news18-kannada Updated:July 5, 2020, 12:43 PM IST
ನಳೀನ್ ಕುಮಾರ್ ಕಟೀಲ್
ಬೆಂಗಳೂರು(ಜು.05): ಕಾಂಗ್ರೆಸ್ ಪ್ರಾದೇಶಿಕ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ನಾಯಕರೇ ಮುಳುಗಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಹಾಗೆಯೇ ಬೆಂಗಳೂರಿನಲ್ಲಿ ನಡೆದ ಡಿ.ಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮವೂ ಆರಂಭ ಶೂರತ್ವ ಅಷ್ಟೇ ಎಂದು ಕಟೀಲ್ ವ್ಯಂಗ್ಯವಾಡಿದ್ದಾರೆ.
ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ನಳಿನ್ ಕುಮಾರ್ ಕಟೀಲ್, ಡಿ.ಕೆ ಶಿವಕುಮಾರ್ ಪ್ರದಗ್ರಹಣ ಕಾರ್ಯಕ್ರಮದಲ್ಲಿ ಬಿಜೆಪಿ ಮುಕ್ತ ಮಾಡುತ್ತೇವೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು. ಡಿಕೆಶಿ ಪದಗ್ರಹಣ ಕಾರ್ಯಕ್ರಮದ ಮೂಲಕ ಆರಂಭ ಶೂರತ್ವ ಮೆರೆದಿದ್ದಾರೆ. ಅದು ಬಿಜೆಪಿ ಮುಕ್ತವಲ್ಲ, ಡಿಕೆಶಿ ಮುಕ್ತ ಕಾಂಗ್ರೆಸ್ ಆಗಲಿದೆ ಎಂದರು.
ಇನ್ನು, ಕಾಂಗ್ರೆಸ್ ವ್ಯಕ್ತಿಕೇಂದ್ರಿತ ಪಕ್ಷ. ನಮ್ದು ಕೇಡರ್ ಬೇಸ್ಡ್ ಪಾರ್ಟಿ. ಮುಳಗುವ ಹಡುಗನ್ನು ಡಿಕೆಶಿ ಹತ್ತಿದ್ದಾರೆ. ಮುಂದೆ ಎಲ್ಲಾ ಕಾಂಗ್ರೆಸ್ ನಾಯಕರು ಸೇರಿಕೊಂಡು ಡಿ.ಕೆ ಶಿವಕುಮಾರ್ ಅವರನ್ನು ಮುಳುಗಿಸುತ್ತಾರೆ ನೋಡುತ್ತಿರಿ ಎಂದು ಕಟೀಲ್ ಕುಟುಕಿದರು.
ಇದೇ ವೇಳೆ ಕೊರೋನಾ ವೈರಸ್ ವಿಚಾರ ನಿಭಾಯಿಸುವ ವಿಷಯದಲ್ಲಿ ನಮ್ಮ ಸಚಿವರಲ್ಲಿ ಯಾವುದೇ ಗೊಂದಲ ಇಲ್ಲ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲೇ ಕೋವಿಡ್-19 ನಿರ್ವಹಣೆ ಮಾಡಲಾಗುತ್ತಿದೆ. ಆರ್. ಅಶೋಕ್ ಅವರೇ ಬೆಂಗಳೂರಿನಲ್ಲಿ ಕೊರೋನಾ ಪರಿಸ್ಥಿತಿ ನಿಭಾಯಿಸುವ ಹೊಣೆ ಹೊತ್ತುಕೊಂಡಿದ್ದಾರೆ ಎಂದರು.
ಇದನ್ನೂ ಓದಿ: Coronavirus Updates: ಭಾರತದಲ್ಲಿ ಕೋವಿಡ್-19 ಕಾವು: ಒಂದೇ ದಿನದಲ್ಲಿ 24 ಸಾವಿರ ಕೇಸ್ ಪತ್ತೆ, 6,73,165 ಸೋಂಕಿತರು
ಇನ್ನು, ಆರ್. ಅಶೋಕ್ ಬೆಂಗಳೂರು ಉಸ್ತುವಾರಿ ವಹಿಸಿಕೊಂಡಿರುವುದರಿಂದ ಇಲ್ಲಿ ಯಾವುದೇ ಹೊಂದಾಣಿಕೆ ಕೊರತೆ ಪ್ರಶ್ನೆ ಉದ್ಭವಿಸಲ್ಲ. ಎಲ್ಲರು ಯಡಿಯೂರಪ್ಪ ನೇತೃತ್ವದಲ್ಲೇ ಕೊರೋನಾ ಪರಿಸ್ಥಿತಿಯನ್ನು ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ಧಾರೆ ಎಂದು ಕಟೀಲ್ ಸ್ಪಷ್ಟಪಡಿಸಿದರು.
Published by:
Ganesh Nachikethu
First published:
July 5, 2020, 12:41 PM IST