ನವ ದೆಹಲಿ (ಜುಲೈ 11); ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿ ಕೊರೋನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಮಿತಿ ಮೀರುತ್ತಲೇ ಇದೆ. ಅಲ್ಲಿನ ರಾಜ್ಯ ಮತ್ತು ಕೇಂದ್ರ ಸರ್ಕಾರ ಎಷ್ಟೇ ಪ್ರಯತ್ನಿಸಿದರೂ ಕೊರೋನಾ ಸೋಂಕನ್ನು ನಿಯಂತ್ರಿಸುವುದು ಸಾಧ್ಯವಾಗುತ್ತಿಲ್ಲ. ಈಗಾಗಲೇ ಕೊರೋನಾ ಸಾಮೂದಾಯಿಕವಾಗಿಯೂ ಹರಡಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಇಂದು ವಿಶ್ವವಿದ್ಯಾಲಯಗಳ ಮಟ್ಟದ ಎಲ್ಲಾ ಪರೀಕ್ಷೆಗಳನ್ನೂ ರದ್ದು ಮಾಡಿ, ಹಿಂದಿನ ವರ್ಷದ ಅಂಕದ ಮೇಲೆಯೇ ಫಲಿತಾಂಶ ನೀಡುವುದಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಈ ಕುರಿತು ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿರುವ ದೆಹಲಿ ಸರ್ಕಾರದ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, "ಪ್ರಸ್ತುತ ವರ್ಷ ರಾಜ್ಯಾದ್ಯಂತ ಯಾವ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ. ಹಿಂದಿನ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ತೆಗೆದುಕೊಂಡ ಅಂಕದ ಮೇಲೆ ಈ ವರ್ಷ ಅವರ ಮೌಲ್ಯಮಾಪನ ಮಾಡಲಾಗುತ್ತದೆ. ಈ ನಿರ್ಧಾರವು ಮೂರನೇ (ಅಂತಿಮ) ವರ್ಷದ ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ" ಎಂದು ತಿಳಿಸಿದ್ದಾರೆ.
ರಾಷ್ಟ್ರದಾದ್ಯಂತ ಇಂದು ಕೊರೋನಾ ವ್ಯಾಪಿಸಿದೆ. ಆದರೆ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಮಾತ್ರ ಈ ಸೋಂಕು ಮಿತಿ ಇಲ್ಲದಂತೆ ಹರಡುತ್ತಿದೆ. ಇಡೀ ದೇಶದಲ್ಲಿ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ಕುಖ್ಯಾತಿಗೆ ಒಳಗಾಗಿರುವ ಮಹಾರಾಷ್ಟ್ರ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ದೆಹಲಿ ಎರಡನೇ ಸ್ಥಾನದಲ್ಲಿದೆ.
ಇದನ್ನೂ ಓದಿ : ಎಸ್‌ಬಿಐ ನಕಲಿ ಶಾಖೆ ನಡೆಸಿದ ಮಾಜಿ ಬ್ಯಾಂಕ್ ಉದ್ಯೋಗಿಯ ಮಗ ಸೇರಿ ಮೂವರು ಇದೀಗ ಪೊಲೀಸರ ಅತಿಥಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈವರೆಗೆ 1,09,140 ಜನರಲ್ಲಿ ಕೊರೋನಾ ಪತ್ತೆಯಾಗಿದೆ. ಅಲ್ಲದೆ, ಬರೋಬ್ಬರಿ 3,300 ಜನ ಈ ಸೋಂಕಿಗೆ ಬಲಿಯಾಗಿದ್ದಾರೆ. ಉಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ದೆಹಲಿಯಲ್ಲಿ ದಿನದಿಂದ ದಿನಕ್ಕೆ ಸೋಂಕು ಹರಡುತ್ತಿರುವ ಪ್ರಮಾಣ ಮಾತ್ರ ಊಹೆಗೂ ನಿಲುಕದಷ್ಟು ಹೆಚ್ಚಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಗಮನದಲ್ಲಿಟ್ಟು ದೆಹಲಿ ಸರ್ಕಾರ ಇಂತಹ ನಿರ್ಧಾರಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ