news18-kannada Updated:April 14, 2020, 5:56 PM IST
ಕಾರವಾರ ನಗರ
ಕಾರವಾರ(ಏ.14): ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಜೋರಾಗಿದ್ದು ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಸೋಂಕು ವ್ಯಾಪಿಸಿಕೊಂಡಿದೆ. ಕೆಲವೊಂದು ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಆಡಳಿತಾಧಿಕಾರಿಗಳು ಹರಸಾಹಸವನ್ನೇ ಪಡುತ್ತಿದ್ದು, ಲಾಕ್ ಡೌನ್ ನಿಯಮಗಳನ್ನ ಪಾಲನೆ ಮಾಡುವಲ್ಲಿ ವಿಫಲವಾಗಿವೆ. ಆದರೆ, ಉತ್ತರಕನ್ನಡ ಜಿಲ್ಲೆಯಲ್ಲಿ ಮಾತ್ರ ಕೊರೋನಾ ವೈರಸ್ ಹರಡುವಿಕ್ಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಣದಲ್ಲಿರಿಸಿದ್ದು ಒಂದೇ ತಾಲ್ಲೂಕಿಗೆ ಸೀಮಿತವಾಗುವಂತೆ ಮಾಡುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಸದ್ಯ ಎಲ್ಲಿ ನೋಡಿದರೂ ಕೊರೋನಾ ಸೋಂಕಿನದ್ದೇ ಕಾರುಬಾರಾಗಿದ್ದು ರಾಜ್ಯದ ಕೆಲವೇ ಜಿಲ್ಲೆಗಳು ಸೋಂಕಿನಿಂದ ಬಚಾವಾಗಿವೆ. ಈಗಾಗಲೇ ಕೊರೋನಾ ಸೋಂಕು ತಗುಲಿಸಿಕೊಂಡಿರುವ ಜಿಲ್ಲೆಗಳಲ್ಲಿ ಅದರ ನಿಯಂತ್ರಣ ಮಾಡುವುದು ಹರಸಾಹಸ ಎನ್ನುವಂತಾಗಿದ್ದು ಆದರೆ, ಉತ್ತರಕನ್ನಡ ಜಿಲ್ಲೆ ಮಾತ್ರ ಕೊರೊನಾ ನಿಯಂತ್ರಣದಲ್ಲಿ ಒಂದು ಹೆಜ್ಜೆ ಮುಂದೆ ಇದೆ. ಜಿಲ್ಲೆಯಲ್ಲಿ ಇದುವರೆಗೆ ಮಂಗಳೂರಿನಲ್ಲಿ ಓರ್ವ ಸೇರಿದಂತೆ ಒಟ್ಟೂ 10 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಪತ್ತೆಯಾದ ಎಲ್ಲ ಪ್ರಕರಣಗಳೂ ಭಟ್ಕಳ ತಾಲ್ಲೂಕಿನಲ್ಲಿ ಮಾತ್ರ ಕಂಡುಬಂದಿದ್ದು, ಜಿಲ್ಲೆಯಲ್ಲಿ ಕೊರೋನಾ ಹಬ್ಬದಂತೆ ಜಿಲ್ಲಾಡಳಿತ ಮುಂಜಾಗ್ರತೆ ವಹಿಸಿರುವುದಕ್ಕೆ ಮಾದರಿ ಎನ್ನುವಂತಿದೆ.
ಜಿಲ್ಲೆಯಲ್ಲಿ ಇದುವರೆಗೆ ಮಂಗಳೂರಿನಲ್ಲಿ ಒಂದು ಪ್ರಕರಣ ಸೇರಿದಂತೆ 10 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಎಲ್ಲ ಪ್ರಕರಣಗಳೂ ಸಹ ಭಟ್ಕಳ ತಾಲ್ಲೂಕಿನಲ್ಲೇ ಕಂಡುಬಂದಿದ್ದು ಜಿಲ್ಲಾಡಳಿತ ಮೊದಲೇ ಮುನ್ನೆಚ್ಚರಿಕೆ ವಹಿಸಿ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಿತ್ತು. ಬಳಿಕ ಭಟ್ಕಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತದೆ ಎನ್ನುವುದನ್ನ ಅರಿತ ಜಿಲ್ಲಾಡಳಿತ ಭಟ್ಕಳ ಉಪವಿಭಾಗವನ್ನ ಲಾಕ್ಡೌನ್ ಮಾಡಿದ್ದು ಇದಾದ ಬಳಿಕ ಜಿಲ್ಲೆಯಲ್ಲೂ ಲಾಕ್ಡೌನ್ ಜಾರಿಯಾಗಿತ್ತು.
ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡದಂತೆ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದು, ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ನೂತನವಾಗಿ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಶಿವರಾಂ ಹೆಬ್ಬಾರ್ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನು ಮಾರ್ಚ್ 19ರಂದು ದುಬೈನಿಂದ ವಾಪಸ್ಸಾಗಿದ್ದ ಜಿಲ್ಲೆಯ ಭಟ್ಕಳ ಮೂಲದ ವ್ಯಕ್ತಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಗಾಗಿದ್ದ ವೇಳೆ ಮೊದಲ ಕೊರೋನಾ ಸೋಂಕು ಪತ್ತೆಯಾಗಿತ್ತು. ಬಳಿಕ ಮಾರ್ಚ್ 24ರಂದು ದುಬೈನಿಂದ ವಾಪಸ್ಸಾಗಿದ್ದ ಭಟ್ಕಳ ಮೂಲಕ ಇನ್ನಿಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿತ್ತು. ಇದಾದ ಬಳಿಕ ಮಾರ್ಚ್ 27ರಂದು ದುಬೈನಿಂದ ಮರಳಿದ್ದ 22 ವರ್ಷದ ಓರ್ವ ಯುವಕ, ಮಾರ್ಚ್ 28 ರಂದು ಎರಡನೇಯ ಕೊರೋನಾ ಪೀಡಿತನಿಂದ ಆತನ ಮೂವರು ಕುಟುಂಬಸ್ಥರಿಗೆ ಸೋಂಕು ತಗುಲಿರುವುದು ಖಚಿತವಾಗಿತ್ತು.
ಮೂರನೇಯ ಕೊರೊನಾ ಸೋಂಕಿತನನ್ನ ಕರೆತಂದಿದ್ದ ಆತನ ಸ್ನೇಹಿತನಲ್ಲೂ ಕೋವಿಡ್-19 ಪತ್ತೆಯಾಗಿದ್ದು ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ 8ಕ್ಕೇರಿತ್ತು. ಇದಾದ ಬಳಿಕ ಮಾರ್ಚ್ 31ರಂದು ದುಬೈನಿಂದ ಮರಳಿದ್ದ ಯುವಕನ 26 ವರ್ಷದ ಸಹೋದರ ಹಾಗೂ ಏಪ್ರಿಲ್ 8ರಂದು ದುಬೈನಿಂದ ವಾಪಸ್ಸಾಗಿದ್ದ ವ್ಯಕ್ತಿಯ 26 ವರ್ಷದ ಗರ್ಭಿಣಿ ಪತ್ನಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10 ಕ್ಕೇ ಏರಿದೆ.
ಸದ್ಯ ಸೋಂಕಿತರ ಪೈಕಿ 8 ಜನರು ಗುಣಮುಖರಾಗಿದ್ದು, ಅವರನ್ನ 14 ದಿನಗಳ ಕಾಲ ನಿಗಾದಲ್ಲಿ ಇರಿಸಲಾಗಿದೆ. ಉಳಿದಂತೆ ಎಲ್ಲ ಕೊರೋನಾ ಸೋಂಕಿತರೂ ಗುಣಮುಖರಾಗುತ್ತಿದ್ದು ಸೋಂಕು ನಿಯಂತ್ರಣಕ್ಕೆ ಬಂದ ಲಕ್ಷಣಗಳು ಕಂಡುಬಂದಿವೆ. ಲಾಕ್ ಡೌನ್ ಹಿನ್ನಲೆ ಜಿಲ್ಲೆಯ ಅಗತ್ಯ ವಸ್ತುಗಳ ಪೂರೈಕೆ ಹಾಗೂ ಜನರ ಓಡಾಟಕ್ಕೆ ಇ-ಪಾಸ್ ನೀಡುವ ಮೂಲಕ ಅನಗತ್ಯವಾಗಿ ಜನರು ಓಡಾಟ ನಡೆಸುವುದನ್ನು ನಿಯಂತ್ರಿಸಲಾಗಿದೆ ಅಂತಾ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.ಜಿಲ್ಲೆಯಲ್ಲಿ ಇದುವರೆಗೆ ವಿದೇಶದಿಂದ ವಾಪಸ್ಸಾದವರನ್ನ ಗುರುತಿಸಿ ಅವರ ಕಫದ ಮಾದರಿಗಳನ್ನ ಸಹ ಪರೀಕ್ಷೆ ಮಾಡಲಾಗಿದ್ದು, ಎಲ್ಲರನ್ನೂ ಹೋಂ ಕ್ವಾರಂಟೈನ್ ಮಾಡುವ ಮೂಲಕ ಸೋಂಕು ಹರಡದಂತೆ ಮುಂಜಾಗ್ರತೆ ಕೈಗೊಳ್ಳಲಾಗಿದೆ. ಜೊತೆಗೆ ಕೊರೋನಾ ಹಾಟ್ಸ್ಪಾಟ್ ಎಂದು ಗುರುತಿಸಲ್ಪಟ್ಟಿದ್ದ ಭಟ್ಕಳದಲ್ಲಿ ಮೆಡಿಕಲ್ ಎಮರ್ಜೆನ್ಸಿ ಜಾರಿಗೊಳಿಸುವ ಮೂಲಕ ಸೋಂಕು ಇತರೆ ತಾಲ್ಲೂಕುಗಳಿಗೆ ವ್ಯಾಪಿಸುವುದನ್ನು ಸಹ ತಡೆಗಟ್ಟುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.
ಇದನ್ನೂ ಓದಿ :
ಕೊರೋನಾ ಸಾವಿನ ಬೆನ್ನ ಹಿಂದೆ ಮತ್ತೆ ಮೂರು ಪಾಸಿಟಿವ್ - ಕಲಬುರ್ಗಿಯಲ್ಲಿ ಆತಂಕದ ಕಾರ್ಮೋಡ
ಈ ನಿಟ್ಟಿನಲ್ಲಿ ಉತ್ತರಕನ್ನಡ ಕೊರೋನಾ ಸೋಂಕು ನಿಯಂತ್ರಣದಲ್ಲಿ ಇತರೆ ಜಿಲ್ಲೆಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸಿದ್ದು, ಅಧಿಕಾರಿಗಳ ಕಾರ್ಯನಿರ್ವಹಣೆ ಮುಖ್ಯ ಪಾತ್ರ ವಹಿಸಿವುದರಲ್ಲಿ ಯಾವುದೇ ಅನುಮಾನಗಳಿಲ್ಲ.
(ವರದಿ : ದರ್ಶನ್ ನಾಯ್ಕ)
First published:
April 14, 2020, 5:54 PM IST