• Home
  • »
  • News
  • »
  • coronavirus-latest-news
  • »
  • ಜನ ಸಾಯ್ತಿದ್ದರೆ ಮಾಲ್ಡೀವ್ಸ್​ನಲ್ಲಿ ಸ್ಟಾರ್​ಗಳ ಮೋಜುಮಸ್ತಿ; ನಾಚಿಕೆಯಾಗಲ್ವಾ ಎಂದು ಜಾಡಿಸಿದ ನಟ ನವಾಜುದ್ದೀನ್!

ಜನ ಸಾಯ್ತಿದ್ದರೆ ಮಾಲ್ಡೀವ್ಸ್​ನಲ್ಲಿ ಸ್ಟಾರ್​ಗಳ ಮೋಜುಮಸ್ತಿ; ನಾಚಿಕೆಯಾಗಲ್ವಾ ಎಂದು ಜಾಡಿಸಿದ ನಟ ನವಾಜುದ್ದೀನ್!

ನಟ ನವಾಜುದ್ದೀನ್ ಸಿದ್ದಿಕಿ

ನಟ ನವಾಜುದ್ದೀನ್ ಸಿದ್ದಿಕಿ

. ಕೆಲ ನಟನಟಿರಿಗೆ ಸದ್ಯ ಕೆಲಸ ಇಲ್ಲ. ಬೇರೇನೂ ಮಾಡಲು ಗೊತ್ತಿಲ್ಲ. ನಟನೆ ಬಗ್ಗೆ ಮಾತನಾಡಿದರೆ 2 ನಿಮಿಷಗಳಿಗೆ ಅವರ ಮಾತು ಮುಗಿದು ಹೋಗುತ್ತೆ. ಅದಕ್ಕೆ ಪ್ರವಾಸದ ಫೋಟೋಗಳನ್ನು ಹಾಕಿ ಸುದ್ದಿಯಲ್ಲಿರಲು ನೋಡುತ್ತಿದ್ದಾರೆ ಎಂದು ನವಾಜುದ್ದೀನ್​​​ ಟೀಕಿಸಿದ್ದಾರೆ.

  • Share this:

ಮುಂಬೈ: ಕೊರೋನಾ 2ನೇ ಅಲೆಯಿಂದ ಅತಿ ಹೆಚ್ಚು ಹಾನಿಗೊಳಗಾಗಿರುವ ರಾಜ್ಯ ಮಹಾರಾಷ್ಟ್ರ. ಮಾಯಾನಗರಿ ಮುಂಬೈ ಹೆಮ್ಮಾರಿ ಸೋಂಕಿನಿಂದ ತತ್ತರಿಸುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್​ ಸಿಗದೇ, ಆಕ್ಸಿಜನ್​ ಕೊರತೆಯಿಂದ ಜನ ಪ್ರಾಣ ಬಿಡುತ್ತಿದ್ದಾರೆ. ಇಡೀ ದೇಶವೇ ಕೊರೋನಾ ಅಬ್ಬರಕ್ಕೆ ಹೈರಾಣಾಗಿದೆ. ಆದರೆ ಕೆಲ ನಟನಟಿಯವರು ಮಾತ್ರ ದೇಶದ ಪರಿಸ್ಥಿತಿಗೂ ನಮಗೂ ಸಂಬಂಧವೇ ಇಲ್ಲವೇನೋ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಕೊರೋನಾ ಬೇಗೆಯಲ್ಲಿ ಜನ ಕೊನೆಯುಸಿರೆಳೆಯುತ್ತಿದ್ದರೆ, ಬಾಲಿವುಡ್​​ನ ಕೆಲ ಸ್ಟಾರ್​ಗಳು ವಿದೇಶಗಳಿಗೆ ಪ್ರವಾಸಕ್ಕೆ ಹೋಗಿ, ಮೋಜು-ಮಸ್ತಿ ಮಾಡುತ್ತಿದ್ದಾರೆ. ತಾರೆಯರ ಈ ಬೇವಾಬ್ದಾರಿತನಕ್ಕೆ ಬಾಲಿವುಡ್​​ ನಟ ನವಾಜುದ್ದೀನ್​ ಸಿದ್ದಿಕಿ ಕಿಡಿಕಾರಿದ್ದಾರೆ.


ಸೂಕ್ಷ್ಮತೆಯಿಲ್ಲದೇ ಮಾಲ್ಡೀವ್ಸ್​ಗೆ ಪ್ರವಾಸಕ್ಕೆ ತೆರಳಿರುವ, ನಿತ್ಯ ತಮ್ಮ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಪ್ರವಾಸದ ಫೋಟೋಗಳನ್ನು ಹಂಚಿಕೊಳ್ಳುತ್ತಿರುವವರನ್ನು ಸಿದ್ದಿಕಿ ಜಾಡಿಸಿದ್ದಾರೆ. ಜನ ಊಟ ಇಲ್ಲದೇ ಸಾಯುತ್ತಿದ್ದಾರೆ, ನೀವು ಹಣವನ್ನು ಪ್ರವಾಸದಲ್ಲಿ ಉಡಾಯಿಸುತ್ತಿದ್ದೀರ, ಸ್ವಲ್ಪವಾದ್ರೂ ನಾಚಿಕೆ ಬೇಡವೇ ಎಂದು ನವಾಜುದ್ದೀನ್​ ಕಿಡಿಕಾರಿದ್ದಾರೆ. ನಿಮ್ಮನ್ನು ಸ್ಟಾರ್​​ಗಳೆಂದು ಆರಾಧಿಸುವ ಜನರೇ ಇಂದು ಸಂಕಷ್ಟದಲ್ಲಿದ್ದಾರೆ. ಸಾಧ್ಯವಾದರೆ ಅವರ ಕಷ್ಟಗಳಿಗೆ ಸ್ಪಂದಿಸಿ, ಇಲ್ಲವೇ ಸುಮ್ಮನಿರಿ. ಇಂಥ ಸಮಯದಲ್ಲಿ ಪ್ರವಾಸದ ಸುಂದರ ಫೋಟೋಗಳನ್ನು ಹಾಕಿ ಮಾನ ಕಳೆದುಕೊಳ್ಳಬೇಡಿ ಎಂದು ಕುಟುಕಿದ್ದಾರೆ.


ಇತ್ತೀಚೆಗಷ್ಟೇ ಬಾಲಿವುಡ್​ನ ಲವ್​ಬರ್ಡ್ಸ್​​ ರಣವೀರ್​ ಕಪೂರ್​- ಆಲಿಯಾ ಭಟ್​​ ಕೊರೋನಾದಿಂದ ಗುಣಮುಖರಾಗುತ್ತಲೇ ಮಾಲ್ಡೀವ್ಸ್​ಗೆ ಹಾರಿದ್ದರು. ನಟಿಮಣಿಯರಾದ ಜಾಹ್ನವಿ ಕಪೂರ್​, ಶ್ರದ್ಧಾ ಕಪೂರ್​, ದಿಶಾ ಪಟಾಣಿ ಕೂಡ ಬೀಚ್​ನಲ್ಲಿ ಬಿಕಿನಿ ತೊಟ್ಟು ಮಿಂಚುತ್ತಿರುವ ಫೋಟೋಗಳನ್ನು ಅಪಲೋಡ್​ ಮಾಡಿದ್ದರು. ಇವುಗಳ ಬಗ್ಗೆ ನವಾಜುದ್ದೀನ್​ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲ ನಟನಟಿರಿಗೆ ಸದ್ಯ ಕೆಲಸ ಇಲ್ಲ. ಬೇರೇನೂ ಮಾಡಲು ಗೊತ್ತಿಲ್ಲ. ನಟನೆ ಬಗ್ಗೆ ಮಾತನಾಡಿದರೆ 2 ನಿಮಿಷಗಳಿಗೆ ಅವರ ಮಾತು ಮುಗಿದು ಹೋಗುತ್ತೆ. ಅದಕ್ಕೆ ಪ್ರವಾಸದ ಫೋಟೋಗಳನ್ನು ಹಾಕಿ ಸುದ್ದಿಯಲ್ಲಿರಲು ನೋಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.


ಇದನ್ನೂ ಓದಿ: ಕುಟುಂಬಸ್ಥರನ್ನು ಕಳೆದುಕೊಂಡ ‘ಗಟ್ಟಿಮೇಳ’ ನಟ; ಕೊರೋನಾದ ಕರಾಳತೆ ಬಿಚ್ಚಿಟ್ಟ ಪವನ್​​ಕುಮಾರ್​!


ದೇಶದಲ್ಲಿ ಸಾಯುತ್ತಿರುವ ಜನ ನಮ್ಮವರು. ನಮ್ಮ ಸಿನಿಮಾಗಳನ್ನು ನೋಡುವವರು. ನಮ್ಮನ್ನು ಆರಾಧಿಸುವವರು. ಇಂದು ಅವರು ಸಂಕಷ್ಟದಲ್ಲಿದ್ದಾಗ ಅವರಿಗೆ ಸ್ಪಂದಿಸಬೇಕು. ಇಲ್ಲವೇ ಕನಿಷ್ಠ ಇಂಥ ಸಂಕಷ್ಟ ಸಮಯದಲ್ಲಿ ತಮ್ಮ ಐಷಾರಾಮಿ ಜೀವನವನ್ನು ತೋರಿಸುವ ಕೆಲಸ ಮಾಡಬಾರದು. ಮಾಲ್ಡೀವ್ಸ್​ಗೆ ಹೋಗಲು ಪ್ರವಾಸೋದ್ಯಮ ಇಲಾಖೆ ಮೇಲೆ ಈ ನಟರು ಹೇಗೆ ಪ್ರಭಾವ ಬಳಸಿದರೋ ಗೊತ್ತಿಲ್ಲ. ಹೋದರೆ ಹೋಗಿ ಆದರೆ ಕನಿಷ್ಟ ಸಾಮಾನ್ಯಜ್ಞಾನ ಬಳಸಿ ಫೋಟೋಗಳನ್ನು ಹರಿಬಿಡುವುದನ್ನು ನಿಲ್ಲಿಸಿ. ಹೃದಯದಿಂದ ಯೋಚಿಸುವುದನ್ನು ಕಲಿಯಿರಿ. ಫೋಟೋಗಳು ನಿಮ್ಮ ಫೋನ್​ನಲ್ಲೇ ಇದ್ದರೆ ನಿಮಗೇನು ತೊಂದರೆ ಆಗಲ್ಲ ಎಂದು ನವಾಜುದ್ದೀನ್​ ಮಾತಿನಲ್ಲೇ ತಿವಿದಿದ್ದಾರೆ.


ಹಿಂದಿ ನಟರ ಮಾಲ್ಡೀವ್ಸ್​ ಟ್ರಿಪ್​ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಟೀಕೆ ವ್ಯಕ್ತವಾಗಿದೆ. ಕೇವಲ ನಟ ಸೋನು ಸೂದ್​ ಮಾತ್ರ ಅಭಿಮಾನಿಗಳ ನೆರವಿಗೆ ನಿಂತಿದ್ದಾರೆ. ಬೇರೆ ನಟನಟಿಯರಿಗೆ ಇವರು ಮಾದರಿ ಆಗುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. ಕನ್ನಡದ ನಟರ ಬಗ್ಗೆಯೂ ಕೆಲ ದಿನಗಳ ಹಿಂದೆ ಅಭಿಮಾನಿಯೊಬ್ಬರ ಪತ್ರ ವೈರಲ್​ ಆಗಿತ್ತು. ನಿಮ್ಮ ಅಭಿಮಾನಿಗಳು ಸಾಯುತ್ತಿರುವಾಗ ನೀವು ಹೇಗೆ ಬೆಚ್ಚಗೆ ನಿಮ್ಮ ಮನೆಗಳಲ್ಲಿ ಇದ್ದೀರಾ? ನಿಮ್ಮ ಪ್ರಭಾವ-ಹಣ ಬಳಸಿ ಯಾಕೆ ನೆರವಾಗಬಾರದು ಎಂದು ಪತ್ರದಲ್ಲಿ ಒತ್ತಾಯಿಸಲಾಗಿತ್ತು. ಜನ ಸಾಯುತ್ತಿದ್ದಾರೆ ಎಂದರೆ ಸಿನಿಮಾರಂಗ ತನ್ನ ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ, ಸ್ಟಾರ್​ ಒಬ್ಬ ತನ್ನ ಅಭಿಮಾನಿಯನ್ನು ಕಳೆದುಕೊಳ್ಳುತ್ತಿದ್ದಾನೆ ಎಂದು ಅರ್ಥ. ಜನರೇ ಇಲ್ಲದಿದ್ದರೆ ಸಿನಿಮಾ ಮಾಡಿ ಯಾರಿಗೆ ತೋರಿಸ್ತೀರಾ ಎಂದು ಕೆಲ ಪ್ರಜ್ಞವಂತರು ಪ್ರಶ್ನಿಸುತ್ತಿದ್ದಾರೆ.

Published by:Kavya V
First published: