ಅನ್‌ಲಾಕ್ ಆದ್ರೂ ಚೇತರಿಸದ ಫೋಟೋಗ್ರಫಿ ಉದ್ಯಮ; ಫೋಟೋಗ್ರಾಫರ್ಸ್​​ ಈಗ ಏನು ಮಾಡ್ತಿದಾರೆ ಗೊತ್ತಾ?

ಮದುವೆ ಸೀಜನ್ ಮುಗಿಯಿತು. ಆಷಾಢ ಶುರುವಾಗುತ್ತಿದೆ. ಇನ್ನೊಂದು ವರ್ಷ ನಮಗೆ ಯಾವುದೇ ಕೆಲಸವಿರುವುದಿಲ್ಲ. ಸಭೆ-ಸಮಾರಂಭಗಳಿಗೆ ಇನ್ನೂ ಅವಕಾಶ ನೀಡಿಲ್ಲ. ಲಕ್ಷಾಂತರ ಮೌಲ್ಯದ ಉಪಕರಣ ಖರೀದಿಸಿ ಸಾಲ ಮಾಡಿರುವ ನಮಗೆ ಕೊರೋನಾ ಸಾಕಷ್ಟು ಅನಾಹುತ ತಂದಿದೆ. ಸರಕಾರ ನಮ್ಮ ಕಡೆ ಗಮನಹರಿಸಿ ಸಹಾಯ ಮಾಡಬೇಕು ಎಂದು ಫೋಟೋ ಸ್ಟುಡಿಯೋ ಮಾಲಿಕ ಪಳನಿ ಒತ್ತಾಯಿಸುತ್ತಾರೆ‌.

news18-kannada
Updated:June 6, 2020, 7:50 AM IST
ಅನ್‌ಲಾಕ್ ಆದ್ರೂ ಚೇತರಿಸದ ಫೋಟೋಗ್ರಫಿ ಉದ್ಯಮ; ಫೋಟೋಗ್ರಾಫರ್ಸ್​​ ಈಗ ಏನು ಮಾಡ್ತಿದಾರೆ ಗೊತ್ತಾ?
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜೂ.06): ಲಾಕ್ ಡೌನ್ ಸಡಲಿಕೆಯಾದರೂ  ಫೋಟೋಗ್ರಫಿ ಉದ್ಯಮ ಚೇತರಿಸಿಕೊಳ್ಳುತ್ತಿಲ್ಲ. ಕಳೆದೊಂದು ತಿಂಗಳಿನಿಂದ ಯಥಾಸ್ಥಿತಿಗೆ ಜನಜೀವನ ಆರಂಭವಾದರೂ ಸೀಜನ್​​ನಲ್ಲಿ ದುಡಿಯುವ ಫೋಟೋಗ್ರಾಫರ್ ಗಳ ಬದುಕು ಮಾತ್ರ ಇನ್ನೂ ಟ್ರ್ಯಾಕ್ ಗೆ ಬರುತ್ತಿಲ್ಲ. ಸ್ಟುಡಿಯೋ ಬಾಡಿಗೆ ಕಟ್ಟಲೂ ಆಗದೇ ಪರದಾಡುತ್ತಿದ್ದಾರೆ. ಅನಿವಾರ್ಯವಾಗಿ ತಮ್ಮಿಷ್ಟದ ಫೋಟೊಗ್ರಫಿ ಬಿಟ್ಟು ಬದುಕಲು ಬೇರೆ ವೃತ್ತಿ ಆಯ್ಕೆ‌ ಮಾಡಿಕೊಳ್ಳುತ್ತಿದ್ದಾರೆ.

ರಾಜ್ಯಾದ್ಯಂತ ಪೋಟೊಗ್ರಫಿ ನಂಬಿ ಎರಡು ಲಕ್ಷಕ್ಕೂ ಹೆಚ್ಚು ವೃತ್ತಿಪರ ಫೋಟೋಗ್ರಾಫರ್ ಇದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಫೋಟೋ ಸ್ಟುಡಿಯೋಗಳಿವೆ. ಬೆಂಗಳೂರಿನಲ್ಲಿಯೇ 75 ಸಾವಿರ ವೃತ್ತಿಪರ ಫೋಟೊಗ್ರಾಫರ್ ಇದ್ದು, 50 ಸಾವಿರಕ್ಕೂ ಹೆಚ್ಚು ಫೋಟೋ ಸ್ಟುಡಿಯೋಗಳಿವೆ. ಲಾಕ್ ಡೌನ್ ಸಡಲಿಕೆ ಬಳಿಕ ಕಳೆದೊಂದು ತಿಂಗಳಿನಿಂದ ಮದುವೆ, ಕಾರ್ಯಕ್ರಮಗಳ ಆರ್ಡರ್ ಇಲ್ಲದೇ ಫೋಟೊಗ್ರಾಫರ್​ಗಳು ಕಂಗಾಲಾಗಿದ್ದಾರೆ. ಯಾಕೆಂದರೆ ಕಲ್ಯಾಣಮಂಟಪಗಳಲ್ಲಿ ಮದುವೆ ಹೆಚ್ಚು ನಡೆಯುತ್ತಿಲ್ಲ. ನಡೆದರೂ 50 ಜನ ಮೀರುವುದಿಲ್ಲ. ಇಂಥ ಸಂದರ್ಭದಲ್ಲಿ ಮದುವೆಗಳಿಗೆ ತಮ್ಮ ಮೊಬೈಲ್ ನಲ್ಲಿ ಪೋಟೋ, ವೀಡಿಯೋ ಮಾಡುತ್ತಿದ್ದಾರೆ.

ಕೆಲವರಂತೂ ಕೊರೋನಾ ಭಯಕ್ಕೆ ಇದರ ಗೊಡವೆ ಬೇಡವೆಂದು ಹಾಗೆಯೇ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇದರಿಂದಾಗಿ ಲಾಕ್ ಡೌನ್ ಸಡಲಿಕೆಯಾದ್ರೂ ಷರತ್ತುಗಳು ಇರುವುದರಿಂದ ಫೋಟೋಗ್ರಾಫರ್​ಗಳು ಸಂಕಷ್ಟದಲ್ಲಿದ್ದಾರೆ.  ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರುವ ಫೋಟೋಗ್ರಾಫರ್ ಗಳಿಗೆ ಇದುವರೆಗೂ ಸರ್ಕಾರದಿಂದ ಯಾವುದೇ ಸಹಾಯ ದೊರೆತಿಲ್ಲ.

ಫೋಟೊಗ್ರಫಿ ಬಿಟ್ಟು ಹೋಟೆಲ್ ಕಡೆಗೆ...!

ಕ್ಯಾಮರಾ ಲೆನ್ಸ್ ಹಿಡಿಯುವ ಕೈಗಳು ಟೀ, ಕಾಫಿ ಮಾಡುತ್ತ, ಸೌಟು ಹಿಡಿದು ಅಡುಗೆ ಮಾಡುವ ಕಡೆಗೆ ಉತ್ತಮ ಛಾಯಾಗ್ರಾಹಕರು ತೆರಳುತ್ತಿದ್ದಾರೆ. ಕೊರೋನಾ ಲಾಕ್ ಡೌನ್ ಎಫೆಕ್ಟ್ ಅರಗಿಸಿಕೊಳ್ಳಲಾಗದೆ ಅನಿವಾರ್ಯವಾಗಿ ಬೆಂಗಳೂರಿನ ಫೋಟೋಗ್ರಾಫರ್ ಶ್ರೀಧರ್ ಪುಟ್ಟದಾದ ಹೋಟೆಲ್ ತೆರೆದಿದ್ದಾರೆ‌.

ಕಳೆದ ಮೂವತ್ತು ವರ್ಷಗಳಿಂದ ಫೋಟೋಗ್ರಫಿ ನಂಬಿದ್ದ ಶ್ರೀಧರ್, ಒಂದಷ್ಟು ಸಾಲ ಮಾಡಿ ಶೇಷಾದ್ರಿಪುರಂ‌ ಪೊಲೀಸ್ ಠಾಣೆಯ ಮುಂದೆ ಹೋಟೆಲ್ ಆರಂಭಿಸಿದ್ದಾರೆ. ಫೋಟೋಗ್ರಫಿ ವೃತ್ತಿ ಬಿಟ್ಟು ಹೋಟೆಲ್ ನಡೆಸುತ್ತಿರುವ ಶ್ರೀಧರ್ ನೋಡಿ ಸಾಕಷ್ಟು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮೂರು ದಶಕಗಳ ಕಾಲ ಕ್ಯಾಮರಾ ಮೋಡಿ ಮಾಡಿದವರು ಇದೀಗ ಸೌಟು ಹಿಡಿದಿದ್ದಾರೆ. ಆದರೆ ಕುಟುಂಬ ನಡೆಸಲು ಬೇರೆ ಕೆಲಸ ಅನಿವಾರ್ಯ, ಫೋಟೋಗ್ರಫಿ ನಂಬಿದರೆ ಸದ್ಯ ಏನು ಆಗುವುದಿಲ್ಲ ಎಂದು ಶ್ರೀಧರ್ ವಾಸ್ತವ ಚಿತ್ರಣ ತೆರೆದಿಡುತ್ತಾರೆ.

ಬಾಡಿಗೆ ಕಟ್ಟಲು ಹಣವಿಲ್ಲ!ಲಾಕ್ ಡೌನ್ ಸಡಲಿಕೆ ಬಳಿಕವೂ ಬ್ಯುಸಿನೆಸ್ ಫುಲ್ ಡಲ್ ಆಗಿದೆ. ಫೋಟೋ ಸ್ಟುಡಿಯೋ ಬಾಡಿಗೆ ಕಟ್ಟಲು ಸಂಕಷ್ಟವಾಗುತ್ತಿದೆ. ಯಾವುದೇ ಆರ್ಡರ್, ಕೆಲಸವಿಲ್ಲದೇ ಫೋಟೋಗ್ರಾಫರ್​ಗಳು ಪರದಾಡುತ್ತಿದ್ದಾರೆ. ಬೆಂಗಳೂರಿನ ಶೇ.30ರಷ್ಟು ಸ್ಟುಡಿಯೋ ಬಾಡಿಗೆ ಕಟ್ಟಲು ಆಗದೆ‌ ಬಂದ್ ಆಗಿವೆ. ಪೋಟೋ ಸ್ಟುಡಿಯೋದಲ್ಲಿ‌ ಕೆಲಸ ಮಾಡುವವರು ಬೇರೆ ಕೆಲಸಕ್ಕೆ ಶಿಫ್ಟ್ ಆಗುತ್ತಿದ್ದಾರೆ. ಸಾಲ ಮಾಡಿ ತಂದ ಕ್ಯಾಮರಾ, ಮಿಕ್ಸಿಂಗ್ ಯೂನಿಟ್ ಇಎಂಐ ಕಟ್ಟಲು ಆಗುತ್ತಿಲ್ಲ. ಫೋಟೋಗ್ರಫಿ ನಂಬಿದವರು ಬಾಡಿಗೆ ಕಟ್ಟದೇ ಸಂಕಷ್ಟದಲ್ಲಿದ್ದಾರೆ.

ಕೊರೋನಾ ಕಾಟಕ್ಕೆ ಹೈದ್ರಾಬಾದ್ ಕರ್ನಾಟಕ ತತ್ತರ; ಶುಕ್ರವಾರ ಒಂದೇ ದಿನ 155 ಪ್ರಕರಣ ದೃಢ!

ಬೆಂಗಳೂರಿನ ವೈಯಾಲಿ ಕಾವಲ್ ನಲ್ಲಿ ನನ್ನದೊಂದು ಪುಟ್ಟದಾದ ಫೋಟೋ ಸ್ಟುಡಿಯೊ ಇದೆ. ಆದರೆ ಕಳೆದ ಮೂರು ತಿಂಗಳಿನಿಂದ ಬಾಡಿಗೆ ಕಟ್ಟಲು ಆಗುತ್ತಿಲ್ಲ. ಬಾಡಿಗೆ ಕಟ್ಟಿ ನಿಮ್ಮ ಸ್ಟುಡಿಯೋ ಸಾಮಾನು ತೆಗೆದುಕೊಂಡು ಹೋಗಿ ಎಂದು ಕಾಂಪ್ಲೆಕ್ಸ್ ಮಾಲಿಕ ಎಚ್ಚರಿಕೆ ನೀಡುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ವೃತ್ತಿಪರ ಫೋಟೋಗ್ರಾಫರ್ ಬೇಸರ ವ್ಯಕ್ತಪಡಿಸುತ್ತಾರೆ‌.

ಮದುವೆ ಸೀಜನ್ ಮುಗಿಯಿತು. ಆಷಾಢ ಶುರುವಾಗುತ್ತಿದೆ. ಇನ್ನೊಂದು ವರ್ಷ ನಮಗೆ ಯಾವುದೇ ಕೆಲಸವಿರುವುದಿಲ್ಲ. ಸಭೆ-ಸಮಾರಂಭಗಳಿಗೆ ಇನ್ನೂ ಅವಕಾಶ ನೀಡಿಲ್ಲ. ಲಕ್ಷಾಂತರ ಮೌಲ್ಯದ ಉಪಕರಣ ಖರೀದಿಸಿ ಸಾಲ ಮಾಡಿರುವ ನಮಗೆ ಕೊರೋನಾ ಸಾಕಷ್ಟು ಅನಾಹುತ ತಂದಿದೆ. ಸರಕಾರ ನಮ್ಮ ಕಡೆ ಗಮನಹರಿಸಿ ಸಹಾಯ ಮಾಡಬೇಕು ಎಂದು ಫೋಟೋ ಸ್ಟುಡಿಯೋ ಮಾಲಿಕ ಪಳನಿ ಒತ್ತಾಯಿಸುತ್ತಾರೆ‌.

ಲಾಕ್ ಡೌನ್ ಸಡಿಲಿಕೆ ಸಂದರ್ಭದಲ್ಲಿ ರಾಜ್ಯದಲ್ಲಿರುವ ಎರಡು ಲಕ್ಷಕ್ಕೂ ಹೆಚ್ಚು ಫೋಟೋಗ್ರಾಫರ್ ಗಳ ಪರ ಕರ್ನಾಟಕ ಪೋಟೋಗ್ರಾಫರ್ ಅಸೋಸಿಯೇಷನ್ ಸಹಾಯ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ. ಎಲ್ಲಾ ವರ್ಗಕ್ಕೆ, ಉದ್ಯಮಕ್ಕೆ ಸಹಾಯ ಮಾಡಿರುವ ಸರ್ಕಾರ ನಮ್ಮ ಅಸಂಘಟಿತ ಕಾರ್ಮಿಕರಿಗೆ ಯಾವುದೇ ಸಹಾಯ ಮಾಡಿಲ್ಲ. ದಯಮಾಡಿ ಸರ್ಕಾರ ನಮಗೆ ಆರ್ಥಿಕ ನೆರವು ನೀಡಿ ಸಹಾಯ ಮಾಡಬೇಕು ಎಂದು ಕೆಪಿಎ ರಾಜ್ಯಾಧ್ಯಕ್ಷ ಪರಮೇಶ್ ಮನವಿ ಮಾಡಿಕೊಳ್ಳುತ್ತಾರೆ‌.
First published: June 6, 2020, 7:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading