ಮಹಾರಾಷ್ಟ್ರದಿಂದ ಕಲಬುರ್ಗಿಗೆ 30 ಸಾವಿರಕ್ಕೂ ಅಧಿಕ ವಲಸಿಗರು; ನೆಗೆಟಿವ್ ಬಂದವರು ಮನೆಗೆ ತೆರಳಲು ಅವಕಾಶ

ಸಾಂಸ್ಥಿಕ ಕ್ವಾರಂಟೈನ್​ ನಲ್ಲಿರುವವರಲ್ಲಿ ಪಾಸಿಟಿವ್ ಬಂದಿರುವವರಿಗೆ ಇಎಸ್ಐಸಿ ಮತ್ತು ಜಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೆಗೆಟಿವ್ ವರದಿ ಬಂದಿರುವವರು ಮನೆಗೆ ತೆರಳಬಹುದು. ಆದರೆ ಆರೋಗ್ಯ ಇಲಾಖೆ ಸೂಚಿಸಿರುವಷ್ಟು ದಿನಗಳು ಕಡ್ಡಾಯವಾಗಿ ಹೋಂ ಕ್ವಾರಂಟೈನ್​ನಲ್ಲಿ ಇರಬೇಕು.

ವಲಸಿಗರು (ಸಾಂದರ್ಭಿಕ ಚಿತ್ರ)

ವಲಸಿಗರು (ಸಾಂದರ್ಭಿಕ ಚಿತ್ರ)

  • Share this:
ಕಲಬುರ್ಗಿ: ಕಲಬುರ್ಗಿ ಜಿಲ್ಲೆಯನ್ನು ವಲಸಿಗರ ಗುಮ್ಮ ಬಿಟ್ಟಿಲ್ಲ. ಅದರಲ್ಲಿಯೂ ಮಹಾರಾಷ್ಟ್ರದಿಂದ ಅತ್ಯಧಿಕ ವಲಸಿಗರು ಜಿಲ್ಲೆಗೆ ವಾಪಸ್ಸಾಗಿದ್ದು, ಸೋಂಕಿತರ ಸಂಖ್ಯೆಯೂ ಏಕಾಏಕಿ ಏರಿಕೆಯಾಗಲಾರಂಭಿಸಿದೆ.

ಇದುವರೆಗೆ ಮಹಾರಾಷ್ಟ್ರದಿಂದ ಬಂದವರ ಪೈಕಿ 43 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ನೆಗೆಟಿವ್ ಬಂದ ವಲಸಿಗರನ್ನು ಮನೆಗಳಿಗೆ ಕಳುಹಿಸಿಕೊಡುವಂತೆ ಸಂಸದ ಉಮೇಶ್ ಜಾಧವ್ ಸೂಚಿಸಿದ್ದಾರೆ.

ಕಲಬುರ್ಗಿ ಜಿಲ್ಲೆಗೆ ಮಹಾರಾಷ್ಟ್ರದಿಂದ 30 ಸಾವಿರಕ್ಕೂ ಅಧಿಕ ವಲಸಿಗರು ವಾಪಸ್ಸಾಗಿದ್ದಾರೆ. ಈ ಪೈಕಿ ಮುಂಬೈಯಿಂದ ಬಂದ ವಲಸಿಗರ ಸಂಖ್ಯೆಯೇ ಅತ್ಯಧಿಕ. ಪ್ರತಿ ವರ್ಷದ ಸುಗ್ಗಿ ಮುಗಿಯುತ್ತಿದ್ದಂತೆಯೇ ದುಡಿಮೆ ಅರಸಿ ಮಹಾರಾಷ್ಟ್ರಕ್ಕೆ ಹೋಗೋದು ವಾಡಿಕೆ. ಅದರಂತೆ ಈ ವರ್ಷವೂ ಸಹಸ್ರಾರು ಕಾರ್ಮಿಕರು ಗುಳೇ ಹೋಗಿದ್ದರು. ಕೊರೋನಾ ಸೋಂಕು ವ್ಯಾಪಿಸುತ್ತಿದ್ದಂತೆಯೇ ಎಲ್ಲರೂ ತಮ್ಮ ಊರುಗಳಿಗೆ ವಾಪಸ್ಸಾಗುತ್ತಿದ್ದಾರೆ.

ಜಿಲ್ಲೆಗೆ ವಾಪಸ್ಸಾದ ವಲಸಿಗರನ್ನು ಜಿಲ್ಲೆಯ 294 ಕೇಂದ್ರಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಮಹಾರಾಷ್ಟ್ರದಿಂದ ವಾಪಸ್ಸಾದವರ ಪೈಕಿ 43 ಜನರಿಗೆ ಸೋಂಕು ದೃಢಪಟ್ಟಿದೆ. ಕಾಳಗಿ ತಾಲೂಕಿನಲ್ಲಿ ಅತಿಹೆಚ್ಚು 14 ಜನರಿಗೆ ಸೋಂಕು ಬಂದಿದೆ. ಕಮಲಾಪುರ, ಚಿಂಚೋಳಿ, ಆಳಂದ ಹಾಗೂ ಚಿತ್ತಾಪುರ ತಾಲೂಕುಗಳಲ್ಲಿ ತಲಾ ಐವರಿಗೆ ಸೋಂಕು ದೃಢಪಟ್ಟಿದೆ. ಕಲಬುರ್ಗಿ ಹಾಗೂ ಯಡ್ರಾಮಿ ತಾಲೂಕಿನಲ್ಲಿ 04 ಮತ್ತು ಜೇವರ್ಗಿ ತಾಲೂಕಿನಲ್ಲಿ ಓರ್ವರಿಗೆ ಸೋಂಕು ಹರಡಿದೆ. ಈ ಪೈಕಿ ಮುಂಬೈಯಿಂದ ಬಂದ 36 ಜನರಿಗೆ ಸೋಂಕಿರೋದು ಖಾತ್ರಿಯಾಗಿದೆ.

ಎರಡು ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಸೋಂಕು ದೃಢಪಟ್ಟಿಲ್ಲವಾದರೂ, ಮತ್ತಷ್ಟು ಸೋಂಕು ವ್ಯಾಪಕವಾಗುವ ಭೀತಿ ಇದ್ದೇ ಇದೆ. ಹೀಗಾಗಿ ರೋಗ ಲಕ್ಷಣ ಕಾಣಿಸಿಕೊಂಡವರ ಗಂಟಲು ಮಾದರಿ ಸಂಗ್ರಹಿಸಿ, ಲ್ಯಾಬ್ ಗೆ ಕಳುಹಿಸಿಕೊಡಲಾಗುತ್ತಿದೆ. ಮತ್ತೊಂದೆಡೆ ಕ್ವಾರಂಟೈನ್ ಕೇಂದ್ರದಲ್ಲಿರೂ ವಲಸಿಗರ ಗಂಟಲು ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆ ಮಾಡಿಸಲಾಗುತ್ತಿದೆ.

ಈ ನಡುವೆ ನೆಗೆಟಿವ್ ವರದಿ ಬಂದ ವಲಸಿಗ ಕಾರ್ಮಿಕರನ್ನು ಮನೆಗೆ ಕಳುಹಿಸಿಕೊಡುವುದಾಗಿ ಸಂಸದ ಉಮೇಶ್ ಜಾಧವ್ ತಿಳಿಸಿದ್ದಾರೆ. ಮಹಾರಾಷ್ಟ್ರ ಮತ್ತಿತರೆಡೆಯಿಂದ ಆಗಮಿಸಿ ಜಿಲ್ಲೆಯ ವಿವಿಧೆಡೆ ಸಾಂಸ್ಥಿಕ ಕ್ವಾರಂಟೈನ್​ನಲ್ಲಿರುವ ವಲಸಿಗರ ಪೈಕಿ ನೆಗೆಟಿವ್ ಬಂದಿರುವ ಕಾರ್ಮಿಕರನ್ನು ಅವರವರ ಮನೆಗಳಿಗೆ ಕಳುಹಿಸಿ ಹೋಂ ಕ್ವಾರಾಂಟೈನ್ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಪಂಕಜ್ ಕುಮಾರ್ ಪಾಂಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಪಂಕಜ್ ಕುಮಾರ್ ಪಾಂಡೆ ಅವರು ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆಯ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಜಾಧವ್ ಅವರು ತಿಳಿಸಿದ್ದಾರೆ.

ಇದನ್ನು ಓದಿ: ಕಂಟೈನ್ಮೆಂಟ್ ಜೋನ್​ಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಇಲ್ಲ; ಶಿಕ್ಷಣ ಸಚಿವ ಸುರೇಶ್ ಕುಮಾರ್

ಸಾಂಸ್ಥಿಕ ಕ್ವಾರಂಟೈನ್​ ನಲ್ಲಿರುವವರಲ್ಲಿ ಪಾಸಿಟಿವ್ ಬಂದಿರುವವರಿಗೆ ಇಎಸ್ಐಸಿ ಮತ್ತು ಜಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೆಗೆಟಿವ್ ವರದಿ ಬಂದಿರುವವರು ಮನೆಗೆ ತೆರಳಬಹುದು. ಆದರೆ ಆರೋಗ್ಯ ಇಲಾಖೆ ಸೂಚಿಸಿರುವಷ್ಟು ದಿನಗಳು ಕಡ್ಡಾಯವಾಗಿ ಹೋಂ ಕ್ವಾರಂಟೈನ್​ನಲ್ಲಿ ಇರಬೇಕು. ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ವಲಸಿಗರಿಗೆ ಜಾಧವ್ ಸಲಹೆ ನೀಡಿದ್ದಾರೆ.
First published: