Covid Vaccine: ಕೋವಿಡ್ -19 ಲಸಿಕೆ ತಯಾರಿಕಾ ಕಂಪನಿ ನೋವಾವ್ಯಾಕ್ಸ್ (Novavax) ತನ್ನ ಲಸಿಕೆಗೆ ಅನುಮತಿ ನೀಡಲು ಭಾರತೀಯ ನಿಯಂತ್ರಕರಿಂದ ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ ಎಂದು ಹೇಳಿಕೊಂಡಿದೆ. ಯುಎಸ್ ಮೂಲದ ನೋವಾವ್ಯಾಕ್ಸ್ ಇಂಕ್ ಭಾರತದ ಸೀರಮ್ ಇನ್ಸ್ಟಿಟ್ಯೂಟ್ನೊಂದಿಗೆ ಲಸಿಕೆ ಉತ್ಪಾದನಾ ಒಪ್ಪಂದವನ್ನು ಹೊಂದಿದೆ. ಸೀರಮ್ ಇನ್ಸ್ಟಿಟ್ಯೂಟ್ ಪ್ರಸ್ತುತ ದೇಶದಲ್ಲಿ ಹೆಚ್ಚು ನೀಡಲಾಗುತ್ತಿರುವ ಕೋವಿಶೀಲ್ಡ್ ಲಸಿಕೆಯನ್ನು ಸಹ ತಯಾರಿಸುತ್ತಿದೆ. ಭಾರತ ಅಷ್ಟೇ ಅಲ್ಲದೆ, ನೋವಾವ್ಯಾಕ್ಸ್ ಲಸಿಕೆ ತಯಾರಕರು ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ನಲ್ಲಿ ಕೋವೋವ್ಯಾಕ್ಸ್ ಎಂದು ಕರೆಯಲ್ಪಡುವ ಕೋವಿಡ್ -19 ಲಸಿಕೆಯ ತುರ್ತು ಬಳಕೆಗಾಗಿ ಅನುಮತಿ ನೀಡುವಂತೆ ಕೇಳಿಕೊಂಡಿದ್ದಾರೆ. ಲಸಿಕೆಯ ಸಾಕಷ್ಟು ಸರಬರಾಜು ಹೊಂದಿರುವ ಶ್ರೀಮಂತ ರಾಷ್ಟ್ರಗಳಿಗೂ ಮೊದಲು ಕೆಲವು ಕಡಿಮೆ-ಆದಾಯದ ದೇಶಗಳಿಗೆ ತನ್ನ ಲಸಿಕೆ ನೀಡಲು ಮುಂದಾಗಿದೆ ನೋವಾವ್ಯಾಕ್ಸ್. ಯುಎಸ್ ಮೂಲದ ನೊವಾವಾಕ್ಸ್ ಮೂರು ದೇಶಗಳಲ್ಲಿ ಅರ್ಜಿ ಸಲ್ಲಿಸಲು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಜೊತೆ ಪಾಲುದಾರಿಕೆ ಹೊಂದಿದೆ ಮತ್ತು ಈ ತಿಂಗಳಾಂತ್ಯದಲ್ಲಿ ಕೋವ್ಯಾಕ್ಸ್ ಜಾಗತಿಕ ಲಸಿಕೆ ಕಾರ್ಯಕ್ರಮದ ಭಾಗವಾಗಿ ವಿಶ್ವ ಆರೋಗ್ಯ ಸಂಸ್ಥೆಯ ವಿಮರ್ಶೆ ಪಡೆಯಲು ಯೋಜಿಸಿದೆ.
ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ತುರ್ತು ಅಗತ್ಯವಿರುವ ದೇಶಗಳಿಗೆ ಲಕ್ಷಾಂತರ ಡೋಸ್ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯ ಪ್ರವೇಶದ ಪ್ರಮುಖ ಹೆಜ್ಜೆ ಎಂದು ನೋವಾವ್ಯಾಕ್ಸ್ ಸಿಇಒ ಸ್ಟಾನ್ಲಿ ಎರ್ಕ್ ಭಾರತ ಸೇರಿ ಮೂರು ದೇಶಗಳಿಗೆ ಮನವಿ ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕಂಪನಿಯು ಶೀಘ್ರದಲ್ಲೇ ಬ್ರಿಟನ್ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಯೋಜಿಸಿದೆ ಎಂದು ಘೋಷಿಸಿದ್ದು, ನಂತರ ಯೂರೋಪ್, ಆಸ್ಟ್ರೇಲಿಯ, ಕೆನಡಾ ಮತ್ತು ನ್ಯೂಜಿಲೆಂಡ್ನಲ್ಲಿ ಮನವಿ ಮಾಡಿಕೊಳ್ಳಲಿದೆ. ಆದರೆ, ಅಮೆರಿಕದಲ್ಲಿ ಈ ವರ್ಷದ ನಂತರ ಮನವಿ ಮಾಡಿಕೊಳ್ಳಲಿದೆ ಎಂದು ತಿಳಿದುಬಂದಿದೆ.
ಕೊರೊನಾವೈರಸ್ ಲೇಪಿಸುವ ಸ್ಪೈಕ್ ಪ್ರೋಟೀನ್ನ ಲ್ಯಾಬ್ನಲ್ಲಿ ಬೆಳೆದ ಕಾಪಿಗಳೊಂದಿಗೆ ಎರಡು ಡೋಸ್ನ ಲಸಿಕೆಯನ್ನು ತಯಾರಿಸಲಾಗುತ್ತದೆ. ದೇಹಕ್ಕಾಗಿ ಅದರ ಸ್ಪೈಕ್ ಪ್ರೋಟೀನ್ ಮಾಡಲು ಅನುವಂಶಿಕ ಸೂಚನೆಗಳನ್ನು ನೀಡುವ ಇತರ ವ್ಯಾಪಕವಾಗಿ ಬಳಸುವ ಲಸಿಕೆಗಳಿಗಿಂತ ಕೋವೋವ್ಯಾಕ್ಸ್ ತುಂಬಾ ಭಿನ್ನವಾಗಿದೆ.
ಜೂನ್ ತಿಂಗಳಲ್ಲಿ ಯುಎಸ್ ಮತ್ತು ಮೆಕ್ಸಿಕೋದಲ್ಲಿ ನಡೆದ ಸುಮಾರು 30,000 ಜನರ ಅಧ್ಯಯನದಲ್ಲಿ ಕೋವಿಡ್ -19 ವಿರುದ್ಧ ಲಸಿಕೆ ಸುಮಾರು 90% ಪರಿಣಾಮಕಾರಿ ಎಂದು ನೋವಾವ್ಯಾಕ್ಸ್ ಘೋಷಿಸಿದೆ. ಆ ಸಮಯದಲ್ಲಿ ಆ ದೇಶಗಳಲ್ಲಿ ಹರಡುತ್ತಿದ್ದ ಕೋವಿಡ್ ರೂಪಾಂತರಗಳ ವಿರುದ್ಧವೂ ಕೋವೋವ್ಯಾಕ್ಸ್ ಲಸಿಕೆ ಕೆಲಸ ಮಾಡಿದೆ. ಅಡ್ಡ ಪರಿಣಾಮಗಳು ಹೆಚ್ಚಾಗಿ ಸೌಮ್ಯವಾಗಿದ್ದವು ಎಂದೂ ನೋವಾವ್ಯಾಕ್ಸ್ ಹೇಳಿಕೊಂಡಿದೆ.
ಇನ್ನು, ಹೆಚ್ಚು ಸಾಂಕ್ರಾಮಿಕ ಡೆಲ್ಟಾ ರೂಪಾಂತರಕ್ಕೆ ಸಂಬಂಧಿಸಿದಂತೆ, ಎರಡನೇ ಡೋಸ್ ಲಸಿಕೆ ನೀಡಿದ ಆರು ತಿಂಗಳ ನಂತರ ಬೂಸ್ಟರ್ ಡೋಸ್ ನೀಡುವುದರಿಂದ ಆ ರೂಪಾಂತರಿತವನ್ನು ನಿಭಾಯಿಸಬಲ್ಲ ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯಗಳನ್ನು ಪುನರುಜ್ಜೀವನಗೊಳಿಸಿತು ಎಂದು ನೋವಾವ್ಯಾಕ್ಸ್ ಹೇಳಿಕೊಂಡಿದೆ.
ಇತರ ವಿಧದ ಕೋವಿಡ್ -19 ಲಸಿಕೆಗಳ ನಂತರ ನೋವಾವ್ಯಾಕ್ಸ್ ಕಂಪನಿಯ ಲಸಿಕೆಯನ್ನು ಬೂಸ್ಟರ್ ಆಗಿ ಬಳಸಬಹುದೇ ಎಂದು ಬ್ರಿಟನ್ ಮತ್ತು ಇತರೆಡೆ ಹೆಚ್ಚುವರಿ ಅಧ್ಯಯನಗಳು ಪರೀಕ್ಷಿಸುತ್ತಿವೆ. ಕೆಲವು ಚೀನೀ ನಿರ್ಮಿತ ಲಸಿಕೆಗಳ ಬಳಿಕ ಇಂಡೋನೇಷ್ಯಾ ಈಗಾಗಲೇ ನೋವಾವ್ಯಾಕ್ಸ್ ಲಸಿಕೆಯನ್ನು ಬೂಸ್ಟರ್ ಆಗಿ ಬಳಸಲು ಆಸಕ್ತಿ ವ್ಯಕ್ತಪಡಿಸಿದೆ ಎಂದು ನೋವಾವ್ಯಾಕ್ಸ್ ಕಂಪನಿ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ