ಬೆಂಗಳೂರು (ಮೇ. 11): ಕೊರೋನ ಸೋಂಕು ನಿಯಂತ್ರಣಕ್ಕೆ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದ್ದು, ಇದರಿಂದ ಬಡವರು, ಕೂಲಿ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನಲೆ ಸರ್ಕಾರ ಜನರ ಕಷ್ಟಕ್ಕೆ ಧಾವಿಸಬೇಕು. ಅವರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದರು. ಸಿದ್ದರಾಮಯ್ಯ ಅವರ ಈ ಹೇಳಿಕೆ ವಿರುದ್ಧ ಹರಿಹಾಯ್ದಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ, ಕೋವಿಡ್ನಿಂದ ಸರ್ಕಾರಕ್ಕೂ ಆರ್ಥಿಕ ಹೊಡೆತ ಬಿದ್ದಿದೆ. ಇಂತಹ ಸಂದರ್ಭದಲ್ಲಿ 10 ಸಾವಿರ ಪ್ಯಾಕೇಜ್ ಘೋಷಣೆ ಇನ್ನಷ್ಟು ಹೊರೆಯಾಗಲಿದೆ. ವಿಪಕ್ಷ ನಾಯಕರು ಸರ್ಕಾರದ ಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಬಿಟ್ಟಿ ಪ್ರಚಾರಕ್ಕೆ ಎಂದು ಈ ರೀತಿ ಹೇಳಿಕೆ ಕೊಡಬಾರದು ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ಸಂಕಷ್ಟಕ್ಕೆ ಗುರಿಯಾಗುತ್ತಿದೆ. ಸರ್ಕಾರ ರಚನೆಯಾದಾಗ ಪ್ರವಾಹದಿಂದ ನಷ್ಟವಾಯ್ತು. ಪ್ರವಾಹದಿಂದ ನಲುಗಿದ ಸಂತ್ರಸ್ತರ ನೆರವಿಗೆ ಸರ್ಕಾರ ಧಾವಿಸಿತು. ಈ ವೇಳೆ ಹೂವು, ಹಣ್ಣು ನಷ್ಟಕ್ಕೆ 25 ಸಾವಿರ ಕೊಡಲಾಯಿತು. ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ ಪರಿಹಾರ ನೀಡಲಾಯಿತು. ಕಿಸಾನ್ ಸನ್ಮಾನ್ ಯೋಜನೆಗೆ 4 ಸಾವಿರ ಕೊಟ್ಟರು. ಅಸಂಘಟಿತ ಕಾರ್ಮಿಕರಿಗೆ 5 ಸಾವಿರ ಕೊಟ್ಟರು. ಹೀಗೆ ಜನರ ಕಷ್ಟಕ್ಕೆ ಸರ್ಕಾರ ಧಾವಿಸುತ್ತಲೇ ಇದೆ. ಇಂದು ಸರ್ಕಾರ ನಡೆಸುವುದಏ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ 10 ಸಾವಿ ಪ್ಯಾಕೇಜ್ ನೀಡಿ ಎಂದರೇ ಹೇಗೆ. ಸಿದ್ದರಾಮಯ್ಯ ಕೂಡ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದವರು. ಈ ಬಗ್ಗೆ ಅವರು ಕೂಡ ಅರ್ಥ ಮಾಡಿಕೊಳ್ಳಬೇಕು. ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ನಮಗೂ ಗಮನವಿದೆ. ಆದರೆ, ಇಷ್ಟೊಂದು ಪ್ಯಾಕೇಜ್ ಘೋಷಣೆ ಕಷ್ಟವಾಗಲಿದೆ ಎಂದರು.
ಇದನ್ನು ಓದಿ: ಬಾಗಿಲು ಮುಚ್ಚಿದರೂ ಆಗಮಿಸುತ್ತಿರುವ ಮಂಜುನಾಥನ ಭಕ್ತರು; ಧರ್ಮಸ್ಥಳ ಗ್ರಾ.ಪಂನಿಂದ ಕೊರೋನಾ ತಡೆಗೆ ಹೊಸ ಅಸ್ತ್ರ
ಕೋವಿಡ್ ನಿರ್ವಹಣೆ ಸೇರಿಂತೆ ಹಲವು ವಿಚಾರದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ವಿಫಲವಾಗಿದ್ದು, ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಸಲಾಗಿದೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ನಾಯಕತ್ವ ಬದಲಾವಣೆ ಇಲ್ಲ. ಜನರ ಸಂಕಷ್ಟದಲ್ಲಿ ನಾವು ಜನರ ಜೊತೆ ಇರಬೇಕು. ದೆಹಲಿಗೆ ಹೋದವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಾರು ಸಿಎಂ ವಿರುದ್ಧ ಹೋಗಿದ್ದಾರೋ ಗೊತ್ತಿಲ್ಲ. ನಾಯಕತ್ವ ಬದಲಾವಣೆ ಯಾಗಲ್ಲ. ಇದನ್ನ ನಮ್ಮ ವರಿಷ್ಠರು ಸ್ಪಷ್ಟಪಡಿಸಿದ್ದಾರೆ. ರಾಜ್ಯಾಧ್ಯಕ್ಷರು ಕೂಡ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕೋವಿಡ್ ನಿರ್ವಹಣೆ ಮಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕಾರ್ಯಚಾರಣೆಗೆ ಕೇಂದ್ರದ ನಾಯಕರು ಕರೆ ಮಾಡಿ ಪ್ರಶಂಸಿದ್ದಾರೆ. ಈ ವೇಳೆ ನಿಮ್ಮ ಜೊತೆಗಿದ್ದೇವೆ ಎಂಬ ಸಂದೇಶ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯೇ ಇಲ್ಲ. ಇದೆಲ್ಲವೂ ಊಹಾಪೋಹಾ ಎಂದು ನಾಯಕತ್ವದ ಬದಲಾವಣೆ ವಿಚಾರವನ್ನು ತಳ್ಳಿ ಹಾಕಿದರು.
ಇನ್ನು ಈ ಕುರಿತು ಮಾತನಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರು, ರಾಜ್ಯದಲ್ಲಿ ಕೊರೊನಾ ಕಂಟ್ರೋಲ್ ಗೆ ಬರುತ್ತಿದೆ. ಆದರೂ ಭಾರತದಲ್ಲಿ ಇರುವ ಕೊರೋನಾ ಕೇಸ್ಗಳ ಪೈಕಿ ಕರ್ನಾಟಕದಲ್ಲೇ ಹೆಚ್ಚಿದೆ. ಜನ ಮಾಸ್ಕ್ ಹಾಕಿ ಅಂತರ ಕಾಯ್ದುಕೊಳ್ಳಬೇಕು. ಬೆಳಗ್ಗೆ 6 ರಿಂದ 10ರವರೆಗೆ ಮಾತ್ರ ಓಡಾಡಬೇಕು. ಜನರ ಸಹಕಾರ ಇದ್ದಾಗ ಮಾತ್ರ ಕೊರೋನಾ ನಿಯಂತ್ರಣ ಮಾಡಬಹುದು. ಸ್ವತಃ ಪ್ರಧಾನಿ ಮೋದಿಯವರೇ ನನ್ನ ಜೊತೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಎಲ್ಲಾ ಸಹಕಾರ ಕೊಡ್ತಿದ್ದಾರೆ. ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಯಾವುದೇ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ