ಸರ್ಕಾರ ಎಂದಿಗೂ ಕೋವಿಡ್ ಅಂಕಿ ಅಂಶಗಳನ್ನು ಬಚ್ಚಿಡುವುದಿಲ್ಲ, ಚರ್ಚೆಗೂ ಮುಕ್ತವಾಗಿದ್ದೇವೆ; ಸಚಿವ ಕೆ.ಸುಧಾಕರ್

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಹಿನ್ನಲೆಯಲ್ಲಿ ಸಿಎಂ ಬಿಎಸ್  ಯಡಿಯೂರಪ್ಪ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪತ್ರ ಬರೆದು, ಕೊರೋನಾ ಅಂಕಿ-ಅಂಶಗಳಲ್ಲಿ ಸರ್ಕಾರ ತಪ್ಪು ಲೆಕ್ಕ ತೋರಿಸಿ, ಜನರಿಗೆ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ್ದರು.

ಸಚಿವ ಡಾ.ಕೆ.ಸುಧಾಕರ್

ಸಚಿವ ಡಾ.ಕೆ.ಸುಧಾಕರ್

  • Share this:
    ಬೆಂಗಳೂರು (ಮಾರ್ಚ್ 26, ಶುಕ್ರವಾರ): ಸರ್ಕಾರ ಎಂದಿಗೂ ಕೋವಿಡ್ ಅಂಕಿ ಅಂಶಗಳನ್ನು ಬಚ್ಚಿಡುವುದಿಲ್ಲ. ಸರ್ಕಾರಕ್ಕೆ ಅದರ ಅವಶ್ಯಕತೆಯೂ ಇಲ್ಲ ಮತ್ತು ಅದು ಸಾಧ್ಯವೂ ಇಲ್ಲ. ವಸ್ತುಸ್ಥಿತಿಯ ಅಂಕಿ- ಅಂಶವನ್ನು ಮಾತ್ರ ಘೋಷಣೆ ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್ ಸಂಬಂಧ ಯಾವುದೇ ಅಂಕಿ ಅಂಶ ಮುಚ್ಚಿಡುವುದಿಲ್ಲ. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎಲ್ಲ ವಿರೋಧ ಪಕ್ಷಗಳ ನಾಯಕರು ಸಲಹೆ, ಸೂಚನೆಗಳನ್ನು ನೀಡಬಹುದು. ಲೋಪಗಳಿದ್ದರೂ ಹೇಳಬಹುದು. ಮುಖ್ಯಮಂತ್ರಿಗಳು ನಿರ್ಧಾರ ಮಾಡಿ ಸರ್ವಪಕ್ಷಗಳ ಸಭೆ ನಡೆಸಿ ಕೋವಿಡ್ ಕುರಿತು ಚರ್ಚಿಸಬಹುದು. ಚರ್ಚೆಯ ವಿಚಾರದಲ್ಲಿ ಮುಕ್ತವಾಗಿದ್ದೇವೆ ಎಂದರು.

    ಹಬ್ಬಗಳ ಆಚರಣೆ ವಿಚಾರದಲ್ಲಿ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳುತ್ತಾರೆ. ಕಳೆದ ವರ್ಷವೂ ಅನೇಕ ಹಬ್ಬಗಳ ಆಚರಣೆಗಳನ್ನು ನಿಯಂತ್ರಿಸಲಾಗಿತ್ತು. ಈಗಲೂ ಮಾರ್ಗಸೂಚಿ ಹೊರಡಿಸಲಾಗಿದೆ. ಮಣಿಪಾಲ್ ಸಂಸ್ಥೆಯಲ್ಲಿ 704 ಪ್ರಕರಣ ಕಂಡುಬಂದಿದ್ದು, ಅದನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಎಲ್ಲೆಡೆ ವಹಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ನಿನ್ನೆ 35 ಸಾವಿರ ಪ್ರಕರಣ ಕಂಡುಬಂದಿದೆ. ನಮ್ಮಲ್ಲಿ 2 ಸಾವಿರ ಪ್ರಕರಣ ಪತ್ತೆಯಾಗಿದೆ. ಆದ್ದರಿಂದ ಜನರು ಇದನ್ನು ಗಂಭೀರವಾಗಿ ಪರಿಗಣಿಸಿ ಸುರಕ್ಷತಾ ಕ್ರಮ ವಹಿಸಬೇಕು. ಯುವಜನರು ತಮ್ಮ ಕುಟುಂಬದ ಹಿರಿಯರನ್ನು ಲಸಿಕೆ ಪಡೆಯಲು ಕೇಂದ್ರಕ್ಕೆ ಕರೆದುಕೊಂಡು ಹೋಗಬೇಕು ಎಂದು ಕೋರಿದರು.

    ತಾಂತ್ರಿಕ ಸಲಹಾ ಸಮಿತಿ ಅನೇಕ ಸಲಹೆ ನೀಡಿದೆ. ಎಲ್ಲ ಬಿಗಿಯಾದ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುತ್ತಾರೆ. ಯಾವುದೇ ಚಟುವಟಿಕೆಗಳನ್ನು ನಿರ್ಬಂಧಿಸುವುದು ಕಷ್ಟ. ಸೋಂಕಿನ ಬೆಳವಣಿಗೆ ಅವಲೋಕಿಸಿ ಜನಜೀವನಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಲಾಗುತ್ತದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

    ಇದನ್ನು ಓದಿ: ಕೊರೋನಾ 2ನೇ ಅಲೆ; ಸಿಎಂ ಬಿಎಸ್​ವೈಗೆ ಪತ್ರ ಬರೆಯುವ ಮೂಲಕ ಬಿಜೆಪಿ ಸರ್ಕಾರ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ

    ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಹಿನ್ನಲೆಯಲ್ಲಿ ಸಿಎಂ ಬಿಎಸ್  ಯಡಿಯೂರಪ್ಪ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪತ್ರ ಬರೆದು, ಕೊರೋನಾ ಅಂಕಿ-ಅಂಶಗಳಲ್ಲಿ ಸರ್ಕಾರ ತಪ್ಪು ಲೆಕ್ಕ ತೋರಿಸಿ, ಜನರಿಗೆ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ್ದರು.

    ರಾಜ್ಯ ಸರ್ಕಾರ ರಾಜ್ಯದಲ್ಲಿ ಕೊರೋನಾ ಸಾವುಗಳ ಪ್ರಮಾಣ ಶೇ. 1.4ರಷ್ಟಿದೆ. ಸರ್ಕಾರ ತೆಗೆದುಕೊಂಡ ಕ್ರಮಗಳಿಂದಾಗಿ ಸಾವುಗಳ ಸಂಖ್ಯೆ ಕಡಿಮೆಯಾಗಿದೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿವೆ. ಕೊರೋನಾ ಸಾವುಗಳಲ್ಲಿ ರಾಜ್ಯವು ದೇಶದಲ್ಲಿ 19ನೇ ಸ್ಥಾನದಲ್ಲಿದೆ ಎಂದು ಹೇಳುತ್ತಿದೆ. ಆದರೆ, ಡಿಸೆಂಬರ್ ಅಂತ್ಯದವರೆಗಿನ ಮಾಹಿತಿಯನ್ನು ನೋಡಿದರೆ ರಾಜ್ಯದಲ್ಲಿ ಸಾವಿನ ಪ್ರಮಾಣ ಸುಮಾರು ಶೇ.2.6ರಷ್ಟಿದೆ. ಇದರಿಂದಾಗಿ ದೇಶದಲ್ಲಿ ಕೋವಿಡ್ ಕಾರಣದಿಂದಾಗಿ ಅತಿ ಹೆಚ್ಚು ಮರಣ ಹೊಂದಿದ ರಾಜ್ಯಗಳಲ್ಲಿ ಕರ್ನಾಟಕವು ಪಂಜಾಬ್ ನಂತರದ 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಕೊರೋನಾ ಸಂಬಂಧಿತ ಸಾವುಗಳು ಕಡಿಮೆಯಾಗಿಲ್ಲ. ಸತ್ತವರ ಸಂಖ್ಯೆಯನ್ನು ಬಚ್ಚಿಟ್ಟು ಸುಳ್ಳು ಲೆಕ್ಕ ತೋರಿಸಿ ಜನರನ್ನು ಯಾಮಾರಿಸುತ್ತಿದೆ. ಸಾವುಗಳನ್ನು ಬಚ್ಚಿಟ್ಟು ಸುಳ್ಳು ಹೇಳುವುದು ಸರ್ಕಾರದ ಅಮಾನವೀಯ ನಿಲುವು ಮತ್ತು ನಂಬಿಕೆ ದ್ರೋಹವಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ಅಂಕಿ-ಸಂಖ್ಯೆಗಳನ್ನು ನೀಡುವ ಮೂಲಕ ಸಿದ್ದರಾಮಯ್ಯ ಅವರು ಚಾಟಿ ಬೀಸಿದ್ದರು.
    Published by:HR Ramesh
    First published: