ನವ ದೆಹಲಿ (ಏಪ್ರಿಲ್ 16); ಕೊರೋನಾ ಭೀತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದ 170 ಜಿಲ್ಲೆಗಳನ್ನು ಕೋವಿಡ್ -19 ಹಾಟ್ಸ್ಪಾಟ್ಗಳು ಎಂದು ಗುರುತಿಸಿದೆ ಮತ್ತು ಅವುಗಳನ್ನು ಕೆಂಪು ವಲಯದ ಅಡಿಯಲ್ಲಿ ವರ್ಗೀಕರಿಸಿದೆ. ಮಾರಣಾಂತಿಕ ಕೊರೋನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಇಂತಹ ಸ್ಥಳದಲ್ಲಿ ಹೆಚ್ಚಿನ ಕಟ್ಟುನಿಟ್ಟಾದ ಕ್ರಮಕ್ಕೂ ಸಹ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರ ಈಗಾಗಲೇ 25 ರಾಜ್ಯಗಳ 170 ಜಿಲ್ಲೆಗಳನ್ನು ಹಾಟ್ಸ್ಪಾಟ್ ಎಂದು ಘೋಷಿಸಿದೆ. ಈ ಪೈಕಿ 123 ಜಿಲ್ಲೆಗಳಲ್ಲಿ ಪರಿಸ್ಥಿತಿ ತೀರಾ ಗಂಭೀರ ಹಂತದಲ್ಲಿದ್ದು, 47 ಜಿಲ್ಲೆಗಳಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಇನ್ನೂ 207 ಜಿಲ್ಲೆಗಳನ್ನು ಹಾಟ್ಸ್ಪಾಟ್ ಅಲ್ಲದ ಜಿಲ್ಲೆಗಳು ಎಂದು ಹಸಿರು ವಲಯದಲ್ಲಿ ಗುರುತಿಸಲಾಗಿದೆ.
ತಮಿಳುನಾಡಿನ 27 ಜಿಲ್ಲೆಗಳ ಪೈಕಿ 22 ಜಿಲ್ಲೆಗಳನ್ನು ಹಾಟ್ಸ್ಪಾಟ್ ಎಂದು ಗುರುತಿಸಲಾಗಿದ್ದು, ದೇಶದಲ್ಲೇ ಹೆಚ್ಚು ಹಾಟ್ಸ್ಪಾಟ್ ಹೊಂದಿರುವ ರಾಜ್ಯ ಎಂಬ ಕುಖ್ಯಾತಿಗೆ ತಮಿಳುನಾಡು ಒಳಗಾಗಿದೆ. ನಂತರ ಕ್ರಮವಾಗಿ ಮಹಾರಾಷ್ಟ್ರದಲ್ಲಿ 14, ಉತ್ತರ ಪ್ರದೇಶದಲ್ಲಿ 13, ರಾಜಸ್ಥಾನ 12, ಆಂದ್ರಪ್ರದೇಶ 11 ಮತ್ತು ದೆಹಲಿಯಲ್ಲಿ10 ಹಾಟ್ ಸ್ಪಾಟ್ ಜಿಲ್ಲೆಗಳನ್ನು ಗುರುತಿಸಲಾಗಿದೆ.
600 ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣಗಳನ್ನು ಹೊಂದಿರುವ ತೆಲಂಗಾಣದ 9 ಜಿಲ್ಲೆಗಳನ್ನು ಹಾಟ್ಸ್ಪಾಟ್ ಜಿಲ್ಲೆಗಳು ಎಂದು ಗುರುತಿಸಲಾಗಿದೆ. ಪಂಜಾಬ್, ಜಮ್ಮು - ಕಾಶ್ಮೀರ ಮತ್ತು ಕರ್ನಾಟಕ ತಲಾ 8 ಹಾಟ್ಸ್ಪಾಟ್ ಜಿಲ್ಲೆಗಳನ್ನು ಹೊಂದಿದ್ದು ನಂತರದ ಸ್ಥಾನದಲ್ಲಿದೆ.
ಇದಲ್ಲದೆ ಕೇರಳ 07, ಗುಜರಾತ್, ಮಧ್ಯಪ್ರದೇಶ, ಹರಿಯಾಣ ರಾಜ್ಯಗಳಲ್ಲಿ ತಲಾ 06, ಅಸ್ಸಾಂ, ಹಿಮಾಚಲ ಪ್ರದೇಶದಲ್ಲಿ 05 ಹಾಗೂ ಬಿಹಾರ ಪಶ್ಚಿಮ ಬಂಗಾಳದಲ್ಲಿ ತಲಾ 04 ಜಿಲ್ಲೆಗಳನ್ನು ಹಾಟ್ಸ್ಪಾಟ್ ಎಂದು ಗುರುತಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ