2ನೇ ಹಂತದ ಲಾಕ್​ಡೌನ್ ಸಂಕಷ್ಟಕ್ಕೆ ಕೇಂದ್ರದಿಂದ ಇನ್ನೊಂದು ಪ್ಯಾಕೇಜ್ ಘೋಷಣೆ ಸಾಧ್ಯತೆ

ಪ್ರಧಾನಿಯನ್ನು ಭೇಟಿ ಮಾಡಿದ ನಿರ್ಮಲಾ ಸೀತಾರಾಮನ್ ದೇಶದ ಆರ್ಥಿಕ ಸ್ಥಿತಿಯ ಜೊತೆಜೊತೆಗೆ ಕೃಷಿ ಮತ್ತು ಉದ್ಯಮ ಕ್ಷೇತ್ರ ಕುಸಿದು ಕಂಗಾಲಾಗಿರುವ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಅವರು ಈ ಗಂಭೀರ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ಘನವಾದ ಪ್ಯಾಕೇಜ್ ಘೋಷಣೆ ಮಾಡಬೇಕಷ್ಟೇ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ: ಎರಡನೇ ಹಂತದ ಲಾಕ್​ಡೌನ್ ಘೋಷಣೆ ಮಾಡಿರುವುದರಿಂದ ಎರಡನೇ ಹಂತದ ವಿಶೇಷ ಪ್ಯಾಕೇಜ್ ಅನ್ನೂ ನಿರೀಕ್ಷೆ ಮಾಡಬಹುದಾ? ಹೌದು. ಅಂಥ ನಿರೀಕ್ಷೆ ಮೂಡಲು ನಿಖರವಾದ ಕಾರಣವೊಂದಿದೆ. ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಇಂದು ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದಾರೆ. ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಅವರ ಭೇಟಿ ಸಹಜವಾಗಿಯೇ ನಿರೀಕ್ಷೆಯನ್ನು ಹುಟ್ಟಿಹಾಕಿದೆ.

ಮಾರ್ಚ್ 24ರ ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ಇಂದು ರಾತ್ರಿ 12ರಿಂದ ಏಪ್ರಿಲ್ 14ರ ಮಧ್ಯರಾತ್ರಿವರೆಗೆ ದೇಶವೇ ಲಾಕ್​ಡೌನ್ ಆಗಿರಲಿದೆ ಎಂದು ಘೋಷಿಸಿದ್ದರು. ಅದಾದ 3 ದಿನಗಳ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇಶವಾಸಿಗಳ ಮುಂದೆ ಬಂದು ಲಾಕ್​ಡೌನ್ ಸಂಕಷ್ಟ ಸಂದರ್ಭ ನಿರ್ವಹಣೆಗೆ 1.70 ಲಕ್ಷ ಕೋಟಿ‌ ರೂಪಾಯಿಗಳ ವಿಶೇಷ ಪ್ಯಾಕೇಜ್ ‌ನೀಡುತ್ತಿರುವುದಾಗಿ ಘೋಷಿಸಿದರು.

ಈಗ ಮತ್ತೆ ಮೋದಿ ಏಪ್ರಿಲ್ 14ರಿಂದ ಮೇ 3ರವರೆಗೆ ಎರಡನೇ ಹಂತದ ಲಾಕ್​ಡೌನ್ ಘೋಷಣೆ ಮಾಡಿದ್ದಾರೆ. ಆದುದರಿಂದ ನಿರ್ಮಲಾ ಸೀತಾರಾಮನ್ ಎರಡನೇ ಹಂತದ ವಿಶೇಷ ಪ್ಯಾಕೇಜ್ ಅನ್ನೂ ಘೋಷಣೆ ಮಾಡುತ್ತಾರೆ, ಮಾಡಬೇಕು ಎಂಬ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಇದಕ್ಕೆ ಪೂರಕವಾಗಿ ಇವತ್ತು ಅವರು ಪ್ರಧಾನಿ ಮೋದಿ ಭೇಟಿ ಮಾಡಿ ಸದ್ಯದ ಪರಿಸ್ಥಿತಿ ಬಗ್ಗೆ ಚರ್ಚೆಯನ್ನೂ‌ ನಡೆಸಿದ್ದಾರೆ.

ಮೊದಲ ಹಂತದ ಲಾಕ್‌ಡೌನ್ ವೇಳೆ 'ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ್ ಯೋಜನೆಯಡಿ' 1.70 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ನೀಡುತ್ತಿರುವುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು. ಎರಡನೇ ಹಂತದ ಲಾಕ್‌ಡೌನ್ ಘೋಷಣೆ ಮಾಡುವ ಸಂದರ್ಭದಲ್ಲಿ ಮೋದಿ ಕೇಂದ್ರ ಸರ್ಕಾರ ಇದೇ 'ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ್ ಯೋಜನೆಯಡಿ ಬಡವರ, ಕಷ್ಟದಲ್ಲಿರುವವರ ಕೈ ಹಿಡಿಯಲಿದೆ' ಎಂಬ ಅಭಯ ನೀಡಿದ್ದರು. ಇದು ಕೂಡ ಇನ್ನೊಂದು ಪ್ಯಾಕೇಜ್ ಘೋಷಣೆ ಆಗಬಹುದೆಂಬ ಸಾಧ್ಯತೆಯನ್ನು ಹುಟ್ಟುಹಾಕಿದೆ‌.

ವಿಶೇಷ ಪ್ಯಾಕೇಜ್ ಘೋಷಣೆ ಆಗಬಹುದು ಎಂಬುದರ ಜೊತೆಗೆ ಕೇಂದ್ರ ಸರ್ಕಾರದಿಂದ ಯಾವ ರೀತಿಯ ನೆರವು ಸಿಗಬಹುದು? ಯಾರಿಗೆಲ್ಲಾ ಸಹಾಯ ಸಿಗಬಹುದು? ಕ್ಷೇತ್ರವಾರು, ವಲಯವಾರು ಏನೇನು ಉಪಯೋಗ ಆಗಬಹುದು ಎಂಬ ಲೆಕ್ಕಾಚಾರಗಳೂ ಶುರುವಾಗಿವೆ.

ಮೊದಲ ಹಂತದಲ್ಲಿ ರೈತರು, ಹಿರಿಯ ನಾಗರಿಕರು, ವಿಧವೆಯರು, ಒಂಟಿ ಮಹಿಳೆಯರು, ಕಾರ್ಮಿಕರು, ವಲಸಿಗರು ಸೇರಿದಂತೆ ಬಡವರು ಮತ್ತು ಜನಸಾಮಾನ್ಯರನ್ನು ಗುರಿಯಾಗಿರಿಸಿಕೊಳ್ಳಲಾಗಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ಬಡ ಮತ್ತು ಮಧ್ಯಮವರ್ಗದಾಚೆಗೂ ಗಮನ ಹರಿಸಬೇಕಾಗಿದೆ. ತತ್​ಕ್ಷಣದ ಪರಿಹಾರ ಕ್ರಮಗಳ ಜೊತೆಜೊತೆಯಲ್ಲಿ‌ ದೂರಗಾಮಿ ಆಲೋಚನೆ ಇಟ್ಟುಕೊಂಡು ಎರಡನೇ ಪ್ಯಾಕೇಜ್ ರೂಪಿಸಬೇಕಾಗಿದೆ.

ಹೇಗೂ ಏಪ್ರಿಲ್ 20ರ ಬಳಿಕ ಹಂತಹಂತವಾಗಿ ಲಾಕ್‌ಡೌನ್ ನಿಯಮಾವಳಿಗಳನ್ನು ಸಡಿಲಿಸಲಾಗುತ್ತದೆ. ಲಾಕ್​ಡೌನ್ ನಿಯಮಗಳನ್ನು ಸಡಿಲಿಸುವ ಉದ್ದೇಶ ಜನಸಾಮಾನ್ಯರಿಗೆ ತೊಂದರೆ ಆಗಬಾರದು ಎಂಬುದಕ್ಕಿಂತ ಹೆಚ್ಚಾಗಿ ಸ್ಥಗಿತಗೊಂಡಿರುವ ಉತ್ಪಾದನೆಗೆ‌ ಮತ್ತೆ ಚಾಲನೆ ನೀಡಬೇಕು ಎಂಬುದು. ಉತ್ಪಾದನೆಗೆ ಒತ್ತು ನೀಡಬೇಕಾದುದು ಸದ್ಯದ ಜರೂರತ್ತೂ ಕೂಡ. ಏಕೆಂದರೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಮಾಹಿತಿಗಳ ಅನ್ವಯ ಮೊದಲ ಹಂತದ ಲಾಕ್​ಡೌನ್ ವೇಳೆ ದೇಶದ ಒಟ್ಟು ಉತ್ಪಾದನೆ ಶೇಕಡ 80 ರಷ್ಟು ಕುಸಿದಿದೆ. ಕೂಡಲೇ ಉತ್ಪಾದನೆ ಆರಂಭಿಸಲು ಉತ್ಪಾದಕರಿಗೆ ಉತ್ತೇಜನ ನೀಡದಿದ್ದರೆ ಭವಿಷ್ಯದಲ್ಲಿ ಭಾರೀ ಸಮಸ್ಯೆ ಎದುರಿಸಬೇಕಾಗುತ್ತದೆ. ಈಗ ತಾತ್ಕಾಲಿಕವಾಗಿ ಮುಚ್ಚಿರುವ ಕೆಲವು ಉದ್ಯಮಿಗಳು ಮುಂದೆ ಶಾಶ್ವತವಾಗಿ ಬಾಗಿಲು ತೆರೆಯದ ಸ್ಥಿತಿ ತಲುಪಲೂಬಹುದು.

ಇದನ್ನು ಓದಿ: ಲಾಕ್ ಡೌನ್ ಪರಿಹಾರ ಅಲ್ಲ; ಕೊರೋನಾ ಹಿಮ್ಮೆಟ್ಟಿಸಲು ವ್ಯಾಪಕ ಪರೀಕ್ಷೆಗಳೇ ಸರಿ: ರಾಹುಲ್ ಗಾಂಧಿ

ಅದು ಹೇಗೆಂದರೆ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಪದ್ಧತಿ ಜಾರಿಗೆ ಬಂದಮೇಲೆ ನಿರೀಕ್ಷಿತ ವ್ಯವಹಾರ ವಹಿವಾಟಿಲ್ಲದೆ ಕೈಗಾರಿಕೆಗಳು ಕಂಗೆಟ್ಟಿದ್ದವು‌. ಸುಧಾರಣಾ ಕ್ರಮಗಳಿಗೆ ಮುಂದಾಗಿದ್ದವು‌. ಈ ಗಾಯದ ಮೇಲೆ ಈಗ ಲಾಕ್​ಡೌನ್ ಎಂಬ ಬರೆ ಎಳೆಯಲಾಗಿದೆ. ಆದ ಗಾಯಕ್ಕೆ ಮುಲಾಮು ಅಚ್ಚುವ ಬದಲು ಆಳುವ ಸರ್ಕಾರ 'ಕಾರ್ಮಿಕರನ್ನು ಕೆಲಸದಿಂದ ತೆಗೆಯಕೂಡದು' ಎಂದು ತಾಖೀತು ಮಾಡಿ ಕತ್ತು ಹಿಸುಕುವ ಕೆಲಸವನ್ನೂ ಮಾಡಿದೆ.‌ ಕಾರ್ಮಿಕರ ದೃಷ್ಟಿಯಿಂದ 'ಕೆಲಸದಿಂದ ತೆಗೆಯಬೇಡಿ' ಎಂದು ನೀಡಿರುವ ಸೂಚನೆ ಸಮಯೋಚಿತವಾದುದು. ಆದರೆ ಕಾರ್ಖಾನೆಗಳ ದೃಷ್ಟಿಯಿಂದ, ಉದ್ಯಮಗಳನ್ನು ನಡೆಸುತ್ತಿರುವವರ ದೃಷ್ಟಿಯಿಂದ ಅರಗಿಸಿಕೊಳ್ಳಲಾಗದ ಸಂಗತಿ. ಇಂಥ ಕ್ಲಿಷ್ಟ ಸಮಸ್ಯೆಯನ್ನು ಕೇಂದ್ರ ಸರ್ಕಾರ ಪರಿಹರಿಸಲೇಬೇಕಿದೆ. ಅದಕ್ಕಾಗಿ ಅದು ತನ್ನ ಪ್ಯಾಕೇಜ್ ನಲ್ಲಿ ಉದ್ಯಮಗಳಿಗೂ ಅದರಲ್ಲೂ ಅತಿ ಸಣ್ಣ, ಸಣ್ಣ, ಮಧ್ಯಮ ವರ್ಗದ ಉದ್ಯಮ-ಕೈಗಾರಿಕೆಗಳೆಡೆಗೆ ವಿಶೇಷ ಗಮನ ನೀಡಬೇಕಾಗಿದೆ.

ಇನ್ನೊಂದು ಪ್ರಮುಖ ವಲಯವೆಂದರೆ ದೇಶದ ಅತಃಸತ್ವವಾಗಿರುವ ಕೃಷಿ. ರೈತರು ಕೂಡ ಈಗ ಬೆಳೆದಿರುವ ಬೆಳೆಗಳನ್ನು ಸೂಕ್ತ ಬೆಲೆಗೆ ಮಾರಲಾಗದೆ ಜೊತೆಗೆ ಹೊಸದಾಗಿ ಬಿತ್ತನೆ ಮಾಡಲಾಗದೆ ವಿಚಿತ್ರ ಕಷ್ಟ ಎದುರಿಸುತ್ತಿದ್ದಾರೆ. ಬಿತ್ತನೆ ಕಾರ್ಯಕ್ಕೆ ಬೀಜ, ರಸಗೊಬ್ಬರ ಮತ್ತು ಔಷಧಿಗಳು ಸಿಗುತ್ತಿಲ್ಲ. ಅದಕ್ಕೂ ಮಿಗಿಲಾಗಿ ರೈತರ ಬಳಿ ಹಣವೂ ಇಲ್ಲ, ಸಾಲವೂ ಸಿಗುತ್ತಿಲ್ಲ. ಇದನ್ನು ಮನಗಂಡೇ ಪ್ಯಾಕೇಜ್ ರೂಪಿಸಬೇಕಾಗುತ್ತದೆ.

ಪ್ರಧಾನಿಯನ್ನು ಭೇಟಿ ಮಾಡಿದ ನಿರ್ಮಲಾ ಸೀತಾರಾಮನ್ ದೇಶದ ಆರ್ಥಿಕ ಸ್ಥಿತಿಯ ಜೊತೆಜೊತೆಗೆ ಕೃಷಿ ಮತ್ತು ಉದ್ಯಮ ಕ್ಷೇತ್ರ ಕುಸಿದು ಕಂಗಾಲಾಗಿರುವ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಅವರು ಈ ಗಂಭೀರ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ಘನವಾದ ಪ್ಯಾಕೇಜ್ ಘೋಷಣೆ ಮಾಡಬೇಕಷ್ಟೇ.
First published: