Corona Vaccine: ಇಂಜೆಕ್ಷನ್ ಭಯಕ್ಕೆ ಲಸಿಕೆಯಿಂದ ದೂರ ಇದ್ದೀರಾ? ಕೋವಿಡ್ ವ್ಯಾಕ್ಸಿನ್ ಇನ್ಮುಂದೆ ಡ್ರಾಪ್ಸ್ ರೀತಿಯಲ್ಲಿ ಇರಲಿದೆ !

BBV154 ಎನ್ನುವ ಈ ಲಸಿಕೆಯ ಪ್ರಿ-ಕ್ಲಿನಿಕಲ್ ಟ್ರಯಲ್ ಈಗಾಗಲೇ ಆರಂಭವಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಜುಲೈ ವೇಳೆಗೆ ಕ್ಲಿನಿಕಲ್ ಟ್ರಯಲ್​ಗಳು ಮುಗಿದು ಆಗಸ್ಟ್​ಗೆ ಈ ಲಸಿಕೆ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Corona Vaccine: ಇದೊಂದು ಆವಿಷ್ಕಾರ ನಿಜಕ್ಕೂ ಬಹಳ ಅವಶ್ಯಕವಿತ್ತು. ಕೋವಿಡ್ ಲಸಿಕಾ ಕಾರ್ಯಕ್ರಮದ ಸ್ವರೂಪವನ್ನೇ ಬದಲಾಯಿಸಿಬಿಡುವ ದೊಡ್ಡ ಸಂಶೋಧನೆಯೊಂದು ಕೊನೆಯ ಘಟ್ಟದಲ್ಲಿದೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಮೂಗಿಗೆ ಹಾಕುವ ಹನಿಗಳ ರೂಪದ ಕೋವಿಡ್ ಲಸಿಕೆಯನ್ನು ತಯಾರಿಸುತ್ತಿದೆ. ಇದರ ಕ್ಲಿನಿಕಲ್ ಟ್ರಯಲ್ ಕೂಡಾ ಈಗಾಗಲೇ ಆರಂಭವಾಗಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಇದು ಬಹು ದೊಡ್ಡ ಬದಲಾವಣೆ ತರುವ ನಿರೀಕ್ಷೆ ಇದೆ. ಲಸಿಕೆ ಪಡೆದ 14 ದಿನಗಳೊಳಗೆ ದೇಹದೊಳಗೆ ಪ್ರತಿರೋಧಕ ಶಕ್ತಿಯನ್ನು ಇದು ಪ್ರಚೋದಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹೆಚ್ಚಾಗಿ ಮೂಗಿನಿಂದಲೇ ವೈರಸ್ ದೇಹದೊಳಗೆ ಹೋಗೋದ್ರಿಂದ ಆ ಮಾರ್ಗವನ್ನೇ ಮೊದಲು ಕ್ಲಿಯರ್ ಮಾಡಿದಂತಾಗುತ್ತದೆ. ಯಾಕೆಂದರೆ ಕೊರೊನಾ ವೈರಸ್ ಮೊದಲು ಮೂಗಿನೊಳಗೆ ಭದ್ರವಾಗಿ ನೆಲೆಯೂರಿ ನಂತರ ಅಲ್ಲಿಂದ ದೇಹದ ಇತರೆ ಭಾಗಗಳಿಗೆ ಸರಾಗವಾಗಿ ಹರಡುತ್ತದೆ ಎನ್ನಲಾಗಿದೆ.

ಈಗ ಜಗತ್ತಿನಲ್ಲಿ ಲಭ್ಯವಿರುವ ಎಲ್ಲಾ ಕೋವಿಡ್ ಲಸಿಕೆಗಳು ಇಂಜೆಕ್ಷನ್ ರೂಪದಲ್ಲೇ ಇವೆ. ಹಾಗಾಗಿ ಲಸಿಕೆ ಜೊತೆಗೆ ಸಿರಿಂಜ್​ಗಳ ಬೇಡಿಕೆ ಕೂಡಾ ಹೆಚ್ಚೇ ಇದೆ. ಭಾರತದ ಎಲ್ಲಾ ನಾಗರಿಕರಿಗೆ ವ್ಯಾಕ್ಸಿನ್ ನೀಡಲು ಕನಿಷ್ಠ 260 ಕೋಟಿ ಸಿರಿಂಜ್​ಗಳು ಬೇಕಾಗುತ್ತವೆ. ಈ ಎಲ್ಲಾ ವಿಚಾರಗಳನ್ನು ಗಮನಿಸಿದಾಗ ನೇಸಲ್ ಡ್ರಾಪ್ಸ್ ಅಥವಾ ಮೂಗಿಗೆ ಹಾಕುವ ಹನಿಗಳ ರೂಪದ ವ್ಯಾಕ್ಸಿನ್ ಬಹು ದೊಡ್ಡ ವರದಾನದಂತೆ ಕಂಡುಬಂದಿದೆ.

ಇದನ್ನೂ ಓದಿ: Covishield ಬೇಡ, Covaxin ಬೇಕು ಎನ್ನುವವರು ಇಲ್ಲಿ ನೋಡಿ, ಕೋವ್ಯಾಕ್ಸಿನ್ ತೆಗೆದುಕೊಂಡವರನ್ನು ಅನೇಕ ದೇಶಗಳು ಒಳಗೆ ಸೇರಿಸುತ್ತಿಲ್ಲ !

ಅಷ್ಟೇ ಅಲ್ಲ, ಈ ಮೂಗಿನ ಹನಿಗಳ ಲಸಿಕೆ ಕೇವಲ ಒಂದೇ ಡೋಸ್ ಪಡೆದರೆ ಸಾಕು. ಬೇರೆ ಬಗೆಯ ಲಸಿಕೆಗಳಿಗೆ ಹೋಲಿಸಿದ್ರೆ ಇದರಲ್ಲಿ ಅಡ್ಡಪರಿಣಾಮಗಳು ಕೂಡಾ ಕಡಿಮೆಯೇ. ಸದ್ಯ ಭಾರತದಲ್ಲಿ ನೀಡಲಾಗುತ್ತಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆ ನೀಡಿ ಎರಡು ವಾರಗಳ ನಂತರ ಪ್ರತಿರೋಧಕ ಶಕ್ತಿ ಬೆಳೆಸುವ ಸಾಮರ್ಥ್ಯ ಹೊಂದಿವೆ.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ವಾಷಿಂಗ್ಟನ್ ಯೂನಿವರ್ಸಿಟಿ ಆಫ್ ಮೆಡಿಸಿನ್ ಜೊತೆಗೆ ಭಾರತ್ ಬಯೋಟೆಕ್ ಈ ಸಂಬಂಧ ಒಪ್ಪಂದ ಮಾಡಿಕೊಂಡಿತ್ತು. BBV154 ಎನ್ನುವ ಈ ಲಸಿಕೆಯ ಪ್ರಿ-ಕ್ಲಿನಿಕಲ್ ಟ್ರಯಲ್ ಈಗಾಗಲೇ ಆರಂಭವಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಜುಲೈ ವೇಳೆಗೆ ಕ್ಲಿನಿಕಲ್ ಟ್ರಯಲ್​ಗಳು ಮುಗಿದು ಆಗಸ್ಟ್​ಗೆ ಈ ಲಸಿಕೆ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.

ಚೈನಾ ಮತ್ತು ಬ್ರಿಟನ್​ನಲ್ಲೂ ಇಂಥದ್ದೇ ಸಂಶೋಧನೆಗಳು ನಡೆಯುತ್ತಿವೆ. ಮೂಗಿಗೆ ಹಾಕುವ ವೆಕ್ಟರ್ಡ್​ ಲಸಿಕೆ ಕೋವಿಡ್ ವಿರುದ್ಧದ ಹೋರಾಟಕ್ಕೆ ಭಾರೀ ವೇಗ ಕೊಡಲಿದೆ ಎನ್ನುವ ನಂಬಿಕೆ ವಿಜ್ಞಾನಿಗಳದ್ದು.

ಆದ್ರೆ ಇಂಜೆಕ್ಷನ್ ಭಯಕ್ಕೆ ಲಸಿಕೆ ಪಡೆಯದೆ ಉಳಿದ ಅನೇಕರ ಪಾಲಿಗಂತೂ ಇದು ಬಹಳ ದೊಡ್ಡ ಶುಭಸುದ್ದಿಯಾಗಿದೆ. ಕೋವಿಡ್ ಭಯ ಇದ್ದರೂ ಸೂಜಿಯ ಭಯ ಅದಕ್ಕಿಂತ ದೊಡ್ಡದಿರುವ ಎಷ್ಟೋ ಜನ ಇನ್ನೂ ಇದ್ದಾರೆ. ಜೊತೆಗೆ ಹನಿಗಳ ರೂಪದ ಲಸಿಕೆ ಮಕ್ಕಳಿಗೆ ನೀಡಲು ಸಾಧ್ಯವಾಗುತ್ತದೆಯಾ ಎನ್ನುವ ಆಶಾಭಾವನೆಯೂ ಇದರಲ್ಲಿದೆ.
Published by:Soumya KN
First published: