Mysore Coronavirus Case: ಕೊರೋನಾ ಹಾಟ್​ಸ್ಪಾಟ್ ಆಗಿದ್ದ ಮೈಸೂರು ಈಗ ಕೋವಿಡ್​​ಮುಕ್ತ ಜಿಲ್ಲೆಯತ್ತ ಹೆಜ್ಜೆ; ಸಾಧ್ಯವಾಗಿದ್ದು ಹೇಗೆ?

ಕೆಲ ದಿನಗಳಿಂದ ಮೈಸೂರಿನಲ್ಲಿ ಒಂದೇ ಒಂದು ಹೊಸ ಸೋಂಕಿನ ಪ್ರಕರಣ ದಾಖಲಾಗಿಲ್ಲ. 88 ಇದ್ದ ಪ್ರಕರಣಗಳ ಸಂಖ್ಯೆ ಈಗ ಒಂದಂಕಿಗೆ ಬಂದು ನಿಂತಿದೆ.

news18-kannada
Updated:May 5, 2020, 3:05 PM IST
Mysore Coronavirus Case: ಕೊರೋನಾ ಹಾಟ್​ಸ್ಪಾಟ್ ಆಗಿದ್ದ ಮೈಸೂರು ಈಗ ಕೋವಿಡ್​​ಮುಕ್ತ ಜಿಲ್ಲೆಯತ್ತ ಹೆಜ್ಜೆ; ಸಾಧ್ಯವಾಗಿದ್ದು ಹೇಗೆ?
ಮೈಸೂರಿನ ಅಧಿಕಾರಿಗಳು
  • Share this:
ಮೈಸೂರು(ಮೇ 05): ಸ್ವಚ್ಛ ನಗರಿ ಎಂದು ಖ್ಯಾತವಾಗಿದ್ದ ಮೈಸೂರು ಕೆಲ ದಿನಗಳ ಹಿಂದೆ ಕೊರೋನಾ ಹಾಟ್​ಸ್ಪಾಟ್ ಆಗಿ ಬದಲಾಗಿಹೋಗಿತ್ತು. ಜುಬಿಲೆಂಟ್ಸ್ ಫಾರ್ಮಾ ಕಾರ್ಖಾನೆಯ ಉದ್ಯೋಗಿಗಳಿಗೆ ಕೊರೋನಾ ಸೋಂಕು ಬಂದು ಇಡೀ ನಗರ ಮತ್ತು ಜಿಲ್ಲೆಗೆ ದೊಡ್ಡ ತಲೆನೋವಾಗಿತ್ತು. ಯಾಕೆಂದರೆ, ಈ ಕಾರ್ಖಾನೆಯ ಉದ್ಯೋಗಿಗಳು ಜಿಲ್ಲೆಯಾದ್ಯಂತ ವಿವಿಧ ಸ್ಥಳಗಳ ನಿವಾಸಿಗಳಾಗಿದ್ದರು. ಸೋಂಕು ಅಲ್ಲೆಲ್ಲಾ ವ್ಯಾಪಿಸುವ ಭಯ ಇತ್ತು. ಇದರ ಜೊತೆಗೆ ದೆಹಲಿಯ ತಬ್ಲಿಘಿ ಜಮಾತ್ ಸಭೆಗೆ ಹೋಗಿ ಬಂದವರ ಪ್ರಕರಣಗಳು ತಲೆನೋವನ್ನು ಇಮ್ಮಡಿಗೊಳಿಸಿದ್ದವು. ಸೋಂಕು ಪ್ರಕರಣಗಳ ಸಂಖ್ಯೆ ಬೆಂಗಳೂರಿನದ್ದನ್ನು ಮೀರಿ ಹೋಗುವ ನಿರೀಕ್ಷೆ ಇತ್ತು. ಮೈಸೂರು ದೇಶದ ಪ್ರಮುಖ ಕೊರೊನಾ ಹಾಟ್​ಸ್ಪಾಟ್ ಆಗಿ ಬದಲಾಗಬಹುದೆಂಬ ಭೀತಿ ಎಲ್ಲರಲ್ಲೂ ಇತ್ತು. ಆದರೆ, ದಿನಗಳೆದಂತೆ ಮೈಸೂರಿಗೆ ಅಂಟಿಕೊಂಡಿದ್ದ ಕೊರೊನಾ ಕಳಂಕ ನಿಧಾನವಾಗಿ ನೀಗುತ್ತಾ ಬಂದಿದೆ.

ಕೆಲ ದಿನಗಳಿಂದ ಮೈಸೂರಿನಲ್ಲಿ ಒಂದೇ ಒಂದು ಹೊಸ ಸೋಂಕಿನ ಪ್ರಕರಣ ದಾಖಲಾಗಿಲ್ಲ. 88 ಇದ್ದ ಪ್ರಕರಣಗಳ ಸಂಖ್ಯೆ ಈಗ ಒಂದಂಕಿಗೆ ಬಂದು ನಿಂತಿದೆ. ಸೋಂಕಿತರಲ್ಲಿ ಬಹುತೇಕರು ಗುಣಮುಖರಾಗಿದ್ದಾರೆ. ಬೇರೆಲ್ಲಾ ಕಡೆ ಕೊರೋನಾ ವ್ಯಾಪಿಸುವುದನ್ನು ನಿಯಂತ್ರಿಸಲು ಪರದಾಡುತ್ತಿರುವಾಗ ಮೈಸೂರಿಗೆ ಇದು ಹೇಗೆ ಸಾಧ್ಯವಾಯಿತು ಎಂಬ ಅಚ್ಚರಿ ಹುಟ್ಟಬಹುದು. ಮೈಸೂರು ಜಿಲ್ಲಾಡಳಿತ ತೆಗೆದುಕೊಂಡ ಅನೇಕ ದಿಟ್ಟ ಕ್ರಮಗಳೇ ಇದಕ್ಕೆ ಕಾರಣ. ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ನೇತೃತ್ವದಲ್ಲಿ ಮೈಸೂರಿನ ಅಧಿಕಾರಿಗಳು ಹಾಕಿದ ಪರಿಶ್ರಮದ ಫಲ ಇದು. ಜೊತೆಗೆ, ಮೈಸೂರಿನ ಜನರು ನೀಡಿದ ಸಹಕಾರವೂ ಕಾರಣ.

ಇದನ್ನೂ ಓದಿ: ಮುಜರಾಯಿ ದೇವಾಲಯಗಳನ್ನೂ ತೆರೆಯಲು ಮುಂದಾದ ಸರ್ಕಾರ; ನ್ಯೂಸ್‌18ಗೆ ಸಚಿವ ಶ್ರೀನಿವಾಸ ಪೂಜಾರಿ ಮಾಹಿತಿ

ಏನು ಕ್ರಮ ಕೈಗೊಳ್ಳಲಾಗಿತ್ತು?

ಮೈಸೂರಿನಲ್ಲಿ ಕೊರೋನಾ ಸೋಂಕು ಶುರುವಾಗಿದ್ದೇ ಜುಬಿಲೆಂಟ್ಸ್ ಕಾರ್ಖಾನೆಯಿಂದ. ಇದರ ಉದ್ಯೋಗಿ ಪಿ-52ರಿಗೆ ಸೋಂಕು ಇರುವುದು ಪತ್ತೆಯಾಯಿತು. ನೋಡನೋಡುತ್ತಿರುವಂತೆಯೇ ಹಲವಾರು ಮಂದಿಗೆ ಪಾಸಿಟಿವ್ ಬರತೊಡಗಿತು. ಜಿಲ್ಲಾಡಳಿತ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಜುಬಿಲೆಂಟ್ಸ್ ಪ್ರಕರಣಗಳತ್ತ ಹೆಚ್ಚು ಗಮನ ಹರಿಸಿತು. ಇಡೀ ಕಾರ್ಖಾನೆ ಬಂದ್ ಮಾಡಿತು. ಎಲ್ಲಾ ಉದ್ಯೋಗಿಗಳನ್ನ ಕ್ವಾರಂಟೈನ್​ಗೆ ಒಳಪಡಿಸಿತು. ಒಟ್ಟು 1,500 ಮಂದಿ ಕ್ವಾರಂಟೈನ್​ಗೆ ಒಳಪಟ್ಟರು. ಕ್ವಾರಂಟೈನ್​ನಲ್ಲಿರುವವರ ಮನೆಗಳಿಗೆ ಜಿಲ್ಲಾಡಳಿತ ಸ್ಟಿಕರ್ ಅಂಟಿಸಿತು. ಆ ಮನೆಗಳ ಬಳಿ ಪೊಲೀಸರ ನಿಯೋಜನೆ ಮಾಡಿತು. ತೀರಾ ತುರ್ತು ಸಂದರ್ಭ ಹೊರತುಪಡಿಸಿ ಉಳಿದಂತೆ ಆ ಮನೆಗಳಿಂದ ಯಾರೂ ಹೊರಬಾರದಂತೆ ಜಾಗ್ರತೆ ವಹಿಸಲಾಯಿತು. ಆ ಮನೆಗಳಿಗೆ ಎರಡು ತಿಂಗಳಿಗೆ ಆಗುವಷ್ಟು ಪಡಿತರ ವಿತರಣೆ ಮಾಡಲಾಯಿತು.

ಯಾವುದೇ ಹೊಸ ಪಾಸಿಟಿವ್ ಕೇಸ್​ಗಳು ಪತ್ತೆಯಾದರೆ ತತ್​ಕ್ಷಣವೇ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿತ್ತು. ಕೋವಿಡ್ ಆಸ್ಪತ್ರೆಗೆ ಬೇರೆ ಯಾರಿಗೂ ಪ್ರವೇಶ ನೀಡದೆ ಎಚ್ಚರಿಕೆ ವಹಿಸಲಾಯಿತು.

ಇದನ್ನೂ ಓದಿ: ಆರ್. ಅಶೋಕ್ ಒಬ್ಬ ನಕಲಿ ನಾಯಕ; ಸಾಮಾಜಿಕ ಜಾಲತಾಣದಲ್ಲಿ ಡಿಕೆಶಿ ಫ್ಯಾನ್ಸ್ ಗುಟುರುತಬ್ಲಿಘಿಗಳ ನಿಯಂತ್ರಣ: ದೆಹಲಿಯಲ್ಲಿ ತಬ್ಲಿಘಿ ಜಮಾತ್ ಸಭೆಗೆ ಹೋಗಿ ಬಂದವರಿಂದ ಸೋಂಕು ಹರಡುವ ತಲೆನೋವಿತ್ತು. ಈ ಹಿನ್ನೆಲೆಯಲ್ಲಿ ತಬ್ಲಿಘಿಗಳಿಗೆ ಹೋಗಿ ಬಂದವರು, ಹಾಗೂ ಅವರ ಸಂಪರ್ಕದಲ್ಲಿದ್ದವರನ್ನು ಹುಡುಕಿ ಹುಡುಕಿ ಕ್ವಾರಂಟೈನ್​ನಲ್ಲಿಡಲಾಯಿತು. ಅವರೆಲ್ಲರೂ ಹೊರಗೆ ಹೋಗದಂತೆ ನಿಗಾದಲ್ಲಿರಿಸಲಾಯಿತು.

ಗಡಿ ನಿಯಂತ್ರಣ: ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಗಡಿ ಹೊಂದಿರುವ ಮೈಸೂರಿಗೆ ಆ ಮೂಲಕವೂ ಕೊರೋನಾ ಸೋಂಕು ವ್ಯಾಪಿಸುವ ಭೀತಿ ಇತ್ತು. ಅದಕ್ಕೆ ಗಡಿ ಬಂದ್ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿತು. ಚಾಮರಾಜನಗರ ಮೂಲಕ ತಮಿಳುನಾಡಿನ ಗಡಿ ಬಂದ್ ಮಾಡಲಾಯಿತು. ಹೆಚ್.ಡಿ. ಕೋಟಿ ಮತ್ತು ಪಿರಿಯಾಪಟ್ಟಣದಲ್ಲಿ ಕೇರಳಕ್ಕೆ ಹೋಗುವ ರಸ್ತೆಗಳನ್ನ ಬಂದ್ ಮಾಡಲಾಯಿತು.

ಇದರ ಜೊತೆಗೆ, ಸೋಂಕು ಪತ್ತೆಯಾದ ಗ್ರಾಮಗಳು ಮತ್ತು ಪ್ರದೇಶಗಳನ್ನು ಸೀಲ್​ಡೌನ್ ಮಾಡಲಾಯಿತು. ಹಾಗೆಯೇ, ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳಿಗೆ ಅಗತ್ಯ ಪೌಷ್ಟಿಕ ಆಹಾರ ಒದಗಿಸಿದರು. ಇದರಿಂದ ಅವರು ಬೇಗ ಚೇತರಿಸಿಕೊಳ್ಳಲು ಸಾಧ್ಯವಾಯಿತು. ಈ ಎಲ್ಲಾ ಕ್ರಮಗಳಿಂದ ಜಿಲ್ಲಾಡಳಿತವು ಮೈಸೂರಿಗಂಟಿದ್ದ ಕೊರೋನಾ ಕಳಂಕವನ್ನು ನೀಗಿಸಿ ಶಹಬ್ಬಾಸ್​ಗಿರಿ ಪಡೆದಿದೆ.

ವರದಿ: ಪುಟ್ಟಪ್ಪ

First published: May 5, 2020, 12:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading