HOME » NEWS » Coronavirus-latest-news » NO PROPOSAL FOR ANOTHER LOCKDOWN IN THE STATE SAYS HEALTH MINISTER DR SUDHAKAR CPTV SNVS

ಮತ್ತೆ ಲಾಕ್​ಡೌನ್ ಇಲ್ಲ; ಆದರೆ ಜನರು ಎಚ್ಚರದಿಂದಿರಬೇಕು: ಆರೋಗ್ಯ ಸಚಿವ ಸುಧಾಕರ್

ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗಬಹುದು ಎಂದು ಹಬ್ಬಿರುವ ಸುದ್ದಿಯನ್ನು ಅರೋಗ್ಯ ಸಚಿವ ಡಾ. ಕೆ ಸುಧಾಕರ್ ಇಂದು ತಳ್ಳಿಹಾಕಿದ್ದಾರೆ. ಸರ್ಕಾರದ ಮುಂದೆ ಅಂಥ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

news18-kannada
Updated:February 20, 2021, 1:53 PM IST
ಮತ್ತೆ ಲಾಕ್​ಡೌನ್ ಇಲ್ಲ; ಆದರೆ ಜನರು ಎಚ್ಚರದಿಂದಿರಬೇಕು: ಆರೋಗ್ಯ ಸಚಿವ ಸುಧಾಕರ್
ಸಚಿವ ಕೆ. ಸುಧಾಕರ್.
  • Share this:
ಬೆಂಗಳೂರು(ಫೆ. 20): ನೆರೆಯ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಪ್ರಕರಣ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಘೋಷಣೆ ಮಾಡಬೇಕಾಗಬಹುದು ಎಂದು ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ನಿನ್ನೆ ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೇ ಜನಸಾಮಾನ್ಯರಲ್ಲಿ ಲಾಕ್​ಡೌನ್ ಭೀತಿ ಎದುರಾಗಿದೆ. ಆದರೆ ರಾಜ್ಯದಲ್ಲಿ ಈಗ ಯಾವುದೇ ಲಾಕ್ ಡೌನ್ ಇಲ್ಲ. ಅಂಥ ಪ್ರಸ್ತಾವನೆ ಸರ್ಕಾರಕ್ಕೆ ಬರುವುದೂ ಬೇಡ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಎಚ್ಚರ ತಪ್ಪದೇ ಜಾಗ್ರತೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.

“ನಾವು ಸಂದಿಗ್ಧ ಸ್ಥಿತಿಗೆ ಸಿಲುಕಿದ್ದೇವೆ. ಲಾಕ್​ಡೌನ್​ನಿಂದಾಗಿ ಆರ್ಥಿಕ ಸ್ಥಿತಿ ಬಿಗಡಾಯಿಸಿತ್ತು. ಹಾಗಾಗಿ ಲಾಕ್​ಡೌನ್ ಹಿಂಪಡೆದು ವಿನಾಯಿತಿ ನೀಡಬೇಕಾಯಿತು. ಆದರೆ ಜನರು ಎಚ್ಚರ ತಪ್ಪಬಾರದು. ಜನರು ಈ ಸಂಕಷ್ಟ ಸ್ಥಿತಿಯನ್ನ ಅರ್ಥ ಮಾಡಿಕೊಂಡು ತಮ್ಮ ನಡವಳಿಕೆಗಳನ್ನ ಬದಲಾಯಿಸಿಕೊಳ್ಳಬೇಕು. ಕೋವಿಡ್ ನಿಯಮಗಳನ್ನ ತಪ್ಪದೇ ಪಾಲಿಸಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇತ್ಯಾದಿ ಅನುಸರಿಸಬೇಕು. ಮಾರ್ಚ್​ನಿಂದ ಎಲ್ಲ ಜನಸಾಮಾನ್ಯರಿಗೂ ಲಸಿಕೆ ಸಿಗುತ್ತದೆ. ಅಲ್ಲಿಯವರೆಗಾದರೂ ಜನರು ಜಾಗ್ರತೆಯಿಂದ ಇರಬೇಕು” ಎಂದು ಸುಧಾಕರ್ ಕರೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಪಿಎಫ್ಐ ರಾಕ್ಷಸರು ಎಂದ ಮುತಾಲಿಕ; ಶ್ರೀರಾಮ ಎಲ್ಲಾ ಸಮುದಾಯಕ್ಕೆ ಸೇರಿದವನು ಎಂದ ಪ್ರಲ್ಹಾದ್ ಜೋಷಿ

“ಕಳೆದ ವಾರದಿಂದ ಮಹಾರಾಷ್ಟ್ರ, ಕೇರಳದಲ್ಲಿ ಕೋವಿಡ್ ಹೆಚ್ಚಾಗುತ್ತಲೇ ಇದೆ. ಕೇರಳದಲ್ಲಿ 5,405 ಪ್ರಕರಣ ನಿನ್ನೆ ಒಂದೇ ದಿನ ದಾಖಲಾಗಿದೆ. ಆ ರಾಜ್ಯದಲ್ಲಿ 60 ಸಾವಿರ ಸಕ್ರಿಯೆ ಪ್ರಕರಣಗಳು ಇವೆ. ಅಲ್ಲಿ ಪ್ರತೀ ದಿನ 15 ಮಂದಿ ಸಾವನ್ನಪ್ಪುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 6,112 ಪ್ರಕರಣಗಳು ದಾಖಲಾಗಿದ್ದು 44 ಮಂದಿ ಬಲಿಯಾಗಿದ್ದಾರೆ. ಹೀಗಾಗಿ ನಾವು ಎಚ್ಚರ ವಹಿಸಬೇಕಿದೆ” ಎಂದು ಡಾ. ಕೆ ಸುಧಾಕರ್ ಕರೆ ನೀಡಿದ್ದಾರೆ.

ಮಹಾರಾಷ್ಟ್ರ ಮತ್ತು ಕೇರಳದ ಗಡಿಭಾಗದಲ್ಲಿ ರಾಜ್ಯದ 10 ಜಿಲ್ಲೆಗಳಿವೆ. ಬೆಳಗಾವಿ, ವಿಜಯಪುರ, ಮೈಸೂರು, ಚಾಮರಾಜನಗರ, ಮಂಗಳೂರು, ಉಡುಪಿ ಜಿಲ್ಲೆಗಳು ಗಡಿಭಾಗದಲ್ಲಿದ್ದು ಅಲ್ಲಿ ಹೆಚ್ಚಿನ ನಿಗಾ ವಹಿಸಿದ್ದೇವೆ. ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಿಂದ ಬರುವವರ ಮೇಲೆ ತೀವ್ರ ನಿಗಾ ಇಟ್ಟಿದ್ದೇವೆ. ಅಲ್ಲಿಂದ ಬರುವವರಿಗೆ ಆರ್​ಟಿ-ಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಿದ್ದೇವೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ಧಾರೆ.

ಇದನ್ನೂ ಓದಿ: ಸಾವಿನ ಕದ ತಟ್ಟುತ್ತಿರುವ ಮಕ್ಕಳು; SMA ಎಂಬ ವಿಚಿತ್ರ ಕಾಯಿಲೆ ಮತ್ತು 16 ಕೋಟಿ ಬೆಲೆಯ ಔಷಧ

ಆರೋಗ್ಯ ಸಿಬ್ಬಂದಿಯೇ ಲಸಿಕೆ ಪಡೆಯುತ್ತಿಲ್ಲ: ಸಚಿವರ ಅಸಮಾಧಾನಸರ್ಕಾರ ಉಚಿತವಾಗಿಯೇ ಲಸಿಕೆ ನೀಡುತ್ತಿದ್ದರೂ ಜನರು ಆಸಕ್ತಿ ತೋರಿಸುತ್ತಿಲ್ಲ ಎಂದು ಸಚಿವ ಸುಧಾಕರ್ ಈ ವೇಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೇ 51ರಷ್ಟು ಮಂದಿ ಮಾತ್ರ ವ್ಯಾಕ್ಸಿನ್ ತೆಗೆದುಕೊಂಡಿದ್ಧಾರೆ. ಅಂದರೆ ಶೇ 49 ಮಂದಿ ಆರೋಗ್ಯ ಇಲಾಖೆ ಸಿಬ್ಬಂದಿ ಇನ್ನೂ ಲಸಿಕೆ ತೆಗೆದುಕೊಂಡಿಲ್ಲ. ಲಸಿಕೆ ತೆಗೆದುಕೊಂಡವರಿಗೂ ಸೋಂಕು ಬರಬಹುದು. ಆದರೆ, ಅಂಥವರ ಸಾವಿನ ಸಾಧ್ಯತೆ ತೀರಾ ಕಡಿಮೆ. ಆದ್ದರಿಂದ ಯಾವುದೇ ಆತಂಕ ಇಲ್ಲದೇ ಲಸಿಕೆ ಪಡೆಯಬೇಕು. ವೈದ್ಯಕೀಯ ಕ್ಷೇತ್ರದ ಜನರೇ ವ್ಯಾಕ್ಸಿನ್ ತೆಗೆದುಕೊಳ್ಳದಿದ್ದರೆ ಜನಸಾಮಾನ್ಯರಿಗೆ ಹೇಗೆ ಧೈರ್ಯ ಹೇಳಲು ಸಾಧ್ಯ? ಸೋಷಿಯಲ್ ಮೀಡಿಯಾದಲ್ಲಿ ಲಸಿಕೆ ಬಗ್ಗೆ ಬರುವ ಊಹಾಪೋಹದ ಮಾಹಿತಿಯನ್ನ ನಂಬಿ ಲಸಿಕೆ ಹಾಕಿಸಿಕೊಳ್ಳಲು ಮೀನಮೇಷ ಎಣಿಸಿದರೆ ಬಲಿಪಶುವಾಗುತ್ತೀರೀ ಎಂದು ಆರೋಗ್ಯ ಸಚಿವರು ಎಚ್ಚರಿಸಿದ್ದಾರೆ.

ವರದಿ: ಚಿದಾನಂದ ಪಟೇಲ್
Published by: Vijayasarthy SN
First published: February 20, 2021, 1:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories