news18-kannada Updated:April 24, 2020, 5:33 PM IST
ಸಂಸದ ಅನಂತಕುಮಾರ್ ಹೆಗಡೆ
ಕಾರವಾರ(ಏ.24): ಇಡೀ ದೇಶ ಕೊರೋನಾ ವೈರಸ್ನಿಂದ ಬಳಲುತ್ತಿದೆ. ಅಲ್ಲಿ ಇಲ್ಲಿ ಜನಪ್ರತಿನಿಧಿಗಳು ತಮ್ಮಕ್ಷೇತ್ರದ ಜನರಿಗೆ ಒಂದಿಷ್ಟು ಸಹಾಯ ಮಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ, ಲಾಕ್ ಡೌನ್ ಆಗಿ ಒಂದು ತಿಂಗಳು ಮುಗಿದರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಸದ ಅನಂತಕುಮಾರ್ ಹೆಗಡೆ ಮಾತ್ರ ಕ್ಷೇತ್ರದ ಜನತೆ ಬಗ್ಗೆ ಕಾಳಜಿ ತೋರಿಸುವಲ್ಲಿ ವಿಫಲರಾಗಿದ್ದಾರೆ.
ಅನಂತಕುಮಾರ್ ಹೆಗಡೆ ಅಂದ್ರೆ ವಿವಾದಾತ್ಮಕ ಹೇಳಿಕೆಯ ಸರದಾರ ಎಂದೇ ಕರೆಯುತ್ತಾರೆ ಜನ. ಹಿಂದುತ್ವದ ಬಗ್ಗೆ ಮಾತನಾಡಿ ಯುವ ಪೀಳಿಗೆಯ ದಾರಿ ತಪ್ಪಿಸುವ ಆರೋಪ ಇರುವ ಸಂಸದ ಅನಂತಕುಮಾರ್ ಹೆಗಡೆ ಈಗ ಕ್ಷೇತ್ರದಲ್ಲಿ ಹೋಂ ಕ್ವಾರಂಟೈನ್ ಆಗಿದ್ದಾರೆ. ಲಾಕ್ ಡೌನ್ನಿಂದ ದಿನಗೂಲಿ ನೌಕರರ ಬದುಕು ಹಸಿವೆಯಿಂದ ಬಾಡಿ ಬೆಂಡಾಗಿದೆ. ಈ ಸಂದರ್ಭದಲ್ಲಿ ಕ್ಷೇತ್ರದ ಸಂಸದ ಮಾತ್ರ ಜನರಿಗೆ ಧೈರ್ಯ ಹೇಳುವ ಮನಸ್ಸು ಮಾಡಿಲ್ಲ.
ಕ್ಷೇತ್ರದಲ್ಲಿ ಪ್ರತಿ ಜನಪ್ರತಿನಿಧಿಗಳು ತಮ್ಮದೇ ಆದ ಒಂದು ರೀತಿಯಲ್ಲಿ ಸಮಸ್ಯೆ ಎದುರಿಸುವವರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿದ್ದಾರೆ. ಆದರೆ, ಅನಂತಕುಮಾರ ಹೆಗಡೆ ಮಾತ್ರ ಒಂದು ತಿಂಗಳಿಂದ ಹೋಂ ಕ್ವಾರಂಟೈನ್ ಆಗಿ ಮನೆ ಗೇಟ್ ಕೂಡಾ ದಾಟಿಲ್ಲ. ಉತ್ತರ ಕನ್ನಡ ಜಿಲ್ಲೆಯ ಜನರನ್ನ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಉಪಯೋಗಕ್ಕೆ ತಗೆದುಕೊಳ್ಳುವ ಅನಂತಕುಮಾರ್ ಹೆಗಡೆ ಈಗ ಮನೆ ಬಿಟ್ಟು ಬರದೆ ಕ್ಷೇತ್ರದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ :
ಲಾಕ್ ಡೌನ್ ನಿಂದ ಅನಾನಸ್ ಬೆಳೆಗಾರರ ಸಂಕಷ್ಟ - ರೈತರ ಹಿತ ಕಾಪಾಡಲು ಮುಂದಾದ ಜಿಲ್ಲಾಡಳಿತ
ಇನ್ನು ಉತ್ತರ ಕನ್ನಡ ಜಿಲ್ಲೆ ಒಟ್ಟು ಆರು ವಿಧಾನಸಭಾ ಕ್ಷೇತ್ರವನ್ನು ಹೊಂದಿದೆ. ಆಯಾ ಕ್ಷೇತ್ರದಲ್ಲಿ ಅಲ್ಲಿನ ಶಾಸಕರು ತಮ್ಮ ಕ್ಷೇತ್ರದ ಜನರಿಗೆ ಅಗತ್ಯ ವಸ್ತುಗಳ ಪೂರೈಕೆ ಮತ್ತು ತೀರಾ ಬಡ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡುತ್ತಿರುವ ದೃಶ್ಯ ದಿನ ನಿತ್ಯವು ನಮಗೆ ನೋಡ ಸಿಗುತ್ತದೆ. ಆದರೆ, ಸಂಸದ ಅನಂತಕುಮಾರ ಹೆಗಡೆ ಮಾತ್ರ ಈ ಕಷ್ಟದ ಸ್ಥಿತಿಯಲ್ಲಿ ಜನರ ಮುಂದೆ ಬರದಿರುವುದು ಜನರಿಗೆ ಆಕ್ರೋಶಭರಿತರನ್ನಾಗಿಸಿದೆ.
ಕೇವಲ ಐದು ವರ್ಷಕ್ಕೊಮ್ಮೆ ಹಿಂದುತ್ವದ ಆಧಾರದ ಮೇಲೆ ಮತ ಕೇಳಲು ಬರುವ ಅನಂತ ಈಗ ಎಲ್ಲಿ ಅಂತಾ ಕ್ಷೇತ್ರದ ಜನ ಪ್ರಶ್ನಿಸುತ್ತಿದ್ದಾರೆ.
(ವರದಿ : ದರ್ಶನ್ ನಾಯ್ಕ)
First published:
April 24, 2020, 5:16 PM IST