ಉಬರ್‌ ಬೆನ್ನಿಗೆ ಉದ್ಯೋಗ ಕಡಿತಕ್ಕೆ ಮುಂದಾದ ಓಲಾ; ನಷ್ಟದ ಕಾರಣಕ್ಕೆ 1,400 ಜನರನ್ನು ಹೊರಹಾಕಿದ ಕಂಪೆನಿ

ಕೊರೋನಾ ಹರಡದಂತೆ ತಡೆಯುವ ಸಲುವಾಗಿ ಘೋಷಿಸಲಾದ ಲಾಕ್‌ಡೌನ್‌ ಕಾರಣದಿಂದಾಗಿ ಕಳೆದ ಎರಡು ತಿಂಗಳಲ್ಲಿ ಕಂಪೆನಿಯ ಆದಾಯ ಶೇ.95 ರಷ್ಟು ಕುಸಿದಿದೆ. ಹೀಗಾಗಿ ಉದ್ಯೋಗ ಕಡಿತ ಅನಿವಾರ್ಯ ಎಂದು ಓಲಾ ಕಂಪೆನಿಯ ಆಡಳಿತ ವರ್ಗ ತಿಳಿಸಿದೆ.

ಓಲಾ ಕ್ಯಾಬ್​​ಗಳು

ಓಲಾ ಕ್ಯಾಬ್​​ಗಳು

  • Share this:
ಕೊರೋನಾ ಮತ್ತು ಲಾಕ್‌ಡೌನ್ ಹಿನ್ನೆಲೆಯಲ್ಲಿ ಉಬರ್ 6,500 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ ಬೆನ್ನಿಗೆ ಓಲಾ ಕಂಪೆನಿಯೂ ಸಹ ಸುಮಾರು 1,400 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವುದಾಗಿ ಇಂದು ಅಧೀಕೃತವಾಗಿ ಘೋಷಿಸಿದೆ.

ಈ ಕುರಿತು ಟಿಪ್ಪಣಿ ಬಿಡುಗಡೆ ಮಾಡಿರುವ ಓಲಾ ಕಂಪೆನಿ ಸಿಇಓ ಭಾವೀಶ್ ಅಗರ್ವಾಲ್, “ಕೊರೋನಾ ಹರಡದಂತೆ ತಡೆಯುವ ಸಲುವಾಗಿ ಘೋಷಿಸಲಾದ ಲಾಕ್‌ಡೌನ್‌ ಕಾರಣದಿಂದಾಗಿ ಕಳೆದ ಎರಡು ತಿಂಗಳಲ್ಲಿ ಕಂಪೆನಿಯ ಆದಾಯ ಶೇ.95 ರಷ್ಟು ಕುಸಿದಿದೆ. ಹೀಗಾಗಿ ಉದ್ಯೋಗ ಕಡಿತ ಅನಿವಾರ್ಯ” ಎಂದು ತಿಳಿಸಿದ್ದಾರೆ.

ಇನ್ನೂ ಉದ್ಯೋಗ ಕಡಿತದ ಬಗ್ಗೆ ಕಂಪೆನಿ ಉದ್ಯೋಗಿಗಳಿಗೆ ಇ-ಮೇಲ್ ಮೂಲಕ ಸಂದೇಶ ನೀಡಿರುವ ಓಲಾ, “ಲಾಕ್‌ಡೌನ್ ಸಂದರ್ಭದಲ್ಲಿ ಕಂಪೆನಿಗೆ ಉಂಟಾಗಿರುವ ನಷ್ಟ ಅಸ್ಪಷ್ಟ ಮತ್ತು ಅನಿಶ್ಚಿತವಾಗಿದೆ. ಅಲ್ಲದೆ, ಈ ಸಮಸ್ಯೆ ಖಂಡಿತವಾಗಿಯೂ ದೀರ್ಘಾವಧಿಯವರೆಗೆ ಕಾಡುವ ಸಾಧ್ಯತೆ ಇದೆ. ಹೀಗಾಗಿ ಭಾರತದಾದ್ಯಂತ ಇರುವ ನಮ್ಮ ನೌಕರರ ಲಕ್ಷಾಂತರ ಕುಟುಂಬಗಳ ಜೀವನೋಪಾಯದ ಮೇಲೆ ಇದು ಪರಿಣಾಮ ಬೀರಲಿದೆ” ಎಂದು ಭಾವೀಶ್ ಅಗರ್ವಾಲ್ ವಿಷಾಧಿಸಿದ್ದಾರೆ.
ನಷ್ಟದ ಕುರಿತು ಮಾತನಾಡಿರುವ ಅವರು, “ಲಾಕ್‌ಡೌನ್‌ನಿಂದಾಗಿ ಹೆಚ್ಚಿನ ಕಂಪೆನಿಗಳು ತಮ್ಮ ನೌಕರರನ್ನು ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ. ಮನೆಯಿಂದ ಕೆಲಸ ಮಾಡುವ ಅವಧಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ, ಕೊರೋನಾ ಭಯದಿಂದ ವಿಮಾನಯಾನವನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಓಲಾ ಕಂಪೆನಿಗೆ ನಷ್ಟ ಉಂಟಾಗಲು ಇದೇ ಪ್ರಮುಖ ಕಾರಣ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ, ಓಲಾ ಕಂಪೆನಿಯ ಉದ್ಯೋಗದಿಂದ ವಜಾ ಮಾಡಲಾಗುತ್ತಿರುವ ಎಲ್ಲಾ ನೌಕರರಿಗೂ ನೊಟೀಸ್ ಅವಧಿ ಲೆಕ್ಕಿಸದೆ ಮೂರು ತಿಂಗಳ ಸಂಬಳವನ್ನು ನೀಡಲು ತೀರ್ಮಾನಿಸಲಾಗಿದೆ. ನಮ್ಮ ಕಂಪೆನಿಯಲ್ಲಿ ಹೆಚ್ಚು ಸಮಯ ಕೆಲಸ ಮಾಡಿದವರು ಹೆಚ್ಚು ಹಣ ಪಾವತಿಗೆ ಅರ್ಹರಾಗುತ್ತಾರೆ” ಎಂದು ಓಲಾ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ : ಹಳ್ಳಿಗೆ ಹಿಂದಿರುಗಿದ ಎಲ್ಲರಿಗೂ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಕೆಲಸ ನೀಡಿ; ಯಡಿಯೂರಪ್ಪ ಸೂಚನೆ
First published: