ಇಡೀ ಮೈಸೂರಿಗೆ ಸೋಂಕು ಹಬ್ಬಿಸಿದ್ದ P-52 ಸೋಂಕಿತನ ಏರಿಯಾ ಈಗ ಕೊರೋನಾಮುಕ್ತ  

ಮೈಸೂರು ಜಿಲ್ಲೆ ರೆಡ್‌ಝೋನ್‌ನಲ್ಲಿದ್ದರು ಅಧಿಕಾರಿಗಳ ಮುಂಜಾಗ್ರತೆಯಿಂದ ಮೈಸೂರನ್ನು ಕೊರೋನಾ ಮುಕ್ತ ಜಿಲ್ಲೆಯ ಕಡೆ ತೆಗೆದುಕೊಂಡು ಹೋಗಲಾಗುತ್ತಿದೆ. ಮೈಸೂರಿನ ಜನರು ನಿಯಮವನ್ನು ಕಟ್ಟುನಿಟ್ಟಿನಿಂದ ಪಾಲಿಸಿದ್ರೆ ಕೊರೋನಾ ಮುಕ್ತ ಜಿಲ್ಲೆಯಾಗುವುದರಲ್ಲಿ ಅನುಮಾನವೇ ಇಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೈಸೂರು: ಇಷ್ಟು ದಿನ ಕೊರೋನಾ ಆತಂಕ ಮೂಡಿಸಿದ್ದ ಮೈಸೂರಿಗೆ ಇದೀಗ ಕೊಂಚ ನಿರಾಳವಾಗುತ್ತಿದೆ. ಮೈಸೂರಿಗೆ ಕೊರೋನಾ ಹಬ್ಬಿಸಿದ್ದ P-52 ಸೋಂಕಿತನ ಏರಿಯಾ ಇದೀಗ ಕಂಟೈನ್ಮೆಂಟ್ ಝೋನ್‌‌ನಿಂದ ಫ್ರೀ ಝೋನ್‌ಗೆ ಬಂದಿದ್ದು, ಏರಿಯಾದಲ್ಲಿದ್ದ ಲಾಕ್‌ಡೌನ್ ಕಾನೂನು ಸಂಪೂರ್ಣ ಸಡಿಲಗೊಂಡಿದೆ.

ಮೈಸೂರಿನ ಸರ್ದಾರ್ ವಲ್ಲಭಭಾಯಿ ಪಟೇಲ್ ನಗರ ಇದೀಗ ಕಂಟೈನ್ಮೆಂಟ್ ಝೋನ್‌ನಿಂದ ಹೊರಬಂದಿದ್ದು, ಸಂಚಾರಕ್ಕೆ ಮುಕ್ತವಾಗಿದೆ. ಜೊತೆಗೆ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಗುಣಮುಖರಾಗುತ್ತಿರುವವರೇ ಹೆಚ್ಚಾಗಿರೋದು  ಮೈಸೂರಿಗರಲ್ಲಿ ಮನೆ ಮಾಡಿದ್ದ ಆತಂಕ ದೂರ ಮಾಡಿದೆ.

ಕೊರೋನಾ‌ ನಡುವೆಯು ಮೈಸೂರಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಶೇ.70ರಷ್ಟು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗಿದ್ದಾರೆ. ಕಳೆದೊಂದು ವಾರದಿಂದ ಬರೋಬ್ಬರಿ 40ಕ್ಕೂ ಹೆಚ್ಚು ಮಂದಿ ಡಿಸ್ವಾರ್ಜ್ ಆಗಿರೋದು ಜಿಲ್ಲೆಯಲ್ಲಿ ಕೊರೋನಾ ಸೋಂಕು ತಗ್ಗಿರುವುದಕ್ಕೆ ಸಾಕ್ಷಿಯಾಗುತ್ತಿದೆ. ಇವೆಲ್ಲದರ ಜೊತೆ ಇಡೀ ಮೈಸೂರಿನಲ್ಲಿ ಹಾಗೂ ರಾಜ್ಯದಲ್ಲಿ ಕೊರೋನಾ ಸೋಂಕು ಹರಡುವುದಕ್ಕೆ ಪರೋಕ್ಷ ಕಾರಣನಾಗಿದ್ದ P-52 ವಾಸವಿದ್ದ ಏರಿಯಾದಲ್ಲೇ 28 ದಿನಗಳಿಂದ ಯಾವುದೇ ಸೋಂಕು‌ ಅಥವಾ ಶಂಕಿತರು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮೈಸೂರು ನಗರ ವ್ಯಾಪ್ತಿಯ 12 ಕಂಟೈನ್ಮೆಂಟ್ ಝೋನ್‌ಗಳಲ್ಲಿ 4 ಝೋನ್‌ಗಳನ್ನ ಫ್ರೀ ಝೋನ್‌ಗಳಾಗಿ ಘೋಷಣೆ ಮಾಡಿದ್ದು ಜಿಲ್ಲಾಡಳಿತ ಅಧಿಕೃತವಾಗಿ ಈ ನಾಲ್ಕು ಏರಿಯಾಗಳಲ್ಲಿ ಯಾವುದೇ ಸೋಂಕು ಇಲ್ಲ ಅಂತ ಹೇಳಿರೋದು ಸಂತಸಕ್ಕೆ ಕಾರಣವಾಗಿದೆ.

ಮೈಸೂರಿನ ಜುಬಿಲಿಯಂಟ್ ಕಾರ್ಖಾನೆಯಲ್ಲಿ P-52 ಕೇಸ್ ಇಡೀ‌ ಮೈಸೂರಿಗೆ ಆತಂಕ ತರಿಸಿದ್ದ. ಈತನಿಂದ 1300ಕ್ಕೂ ಹೆಚ್ಚು ಜನ ಹಾಗೂ 7 ಗ್ರಾಮಗಳು ಕ್ವಾರಂಟೈನ್ ಆಗಿತ್ತು. ಅದರಲ್ಲೂ ಆತ ವಾಸವಾಗಿದ್ದ ಮೈಸೂರಿನ ವಲ್ಲಭಬಾಯಿ‌ ಪಟೇಲ್ ನಗರವನ್ನು ಕಂಟೈನ್ಮೆಂಟ್ ಝೋನ್ ಆಗಿ‌ ಘೋಷಣೆ ಮಾಡಿ, ಈ ಏರಿಯಾವನ್ನು ಸೀಲ್‌ಡೌನ್ ಮಾಡಲಾಗಿತ್ತು. ಸದ್ಯ ಮೈಸೂರಿನಲ್ಲಿ ಕೊರೋನಾ ಆತಂಕ ಕೊಂಚ ಕೊಂಚವೇ ದೂರವಾಗುತ್ತಿದೆ. ಕಳೆದ 28 ದಿನಗಳಲ್ಲಿ ಮೈಸೂರಿನ ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದಲ್ಲಿ ಯಾವುದೇ ಸೋಂಕಿತರು ಪತ್ತೆಯಾಗದ ಕಾರಣ ಇಡೀ ಏರಿಯವನ್ನು ಸೀಲ್ ಡೌನ್ ನಿಂದ ಮುಕ್ತಿ‌ ನೀಡಲಾಗಿದೆ.

P-52 ವ್ಯಕ್ತಿಯಿಂದ 74 ಜನರಿಗೆ ಸೋಂಕು ತಗುಲಿತ್ತು. ಈ‌ ಕಾರಣದಿಂದ‌ ದೊಡ್ಡ ಆತಂಕವೇ ಮನೆ ಮಾಡಿತ್ತು. ಇದೀಗಾ 28 ದಿನ ಕಳೆದಿದ್ದು P-52 ಪತ್ನಿ ಹಾಗೂ ಆತನ ಮಾವ ಕೂಡ ಗುಣಮುಖರಾಗಿದ್ದು ಈ ಕಾರಣದಿಂದ ಇಡೀ ಏರಿಯಾವನ್ನು ಕಂಟೈನ್ಮೆಂಟ್ ಝೋನ್ ನಿಂದ ಬಿಡುಗಡೆ ಮಾಡಲಾಗಿದೆ.

ಇದಷ್ಟೆ ಅಲ್ಲದೆ ಒಟ್ಟು 12 ಕಂಟೈನ್ಮೆಂಟ್ ಝೋನ್ ನಲ್ಲಿ ಯರಗನಹಳ್ಳಿ, ಟೀಚರ್ಸ್ ಕಾಲೋನಿ, ವಿಜಯನಗರ 2ನೇ ಹಂತವನ್ನು ಕೂಡ ಕೈ ಬಿಡಲಾಗಿದೆ. ಇದರ ಜೊತೆಗೆ ಸೋಂಕಿನಿಂದ ಮೈಸೂರು ಕೋವಿಡ್ ಆಸ್ಪತ್ರೆ ಸೇರಿದ್ದ 90 ಜನರ ಪೈಕಿ 66 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗಿದ್ದಾರೆ. ಈ‌ ಮೂಲಕ ಶೇ 70 ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ.‌ ಇದರಿಂದ ಒಂದು ರೀತಿಯಲ್ಲಿ‌ ಮೈಸೂರಿಗೆ ಕೊರೋನಾ ಆತಂಕ ದೂರವಾದಂತಾಗಿದೆ. ಮೈಸೂರಿನಲ್ಲಿ ದಿನೆ ದಿನೆ ಸೋಂಕಿತರ ಸಂಖ್ಯೆ ಇಳಿಮುಖವಾಗ್ತಿರೋದು ಹಾಗೂ ಕೇವಲ ಎರಡೇ ತಾಲ್ಲೂಕುಗಳಲ್ಲಿ ರೆಡ್‌ಝೋನ್ ಪರಿಸ್ಥಿತಿ ಇರುವುದು ಮೈಸೂರಿಗರಿಗೆ ಕೊಂಚ ನೆಮ್ಮದಿ ತಂದಿದೆ.

ಇದನ್ನು ಓದಿ: ಹಳೆ ಶೈಲಿ ರಾಜಕಾರಣ, ಹೊಂದಾಣಿಕೆ ಮತ್ತು ಘನತೆ; ಕೊರೋನಾ ಬಿಕ್ಕಟ್ಟಿನ ನಡುವೆ ಬಿಎಸ್​ವೈ ಸಿಎಂ ಸ್ಥಾನ ಭದ್ರಪಡಿಸಿಕೊಂಡ ಬಗೆ

ಒಟ್ಟಿನಲ್ಲಿ, ಮೈಸೂರು ಜಿಲ್ಲೆ ರೆಡ್‌ಝೋನ್‌ನಲ್ಲಿದ್ದರು ಅಧಿಕಾರಿಗಳ ಮುಂಜಾಗ್ರತೆಯಿಂದ ಮೈಸೂರನ್ನು ಕೊರೋನಾ ಮುಕ್ತ ಜಿಲ್ಲೆಯ ಕಡೆ ತೆಗೆದುಕೊಂಡು ಹೋಗಲಾಗುತ್ತಿದೆ. ಮೈಸೂರಿನ ಜನರು ನಿಯಮವನ್ನು ಕಟ್ಟುನಿಟ್ಟಿನಿಂದ ಪಾಲಿಸಿದ್ರೆ ಕೊರೋನಾ ಮುಕ್ತ ಜಿಲ್ಲೆಯಾಗುವುದರಲ್ಲಿ ಅನುಮಾನವೇ ಇಲ್ಲ.
First published: