ಚೆಕ್-ಪೋಸ್ಟ್​ನಲ್ಲಿ ಕಾವಲಿರಲು RSS ಕಾರ್ಯಕರ್ತರಿಗೆ ಅನುಮತಿ ನೀಡಿಲ್ಲ: ತೆಲಂಗಾಣ ಪೊಲೀಸ್ ಸ್ಪಷ್ಟನೆ

ಆರೆಸ್ಸೆಸ್ ಸ್ವಯಂಸೇವಕರು ಪೊಲೀಸ್ ಇಲಾಖೆಗೆ ಪ್ರತಿದಿನ 12 ಗಂಟೆ ಕಾಲ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲಾ ಚೆಕ್​ಪಾಯಿಂಟ್​ಗಳಲ್ಲಿ ಸಹಾಯ ಮಾಡುತ್ತಿದ್ದಾರೆ ಎಂಬ ಬರಹವಿರುವ ಫೋಟೋಗಳು ಟ್ವಿಟರ್​ನಲ್ಲಿ ವೈರಲ್ ಆಗಿವೆ.

ಆರೆಸ್ಸೆಸ್ ಕಾರ್ಯಕರ್ತರು ಚೆಕ್ ಪೋಸ್ಟ್​ನಲ್ಲಿ ಕಾರ್ಯನಿರತವಾಗಿರುವುದು

ಆರೆಸ್ಸೆಸ್ ಕಾರ್ಯಕರ್ತರು ಚೆಕ್ ಪೋಸ್ಟ್​ನಲ್ಲಿ ಕಾರ್ಯನಿರತವಾಗಿರುವುದು

 • Share this:
  ಹೈದರಾಬಾದ್: ಹೈದರಾಬಾದ್‌ನ ಹೊರವಲಯದಲ್ಲಿರುವ ಚೆಕ್‌ಪೋಸ್ಟ್‌ವೊಂದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸ್ವಯಂಸೇವಕರು ಲಾಠಿಗಳನ್ನು ಹಿಡಿದು ಪ್ರಯಾಣಿಕರನ್ನು ಸ್ಕ್ಯಾನ್ ಮಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹಲವರಿಂದ ಟೀಕೆಗಳೂ ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ಪ್ರತಿಕ್ರಿಯಿಸಿರುವ ತೆಲಂಗಾಣ ಪೊಲೀಸರು, ತಾವು ಆರೆಸ್ಸೆಸ್ ಕಾರ್ಯಕರ್ತರಿಗೆ ಚೆಕ್ ಪೋಸ್ಟ್ ಕಾಯಲು ಯಾವುದೇ ಅಧಿಕೃತ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿರುವ ಕಾರಣ ಅಲೈರ್ ಎಂಬಲ್ಲಿನ ಚೆಕ್-ಪೋಸ್ಟ್‌ನಲ್ಲಿ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ಪರಿಶೀಲಿಸುವ ಕೆಲಸದಲ್ಲಿ ರಾಜ್ಯ ಪೊಲೀಸರಿಗೆ ತಾವು ಸಹಾಯ ಮಾಡುತ್ತಿರುವುದಾಗಿ ಆರೆಸ್ಸೆಸ್ ಕಾರ್ಯಕರ್ತರು ಹೇಳಿಕೊಂಡಿದ್ದಾರೆ. ಈ ರೀತಿ ಅವರು ಚೆಕ್ ಪೋಸ್ಟ್​ನಲ್ಲಿ ಕೈಯಲ್ಲಿ ಲಾಠಿ ಹಿಡಿದು ಪ್ರಯಾಣಿಕರನ್ನು ತಪಾಸಿಸುತ್ತಿರುವ ಅನೇಕ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿ ವೈರಲ್ ಆಗಿವೆ.

  @friendsofrss ಎಂಬ ಟ್ವಿಟ್ಟರ್ ಖಾತೆಯಲ್ಲಿ ಕೆಲ ಫೋಟೋಗಳನ್ನ ಹಂಚಿಕೊಳ್ಳಲಾಗಿದೆ. ಆರ್‌ಎಸ್‌ಎಸ್ ಸ್ವಯಂಸೇವಕರು ಪೊಲೀಸ್ ಇಲಾಖೆಗೆ ಪ್ರತಿದಿನ 12 ಗಂಟೆಗಳ ಕಾಲ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲಾ ಚೆಕ್‌ಪಾಯಿಂಟ್‌ನಲ್ಲಿ ಸಹಾಯ ಮಾಡುತ್ತಿದ್ದಾರೆ ಎಂಬ ತಲೆಬರಹ ನೀಡಿದ್ದಾರೆ.

  ಇದನ್ನೂ ಓದಿ: Coronavirus: ಸಚಿವರು, ಅಧಿಕಾರಿಗಳಿಗೆ ಸೋಂಕು ತಗುಲಲ್ವಾ? ಜಿಲ್ಲಾ ಪ್ರವಾಸದ ಬದಲು ವಿಡಿಯೋ ಕಾನ್ಫರೆನ್ಸ್ ಆಗಲ್ವಾ?

  ಈ ಹಿಂದೆ ಆರ್‌ಎಸ್‌ಎಸ್ ಕಾರ್ಯಕರ್ತರು ಲಾಕ್‌ಡೌನ್ ಸಮಯದಲ್ಲಿ ಆಹಾರ ಪ್ಯಾಕೆಟ್‌ಗಳನ್ನು ವಿತರಿಸುವ ಚಿತ್ರಗಳನ್ನು ಈ ಖಾತೆ ಹಂಚಿಕೊಂಡಿತ್ತು. ಸ್ವಯಂಸೇವಕರೇ ಸ್ವತಂತ್ರವಾಗಿ ನಿಭಾಯಿಸುತ್ತಿರುವ ಈ ಟ್ವಿಟ್ಟರ್ ಖಾತೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಕೆಲ ಸಂಪುಟ ಸಹೋದ್ಯೋಗಿಗಳು ಹಿಂಬಾಲಿಸುತ್ತಿರುವುದು ಗಮನಾರ್ಹ.  “ಇದನ್ನು ತಪ್ಪು ರೀತಿಯಲ್ಲಿ ತೋರಿಸಲಾಗುತ್ತಿದೆ. ಸ್ವಯಂಸೇವಕರು ಹಲವಾರು ಸ್ಥಳಗಳಲ್ಲಿ ಜನರಿಗೆ ಸಹಾಯ ಮಾಡುತ್ತಾರೆ. ಅದೇ ರೀತಿ, ಚೆಕ್-ಪೋಸ್ಟ್‌ಗಳಲ್ಲಿ ತಾವೂ ನೆರವಿಗೆ ನಿಲ್ಲಬಹುದೇ ಅಲೈರ್‌ನಲ್ಲಿರುವ ಸ್ಥಳೀಯ ಪೊಲೀಸರನ್ನು ಕೇಳಿದ್ದರು. ಅದಕ್ಕೆ, ಅಲ್ಲಿನ ಅಧಿಕಾರಿಗಳು ಒಪ್ಪಿದರು. ಇದು ಯಾವುದೇ ಅಧಿಕೃತ ಚಟುವಟಿಕೆಯಾಗಿರಲಿಲ್ಲ. ಅವರು ಕೇವಲ ಒಂದು ದಿನ ಅವರಿಗೆ ಸಹಾಯ ಮಾಡಿದರು. ಅನಗತ್ಯವಾಗಿ, ಇದಕ್ಕೆ ಕೋಮು ಬಣ್ಣ ಬಳಿಯಲಾಗುತ್ತಿದೆ” ಎಂದು ಆರ್‌ಎಸ್‌ಎಸ್ ರಾಜ್ಯ ಮಾಧ್ಯಮ ಉಸ್ತುವಾರಿ ಆಯುಷ್ ನಾಡಿಂಪಲ್ಲಿ ನ್ಯೂಸ್ 18 ಗೆ ತಿಳಿಸಿದ್ದಾರೆ.

  ಇದನ್ನೂ ಓದಿ: ಕೊರೋನಾ ಭೀತಿ; ನಿಮ್ಮ ದೇಶದ ಪ್ರಜೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಿ; ಭಾರತಕ್ಕೆ ಯುಎಇ ತಾಕೀತು

  ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿರುವ ಚಿತ್ರಗಳಲ್ಲಿ ಆರೆಸ್ಸೆಸ್ ಸ್ವಯಂಸೇವಕರು ಕೈಯಲ್ಲಿ ಲಾಠಿ ಹಿಡಿದುಕೊಂಡಿರುವುದಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಷ್ ನಾಡಿಂಪಲ್ಲಿ, ಲಾಠಿಗಳು ಆರ್‌ಎಸ್‌ಎಸ್ ಸಮವಸ್ತ್ರದ ಭಾಗವಾಗಿದೆ. ಚೆಕ್ ಪೋಸ್ಟ್​ಗೆ ಹೋದಾಗಲೂ ಲಾಠಿ ಹಿಡಿದುಕೊಂಡು ಹೋಗಿದ್ದಾರೆ. ಅದರಲ್ಲೇನು ವಿಶೇಷತೆ ಇಲ್ಲ ಎಂದಿದ್ದಾರೆ.

  ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಾಗವತ್ ಕೂಡ ಪ್ರತಿಕ್ರಿಯಿಸಿದ್ದು, ಚೆಕ್ ಪೋಸ್ಟ್ ಕಾವಲಿರಲು ಆರೆಸ್ಸೆಸ್​ಗೆ ಅನುಮತಿ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೇ, ವಿವಾದ ಶಮನಕ್ಕೆ ಪ್ರಯತ್ನ ಮಾಡಿದ್ಧಾರೆ.

  “ನಮಗೆ ಗುರುವಾರ ಭೋಂಗೀರ್‌ನಿಂದ ಕೆಲವು ಫೋಟೋಗಳು ಲಭಿಸಿದ್ದವು. ವಿಚಾರಣಿ ಮಾಡಿದಾಗ ಆರ್‌ಎಸ್‌ಎಸ್ ಸದಸ್ಯರು ಸ್ವಯಂಸೇವಕರಾಗಿ ಬಂದಿರುವುದು ತಿಳಿಯಿತು. ನಾನು ಆರ್‌ಎಸ್‌ಎಸ್ ಜನರೊಂದಿಗೆ ಮಾತನಾಡಿದೆ. ಚೆಕ್-ಪೋಸ್ಟ್‌ಗಳಲ್ಲಿ ಪೊಲೀಸರಿಗೆ ಸಹಾಯದ ಅಗತ್ಯವಿಲ್ಲ. ಈ ಕೆಲಸಕ್ಕೆ ತಮಗೆ ಅಧಿಕೃತ ಅನುಮತಿ ಇಲ್ಲ ಎಂದು ಅವರಿಗೆ ತಿಳಿಸಿದ ನಂತರ ಅವರು ಮತ್ತೆ ಬರಲಿಲ್ಲ” ಎಂದವರು ಹೇಳಿದ್ದಾರೆ.

  - ಸಂಧ್ಯಾ ಎಂ.

  First published: