Covid Vaccine: ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆಗೆ ಚೈನಾ ಲಸಿಕೆಗೆ ಒಪ್ಪಿಗೆ ಸೂಚಿಸಿದೆ. ಚೀನೀ ಸಂಸ್ಥೆ ಸಿನೋಫಾರ್ಮ್ ಈ ಲಸಿಕೆಯನ್ನು ತಯಾರಿಸಿದೆ. ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಹೊರತುಪಡಿಸಿ ಬೇರ್ಯಾವುದೇ ದೇಶ ತಯಾರಿಸಿದ ಲಸಿಕೆಯೊಂದಕ್ಕೆ ಇದೇ ಮೊದಲ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆ ಅಂಕಿತ ಬಿದ್ದಿದೆ. ಚೈನಾ ಮತ್ತು ಬೇರೆ ಕೆಲ ದೇಶಗಳ ಲಕ್ಷಾಂತರ ಜನರಿಗೆ ಈಗಾಗಲೇ ಈ ಲಸಿಕೆ ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಇದುವರಗೆ ಫೈಜರ್, ಆಸ್ಟ್ರಾಜೆನೆಕಾ, ಜಾನ್ಸನ್ & ಜಾನ್ಸನ್ ಮತ್ತು ಮಾಡೆರ್ನಾ ತಯಾರಿಸಿದ ಲಸಿಕೆಗಳಿಗೆ ಮಾತ್ರ ಒಪ್ಪಿಗೆ ಸೂಚಿಸಿದೆ.
ಆದರೆ ಆಫ್ರಿಕಾದ ಬಡ ರಾಷ್ಟ್ರಗಳೂ ಸೇರಿದಂತೆ ಲ್ಯಾಟಿನ್ ಅಮೇರಿಕಾ ಮತ್ತು ಏಷ್ಯಾದ ಕೆಲ ರಾಷ್ಟ್ರಗಳಲ್ಲಿ ಈಗಾಗಲೇ ಚೀನೀ ಲಸಿಕೆ ಬಳಕೆಯಾಗುತ್ತಿದೆ. ಚೀನೀ ಲಸಿಕೆಗಳ ಸಾಮರ್ಥ್ಯದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನಿಶ್ಚಿತತೆ ಇದೆ. ಆದರೆ ಶುಕ್ರವಾರ ವಿಶ್ವ ಆರೋಗ್ಯ ಸಂಸ್ಥೆ ಸಿನೊಫಾರ್ಮ್ ಲಸಿಕೆಯನ್ನು ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ್ದು ಎಂದು ಅಂಗೀಕರಿಸಿದೆ.
ಈ ಹೊಸಾ ಲಸಿಕೆ ಸೇರ್ಪಡೆ ಅನೇಕ ದೇಶಗಳಲ್ಲಿ ವೇಗವಾಗಿ ಲಸಿಕೆ ನೀಡಲು ಮತ್ತು ಆರೋಗ್ಯ ಕಾರ್ಯಕರ್ತರು ಮತ್ತು ಫ್ರಂಟ್ಲೈನ್ ವರ್ಕರ್ಸ್ನ್ನು ಸೋಂಕಿನಿಂದ ಕಾಪಾಡಲು ಬಹಳ ಅವಶ್ಯಕವಾಗಿದೆ ಎಂದೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 18 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಈ ಲಸಿಕೆಯನ್ನು ನೀಡಬಹುದಾಗಿದೆ. ಭವಿಷ್ಯದಲ್ಲಿ ಮತ್ತೊಂದು ಚೈನಾ ಲಸಿಕೆ ಸಿನೊವ್ಯಾಕ್ ಕೂಡಾ ಬಿಡುಗಡೆಯಾಗುವ ಸಾಧ್ಯತೆ ಇದೆ. ರಷ್ಯಾದ ಸ್ಪುಟ್ನಿಕ್ ವ್ಯಾಕ್ಸಿನ್ ಇನ್ನೂ ಪರಿಶೀಲನೆಯಲ್ಲಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಬೆಂಬಲ ಏಕೆ ಅವಶ್ಯಕ?
ವಿಶ್ವ ಆರೋಗ್ಯ ಸಂಸ್ಥೆಯ ಒಪ್ಪಿಗೆಯ ಮುದ್ರೆ ಇದ್ದರೆ ಆ ಲಸಿಕೆಗಳನ್ನು ವಿವಿಧ ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳು ಸುರಕ್ಷಿತ ಎಂದು ಭಾವಿಸಿ ತಮ್ಮ ದೇಶಗಳಲ್ಲಿ ನೀಡಲು ಒಪ್ಪಿಗೆ ಸೂಚಿಸಲು ಅನುಕೂಲವಾಗುತ್ತದೆ. ವಿಶ್ವದಾದ್ಯಂತ ಚಾಲ್ತಿಯಲ್ಲಿರುವ ಕೋವ್ಯಾಕ್ಸ್ ಕಾರ್ಯಕ್ರಮಕ್ಕೂ ಇದು ಬಳಕೆಯಾಗುತ್ತದೆ. ಬಡ ಮತ್ತು ಶ್ರೀಮಂತ ರಾಷ್ಟ್ರಗಳೆರಡಕ್ಕೂ ಸಮಾನವಾಗಿ ಲಸಿಕೆ ಸಿಗುವಂತೆ ಮಾಡುವ ಕಾರ್ಯಕ್ರಮ ಇದಾಗಿದೆ. ಎಲ್ಲೆಡೆ ಸದ್ಯ ಲಸಿಕೆಗಳ ಅಭಾವ ಇರೋದ್ರಿಂದ ಸಿನೋಫಾರ್ಮ್ ಲಸಿಕೆ ಬಹಳ ಪ್ರಯೋಜನಕಾರಿಯಾಗಲಿದೆ. ಈಗಾಗಲೇ 65 ಮಿಲಿಯನ್ ಡೋಸ್ಗಳಷ್ಟು ಸಿನೋಫಾರ್ಮ್ ಲಸಿಕೆ ಜನರಿಗೆ ನೀಡಲಾಗಿದೆ. ಯುಎಇ, ಪಾಕಿಸ್ತಾನ್ ಮತ್ತು ಹಂಗೇರಿ ರಾಷ್ಟ್ರಗಳು ಈಗಾಗಲೇ ಚೈನಾ ಲಸಿಕೆಯನ್ನು ಬಳಸುತ್ತಿವೆ. ಈ ಲಸಿಕೆಯ ಕೊರೊನಾ ವಿರುದ್ಧದ ಯಶಸ್ಸಿನ ಪ್ರಮಾಣ 79%ರಷ್ಟಿದೆ ಎನ್ನಲಾಗಿದೆ.
ಚೈನಾದ ಮತ್ತೊಂದು ಲಸಿಕೆ ಸಿನೋವ್ಯಾಕ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಇದುವರಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಅದರ ಕುರಿತಾಗಿ ಮತ್ತಷ್ಟು ಹೆಚ್ಚುವರಿ ಮಾಹಿತಿಗಾಗಿ ತಾವು ಕಾಯುತ್ತಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ. ಚೀನೀ ಲಸಿಕೆಯನ್ನು ಸಾಮಾನ್ಯ ಫ್ರಿಡ್ಜ್ನಲ್ಲಿ 2 ರಿಂದ 8 ಡಿಗ್ರಿವರೆಗಿನ ತಾಪಮಾನದಲ್ಲಿ ಶೇಖರಿಸಿಡಬಹುದು, ಹಾಗಾಗಿ ಎಲ್ಲೆಡೆ ಶೇಖರಿಸಿ ಬಳಸಲು ಸುಲಭವಾಗುತ್ತದೆ.
ಫೈಜರ್ ಮತ್ತು ಮಾಡೆರ್ನಾ ಸೇರಿದಂತೆ ಸದ್ಯ ಬಳಕೆಯಲ್ಲಿರುವ ಲಸಿಕೆಗಳಿಗಿಂತ ಚೈನಾದ ಎರಡೂ ಲಸಿಕೆಗಳು ವಿಭಿನ್ನವಾಗಿದೆ. ಬಹಳ ಸಾಂಪ್ರದಾಯಿಕ ವಿಧಾನದಲ್ಲಿ ತಯಾರಿಸಿರುವ ಈ ಲಸಿಕೆ ಸತ್ತಿರುವ ವೈರಸ್ನ ಕಣಗಳನ್ನು ಬಳಸಿ ಮಾಡಿದ್ದಾಗಿದೆ. ದೇಹದೊಳಗೆ ಹೋದಾಗ ದೇಹದ ರೋಗನಿರೋಧಕ ಶಕ್ತಿಯನ್ನು ಚುರುಕುಗೊಳಿಸಿ ದೇಹವನ್ನು ಸೋಂಕಿನ ವಿರುದ್ಧ ಹೋರಾಡಲು ಸಜ್ಜುಗೊಳಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ