ನವದೆಹಲಿ(ಜೂನ್ 23): ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆ ನಿನ್ನೆಯಷ್ಟೇ ಕೊರೋನಾ ರೋಗಕ್ಕೆ ಕೊರೋನಿಲ್(Coronil) ಎಂಬ ಔಷಧ ಕಂಡು ಹಿಡಿದಿರುವುದಾಗಿ ಹೇಳಿದ್ದರು. ಕೊರೋನಿಲ್ ಸೇರಿದಂತೆ ಕೊರೋನಾಗೆ ಔಷಧದ ಕಿಟ್ ಅನ್ನ ನಿನ್ನೆ ಬಾಬಾ ಅನಾವರಣಗೊಳಿಸಿದ್ದರು. ಅದಾಗಿ ಮರುದಿನ ಕೇಂದ್ರ ಸರ್ಕಾರವು ಕೊರೋನಿಲ್ ಪ್ರಚಾರವನ್ನು ನಿಲ್ಲಿಸಬೇಕೆಂದು ಪತಂಜಲ ಸಂಸ್ಥೆಗೆ ಸೂಚಿಸಿದೆ. ಔಷಧವನ್ನು ಪರಿಶೀಲಿಸಿ ಅದಕ್ಕೆ ಒಪ್ಪಿಗೆ ಸಿಕ್ಕ ಮೇಲಷ್ಟೇ ಪ್ರಚಾರ ಮಾಡಿ. ಅಲ್ಲಿಯವರೆಗೂ ಅದರ ಮಾರ್ಕೆಟಿಂಗ್ ಕೆಲಸ ಮಾಡುವಂತಿಲ್ಲ ಎಂದು ಆಯುಷ್ ಇಲಾಖೆ ನೋಟೀಸ್ ನೀಡಿದೆ.
ಔಷಧದ ಹೂರಣ (Constituents), ಸಂಶೋಧನೆಯ ವಿವರ, ಸಾಂಸ್ಥಿಕ ನೀತಿ ಸಮಿತಿ ಅನುಮೋದನೆ; ಸಿಟಿಆರ್ಐ ನೊಂದಣಿ ಮತ್ತು ಸಂಶೋಧನ ಫಲಿತಾಂಶದ ದತ್ತಾಂಶ ಇತ್ಯಾದಿ ವಿವರಗಳನ್ನ ನೀಡುವಂತೆ ಪತಂಜಲಿ ಸಂಸ್ಥೆಗೆ ಸರ್ಕಾರ ತಿಳಿಸಿದೆ.
ಹಾಗೆಯೇ, ಪತಂಜಲಿ ಸಂಸ್ಥೆಯ ಕೊರೋನಿಲ್ ಔಷಧಕ್ಕೆ ಪರವಾನಿಗೆ ಮತ್ತು ಅನುಮೋದನೆಯ ವಿವರಗಳನ್ನ ನೀಡುವಂತೆ ಉತ್ತರಾ ಖಂಡ್ ಸರ್ಕಾರದ ಪರವಾನಿಗೆ ಪ್ರಾಧಿಕಾರಕ್ಕೆ ಕೇಂದ್ರ ಆಯುಷ್ ಇಲಾಖೆ ಮನವಿ ಮಾಡಿದೆ.
ಇದನ್ನೂ ಓದಿ: ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯಲ್ಲಿ ಶೇ.50 ಸಿಬ್ಬಂದಿ ಕಡಿತಕ್ಕೆ ಭಾರತ ಸರ್ಕಾರ ನಿರ್ಧಾರ
“ಕೋವಿಡ್-19ಗೆ ಚಿಕಿತ್ಸೆ ನೀಡಲು ಆಯುರ್ವೇದ ಔಷಧ ತಯಾರಿಸಿರುವುದಾಗಿ ಪತಂಜಲಿ ಆಯುರ್ವೇದ ಸಂಸ್ಥೆ ಹೇಳಿಕೊಂಡಿದ್ದು ಮಾಧ್ಯಮಗಳ ಸುದ್ದಿಯಿಂದ ಗೊತ್ತಾಯಿತು. ಔಷಧ ತಯಾರಿಕೆಗೆ ವೈಜ್ಞಾನಿಕ ಅಧ್ಯಯನದ ವಿವರ ಆಯುಷ್ ಇಲಾಖೆಗೆ ಗೊತ್ತಾಗಿಲ್ಲ. ಆದ್ದರಿಂದ ಔಷಧದ ಹೆಸರು, ಹೂರಣ, ಸಂಶೋಧನೆ ನಡೆಸಿದ ಆಸ್ಪತ್ರೆ ಅಥವಾ ಸ್ಥಳ, ನೀತಿ ನಿಯಾವಳಿ, ಸ್ಯಾಂಪಲ್ ಪ್ರಮಾಣ, ಅಧ್ಯಯನ ಫಲಿತಾಂಶದ ದತ್ತಾಂಶ ಮೊದಲಾದ ವಿವರಗಳನ್ನ ಆದಷ್ಟೂ ಬೇಗ ಕಳುಹಿಸುವಂತೆ ತಿಳಿಸಿದ್ದೇವೆ. ಇವುಗಳನ್ನ ಇಲಾಖೆಯಿಂದ ಪರಿಶೀಲನೆ ಆಗುವವರೆಗೂ ಜಾಹೀರಾತು ನೀಡುವುದಾಗಲೀ, ಪ್ರಚಾರ ಮಾಡುವುದಾಗಲೀ ಬೇಡ” ಎಂದು ನೋಟಿಫಿಕೇಶನ್ನಲ್ಲಿ ಆದೇಶಿಸಲಾಗಿದೆ.
ಇದನ್ನೂ ಓದಿ: ಬಿಹಾರದಲ್ಲಿ ಲಾಲೂ ಪಕ್ಷದ ಅರ್ಧಕ್ಕೂ ಹೆಚ್ಚು ಎಂಎಲ್ಸಿಗಳು ಆಡಳಿತ ಪಕ್ಷಕ್ಕೆ ಸೇರ್ಪಡೆ
ನಿನ್ನೆ ಉತ್ತರಾಖಂಡ್ನ ಹರಿದ್ವಾರದಲ್ಲಿರುವ ಪತಂಜಲಿ ಆಯುರ್ವೇದ ಸಂಸ್ಥೆಯ ಮುಖ್ಯಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದ ಬಾಬಾ ರಾಮದೇವ್ ಅವರು ಕೊರೋನಾಗೆ ಕೊರೋನಿಲ್ ಎಂಬ ಔಷಧ ಕಂಡುಹಿಡಿದಿರುವುದಾಗಿ ಘೋಷಿಸಿದ್ದರು. ಕ್ಲಿನಿಕಲ್ ಕೇಸ್ ಸ್ಟಡಿ ಮಾಡಿದ್ದು ಎಲ್ಲಾ ರೋಗಿಗಳು ಏಳು ದಿನದೊಳಗೆ ಗುಣಮುಖಗೊಂಡರು. ಶೇ. 69ರಷ್ಟು ರೋಗಿಗಳು ಕೇವಲ 3 ದಿನದಲ್ಲಿ ಚೇತರಿಸಿಕೊಂಡರು ಎಂದು ರಾಮದೇವ್ ಈ ಔಷಧದ ಕ್ಲಿನಿಕಲ್ ಟ್ರಯಲ್ನ ಮುಖ್ಯಾಂಶ ತಿಳಿಸಿದ್ದರು.
ಬಾಬಾ ರಾಮದೇವ್ ಹೇಳಿಕೊಂಡ ಪ್ರಕಾರ, ಕೊರೋನಿಲ್ ಔಷಧಕ್ಕಾಗಿ ಜೈಪರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಂಸ್ಥೆಯ ಸಹಯೋಗದೊಂದಿಗೆ ಸಂಶೋಧನೆ ನಡೆಸಲಾಯಿತಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ