HOME » NEWS » Coronavirus-latest-news » NARENDRA MODI GOVERNMENT WANTS MORE COVID VACCINE BUT FOREIGN CORONAVIRUS VACCINATION NOT AGREED TO COME TO INDIA DBDEL SCT

Covid-19 Vaccine: ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದರೂ ಭಾರತಕ್ಕೆ ಬರಲು ಲಸಿಕೆ ಕಂಪನಿಗಳು ಹಿಂದೇಟು; ಕಾರಣವೇನು ಗೊತ್ತಾ?

Coronavirus Vaccination: ವಿದೇಶದಿಂದ ಕೊರೋನಾ ಲಸಿಕೆ ತರಿಸಿಕೊಳ್ಳಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ, ವಿದೇಶಿ ಲಸಿಕೆ ಕಂಪನಿಗಳು ಭಾರತಕ್ಕೆ ಬರಲು ಹಿಂದೇಟು ಹಾಕುತ್ತಿವೆ. ಇದರ ಪರಿಣಾಮ ದೇಶಕ್ಕೆ ಮತ್ತೊಂದು ಕೊರೊನಾ ಲಸಿಕೆ ಸಿಗಲು ತಡವಾಗಬಹುದು ಎಂದು ಹೇಳಲಾಗುತ್ತಿದೆ.

news18-kannada
Updated:April 16, 2021, 9:58 AM IST
Covid-19 Vaccine: ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದರೂ ಭಾರತಕ್ಕೆ ಬರಲು ಲಸಿಕೆ ಕಂಪನಿಗಳು ಹಿಂದೇಟು; ಕಾರಣವೇನು ಗೊತ್ತಾ?
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ, (ಏ. 16): ಭಾರತದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಈಗ   ಪ್ರತಿ ದಿನ‌ ಎರಡು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಗೋಚರಿಸಲು ಆರಂಭಿಸಿವೆ. ಈ ಹಂತದಲ್ಲಿ ವಿದೇಶದಿಂದ ಕೊರೋನಾ ಲಸಿಕೆ ತರಿಸಿಕೊಳ್ಳಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ, ವಿದೇಶಿ ಲಸಿಕೆ ಕಂಪನಿಗಳು ಭಾರತಕ್ಕೆ ಬರಲು ಹಿಂದೇಟು ಹಾಕುತ್ತಿವೆ. ಇದರ ಪರಿಣಾಮ ದೇಶಕ್ಕೆ ಮತ್ತೊಂದು ಕೊರೊನಾ ಲಸಿಕೆ ಸಿಗಲು ತಡವಾಗಬಹುದು ಎಂದು ಹೇಳಲಾಗುತ್ತಿದೆ.

ಹಲವು ನಿರ್ಬಂಧಗಳ ನಡುವೆಯೂ ಕೊರೊನಾ ಸೋಂಕು ಶರವೇಗದಲ್ಲಿ ಸಾಗುತ್ತಿರುವುದು ಸಹಜವಾಗಿಯೇ ಆತಂಕ ಮೂಡಿಸಿದೆ. ಕೊರೋನಾ ನಿಯಂತ್ರಣಕ್ಕೆ ಹೆಚ್ಚೆಚ್ಚು ಲಸಿಕೆ ಹಾಕುವುದೇ ಮದ್ದು ಎಂದು ಹೇಳಲಾಗುತ್ತಿದೆ. ಆದರೆ ದೇಶದಲ್ಲಿ ಅಗತ್ಯ ಇರುವಷ್ಟು ಲಸಿಕೆಗಳು ಇಲ್ಲದೆ ಪರದಾಡುವ ಪರಿಸ್ಥಿತಿ ಇದೆ. ಇದೇ ಹಿನ್ನಲೆಯಲ್ಲಿ ಕಳೆದ ವಾರ ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆಗೆ ದೇಶದಲ್ಲಿ ತುರ್ತು ಬಳಕೆ ಮಾಡಬಹುದು ಎಂದು ಅನುಮತಿ ನೀಡಲಾಗಿತ್ತು. ಅದಾದ ಬಳಿಕ ವಿದೇಶಗಳಲ್ಲಿ ಅನುಮತಿ ನೀಡಲಾಗಿರುವ ಇತರೆ ಕಂಪನಿಗಳು ಕೂಡ ಭಾರತಕ್ಕೆ ಬರಲು ಅವಕಾಶ ಮಾಡಿಕೊಡಲು ಕೇಂದ್ರ ಸರ್ಕಾರ ನಿರ್ಧರಿಸಿತು.

ಆದರೆ, ಸದ್ಯಕ್ಕೆ ಲಭ್ಯ ಆಗುತ್ತಿರುವ ಮಾಹಿತಿಗಳ ಪ್ರಕಾರ, ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದರೂ ವಿದೇಶಿ ಲಸಿಕೆ ಕಂಪನಿಗಳು ಭಾರತಕ್ಕೆ ಬರಲು ಮನಸ್ಸು ಮಾಡುತ್ತಿಲ್ಲ. ಭಾರತಕ್ಕೆ ಬರಲು ಮೊದಲಿಗೆ ಮನಸ್ಸು ಮಾಡಿದ್ದ ಸಂಸ್ಥೆಗಳೆಂದರೆ ಫೀಜರ್, ಮಾಡರ್ನಾ ಮತ್ತು ಜಾನ್ಸನ್ ಅಂಡ್ ಜಾನ್ಸನ್.‌ ಆದರೆ ಈಗ ಆ ಕಂಪನಿಗಳು ಭಾರತಕ್ಕೆ ಬರಲು ಹಲವು ಅಡ್ಡಿಗಳು ನಿರ್ಮಾಣಗೊಂಡಿವೆ. ಇದರಿಂದ ಸದ್ಯಕ್ಕೆ ಕೊರೊನಾ ಲಸಿಕೆಯ ಸಮಸ್ಯೆ ಮುಗಿಯಲ್ಲ ಎನ್ನುವಂತಾಗಿದೆ.

ಇದನ್ನೂ ಓದಿ: Bengaluru Coronavirus: ಬೆಂಗಳೂರಿನಲ್ಲಿ ಕೊರೋನಾ ಮರಣ ಮೃದಂಗ; 12 ದಿನದಲ್ಲಿ 322 ಜನ ಸಾವು!

ಉದಾಹರಣೆಗೆ, ಫೀಜರ್ ಲಸಿಕೆ ಭಾರತಕ್ಕೆ ಬರದಿರಲು ಅದಕ್ಕೆ ಜಾಗತಿಕ ಮಟ್ಟದಲ್ಲಿ ಭಾರೀ ಬೇಡಿಕೆ ಇರುವುದೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.‌ ಹಾಗೆ ಬೇಡಿಕೆ ಬರಲು ಫೀಜರ್ ಲಸಿಕೆಯ ದಕ್ಷತೆ ಪ್ರಮಾಣ.‌ ಅದು ಜಗತ್ತಿನಲ್ಲೇ ‌ಅತ್ಯಂತ ಪರಿಣಾಮಕಾರಿಯಾಗಿರುವ ಲಸಿಕೆ. ಶೇಕಡಾ 95ರಷ್ಟು ದಕ್ಷತೆ ಪ್ರಮಾಣ ಹೊಂದಿದೆ. ಅದೇ ಕಾರಣಕ್ಕೆ ಬೆಲೆಯೂ‌ ಹೆಚ್ಚಿದೆ. ಅಮೇರಿಕಾ ಮತ್ತಿತರ ದೊಡ್ಡ ದೇಶಗಳಿಗೆ ಲಸಿಕೆ ಪೂರೈಸುತ್ತಿರುವ ಫೀಜರ್ ಸಂಸ್ಥೆಗೆ ಮೊದಲು ಈಗಾಗಲೇ ಒಪ್ಪಂದ ಮಾಡಿಕೊಂಡಿರುವ ದೇಶಗಳಿಗೆ ಲಸಿಕೆ ನೀಡುವುದೇ ದೊಡ್ಡ ಕೆಲಸವಾಗಿದೆ.

ಇನ್ನು ಮಾಡರ್ನಾ ಲಸಿಕೆ ಬರಲು ಇನ್ನೊಂದು ರೀತಿಯ ಸಮಸ್ಯೆ ಉಂಟಾಗಿದೆ. ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾದ ಟಾಟಾ ಗ್ರೂಪ್ ಮೂಲಕ ಭಾರತ ಬರಲು ಮಾಡರ್ನಾ ಸಂಸ್ಥೆ ಪ್ರಯತ್ನ ನಡೆಸುತ್ತಿದೆ. ಆದರೆ ಸದ್ಯದ ಮಾಹಿತಿಗಳ ಪ್ರಕಾರ ಟಾಟಾ ಸಂಸ್ಥೆಯಿಂದ ಮಾಡರ್ನಾಗೆ ಇನ್ನೂ ಹಸಿರು ನಿಶಾನೆ ದೊರೆತಿಲ್ಲ. ಇನ್ನೂ ಮಾಡರ್ನಾ ಮತ್ತು ಟಾಟಾ ಸಂಸ್ಥೆ ನಡುವೆಯೇ ಒಪ್ಪಂದ ಆಗಿಲ್ಲ ಎನ್ನುವುದರ ಜೊತೆಗೆ ಇದು ಫೀಜರ್ ಬಿಟ್ಟರೆ ಮಾಡರ್ನಾ ದಕ್ಷತೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಶೇಕಡಾ 94ರಷ್ಟು ದಕ್ಷತೆ ಪ್ರಮಾಣ ಹೊಂದಿರುವ ಮಾಡರ್ನಾ ಕೂಡ ಅಮೇರಿಕಾ ಸೇರಿದಂತೆ ಹಲವು ವಿದೇಶಗಳಿಗೆ ಲಸಿಕೆ ಪೂರೈಸಬೇಕಿದೆ. ಹಾಗಾಗಿ ಟಾಟಾ ಸಂಸ್ಥೆ ಹಸಿರು ನಿಶಾನೆ ನೀಡಿದರೂ‌ ಅದು ಈಗಾಗಲೇ ಮಾಡಿಕೊಂಡ ಒಪ್ಪಂದದ ಪ್ರಕಾರ ಬೇರೆ ದೇಶಗಳಿಗೆ ಲಸಿಕೆ ಪೂರೈಸಿದ ಬಳಿಕವಷ್ಟೇ ಭಾರತಕ್ಕೆ ಲಸಿಕೆ ಕೊಡಲು ಸಾಧ್ಯ.
ಕಡೆಯದಾಗಿ ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ಬರಬಹುದು.‌ ಆದರೆ ಇದಕ್ಕೆ ಅಮೇರಿಕಾ, ದಕ್ಷಿಣ ಆಫ್ರಿಕಾ ಮತ್ತಿತರ ದೇಶಗಳಲ್ಲಿ ಅನುಮತಿ ನಿರಾಕರಿಸಲ್ಪಟ್ಟಿದೆ. ಅಲ್ಲದೆ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ದಕ್ಷತೆ ಪ್ರಮಾಣ ಬಹಳ ಕಡಿಮೆ. ಕೇವಲ ಶೇಕಡಾ 66ರಷ್ಟು ದಕ್ಷತೆ ಪ್ರಮಾಣ ಹೊಂದಿರುವ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ಭಾರತದ ಕೋವ್ಯಾಕ್ಸಿನ್ ಗಿಂತಲೂ ಕಡಿಮೆ ದಕ್ಷತೆ ಪ್ರಮಾಣದ ಹೊಂದಿದೆ. ಕೋವ್ಯಾಕ್ಸಿನ್ ದಕ್ಷತೆ ಪ್ರಮಾಣ ಶೇ. 81ರಷ್ಟು. ಹಾಗಾಗಿ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಗೆ ಒಪ್ಪಿಗೆ ನೀಡಲು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಬಹಳಷ್ಟು ಭಾರಿ ಯೋಚಿಸಬೇಕಿದೆ.
Published by: Sushma Chakre
First published: April 16, 2021, 9:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories