ಬೆಂಗಳೂರು (ಏಪ್ರಿಲ್ 26); ಮಂತ್ರಿ ಆಗಿ ಒಂದು ಬೆಡ್ ಕೊಡಿಸಲು ಆಗಿಲ್ಲ ಜನ ಕ್ಯಾಕರಿಸಿ ಉಗಿ ತಿದ್ದಾರೆ ಎಂದು ಅಬಕಾರಿ ಸಚಿವ ಎಂಟಿಬಿ ನಾಗರಾಜ್ ಇಂದು ರಾಜ್ಯ ಕ್ಯಾಬಿನೆಟ್ ಸಭೆಯಲ್ಲಿ ತಮ್ಮ ಅಸಹಾಯಕತೆಯನ್ನು ಹೊರಹಾಕಿದ್ದಾರೆ. ರಾಜ್ಯದಲ್ಲಿ ಎರಡನೇ ಕೋವಿಡ್ ಅಲೆ ಕೈಮೀರಿದೆ. ಹಲವಾರು ಜನ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಹಾಗೂ ಆಕ್ಸಿಜನ್ ಲಭ್ಯವಾಗದೆ ಸಾವನ್ನಪ್ಪುತ್ತಿದ್ದಾರೆ. ಸ್ವತಃ ಮಾಜಿ ಸಿಎಂ ಕುಮಾರಸ್ವಾಮಿಗೂ ಸಹ ಬೆಡ್ ಸಿಗದ ಪರಿಸ್ಥಿತಿ ಉಂಟಾಗಿತ್ತು. ಹೀಗಾಗಿ ರಾಜ್ಯದಲ್ಲಿ ಕೊರೋನಾ ನಿಯಂತ್ರಿಸಲು ಲಾಕ್ಡೌನ್ ಹೇರುವ ಸಂಬಂಧ ಚರ್ಚೆ ನಡೆಸಲು ಇಂದು ಕ್ಯಾಬಿನೆಟ್ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಸಚಿವ ಎಂಟಿಬಿ ನಾಗರಾಜ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎದುರು ತಮ್ಮ ಅಸಹಾಯಕತೆಯನ್ನು ಹೊರಹಾಕಿದ್ದಾರೆ. ಅಲ್ಲದೆ, ಆರೋಗ್ಯ ಸಚಿವ ಡಾ| ಸುಧಾಕರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿರುವ ಎಂಟಿಬಿ ನಾಗರಾಜ್, "ಒಂದು ಬೆಡ್ ಗಾಗಿ ಆರೋಗ್ಯ ಸಚಿವ ಸುಧಾಕರ್ ಗೆ ಕರೆ ಮೇಲೆ ಕರೆ ಮಾಡಿದೆ. ಆದರೆ, ಸುಧಾಕರ್ ಕಾಲ್ ಪಿಕ್ ಮಾಡಿಲ್ಲ. ಒಬ್ಬ ಸಚಿವನಾಗಿ ನನ್ನಿಂದ ಒಂದು ಬೆಡ್ ಸಹ ರೋಗಿಗೆ ಕೊಡಿಸಲು ಆಗಿಲ್ಲ. ಜನ ನಮ್ಮನ್ನು ಕ್ಯಾಕರಿಸಿ ಉಗಿಯುತ್ತಿದ್ದಾರೆ. ಬೇಕಿದ್ದರೆ ಸಚಿವ ಸುಧಾಕರ್ ಅವರನ್ನೇ ಕೇಳಿ" ಎಂದು ಗರಂ ಆಗಿದ್ದಾರೆ. ಈ ವೇಳೆ ಆರೋಗ್ಯ ಸಚಿವ ಸುಧಾಕರ್ ಸಹ ತಮ್ಮ ಅಸಹಾಯಕತೆಯನ್ನು ಒಪ್ಪಿಕೊಂಡಿರುವ ಘಟನೆ ಕ್ಯಾಬಿನೆಟ್ ಸಭೆಯಲ್ಲಿ ನಡೆದಿದೆ.
ಈ ವೇಳೆ ಎಂಟಿಬಿ ನಾಗರಾಜ್ ಸೇರಿದಂತೆ ಹಲವಾರು ಸಚಿವರು, "ಜನರ ಸಮಸ್ಯೆ ನೋಡೋಕೆ ಆಗ್ತಿಲ್ಲ, ಅವರಿಗೆ ಬೆಡ್ ಕೊಡಿಸಲು ಆಗ್ತಿಲ್ಲ, ದಯಮಾಡಿ ಲಾಕ್ ಡೌನ್ ಮಾಡಿಸಿ ಸರ್ ಪ್ಲೀಸ್" ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಎದುರು ಅಲವತ್ತುಕೊಂಡಿದ್ದಾರೆ.
ಸಚಿವ ಶಿವರಾಂ ಹೆಬ್ಬಾರ್ ಈ ವೇಳೆ ಮಾತನಾಡಿ, "ಸರ್ಕಾರದ ಬಗ್ಗೆ, ನಮ್ಮ ಬಗ್ಗೆ ಜನರಲ್ಲಿ ಆಕ್ರೋಶ ಇದೆ. ಹೀಗಾಗಿ ಲಾಕ್ ಡೌನ್ ಬೇಡ, ಕಾರ್ಮಿಕರಿಗೆ ಸಂಕಷ್ಟ ಆಗುತ್ತೆ. ನನ್ನ ಸಂಬಳ ತಗೋಳಿ, ನನ್ಗೆ ಏನೂ ಸೌಲಭ್ಯ ಬೇಡ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ, ಬಹುಪಾಲು ಸಚಿವರು "ಮೊದಲು ಒಂದಷ್ಟು ದಿನ ಲಾಕ್ ಡೌನ್ ಮಾಡಿಬಿಡಿ. ಈಗಾಗಲೇ ಆಕ್ಸಿಜನ್, ಬೆಡ್, ಐಸಿಯು ಕೊರತೆ ಹೆಚ್ಚಾಗಿದೆ, ಪ್ಲೀಸ್ ಎಲ್ಲ ಕ್ಲೋಸ್ ಮಾಡಿ ಸರ್, ಹಂಗೆ ಹೇಳಿದ್ರೆ ಜನರನ್ನ ಕಂಟ್ರೋಲ್ ಮಾಡಲು ಆಗಲ್ಲ" ಎಂದು ಮನವಿ ಮಾಡಿದ್ದಾರೆ. ಇದೇ ಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊನೆಗೆ ಲಾಕ್ಡೌನ್ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಕರ್ನಾಟಕ ಲಾಕ್ಡೌನ್:
ರಾಜ್ಯದಲ್ಲಿ ಕೊರೋನಾ 2ನೇ ಅಲೆ ಭೀಕರತೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ರಾಜ್ಯಾದ್ಯಂತ 14 ದಿನಗಳ ಕಾಲ ಲಾಕ್ಡೌನ್ ಮಾಡಿ ಆದೇಶ ಹೊರಡಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ವೀಕೆಂಡ್ ಕರ್ಫ್ಯೂ ಯಶಸ್ಸಿನ ಬೆನ್ನಲ್ಲೇ ನಾಳೆ ರಾತ್ರಿಯಿಂದ 14 ದಿನಗಳ ಕಾಲ ಲಾಕ್ಡೌನ್ ಹೇರಲು ಸರ್ಕಾರ ನಿರ್ಧರಿಸಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಬಿ.ಎಸ್.ಯಡಿಯೂರಪ್ಪ 14 ದಿನಗಳ ಕಾಲ ರಾಜ್ಯದಲ್ಲಿ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. 2 ವಾರಗಳ ಕಾಲ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡರು. 2 ವಾರದಲ್ಲಿ ಕೊರೋನಾ ಕಂಟ್ರೋಲ್ಗೆ ಬರದಿದ್ದರೆ ಲಾಕ್ಡೌನ್ ಮುಂದುವರೆಯುವ ಸುಳಿವನ್ನು ಕೊಟ್ಟರು.
ಬೆಳಗ್ಗೆ 6 ಗಂಟೆಯಿಂದ 10 ಗಂಟೆ ಒಳಗೆ ಮಾತ್ರ ಸಾರ್ವನಿಕರು ಅಗತ್ಯ ವಸ್ತುಗಳನ್ನು ಖರೀದಿಸಬೇಕು. ಬೆಳಗ್ಗೆ 10 ಗಂಟೆಯಿಂದ ರಾಜ್ಯಾದ್ಯಂತ ಕರ್ಫ್ಯೂ ಜಾರಿಯಲ್ಲಿರಲಿದೆ. ದಿನ ಬಳಕೆ ವಸ್ತುಗಳು ಬಿಟ್ಟು, ಉಳಿದ ಎಲ್ಲದಕ್ಕೂ ನಿರ್ಬಂಧವಿರಲಿದೆ. ಹೋಟೆಲ್ಗಳಲ್ಲಿ ಪಾರ್ಸೆಲ್ಗೆ ಅವಕಾಶ ನೀಡಲಾಗಿದೆ. ಬಾರ್ಗಳಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಮದ್ಯವನ್ನು ಪಾರ್ಸೆಲ್ ತೆಗೆದುಕೊಳ್ಳಬಹುದು. ಇನ್ನು ಸರಕು ಸಾಗಾಣಿಕೆ ವಾಹನಗಳಿಗೆ ಯಾವುದೇ ತೊಂದರೆ ಇರೋಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ