CoronaVirus; ಮಹಾರಾಷ್ಟ್ರದಲ್ಲಿ ರಾತ್ರಿ ಕರ್ಫ್ಯೂ, ಯುರೋಪ್​, ಮಧ್ಯಪ್ರಾಚ್ಯದಿಂದ ಬಂದವರ ಕ್ವಾರಂಟೈನ್

ರಾತ್ರಿ ಕರ್ಫ್ಯೂ ಅವಧಿಯಲ್ಲಿ ತರಕಾರಿಗಳು ಮತ್ತು ಹಾಲಿನ ಪೂರೈಕೆಯಂತಹ ಅಗತ್ಯ ಸೇವೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದಾಗ್ಯೂ, ಈ ಸಮಯದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಐದು ಜನರಿಗಿಂತ ಹೆಚ್ಚು ಜನರು ಸೇರಲು ಅವಕಾಶ ಇಲ್ಲ ಎಂದು ಎಚ್ಚರಿಸಲಾಗಿದೆ.

ಉದ್ದವ್ ಠಾಕ್ರೆ.

ಉದ್ದವ್ ಠಾಕ್ರೆ.

 • Share this:
  ಮುಂಬೈ: ಮಾರಣಾಂತಿಕ ಕೊರೋನಾ ಸೋಂಕು ಮತ್ತಷ್ಟು ಹರಡದಂತೆ ತಡೆಯುವ ಸಲುವಾಗಿ ಬೃಹನ್ಮುಂಬೈ ಮತ್ತು ಮಹಾರಾಷ್ಟ್ರದ ಇತರ ನಗರಗಳಲ್ಲಿ ಸೋಮವಾರದಿಂದ ಜನವರಿ 5 ರವರೆಗೆ ರಾತ್ರಿ 11 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಕರ್ಫ್ಯೂ ವಿಧಿಸಲಾಗಿದೆ. ಇದಲ್ಲದೆ, ಯುರೋಪ್ ಮತ್ತು ಮಧ್ಯಪ್ರಾಚ್ಯದಿಂದ ಆಗಮಿಸುವವರಿಗೆ ಹೊಸ ಕ್ಯಾರೆಂಟೈನ್ ನಿಯಮಗಳನ್ನು ಪ್ರಕಟಿಸಲಾಗಿದ್ದು, ಪ್ರಯಾಣಿಕರನ್ನು ಕನಿಷ್ಟ 14 ದಿನ ಸ್ಥಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸುವುದನ್ನು ಕಡ್ಡಾಯ ಮಾಡಲಾಗಿದೆ. ಉಳಿದ ಎಲ್ಲರೂ ಈ ಅವಧಿಯಲ್ಲಿ ಮನೆಯಲ್ಲೇ ಪ್ರತ್ಯೇಕವಾಗಿರಬೇಕು ಎಂದು ಮಹಾರಾಷ್ಟ್ರ ಸರ್ಕಾರ ಸೋಮವಾರ ಸಂಜೆ ಅಧಿಸೂಚನೆ ಹೊರಡಿಸಿದೆ. ಈ ನಡುವೆ  ಲಂಡನ್ ಸೇರಿದಂತೆ ಹಲವಾರು ದೇಶಗಳಿಂದ ವಿಮಾನಯಾನವನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

  ಯುಕೆ ವಿಮಾನಗಳು ಭಾರತಕ್ಕೆ ಪ್ರವೇಶಿಸದಂತೆ ತೀರ್ಮಾನಿಸಿರುವ ಕೇಂದ್ರ ವಿಮಾನಯಾನ ಇಲಾಖೆಯ ಅಧಿಸೂಚನೆ ಬುಧವಾರದಿಂದ ಚಾಲ್ತಿಗೆ ಬರಲಿದೆ. ಆದರೆ, ಈಗಾಗಲೇ ಹೊರಟಿರುವ ಐದು ವಿಮಾನಗಳು ಇಂದು ರಾತ್ರಿ ಮುಂಬೈಗೆ ಆಗಮಿಸುವ ನಿರೀಕ್ಷೆ ಇದ್ದು, ಸುಮಾರು 1000ಕ್ಕೂ ಪ್ರಯಾಣಿಕರು ಆಗಮಿಸುವ ನಿರೀಕ್ಷೆ ಇದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ಆಯುಕ್ತರು ಸುದ್ದಿ ಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದಾರೆ.

  ಲಂಡನ್​ನಿಂದ ಆಗಮಿಸಲಿರುವ ಎಲ್ಲಾ ಪ್ರಯಾಣಿಕರನ್ನು ಆರ್​ಟಿ-ಪಿಸಿಆರ್​ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ವೇಳೆ ಕೊರೋನಾ ಸೋಂಕು ದೃಢಪಟ್ಟ ವ್ಯಕ್ತಿಗಳನ್ನು ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸಿದರೆ, ಉಳಿದವರನ್ನು ಮನೆಯಲ್ಲೇ 07ದಿನ ಪ್ರತ್ಯೇಕತೆಯಲ್ಲಿ ಇರುವಂತೆ ಸೂಚಿಸಲಾಗುವುದು ಎಂದು ಹೊಸ ಕ್ವಾರಂಟೈನ್​ ನಿಯಮದಲ್ಲಿ ತಿಳಿಸಲಾಗಿದೆ.

  ಈ ಕುರಿತು ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​, "ಯಾರೂ ಭಯಪಡುವ ಅಗತ್ಯವಿಲ್ಲ. ಸರ್ಕಾರ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟಿದೆ. ಸಾರ್ವಜನಿಕರು ಕಾಲ್ಪನಿಕ ಸನ್ನಿವೇಶಗಳಿಂದ ತೊಂದರೆಗೆ ಒಳಗಾಗದೆ ಸಂಪೂರ್ಣವಾಗಿ ಎಚ್ಚರದಿಂದಿರಿ" ಎಂದು ಸಲಹೆ ನೀಡಿದ್ದಾರೆ.

  ಮುಂಬೈನಲ್ಲಿ ರಾತ್ರಿ ಕರ್ಫ್ಯೂ:

  ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಈ ಸೋಂಕು ಹರಡುವುದನ್ನು ತಡೆಯಲು ಭಾನುವಾರ ಕರ್ಫ್ಯೂ ಜಾರಿಗೆ ತರಬೇಕು ಎಂದು ಅನೇಕ ತಜ್ಞರು ಮಹಾರಾಷ್ಟ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಆದರೆ, ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಈ ಎಲ್ಲಾ ಆಲೋಚನೆಗಳನ್ನೂ ತಿರಸ್ಕರಿಸಿದ್ದರು.

  ಇದನ್ನೂ ಓದಿ : Coronavirus Mutation: ಮ್ಯೂಟಂಟ್​ ಕೊರೋನಾ ವೈರಸ್​; ಬ್ರಿಟನ್​ನ ಈ ಸೋಂಕಿನ ಬಗ್ಗೆ ಇರಲಿ ಎಚ್ಚರ

  ಆದರೆ, ಇದೀಗ ಲಂಡನ್​ನಲ್ಲಿ ಹೊಸ ರೂಪಾಂತರದ ಕೊರೋನಾ ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂಗೆ ಸಮ್ಮತಿ ನೀಡಿದ್ದಾರೆ. ಹೀಗಾಗಿ ಮುಂದಿನ ಜನವರಿ 5ರ ವರೆಗೆ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ರಾತ್ರಿ ಕರ್ಫ್ಯೂವನ್ನು ಪಾಲಿಸಲಾಗುತ್ತದೆ.

  ರಾತ್ರಿ ಕರ್ಫ್ಯೂ ಅವಧಿಯಲ್ಲಿ ತರಕಾರಿಗಳು ಮತ್ತು ಹಾಲಿನ ಪೂರೈಕೆಯಂತಹ ಅಗತ್ಯ ಸೇವೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದಾಗ್ಯೂ, ಈ ಸಮಯದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಐದು ಜನರಿಗಿಂತ ಹೆಚ್ಚು ಜನರು ಸೇರಲು ಅವಕಾಶ ಇಲ್ಲ ಎಂದು ಎಚ್ಚರಿಸಲಾಗಿದೆ.
  Published by:MAshok Kumar
  First published: