ಕೋವಿಡ್-19 ಬಿಕ್ಕಟ್ಟು: ಇಡೀ ಸಂಬಳ ಬಿಟ್ಟುಕೊಟ್ಟ ಅಂಬಾನಿ; 15 ಲಕ್ಷದವರೆಗಿನ ಸಂಬಳದ ಉದ್ಯೋಗಿಗಳಿಗಿಲ್ಲ ವೇತನ ಕಡಿತ

ವಾರ್ಷಿಕ 15 ಲಕ್ಷ ರೂಗಿಂತ ಕಡಿಮೆ ಸಂಬಳ ಪಡೆಯುತ್ತಿರುವ ರಿಲಾಯನ್ಸ್ ಉದ್ಯೋಗಿಗಳಿಗೆ ಯಾವುದೇ ಸಂಬಳ ಕಡಿತ ಆಗದು ಎಂದು ಆರ್​ಐಎಲ್ ಆಡಳಿತ ಮಂಡಳಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಮುಕೇಶ್ ಅಂಬಾನಿ

ಮುಕೇಶ್ ಅಂಬಾನಿ

  • Share this:
    ಮುಂಬೈ(ಏ. 30): ಹನ್ನೆರಡು ವರ್ಷಗಳ ಹಿಂದೆ ಆರ್ಥಿಕ ಹಿಂಜರಿತ ಎದುರಾಗಿದ್ದಾಗ ರಿಲಾಯನ್ಸ್ ಇಂಡಸ್ಟ್ರೀಸ್ ಛೇರ್ಮನ್ ಮುಕೇಶ್ ಅಂಬಾನಿ ಅವರು ತಮ್ಮ ಸಂಬಳವನ್ನು ಕಡಿತಗೊಳಿಸಿದ್ದರು. ಇವತ್ತು ಕೊರೋನಾ ಮಹಾಮಾರಿಯಿಂದಾಗಿ ಬೀವ್ರ ಬಿಕ್ಕಟ್ಟು ಎದುರಾಗಿದೆ. ಈ ಮಹಾಸಂಕಷ್ಟದ ಸ್ಥಿತಿಯಲ್ಲಿ ಮುಕೇಶ್ ಅಂಬಾನಿ ತಮ್ಮಿಡೀ ಸಂಬಳವನ್ನೇ ತ್ಯಾಗ ಮಾಡಿದ್ದಾರೆ. ಈ ಮೂಲಕ ಆರ್​ಐಎಲ್ ಉದ್ಯೋಗಿಗಳಿಗೆ ಮಾದರಿ ಹಾಕಿಕೊಟ್ಟಿದ್ದಾರೆ.

    ಕೊರೋನಾ ವೈರಸ್ ಸೋಂಕಿನಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದೆ. ದೇಶದ ಬಹುತೇಕ ಉದ್ಯಮಗಳು ನೆಲಕಚ್ಚಿವೆ. ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ವಿಶ್ವವೇ ಕಂಡರಿಯದ ಮಟ್ಟಕ್ಕೆ ಬಿಕ್ಕಟ್ಟು ಉದ್ಭವಿಸಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ರಿಲಾಯನ್ಸ್ ಸಂಸ್ಥೆ ದಿಟ್ಟ ಹೋರಾಟ ತೋರುತ್ತಿದೆ. ಮುಕೇಶ್ ಅಂಬಾನಿ ಅವರಂತೆಯೇ ಅವರ ಸಂಸ್ಥೆ ಕೂಡ ಹೋರಾಟದ ಮನೋಭಾವ ಇರುವಂಥದ್ದು. ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ವ್ಯವಹಾರಗಳಿಗೆ ಮರುರೂಪ ಕೊಟ್ಟು ಚೇತರಿಕೆ ಕಾಣಲು ಯತ್ನಿಸುತ್ತಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ನಿರ್ದೇಶಕರಲ್ಲೊಬ್ಬರಾದ ಹಿತೇಶ್ ಮೇಸ್ವಾನಿ ಅವರು ಉದ್ಯೋಗಿಗಳ ಪರಿಶ್ರಮ ಮತ್ತು ಕಾರ್ಯಕ್ಷಮತೆ ಹಾಗೂ ಹೋರಾಟ ಮನೋಭಾವವನ್ನು ತಮ್ಮ ಪತ್ರದಲ್ಲಿ ಪ್ರಶಂಸಿಸಿದ್ದಾರೆ.

    ರಿಲಾಯನ್ಸ್​ನ ಕಂಪನಿಗಳಲ್ಲಿ ಅತೀ ಹೆಚ್ಚು ಹೊಡೆತ ಕಂಡಿರುವುದು ಹೈಡ್ರೋಕಾರ್ಬನ್ ವ್ಯವಹಾರ. ಈ ಹಿನ್ನೆಲೆಯಲ್ಲಿ ಹೈಡ್ರೋಕಾರ್ಬನ್ ವ್ಯವಹಾರದಲ್ಲಿ ವೆಚ್ಚ ಕಡಿತಕ್ಕೆ ಸಂಸ್ಥೆ ಮುಂದಾಗಿದೆ. ಎಲ್ಲಾ ಸ್ತರದಲ್ಲೂ ಅನಗತ್ಯ ವೆಚ್ಚವನ್ನ ಕಡಿಮೆಗೊಳಿಸಲಾಗುತ್ತಿದೆ. ಅದರಲ್ಲಿ ಉದ್ಯೋಗಿಗಳ ವೆಚ್ಚವೂ ಸೇರಿಕೊಂಡಿದೆ. ಈಗ ಆರ್​ಐಎಲ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ತಮ್ಮಿಡೀ ಸಂಬಳವನ್ನೇ ತ್ಯಾಗ ಮಾಡಿದ್ದಾರೆ. ಹಾಗೆಯೇ, ಆರ್​ಐಎಲ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್​ಗಳು, ಸದಸ್ಯರು ಸೇರಿದಂತೆ ಎಲ್ಲಾ ಆಡಳಿತ ಮಂಡಳಿ ನಿರ್ದೇಶಕರು ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ತಮ್ಮ ಸಂಬಳ-ಭತ್ಯೆಯಲ್ಲಿ ಶೇ. 30ರಿಂದ 50ರಷ್ಟು ತ್ಯಾಗ ಮಾಡಿದ್ದಾರೆ.

    ಇದನ್ನೂ ಓದಿ: Jio - Facebook Deal: ಫೇಸ್​ಬುಕ್-ಜಿಯೋ ಒಪ್ಪಂದದಿಂದ ಭಾರತದ ಡಿಜಿಟಲ್ ವ್ಯವಸ್ಥೆಗೆ ಭರ್ಜರಿ ಲಾಭ: ಬಿಐಎಫ್

    ಹೈಡ್ರೋಕಾರ್ಬನ್ ವಿಭಾಗದಲ್ಲಿರುವ ವಾರ್ಷಿಕ 15 ಲಕ್ಷಕ್ಕಿಂತ ಹೆಚ್ಚು ಸಂಬಳ ಪಡೆಯುತ್ತಿರುವ ಎಲ್ಲಾ ರಿಲಾಯನ್ಸ್ ಉದ್ಯೋಗಿಗಳು ಶೇ. 10ರಷ್ಟು ಸಂಬಳ ಬಿಟ್ಟುಕೊಡಲಿದ್ದಾರೆ. ಹಾಗೆಯೇ, ವಾರ್ಷಿಕವಾಗಿ ನೀಡಲಾಗುವ ಕ್ಯಾಷನ್ ಬೋನಸ್ ಮತ್ತು ಇನ್ಸೆಂಟಿವ್​ಗಳನ್ನು ಅನಿರ್ದಿಷ್ಟಾವಧಿಯವರೆಗೆ ತಡೆಹಿಡಿಯಲಾಗಿದೆ ಎಂದು ಹಿತಲ್ ಆರ್. ಮೇಸ್ವಾನಿ ತಿಳಿಸಿದ್ಧಾರೆ.

    ಆದರೆ, ವಾರ್ಷಿಕ 15 ಲಕ್ಷ ರೂಗಿಂತ ಕಡಿಮೆ ಸಂಬಳ ಪಡೆಯುತ್ತಿರುವ ರಿಲಾಯನ್ಸ್ ಉದ್ಯೋಗಿಗಳಿಗೆ ಯಾವುದೇ ಸಂಬಳ ಕಡಿತ ಆಗದು ಎಂದು ಮಂಡಳಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

    ಲಾಕ್ ಡೌನ್ ಅವಧಿಯು ನಮಗೆ ಮರುಸಂಘಟಿತಗೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದೆ. ನಮ್ಮ ಉತ್ಪನ್ನಶೀಲತೆ ಹೆಚ್ಚಿಸಲು ಅನುವಾಗುವಂತೆ ವ್ಯವಹಾರ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲು ಅವಕಾಶ ಮಾಡಿಕೊಟ್ಟಿದೆ. ಈ ಅವಕಾಶಗಳನ್ನ ಉಪಯೋಗಿಸಿಕೊಂಡು ಶ್ರಮ ವಹಿಸಿ ನಮ್ಮೆಲ್ಲರ ಸಂಬಳ ಸಹಜಸ್ಥಿತಿಗೆ ಬರುವಂತೆ ಮಾಡೋಣ ಎಂದು ಹಿತಲ್ ಮೇಸ್ವಾನಿ ರಿಲಾಯನ್ಸ್ ಉದ್ಯೋಗಿಗಳಿಗೆ ಕರೆ ನೀಡಿದ್ದಾರೆ.

    First published: