಹರಡುವಿಕೆಯಲ್ಲಿ ಒಂದು ಸಮುದಾಯವನ್ನು ಗುರಿಮಾಡಿ, ದೂಷಿಸುವುದು ತಪ್ಪು ಎಂದು ಘೋಷಿಸಿದರು. ಮಾಧ್ಯಮಗಳಿಗೆ ಸರಣಿ ಸಂದರ್ಶನ ನೀಡಿ, ತಮ್ಮ ದೃಢ ನಿಲುವು ವ್ಯಕ್ತಪಡಿಸಿದರು. ಕೋಮುವಾದ ಹರಡುವವರು ಯಾರೇ ಆದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದರು. ಇದು ತಮ್ಮದೇ ಪಕ್ಷದ ಕೆಲ ಉಗ್ರ ಹಿಂದೂವಾದಿಗಳ ಕೋಪಕ್ಕೂ ಕಾರಣವಾಯಿತು. ಆದರೆ, ಯಡಿಯೂರಪ್ಪ ಅವರ ನಿಲುವಿಗೆ ಇತರರು ಪ್ರಶಂಸೆ ವ್ಯಕ್ತಪಡಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್​ ಅವರ ರಕ್ಷಣೆಗೆ ನಿಲ್ಲಬೇಕಾಯಿತು.

  ಕೆಲವು ದಿನಗಳ ನಂತರ ಪ್ರಧಾನಿ ಮೋದಿ ಮತ್ತು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಬಿಎಸ್​ವೈ ಅವರ ನಿಲುವನ್ನು ಸಮರ್ಥಿಸಿಕೊಂಡರು.

  ದೀರ್ಘಕಾಲದ ಮಧುಮೇಹಿಯಾಗಿರುವ ಯಡಿಯೂರಪ್ಪ ಅವರು ದಿನವಿಡೀ ಬಿಡುವಿಲ್ಲದ ಹಾಗೆ ಕೆಲಸ ಮಾಡುತ್ತಿದ್ದಾರೆ. ದಿನದಲ್ಲಿ ಡಜನ್​ಗೂ ಹೆಚ್ಚು ಸಭೆಗಳನ್ನು ನಡೆಸುತ್ತಿದ್ದಾರೆ. ಕೊರೋನಾದ ಕ್ಷಣಕ್ಷಣದ ಮಾಹಿತಿ ಪಡೆಯುವ ಸಲುವಾಗಿ ಬೆಳಗ್ಗೆ ಆರು ಗಂಟೆಯಿಂದಲೇ ಅಧಿಕಾರಿಗಳು ಮತ್ತು ಸಚಿವರಿಗೆ ಕರೆ ಮಾಡುತ್ತಾರೆ. ಅದು ಮಧ್ಯರಾತ್ರಿಯವರೆಗೂ ಮುಂದುವರೆಯುತ್ತದೆ ಎಂದು ಬಿಎಸ್​ವೈ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವ ಉನ್ನತ ಅಧಿಕಾರಿಗಳು ಹೇಳುತ್ತಾರೆ.

  "ಕಳೆದ 45 ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಹಲವು ನೂರಾರಯ ಸಭೆಗಳನ್ನು ನಡೆಸಿದ್ದಾರೆ. ಅವರು ಸಾಮರಸ್ಯ, ಹೊಂದಾಣಿಕೆಯನ್ನು ನಂಬುತ್ತಾರೆ, ಏಕವ್ಯಕ್ತಿಯನ್ನಲ್ಲ. ಅವರು ಹೊಡೆದಾಟ, ಕಚ್ಚಾಟಗಳಿಂದ ದೂರವಿರಲು ಬಯಸುತ್ತಾರೆ. ಬಿಎಸ್​ವೈ ನಿಜವಾದ ನಾಯಕ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಅವರು ನಿಭಾಯಿಸುತ್ತಿರುವ ರೀತಿ ಕಂಡು ನಾವು ಸಹ ಆಶ್ಚರ್ಯಚಕಿತರಾಗಿದ್ದೇವೆ," ಎಂದು ಹಿರಿಯ ಐಎಎಸ್​ ಅಧಿಕಾರಿಯೊಬ್ಬರು ಹೇಳುತ್ತಾರೆ.

  ಕಳೆದ ಎರಡು ವರ್ಷಗಳ ಹಿಂದಿನ ಭೀಕರ ಪ್ರವಾಹ ಮತ್ತು ಇದೀಗ ಕೊರೋನಾ ವೈರಸ್ ಸಮಯದಲ್ಲಿ ಈಗಾಗಲೇ ಕುಸಿದಿದ್ದ ರಾಜ್ಯದ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಉಲ್ಭಣಗೊಳಿಸಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಬಾಕಿ ಹಣ ಪಾವತಿಸದೆ ಇರುವುದು ಮತ್ತಷ್ಟು ಸಮಸ್ಯೆಗಳನ್ನು ಉಂಟು ಮಾಡಿದೆ.

  "ಅವರು ಹೇಗಾದರೂ ಮಾಡಿ ಕೊರೋನಾ ನಂತರದ ಹಣಕಾಸು ಪರಿಸ್ಥಿತಿಯನ್ನು ನಿರ್ವಹಿಸಿದರೆ, ಅವರು ತಮ್ಮ ಅವಧಿಯ ಉಳಿದ ಭಾಗವನ್ನು ಪೂರ್ಣಗೊಳಿಸುತ್ತಾರೆ. ಈ ಬಗ್ಗೆ ಅವರಿಗೂ ತಿಳಿದಿದೆ. ಅದಕ್ಕಾಗಿಯೇ ಅವರು ರಾಜ್ಯದ ಆರ್ಥಿಕ ಚಟುವಟಿಕೆಗಳನ್ನು ಶೀಘ್ರವಾಗಿ ಪುನರಾರಂಭಿಸಲು ಉತ್ಸುಕರಾಗಿದ್ದಾರೆ. ಅವರನ್ನು ವಿರೋಧಿಸುವವರು ಕೂಡ ಈಗ ಸುಮ್ಮನಿದ್ದಾರೆ. ಈ ಬಿಕ್ಕಟ್ಟನ್ನು ಅವರು ಇಷ್ಟೊಂದು ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಹೋಗುತ್ತಾರೆ ಎಂದು ಅವರ್ಯಾರು ನಿರೀಕ್ಷಿಸಿರಲಿಲ್ಲ," ಎಂದು ಬಿಎಸ್​ವೈ ಅವರ ಆಪ್ತ ಹಿರಿಯ ಸಚಿವರೊಬ್ಬರು ಹೇಳುತ್ತಾರೆ.

  ಆದಾಗ್ಯು. ಮುಂದೆ ನಿಜವಾದ ಸವಾಲು ಎದುರಾಗಲಿದೆ. ಕರ್ನಾಟಕ ಅನಿಶ್ಚಿತ ಭವಿಷ್ಯವನ್ನು ಎದುರು ನೋಡಲಿದೆ ಎಂದು ರಾಜ್ಯದ ಉನ್ನತ ಕೈಗಾರಿಕೋದ್ಯಮಿಯೊಬ್ಬರು ಹೇಳುತ್ತಾರೆ. ಲಾಕ್​ಡೌನ್​ನಿಂದಾಗಿ ಗ್ರಾಮೀಣ ಆರ್ಥಿಕತೆ ಸಂಪೂರ್ಣ ಕುಸಿದಿದೆ. ಕಳೆದ ವರ್ಷದ ಸಮೃದ್ಧ ಮುಂಗಾರುವಿನಿಂದ ಬಂಪರ್ ಬೆಳೆ ಬಂದಿತ್ತು. ಆದರೆ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಬೇಡಿಕೆಯ ಕುಸಿತವು ರೈತರ ಬೆನ್ನನ್ನು ಬಹುತೇಕ ಮುರಿದುಬಿಟ್ಟಿದೆ.

  ಇದನ್ನು ಓದಿ: ಕರ್ನಾಟಕದಲ್ಲಿ 20 ಸಾವಿರ ಕೊರೋನಾ ಪ್ರಕರಣ ದಾಖಲಾದರೂ ಚಿಕಿತ್ಸೆ ನೀಡಲು ಸಿದ್ಧವಿದೆ ಸರ್ಕಾರ!

  ನ್ಯೂಸ್​ 18 ನೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿಎಸ್​ವೈ ಅವರು ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರನ್ನು ಉಳಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. "ಗ್ರಾಮೀಣ ಆರ್ಥಿಕತೆಯನ್ನು ಮತ್ತೆ ಹಳಿ ಮೇಲೆ ತರಲು ನಾವು ಹಲವು ಯೋಜನೆಗಳನ್ನು ರೂಪಿಸಲಿದ್ದೇವೆ. ಇದೊಂದು ಅನಿರೀಕ್ಷಿತ ಪರಿಸ್ಥಿತಿ. ಇದರಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸವಿದೆ. ಕೈಗಾರಿಕೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅವರೊಂದಿಗೆ ಸರಣಿ ಸಭೆಗಳನ್ನು ನಡೆಸಲಾಗಿದೆ," ಎಂದು ತಿಳಿಸಿದರು.

  ಲಾಕ್​ಡೌನ್​ ಮುಂಚಿನ ದಿನಗಳಲ್ಲಿ ಬಿಎಸ್​ವೈ ಅವರನ್ನು ಕೆಳಗಿಳಿಸಲು ಪಕ್ಷದೊಳಗಿನ ಶತ್ರುಗಳ ಅವರ ವಿರುದ್ಧ ಅಪಪ್ರಚಾರ ಆರಂಭಿಸಿದ್ದರು. ಆದರೆ, ಬಿಎಸ್​ವೈ ಅವರು ತಮ್ಮ ಹಳೆ ಶೈಲಿಯ ರಾಜಕಾರಣ ಮತ್ತು ಘನತೆಯಿಂದ ಹೋರಾಡುವ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
  First published: