Shashi Tharoor| 'ಎಲ್ಲರಿಗೂ ಉಚಿತ ಲಸಿಕೆ ನೀಡಿ': ಕೇಂದ್ರ ಸರ್ಕಾರದ ಲಸಿಕಾ ನೀತಿ ಬಗ್ಗೆ ಕಿಡಿಕಾರಿದ ಶಶಿ ತರೂರ್
ಕೇಂದ್ರ ಸರ್ಕಾರವು ತನ್ನ ಈ ಅಸಮರ್ಪಕ ವ್ಯಾಕ್ಸೀನ್ ನೀತಿಯನ್ನು ಹಿಂಪಡೆದು ದೇಶದ ಎಲ್ಲರಿಗೂ ವ್ಯಾಕ್ಸೀನ್ ನೀಡುವ ತನ್ನ ಭರವಸೆಗೆ ಬದ್ಧವಾಗಬೇಕು ಎಂದು ಸಂಸದ ಶಶಿ ತರೂರ್ ಆಗ್ರಹಿಸಿದ್ದಾರೆ.
ನವ ದೆಹಲಿ (ಜೂನ್ 02); ದೇಶದಲ್ಲಿ ಕೊರೋನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಸಾವಿನ ಸಂಖ್ಯೆಯೂ ಏರುತ್ತಲೇ ಇದೆ. ಹೀಗಾಗಿ ಸೋಂಕನ್ನು ನಿಯಂತ್ರಿಸಲು ಇರುವುದು ಒಂದೇ ಮಾರ್ಗ, ಎಲ್ಲರಿಗೂ ಕೊರೋನಾ ಲಸಿಕೆ ನೀಡುವುದು. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಮೇ.01 ರಿಂದಲೇ 18-44 ವರ್ಷದವರಿಗೆ ಕೊರೋನಾ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾ ಗಿತ್ತು. ಆದರೆ, ಈವರೆಗೆ ಯಾವುದೇ ರಾಜ್ಯಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಲಸಿಕೆಯನ್ನು ನೀಡಿಲ್ಲ. ಅಲ್ಲದೆ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಬಗ್ಗೆ ಕಿಡಿಕಾರಿರುವ ಸಂಸದ ಶಶಿ ತರೂರ್, "ಕೇಂದ್ರ ಸರ್ಕಾರದ ಅಸಮರ್ಪಕ ವ್ಯಾಕ್ಸೀನ್ ನೀತಿಯನ್ನು ಅನುಸರಿ ಸುತ್ತಿದೆ. ಅಲ್ಲದೆ, ದೇಶದ ಎಲ್ಲರಿಗೂ ಕೇಂದ್ರ ಸರ್ಕಾರ ಉಚಿತ ವ್ಯಾಕ್ಸೀನ್ ನೀಡಬೇಕು" ಎಂದು ಆಗ್ರಹಿಸಿದ್ದಾರೆ.
ಶಶಿ ತರೂರ್ ಪ್ರಸ್ತುತ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಸದ್ಯಕ್ಕೆ ಚಿಕಿತ್ಸೆ ಪಡೆಯುತ್ತಿರುವ ಸಂಸದ ಶಶಿ ತರೂರ್ ಚಿಕಿತ್ಸೆ ಪಡೆಯುತ್ತಿರುವ ಬೆಡ್ನಿಂದಲೇ ವಿಡಿಯೋ ಒಂದನ್ನು ಮಾಡಿದ್ದು, "ಕೇಂದ್ರ ಸರ್ಕಾರದ ವ್ಯಾಕ್ಸೀನ್ ನೀತಿ ಅಸಮರ್ಪಕವಾಗಿದೆ. ಕೇಂದ್ರ ಸರ್ಕಾರ ತನ್ನ ಭರವಸೆಯಂತೆ 2021 ರ ಡಿಸೆಂಬರ್ ಅಂತ್ಯದ ವೇಳೆಗೆ ಪ್ರತಿಯೊಬ್ಬರಿಗೂ ವ್ಯಾಕ್ಸೀನ್ ನೀಡಲು ಮುಂದಾಗಬೇಕು. ದೇಶದ ಪ್ರತಿಯೊಬ್ಬರಿಗೂ ಉಚಿತವಾಗಿ ವ್ಯಾಕ್ಸೀನ್ ಸಿಗುವಂತಾಗಬೇಕು. ಈ ಸಂಬಂಧ ಸೇವ್ ಇಂಡಿಯಾ ಕ್ಯಾಂಪೇನ್ ಮಾಡುತ್ತಿದ್ದು ಆಂದೋಲನದಲ್ಲಿ ಈ ಮೂಲಕ ತಾವು ಭಾಗಿಯಾಗುವುದಾಗಿ" ಹೇಳಿದ್ದಾರೆ.
ಈಗ ದೇಶದಲ್ಲಿ ಉತ್ಪಾದನೆಯಾಗುತ್ತಿರುವ ವ್ಯಾಕ್ಸೀನ್ ಪ್ರಮಾಣದಿಂದ ಡಿಸೆಂಬರ್ ವೇಳೆಗೆ ಪ್ರತಿಯೊಬ್ಬರಿಗೂ ವ್ಯಾಕ್ಸೀನ್ ಸೌಲಭ್ಯವನ್ನು ನೀಡಲು ಸಾಧ್ಯವಿಲ್ಲ. ನರೇಂದ್ರ ಮೋದಿಯವರ ಸರ್ಕಾರ 2021 ರ ಜನವರಿಯಲ್ಲಿ ತನ್ನ ವ್ಯಾಕ್ಸಿನೇಶನ್ ಅಭಿಯಾನವನ್ನು ಆರಂಭಿಸುವಾಗ ಎಲ್ಲರಿಗೂ ಕೇಂದ್ರವೇ ವ್ಯಾಕ್ಸೀನ್ ನೀಡುವುದಾಗಿ ಭರವಸೆ ನೀಡಿತ್ತು. ಈಗ ಅರ್ಧದಷ್ಟು ವ್ಯಾಕ್ಸಿನ್ ಉತ್ಪಾದನೆಯನ್ನು ಸಬ್ಸಿಡಿ ಬೆಲೆಯಲ್ಲಿ ತಾನು ಖರೀದಿಸಿ ಉಳಿದದ್ದನ್ನು ರಾಜ್ಯಗಳಿಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಬಿಟ್ಟುಕೊಟ್ಟಿದೆ.
ಮುಕ್ತ ಮಾರುಕಟ್ಟೆಯಲ್ಲಿ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳು ವ್ಯಾಕ್ಸೀನ್ ಗಾಗಿ ಪೈಪೋಟಿ ನಡೆಸುವಂತಾಗಿದೆ. ಇದರಿಂದ ದೇಶದೆಲ್ಲೆಡೆ ವ್ಯಾಕ್ಸೀನ್ ಗೆ ಕತಕ ಅಭಾವ ಸೃಷ್ಟಿಯಾಗಿದ್ದು ಖಾಸಗಿ ವಲಯವು ದೇಶದ ಉತ್ಪಾದನೆಯ ಬಹುಪಾಲು ವ್ಯಾಕ್ಸೀನ್ ಗಳನ್ನು ಖರೀದಿಸಿ ದುಬಾರಿ ಬೆಲೆಗೆ ಮಾರಿಕೊಳ್ಳಲು ಕೇಂದ್ರವೇ ಅವಕಾಶ ಮಾಡಿಕೊಟ್ಟಿದೆ ಎಂದು ಶಶಿ ತರೂರ್ ಕೇಂದ್ರ ಸರ್ಕಾರದ ವ್ಯಾಕ್ಸೀನ್ ನೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರವು ತನ್ನ ಈ ಅಸಮರ್ಪಕ ವ್ಯಾಕ್ಸೀನ್ ನೀತಿಯನ್ನು ಹಿಂಪಡೆದು ದೇಶದ ಎಲ್ಲರಿಗೂ ವ್ಯಾಕ್ಸೀನ್ ನೀಡುವ ತನ್ನ ಭರವಸೆಗೆ ಬದ್ಧವಾಗಬೇಕು ಎಂದು ಸಂಸದ ಶಶಿ ತರೂರ್ ಆಗ್ರಹಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಕೋವಿಡ್ ಸೋಂಕಿನಿಂದಾಗಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿರುವ ಶಶಿ ತರೂರ್ ಸದ್ಯ ಆಸ್ಪತ್ರೆಯಲ್ಲಿ ಗುಣಮುಖರಾಗುತ್ತಿದ್ದಾರೆ. ತಾವು ಕೊರೋನಾ ಸೋಂಕಿನಿಂದ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದು ದೇಶದ ಜನರು ತಾವು ಅನುಭವಿಸಿದ ಆರೋಗ್ಯ ಸಮಸ್ಯೆಯನ್ನು ಎದುರಿಸ ದಂತಾಗಬೇಕು ಎಂದು ಶಶಿ ತರೂರ್ ಹೇಳಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆ. ಆದರೂ, ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ