ನವದೆಹಲಿ (ಜ. 12): ದೇಶದಲ್ಲಿ ಕೊರೋನಾ ಸೋಂಕು (Covid) ಮತ್ತೆ ಉಲ್ಬಣಗೊಂಡಿದ್ದು, ಈ ನಡುವೆ ಅನೇಕರಲ್ಲಿ ಎರಡನೇ ಬಾರಿ ಸೋಂಕು ಕಂಡು ಬರುತ್ತಿದೆ. ಈ ಹಿಂದೆ ಸೋಂಕಿನಿಂದ ಚೇತರಿಸಿಕೊಂಡಿದ್ದ ನಿತಿನ್ ಗಡ್ಕರಿ (Nitin Gadkari) ಅವರಿಗೆ ಇದೀಗ ಮತ್ತೊಮ್ಮೆ ಕೋವಿಡ್ ಪಾಸಿಟಿವ್ ಆಗಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ತಮಗೆ ಸೋಂಕಿನ ಸೌಮ್ಯ ಲಕ್ಷಣಗಳು ಕಂಡು ಬಂದಿದ್ದು, ವರದಿಯಲ್ಲಿ ಕೋವಿಡ್ ಪಾಸಿಟಿವ್ (Covid Positive) ಆಗಿದೆ. ಈ ಹಿನ್ನಲೆ ಮನೆಯಲ್ಲಿಯೇ ಐಸೋಲೇಷನ್ಗೆ ಒಳಗಾಗುತ್ತಿದ್ದೇನೆ. ತಮ್ಮ ಸಂಪರ್ಕಕ್ಕೆ ಒಳಗಾದವರು ಸುರಕ್ಷೆ ವಹಿಸಿ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಪಂಜಾಬ್ ಮಾಜಿ ಸಿಎಂಗೆ ಸೋಂಕು
ಇನ್ನು ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಕೂಡ ತಮಗೆ ಸೋಂಕು ದೃಢವಾಗಿರುವ ಸಂಬಂಧ ಇಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಪಂಜಾಬ್ ವಿಧಾನಸಭಾ ಚುನಾವಣೆಗೆ ಒಂದು ತಿಂಗಳು ಇರಬೇಕಾದರೆ ಅವರು ಸೋಂಕಿಗೆ ತುತ್ತಾಗಿದ್ದು, ಚುನಾವಣಾ ಪ್ರಚಾರ ಸಮಾವೇಶದಿಂದ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಇದೇ ವೇಳೆ ಪಂಜಾಬ್ ಸಾರಿಗೆ ಸಚಿವ ಅಮರಿಂದರ್ ಸಿಂಗ್ ರಾಜಾ ಕೂಡ ಸೋಂಕಿಗೆ ತುತ್ತಾಗಿದ್ದು. ಮನೆಯಲ್ಲಿಯೇ ಐಸೋಲೇಷನ್ಗೆ ಒಳಗಾಗಿದ್ದಾರೆ.
ಇದನ್ನು ಓದಿ: ಕೇಂದ್ರ ಸರ್ಕಾರದ ಟ್ವಿಟರ್ ಖಾತೆ ಹ್ಯಾಕ್; ಮಾಡಿದ್ದು ಯಾರು ಗೊತ್ತಾ?
ಚೇತರಿಕೆ ಕಾಣುತ್ತಿರುವ ರಾಜನಾಥ್ ಸಿಂಗ್ ಆರೋಗ್ಯ
ಕಳೆದ ಮೂರು ದಿನಗಳ ಹಿಂದೆ ಅಂದರೆ ಸೋಮವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೂಡ ಸೋಂಕಿಗೆ ತುತ್ತಾಗಿದ್ದರು. ಈ ಸಂಬಂಧ ಟ್ವೀಟ್ ಮೂಲಕ ದೃಢ ಪಡಿಸಿದ್ದರು. ಸದ್ಯ ಅವರು ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸೇನಾ ಆಸ್ಪತ್ರೆ ವೈದ್ಯರ ತಂಡ ತಿಳಿಸಿದೆ. ಇದೇ ವೇಳೆ ಪಂಜಾಬ್ ಕಾಂಗ್ರೆಸ್ ಸಂಸದ ಪಟಿಯಾಲ ಕೂಡ ಸೋಂಕಿಗೆ ತುತ್ತಾಗಿದ್ದಾರೆ.
ಇದನ್ನು ಓದಿ: ಪಂಚ ರಾಜ್ಯಗಳ ಚುನಾವಣೆಯಲ್ಲಿ ವರ್ಚ್ಯುಯಲ್ ರ್ಯಾಲಿ ನಡೆಸಲು ಕಾಂಗ್ರೆಸ್ ತಯಾರಿ
ಸೋಂಕಿಗೆ ತುತ್ತಾದ ರಾಜಕೀಯ ನಾಯಕರು
ಕಳೆದ ಕೆಲವು ದಿನಗಳ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಸೋಂಕಿಗೆ ತುತ್ತಾಗಿದ್ದರು. ದೆಹಲಿಯಲ್ಲಿ ಸೋಂಕು ಉಲ್ಬಣಿಸುತ್ತಿರುವ ಹೊತ್ತಿನಲ್ಲಿ ಅವರಿಗೂ ಕೂಡ ಸೋಂಕು ದೃಢವಾಗಿತ್ತು. ಇನ್ನು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಕಳೆದ ಐದು ದಿನಗಳ ಹಿಂದೆ ಸೋಂಕಿಗೆ ತುತ್ತಾಗಿದ್ದಾಗಿ ದೃಢಪಡಿಸಿದ್ದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಲ್ಲಿ ಕೂಡ ಕೋವಿಡ್ ಸೋಂಕು ದೃಢ ಗೊಂಡಿದೆ, ಇದರ ಜೊತೆಗೆ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿಗೂ ಸೋಂಕು ದೃಢಗೊಂಡಿದದೆ. ಸೋಂಕು ದೃಢಗೊಂಡ ಹಿನ್ನಲೆ ಮನೆಯಲ್ಲಿ ಐಸೋಲೇಷನ್ಗೆ ಅವರು ಒಳಗಾಗಿದ್ದಾರೆ. ಬೊಮ್ಮಾಯಿ ಅವರಿಗೆ ಸೋಂಕು ಕಾಣಿಸಿಕೊಂಡ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಕರೆ ಮಾಡಿ ಅವರ ಆರೋಗ್ಯವನ್ನು ವಿಚಾರಿಸಿಕೊಂಡಿದ್ದರು.
ಎರಡನೇ ಬಾರಿ ಕಾಣಿಸಿಕೊಳ್ಳುತ್ತಿರುವ ಸೋಂಕು
ದೇಶದಲ್ಲಿ ಲಸಿಕೆ ಕಾರ್ಯಕ್ಕೆ ಚಾಲನೆಗೊಂಡಿದ್ದು, ಈಗಾಗಲೇ ಅನೇಕರು ಎರಡು ಬಾರಿ ಲಸಿಕೆ ಪಡೆದಿದ್ದಾರೆ. ಆದರೂ ಕೂಡ ಅವರಲ್ಲಿ ಕೋವಿಡ್ ಸೋಂಕು ಕಂಡು ಬರುತ್ತಿದೆ. ಈ ಕುರಿತು ಮಾತನಾಡಿರುವ ವೈದ್ಯರು ಲಸಿಕೆ ಪಡೆದ ಬಳಿಕ ಸೋಂಕು ಕಂಡು ಬಂದರೆ ಹೆದರುವ ಅಗತ್ಯ ಇಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮ ವಹಿಸುವುದು ಅವಶ್ಯ ಎಂದಿದ್ದಾರೆ. ಇನ್ನು ಕೋವಿಡ್ ನ ಹೊಸ ರೂಪಾಂತಾರವಾಗಿರುವ ಓಮೈಕ್ರಾನ್ ಸೋಂಕು ಈಗಾಗಲೇ ಸಮುದಾಯಕ್ಕೆ ಹಬ್ಬಿದ್ದು, ಇದು ಲಸಿಕೆ ಪಡೆದರಲ್ಲೂ ಕಾಣಿಸಿಕೊಳ್ಳಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಓಮೈಕ್ರಾನ್ ಸೌಮ್ಯ ಸ್ವಭಾವದ ಲಕ್ಷಣ ಹೊಂದಿದೆ. ಫೆಬ್ರವರಿಯಲ್ಲಿ ದೇಶದಲ್ಲಿ ಸೋಂಕು ಗರಿಷ್ಠ ಮಟ್ಟಕ್ಕೆ ಏರಲಿದ್ದು, ಬಳಿಕ ಇಳಿಕೆ ಕಾಣಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ