ಬೀದಿಗೆ ಬಿದ್ದ ವೃದ್ಧ ದಂಪತಿ; ಮಡಿಕೇರಿ ಬಸ್ ನಿಲ್ದಾಣ ಸ್ವಚ್ಛಗೊಳಿಸುತ್ತಿದ್ದವರ ಬದುಕು ಹೈರಾಣ

ಈ ಸ್ಥಿತಿಯನ್ನು ಕೆಲವು ತಿಂಗಳಿಂದ ಗಮನಿಸುತ್ತಿದ್ದ ಬಾರ್ ಒಂದರ ಮಾಲೀಕ ಪ್ರತೀ ದಿನ ಇವರಿಗೆ ಊಟ ತಿಂಡಿ ಪೂರೈಸುತ್ತಿದ್ದರು. ಆದರೀಗ ಖಾಸಗೀ ಜಾಗದ ಮಾಲೀಕ ಈ ಗುಡಿಸಲುಗಳನ್ನು ಕೀಳಿಸಿ ಜಾಗವನ್ನು ಸ್ವಚ್ಚಗೊಳಿಸಲು ಮುಂದಾಗಿರುವುದರಿಂದ ವೃದ್ಧ ದಂಪತಿ ಪಾಲಿಗೆ ನಿಲ್ಲುವುದಕ್ಕೂ ಸೂರು ಇಲ್ಲದಂತಾಗಿದೆ.

ಕೊರೋನಾದಿಂದ ಬೀದಿಗೆ ಬಂದ ವೃದ್ದ ದಂಪತಿ

ಕೊರೋನಾದಿಂದ ಬೀದಿಗೆ ಬಂದ ವೃದ್ದ ದಂಪತಿ

  • Share this:
ಕೊಡಗು(ಜು. 16): ಈ ಕುಟುಂಬ ಸಾವಿರಾರು ಪ್ರಯಾಣಿಕರಿಗಾಗಿ ಬಸ್ ನಿಲ್ದಾಣವನ್ನು ಬದುಕಿಡೀ ಸ್ವಚ್ಚತೆ ಮಾಡುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ಬಂದ ಕೊರೋನಾ ಮಹಾಮಾರಿ ಇವರ ಸ್ವಚ್ಛತೆ ಮಾಡುವ ಕೂಲಿಯನ್ನೂ ಕಿತ್ತುಕೊಂಡಿತು. ಬದುಕಿಡೀ ಬಸ್ ನಿಲ್ದಾಣವನ್ನೇ ಸ್ವಚ್ಚತೆ ಮಾಡಿದ್ದ ಈ ವೃದ್ಧ ಕುಟುಂಬಕ್ಕೀಗ ನಿಲ್ಲೋದಕ್ಕೂ ಸೂರು ಇಲ್ಲದೆ ಬೀದಿಗೆ ಬಿದ್ದಿದೆ. 

ಕೊಡಗು ಎಂದ ಕೂಡಲೇ ಕಾಫಿ ಎಸ್ಟೇಟ್, ಪ್ರವಾಸೋದ್ಯಮ ಇವೆಲ್ಲವೂ ಕಣ್ಮುಂದೆ ಬಂದು ಬಿಡುತ್ತವೆ. ಮಡಿಕೇರಿ ಹೆಸರು ಕೇಳಿದ ಕೂಡಲೇ ಸ್ವಚ್ಚ ಸುಂದರ ಎಲ್ಲೆವೂ ನೆನಪಿಗೆ ಬರುತ್ತವೆ. ಹೀಗೆ ಸ್ವಚ್ಚವಾದ ಮಡಿಕೇರಿಯನ್ನಾಗಿಸಲು ಈ ಕುಟುಂಬ ಬದುಕಿಡೀ ದುಡಿದಿದೆ.

ಹೌದು, ಮಡಿಕೇರಿಯ ಬಸ್ ನಿಲ್ದಾಣದಲ್ಲಿ ಹತ್ತಾರು ವರ್ಷಗಳಿಂದ ಸ್ವಚ್ಚತಾ ಕಾರ್ಮಿಕರಾಗಿ ಈ ವೃದ್ಧ ದಂಪತಿ ದುಡಿಯುತ್ತಿದ್ದರು. ಅಲ್ಲಿಯೇ ಒಂದು ಮೂಲೆಯಲ್ಲಿ ವಾಸವೂ ಇದ್ದರು. ಆದರೆ ಕೊರೋನಾ ಮಹಾಮಾರಿ ಲಾಕ್ ಡೌನ್ ಮೂಲಕ ಈ ವೃದ್ಧ ಕಾರ್ಮಿಕರ ಸ್ವಚ್ಚತಾ ಕೆಲಸವನ್ನೂ ಕಿತ್ತುಕೊಂಡಿದೆ. ಇದೀಗ ಕೂಲಿಯೂ ಇಲ್ಲದೆ ಸೂರು ಇಲ್ಲದೆ ಖಾಸಗೀ ಜಾಗದಲ್ಲಿ ಗುಡಿಸಲು ಹಾಕಿ ಬದುಕು ದೂಡುತ್ತಿತ್ತು. ಆದರೀಗ ಆ ಖಾಸಗಿ ಸ್ಥಳದಿಂದಲೂ ಬೀದಿಗೆ ಬೀಳುವ ಸ್ಥಿತಿ ಎದುರಾಗಿದೆ.

ಬಸ್ಸಿನಿಂದ ಒಮ್ಮೆ ಬಿದ್ದು ಸೊಂಟ ಮುರಿದುಕೊಂಡಿದ್ದ ವೃದ್ಧೆ ಜಯಮ್ಮ ತೆವಳುವುದಕ್ಕೂ ಆಗುವುದಿಲ್ಲ. ಮಲಗಿದ್ದಲೇ ಜೀವ ಕೈಯಲ್ಲಿ ಹಿಡಿದು ಬದುಕಿದೆ. ಹೆಚ್ಚೆಂದರೆ ಮಲಗಿದ ಜಾಗದಲ್ಲೇ ಎದ್ದು ಕುಳಿತುಕೊಳ್ಳುತ್ತಾರೆ. ಇನ್ನು ಕಣ್ಣು ಕಾಣದ ಪತಿ ಚಿಕ್ಕ, ಪತ್ನಿಯ ಸ್ಥಿತಿ ನೋಡಿ ಕಣ್ಣೀರುಡುತ್ತಿದ್ದಾರೆ. ದಿಕ್ಕು ದೆಸೆಯಿಲ್ಲದ ಈ ವೃದ್ಧ ದಂಪತಿ ಕನಿಷ್ಠ ಊಟಕ್ಕೂ ಗತಿ ಇಲ್ಲದೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

ಇಳಿ ವಯಸ್ಸಿನಲ್ಲಿ ಮಕ್ಕಳ ಆಶ್ರಯದಲ್ಲಿ ಇರಬೇಕಾದ ಈ ಜೀವಗಳು, ಇದುವರೆಗೆ ಬಸ್ ನಿಲ್ದಾಣದಲ್ಲಿ ಕೆಲಸ ಮಾಡುತ್ತಾ, ಖಾಸಗಿ ಜಾಗದಲ್ಲಿ ಗುಡಿಸಲು ಹಾಕಿ, ಹೇಗೋ ಕಾಲ ಕಳೆಯುತ್ತಿದ್ದವು. ಆದರೆ ಜಾಗದ ಮಾಲೀಕ ಆ ಗುಡಿಸಲುಗಳನ್ನು ಕಿತ್ತು, ಇಡೀ ನಿವೇಶನವನ್ನು ಸ್ವಚ್ಚಗೊಳಿಸಲು ಮುಂದಾಗಿದ್ದಾರೆ. ಹೀಗಾಗಿ ವೃದ್ಧ ಕುಟುಂಬ ಬೀದಿಗೆ ಬೀಳುವಂತಾಗಿದೆ.

ಈ ಸ್ಥಿತಿಯನ್ನು ಕೆಲವು ತಿಂಗಳಿಂದ ಗಮನಿಸುತ್ತಿದ್ದ ಬಾರ್ ಒಂದರ ಮಾಲೀಕ ಪ್ರತೀ ದಿನ ಇವರಿಗೆ ಊಟ ತಿಂಡಿ ಪೂರೈಸುತ್ತಿದ್ದರು. ಆದರೀಗ ಖಾಸಗೀ ಜಾಗದ ಮಾಲೀಕ ಈ ಗುಡಿಸಲುಗಳನ್ನು ಕೀಳಿಸಿ ಜಾಗವನ್ನು ಸ್ವಚ್ಚಗೊಳಿಸಲು ಮುಂದಾಗಿರುವುದರಿಂದ ವೃದ್ಧ ದಂಪತಿ ಪಾಲಿಗೆ ನಿಲ್ಲುವುದಕ್ಕೂ ಸೂರು ಇಲ್ಲದಂತಾಗಿದೆ.

ಕೊಡಗಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಗುಡಿಸಲು ಬಿಟ್ಟು ಎಲ್ಲಿಗೆ ಹೋಗೋದೆಂದು ದಂಪತಿಗಳಿಬ್ಬರು ಕಣ್ಣೀರು ಸುರಿತ್ತಿದ್ದಾರೆ. ಈ ಸ್ಥಿತಿಯನ್ನು ಕಂಡರೆ ಎಂತವರಿಗೂ ಕರುಳು ಹಿಂಡುತ್ತದೆ. ಹೀಗಾಗಿ ಇದುವರೆಗೆ ಊಟ ತಿಂಡಿ ಪೂರೈಸುತ್ತಿದ್ದ ಬಾರ್ ಮಾಲೀಕ, ಯಾರಾದರೂ ಸಹಾಯ ಮಾಡಿ ಪ್ಲೀಸ್ ಇವರನ್ನು ಕನಿಷ್ಠ ಯಾವುದಾದರೂ ವೃದ್ಧಾಶ್ರಮಕ್ಕೆ ಸೇರಿಸೋಣ ಎಂದು ಸಹಾಯ ಕೇಳುತ್ತಿದ್ದಾರೆ.

ಇದನ್ನೂ ಓದಿ: ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ ನೀಡಲು ರಾಜ್ಯ ಸರ್ಕಾರದ ಆದೇಶ

ಒಟ್ಟಿನಲ್ಲಿ ಹೆಗಲೇರಿದವರ ಪ್ರಾಣ ಹಿಂಡುತ್ತಿರುವ ಮಹಾಮಾರಿ, ವೃದ್ಧ ದಂಪತಿಗಳ ಕೂಲಿಗೂ ಕುತ್ತು ತಂದು, ಬದುಕಿಗೆ ಕಂಟಕವಾಗಿದೆ. ಪ್ರಯಾಣಿಕರಿಗಾಗಿ ಬಸ್ ನಿಲ್ದಾಣವನ್ನು ಸ್ವಚ್ಛವಾಗಿಸುತ್ತಿದ್ದ ಈ ವೃದ್ದ ದಂಪತಿಗೆ, ನಿಲ್ಲುವುದಕ್ಕೂ ನೆಲೆ ಇಲ್ಲದಂತಾಗಿರುವುದು ಎಂಥವರು ಮರುಗುವಂತೆ ಮಾಡಿದೆ.
Published by:Ganesh Nachikethu
First published: